ಚಂದ್ರಮತಿಯು ಹರಿಶ್ಚಂದ್ರನ ಧರ್ಮಪತ್ನಿ. ಮಹಾಭಾರತದಲ್ಲಿ ಈಕೆಯನ್ನು ತಾರಾಮತಿ ಎಂದು ಕರೆಯಲಾಗಿದೆ. ಮಾರ್ಕಂಡೇಯ ಪುರಾಣದಲ್ಲಿ ಹರಿಶ್ಚಂದ್ರನ ಜೀವನದ ಬಗ್ಗೆ ವಿವರವಾದ ಕಥೆಯಿದೆ. ಈ ಕಥೆಯನ್ನು ವಿವೇಕವುಳ್ಳ ಹಕ್ಕಿಗಳು ಜೈಮಿನಿ ಋಷಿಗೆ ಹೇಳುತ್ತವೆ.[][] ಲೋಹಿತಾಶ್ವ ಈಕೆಯ ಮಗ. ವಿಶ್ವಾಮಿತ್ರ ಹರಿಶ್ಚಂದ್ರನನ್ನು ಸತ್ಯಪರೀಕ್ಷೆಗೆ ಗುರಿಮಾಡಿದಾಗ ಚಂದ್ರಮತಿಯ ಪರೀಕ್ಷೆಯೂ ಸಾಕಷ್ಟು ಆಯಿತು. ಮುನಿ ಕೊಟ್ಟ ಅವಧಿಯಲ್ಲಿ ಹಣ ಹೊಂದಿಸಲಾಗದೆ ಹರಿಶ್ಚಂದ್ರ ಚಿಂತಾಮಗ್ನನಾಗಿದ್ದಾಗ ತನ್ನನ್ನೂ, ಮಗನನ್ನೂ ಮಾರಲು ಈಕೆಯೇ ಸೂಚಿಸಿದಳು. ತನ್ನನ್ನು ಕೊಂಡ ಬ್ರಾಹ್ಮಣನಲ್ಲಿ ಪತಿಗೆ ಸಲ್ಲಬೇಕಾದ ಸೇವೆಗಳ ವಿನಾ ಮಿಕ್ಕೆಲ್ಲ ಕೆಲಸಗಳನ್ನೂ ಮಾಡಲು ಒಪ್ಪಿಕೊಂಡು ಅದರಂತೆ ದುಡಿದಳು. ಸರ್ಪದಂಶದಿಂದ ಮರಣ ಹೊಂದಿದ ಲೋಹಿತಾಶ್ವನನ್ನು ಸುಡಲು ಮಸಣಕ್ಕೆ ಹೋದಾಗ ಅಲ್ಲಿ ಹರಿಶ್ಚಂದ್ರನೇ ಕಾವಲುಗಾರನಾಗಿದ್ದ. ತೆರ ಕೊಟ್ಟಲ್ಲದ ಶವಸಂಸ್ಕಾರಕ್ಕೆ ಹರಿಶ್ಚಂದ್ರ ಅನುಮತಿ ಕೊಡದಿರಲು ಹಣ ಸಂಪಾದಿಸಲು ಊರಿಗೆ ಹಿಂತಿರುಗುವಾಗ ದುಷ್ಟರ ಕೈಯಲ್ಲಿ ಕೊಲೆಯಾಗುತ್ತಿದ್ದ ಕಾಶೀರಾಜನ ಮಗನ ಧ್ವನಿ ಕೇಳಿ ಅತ್ತ ಧಾವಿಸಿದಳು. ರಾಜಭಟರು ಬಂದಾಗ ಈಕೆಯ ಕೈಯಲ್ಲಿ ರಾಜಕುವರನ ಶವ ಕಂಡು ಕೊಲೆಯ ಆರೋಪ ಹೊರಿಸಿದರು. ರಾಜನಿಂದ ಮರಣದಂಡನೆಗೆ ಗುರಿಯಾದ ಚಂದ್ರಮತಿ ವಧಸ್ಥಾನಕ್ಕೆ ಬಂದಾಗ ಅಲ್ಲಿಯೂ ಹರಿಶ್ಚಂದ್ರನೇ ತಲೆಗಡಿವ ಕೆಲಸಕ್ಕೆ ನೇಮಿತನಾಗಿದ್ದ. ಕೊನೆಗಳಿಗೆಯಲ್ಲೂ ಚಂದ್ರಮತಿ ವಿಚಲಿತಳಾಗದೆ ಕಲಿ ಹರಿಶ್ಚಂದ್ರರಾಯ ಸತ್ಯವೆರಸಿ ಬಾಳಲಿ, ಮಗ ಮುಕ್ತನಾಗಲಿ, ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ ಎಂದೇ ಪ್ರಾರ್ಥಿಸಿದಳು. ಇಂತ ಸತೀಶಿರೋಮಣಿಯ ಕತ್ತಿಗೆ ಹರಿಶ್ಚಂದ್ರನ ಕತ್ತಿ ಹೂವಾಗಿ ಎರಗಿತು. ಹರನ ಸಾಕ್ಷಾತ್ಕಾರದಿಂದ ಎಲ್ಲ ಸಂಕಷ್ಟಗಳೂ ಪರಿಹಾರವಾದುವು.

ಸಾಹಿತ್ಯದಲ್ಲಿ

ಬದಲಾಯಿಸಿ

ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಚಂದ್ರಮತಿಯ ಪಾತ್ರ ಬಲು ಸೊಗಸಾಗಿ ಚಿತ್ರಿತವಾಗಿದೆ. ಇಲ್ಲಿ ಬರುವ ಚಂದ್ರಮತಿ ಓದುಗರ ಅಂತಃಕರಣವನ್ನು ಕಲಕುತ್ತಾಳೆ. ಲೋಹಿತಾಶ್ವ ಮರಣಹೊಂದಿದಾಗ ಈಕೆ ಪಡುವ ದುಃಖದ ಸನ್ನಿವೇಶ ಕನ್ನಡ ಸಾಹಿತ್ಯದಲ್ಲಿಯೇ ಅದ್ವಿತೀಯವೆಂದು ಹೇಳಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. John Muuir (1868). Original Sanskrit Texts on the Origin and History of the People of India, Their Religion and Institutions (2 ed.). Trübner. pp. 379–387.
  2. B.K. Chaturvedi (2004). Markandeya Purana. Diamond. pp. 19–28. ISBN 9788128805776.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: