ಗುಣಸಾಗರ

ಕನ್ನಡದ ಒಂದು ಚಲನಚಿತ್ರ

ಬಳ್ಳಾರಿ ಜಿಲ್ಲೆಕೂಡ್ಲಿಗಿ ತಾಲೂಕಿನಲ್ಲಿ ಇತಿಹಾಸದ ಪುಟಗಳಿಂದ ಮುಚ್ಚಿಹೋಗಿರುವ, ಮುಚ್ಚಿಹೋಗುತ್ತಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲೊಂದು ಗುಣಸಾಗರ ಗ್ರಾಮದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನ. ತಾಲೂಕು ಕೇಂದ್ರದಿಂದ ಸುಮಾರು ೨೫ ಕಿ.ಮೀ ದೂರವಿರುವ ಗುಣಸಾಗರ ಪುಟ್ಟಗ್ರಾಮವಾದರೂ, ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಈ ಭಾಗದಲ್ಲೆಲ್ಲ ಜನಜನಿತ. ಕೊಳಲೂದುತ್ತ ನಿಂತಿರುವ ಕಪ್ಪುಶಿಲೆಯ ಸುಂದರ ಗೋಪಾಲನ ಮೂರ್ತಿ ಎಲ್ಲರ ಕಣ್ಮನಸೆಳೆಯುವಂತಹದು. ಗುಣಸಾಗರ ಎಂಬ ಹೆಸರು ಹೇಗೆ ಬಂತೆಂಬುದೇ ಇಲ್ಲಿ ವಿಚಿತ್ರವಾದ ಕತೆಯಿದೆ. ಸ್ಥಳೀಯರೇ ಹೇಳುವಂತೆ, ಹಿಂದೊಮ್ಮೆ ಮತಿವಂತಿ, ಗುಣವಂತಿ ಎಂಬ ಸಹೋದರಿಯರು ಕೆರೆಗಳನ್ನು ಕಟ್ಟಿಸಿದರಂತೆ. ಗುಣವಂತಿ ಕಟ್ಟಿಸಿದ ಕೆರೆಗೆ ನೀರು ತುಂಬಿ, ಎಲ್ಲರಿಗೂ ಉಪಯುಕ್ತವಾದದ್ದಕ್ಕಾಗಿ ಗುಣವಂತಿಯ ಹೆಸರೂ ಸೇರಿದಂತೆ ಗುಣವಂತಿ-ಸಾಗರ, ಗುಣಸಾಗರ ಎಂಬ ಹೆಸರು ಬಂತಂತೆ. ಮತಿವಂತಿ ಕಟ್ಟಿಸಿದ ಕೆರೆ ಎಷ್ಟೇ ಸಲ ಕಟ್ಟಿದರೂ ಕೆರೆಯ ಏರಿ ಹರಿದು(ಒಡೆದು) ಹೋದುದರಿಂದ ಅದಕ್ಕೆ ಹರಕ-ಬಾವಿ ಹಾರಕಬಾವಿ ಎಂಬ ಹೆಸರು ಬಂತಂತೆ. ಹಾರಕಬಾವಿ ಎಂಬ ಹೆಸರಿನ ಗ್ರಾಮ ಗುಣಸಾಗರದ ಹತ್ತಿರದಲ್ಲೇ ಇದೆ. ಇದು ಜನಜನಿತ ಕತೆಯಾದ್ದರಿಂದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಇತಿಹಾಸಕಾರರಿಗೆ ಬಿಟ್ಟದ್ದು. ಗ್ರಾಮದ ಪಕ್ಕದಲ್ಲಿ ಕೆರೆ ಇರುವುದರಿಂದ ಗೌಣ ಎಂದರೆ ಸಣ್ಣದು, ಗೌಣ-ಸಾಗರ ಗುಣಸಾಗರವಾಗಿರಬಹುದೆಂದು ಇತಿಹಾಸ ತಜ್ಞ ಎಸ್.ಎಂ.