ಗೋಪಾಲ ಸ್ವಾಮಿ ಬೆಟ್ಟದ ಮೇಲೆ......

ಬೆಂಗಳೂರು, ಮೈಸೂರು ಸುತ್ತಮುತ್ತ ಇರುವರಿಗೆ ಒಂದು ದಿನದ ಅಥವಾ ವಾರಾಂತ್ಯದ ಪ್ರವಾಸಕ್ಕೆ ಕೇಳಿ ಮಾಡಿಸಿದ ಸ್ಥಳ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ. ವರ್ಷದ ಎಲ್ಲಾ ದಿನಗಳಲ್ಲೂ ತಂಪಾಗಿರುವುದು ಈ ಬೆಟ್ಟ ಸಾಲಿನ ವಿಶೇಷ.

ಹಿಮವತ್ ಗೋಪಾಲ ಸ್ವಾಮಿ ಬೆಟ್ಟ ಕರ್ನಾಟಕ ರಾಜ್ಯದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ. ಮೈಸೂರಿನ ದಕ್ಷಿಣಕ್ಕೆ ಸುಮಾರು ೮೦ ಕಿ.ಮೀ. ದೂರದಲ್ಲಿ ಊಟಿ ಹೆದ್ದಾರಿಯ ಅಂಚಿನಲ್ಲಿರುವ ಈ ಬೆಟ್ಟವು ಅದ್ಭುತ ಪ್ರಕೃತಿ ಸೌಂದರ್ಯದ ತಾಣ. ಸಮುದ್ರಮಟ್ಟದಿಂದ ಸುಮಾರು ೧೪೪೦ ಮೀ. ಎತ್ತರದಲ್ಲಿ ಮಲೆಯ ಮೇಲೆ ಶ್ರೀಕೃಷ್ಣನ ದೇವಾಲಯವಿದೆ. ವರ್ಷದ ಎಲ್ಲಾ ಕಾಲದಲ್ಲೂ ತಂಪಾದ ಹವಾಗುಣವಿರುವ ಈ ಪ್ರದೇಶದಲ್ಲಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಸದಾ ಮಂಜುಮುಸುಕಿದ ವಾತಾವರಣ. ಮಂಜಿನ ಜೊತೆಗೆ ಮಳೆಯ ತುಂತುರು ಹನಿಗಳ ಮಧ್ಯೆ ಹಾಗೂ ವಾಸ್ತವವಾಗಿ ಮೋಡಗಳ ನಡುವೆಯೇ ನಡೆದಾಡಬೇಕಾದ ಸನ್ನಿವೇಶ ಇಲ್ಲಿ ಸಾಮಾನ್ಯ. ದೇವಾಲಯದ ಗರ್ಭಗುಡಿಯ ಬಾಗಿಲಿನ ಮೇಲ್ಭಾಗದಿಂದ ನಿರಂತರವಾಗಿ ಹಿಮದನೀರು ಜಿನುಗುತ್ತಿರುತ್ತದೆ. ಆದ್ದರಿಂದಲೇ ಹಿಮವದ್ಗೋಪಾಲಸ್ವಾಮಿ ಎಂಬ ಹೆಸರು ಇಲ್ಲಿಯ ದೇವನಿಗೆ. ಬೆಟ್ಟವನ್ನೇರುವ ರಸ್ತೆ ಬಲು ಕಡಿದು. ಮಲೆಯ ಮೇಲ್ಭಾಗದಿಂದ ಕಾಣಬರುವ ನೋಟ ಅಸದೃಶ. ಬಂಡಿಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವುದರಿಂದ ಪ್ರವಾಸಿಗರಿಗೆ ಎಲ್ಲ ಕಡೆ ಮುಕ್ತವಾಗಿ ಓಡಾಡುವ ಅವಕಾಶವಿಲ್ಲ.

ದ್ವಾಪರದ ಕೃಷ್ಣನ ವೇಣುಗಾನಕ್ಕೆ ಗೋವುಗಳೆಲ್ಲಾ ಅವನ ಸುತ್ತಲೂ ಬಂದು ಸೇರುತ್ತಿದ್ದವಂತೆ. ಇಂದು ಅದೇ ಕೃಷ್ಣ, ಬೆಟ್ಟದ ತುದಿಯಲ್ಲಿ ನಿಂತು ತನ್ನ ಕೊಳಲಿನಿಂದ ಸುಮಧುರ ಗಾನ ಸುಧೆ ಹರಿಸುತ್ತಿದ್ದಾನೆ, ಪ್ರಕೃತಿ ದೇವತೆ ಅವನ ಸುತ್ತಲೂ ಅಮೋಘವಾಗಿ ನರ್ತಿಸುತ್ತಿದ್ದಾಳೆ ಈ ಗಾನ ಮತ್ತು ನೃತ್ಯ ನೋಡಲು ನೀವು ಸೇರಬೇಕಾದ ಸ್ಥಳ: ಹಿಮವದ್ ಗೋಪಾಲ ಸ್ವಾಮಿ ಬೆಟ್ಟ, ಜಗತ್ತಿನಲ್ಲಿ ಸಮಸ್ತ ಸೌಂದರ್ಯವನ್ನು ಒಂದೆಡೆ ರಾಶಿ ಹಾಕಿದರೆ ಅದೇ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ. ಮೂಲತಃ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದರೂ ತನ್ನ ಅನುಪಮ ಸೌಂದರ್ಯದಿಂದ, ತನ್ನದೆ ಆದ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತದೆ. ಬೆಂಗಳೂರಿನಿಂದ ೫ ಘಂಟೆಗಳ ಪ್ರಯಾಣದ ಅವಧಿಯಲ್ಲಿ(೨೦೫ ಕಿ,ಮೀ.) ಇಂತಹ ರುದ್ರ-ರಮಣೀಯ ಸ್ಥಳ ಇದೆ ಅಂದರೆ ಆಶ್ಚರ್ಯ ಆಗಬಹುದು. ಈ ಸ್ಥಳದ ಹೆಸರು ಕೇಳಿದ್ರೆ, ಅದು ಇನ್ನೊಂದು ಚಾಮುಂಡಿ ಬೆಟ್ಟಾನೋ, ನಂದಿನೋ, ಸಾವನದುರ್ಗಾನೋ ಅಂತ ಅಂದುಕೊಂಡರೆ, ಅದು ತಪ್ಪಾಗುತ್ತೆ. ಈ ಬೆಟ್ಟದ ಮೇಲೆ ಬರುವವರು ಸುಸ್ತಿತಿಯಲ್ಲಿರುವ ಕಾರು, ವಾಹನಗಳಲ್ಲಿ ಬರುವುದು ಒಳ್ಳೆಯದು. ತುಂಬಾ ಹಳೆಯ ಡೀಸೆಲ್ ಕಾರುಗಳು ಬೆಟ್ಟ ಹತ್ತಲು ಒದ್ದಾಡುವುದಿದೆ.ಗುಂಡ್ಲುಪೇಟೆ ಹಾಗೂ ನಂಜನ ಗೂಡಿನಲ್ಲಿ ಕೈಗೆಟಕುವ ದರದಲ್ಲಿ ಊಟ ಮತ್ತು ವಸತಿ ಸೌಲಭ್ಯ್ ವಿದೆ. ಉನ್ನತ ದರ್ಜೆಯ ಸಾಕಷ್ಟು ರೆಸಾರ್ಟ್ಗಳು ಹತ್ತಿರದಲ್ಲಿಯೇ ಇದೆ. ಬೆಟ್ಟದ ತುದಿಯವರೆಗೂ ವಾಹನಗಳು ಸಂಚರಿಸುವ ವ್ಯವಸ್ತೆ ಇದ್ದು, ಬೆಂಗಳೂರಿನಿಂದ ಹೊರಡುವ ಪ್ರವಾಸಿಗರು ಬೆಳಗ್ಗೆ ಹೊರಟು ರಾತ್ರಿ ಹಿಂತಿರುಗಬಹುದು.ಸಮಯ ಹೊಂದಿಸಿಕೊಂಡಲ್ಲಿ ಬೆಟ್ತವನ್ನು ನೋಡಿದ ನಂತರ ಪಕ್ಕದಲ್ಲಿಯೇ ಇರುವ ಹುಲಿಸಂರಕ್ಷಿತ ತಾಣ ಬಂಡೀಪುರವನ್ನು ನೋಡಬಹುದು.