ನಾಗಭೂಷಣ್ ಅಭಿಪ್ರಾಯಪಡುತ್ತಾರೆ. ದೇವಸ್ಥಾನದ ನಿರ್ಮಾಣ ೧೨-೧೩ನೇ ಶತಮಾನದಲ್ಲಾಗಿರಬಹುದೆಂದು ನಾಗಭೂಷಣ್ ಅಭಿಪ್ರಾಯಪಡುತ್ತಾರೆ. ಮುಂದೆ ದೇವಸ್ಥಾನವು ಪಾಳೆಗಾರರ, ವಿಜಯನಗರ ಅರಸರ ಕಾಲದಲ್ಲಿ ಪುನರುಜ್ಜೀವನ ಕಂಡಿರಬಹುದಾಗಿದೆ. ದೇವಸ್ಥಾನದ ಮುಂಭಾಗದಲ್ಲಿ ಕಪ್ಪುಶಿಲೆಯ ಸುಂದರ ಕುಸುರಿಕೆತ್ತನೆಯಿರುವ ಗರುಡಗಂಭವಿದೆ. ಗರುಡಗಂಭದ ಪ್ರತಿಯೊಂದು ಹಂತವೂ ಮನಮೋಹಕ ಕೆತ್ತನೆಯಿಂದ ಕೂಡಿದೆ. ವಿಶಾಲವಾದ ಪ್ರಾಂಗಣವಿರುವ ದೇವಸ್ಥಾನದ ಗರ್ಭಗುಡಿಯ್ಲಲಿ ೫ ಅಡಿ ಎತ್ತರದ ಶ್ರೀವೇಣುಗೋಪಾಲಸ್ವಾಮಿಯ ಮೂರ್ತಿಯಿದೆ. ಮೂರ್ತಿಯು ಚೋಳರ ಕಾಲದ ವಾಸ್ತುಶಿಲ್ಪವನ್ನು ಹೋಲುತ್ತದೆ. ಕೊಳಲೂದುತ್ತ ನಿಂತಿರುವ ಗೋಪಾಲನ ಭಂಗಿ ತಕ್ಷಣ ಮನಸೆಳೆಯದೇ ಇರದು. ಬಲಗಾಲನ್ನು ಮೋಹಕವಾಗಿ ಎಡಕ್ಕೂರಿ, ಎಡಗಾಲಿನ ಮೇಲೆ ನಿಂತು ಕೊಳಲೂದುತ್ತಿರುವ ಗೋಪಾಲನ ಮೂರ್ತಿಯ ಕೆತ್ತನೆಯನ್ನು ಎಷ್ಟುಬಾರಿ ನೋಡಿದರೂ ಕಣ್ಣು ತಣಿಯವು. ಗೋಪಾಲನ ಹಿಂದೆ ಆದಿಶೇಷನ ಹೆಡೆಯಿದೆ. ಮೂರ್ತಿಯ ಕೆಳಭಾಗದಲ್ಲೂ ಆದಿಶೇಷನ ಹೆಡೆಗಳಿವೆ. ಥಟ್ಟನೆ ನೋಡಿದರೆ ವಟವೃಕ್ಷದ ಕೆಳಗೆ ಗೋಪಾಲ ನಿಂತಿದ್ದಾನೆ ಎಂಬಂತೆಯೂ ಕೆತ್ತನೆಯಿರುವುದು ಶಿಲ್ಪಿಯ ಕಲಾನೈಪುಣ್ಯತೆಯನ್ನು ತೋರುತ್ತದೆ. ಹಿಂಭಾಗದಲ್ಲಿ ಪ್ರಭಾವಳಿಯಿದ್ದು, ಅದರಲ್ಲಿ ವಿಷ್ಣುವಿನ ದಶಾವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮಕೃಷ್ಣ, ಬುದ್ಧ, ಕಲ್ಕಿ ಅವತಾರಗಳ ಉಬ್ಬುಶಿಲ್ಪಗಳಿವೆ. ಗರ್ಭಗುಡಿಯ ಹೊರಭಾಗದ ನವರಂಗದಲ್ಲಿ ಚೌಕಾಕಾರದ ಕಂಬಗಳಿದ್ದು, ಕಂಬಗಳ ಮೇಲೂ ರಾಮ, ಲಕ್ಷ್ಮಣ, ಸೀತೆ, ಹನುಮಂತ, ನಾಗ, ಮತ್ಸ್ಯ, ಬಾಲಕೃಷ್ಣನ ಲೀಲೆಗಳ ಉಬ್ಬುಕೆತ್ತನೆಗಳಿವೆ. ದೇವಸ್ಥಾನದ ಸುತ್ತಲೂ ಶಿಥಿಲಾವಸ್ಥೆಗೊಂಡು ಬಿದ್ದಿರುವ ಕಂಬಗಳ, ಬೋದಿಗೆಗಳ ಅವಶೇಷಗಳಿವೆ. ಇದರಿಂದ ದೇವಸ್ಥಾನ ಪುನರ್‌ನಿರ್ಮಾಣಗೊಂಡಿರುವುದು ಸ್ಪಷ್ಟವಾಗುತ್ತದೆ. ಒಟ್ಟಾರೆ ಈ ರೀತಿಯ ವಿಶೇಷವಾಗಿ ಕೆತ್ತನೆಯಿರುವ ವೇಣುಗೋಪಾಲನ ಮೂರ್ತಿ ಅಪರೂಪ. ಸಂಶೋಧಕರು ಇಡೀ ಗ್ರಾಮ, ದೇವಸ್ಥಾನ, ಶ್ರೀವೇಣುಗೋಪಾಲನ ಮೂರ್ತಿಯ ಕುರಿತು ಸಂಶೋಧನೆ ನಡೆಸಿದರೆ ಹೆಚ್ಚಿನ ವಿಷಯಗಳು ತಿಳಿದುಬರಬಹುದಾಗಿದೆ.

"https://kn.wikipedia.org/w/index.php?title=ಗುಣಸಾಗರ&oldid=637879" ಇಂದ ಪಡೆಯಲ್ಪಟ್ಟಿದೆ