ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಲವ ಬದಲಾಯಿಸಿ

ವಿಶ್ವಾಮಿತ್ರನ ಶಿಷ್ಯರಲ್ಲಿ ಒಬ್ಬ. ವೇದಾಧ್ಯಯನ ಮುಗಿದ ಬಳಿಕ ಗುರುದಕ್ಷಿಣೆ ತೆಗೆದುಕೊಳ್ಳಬೇಕೆಂದು ವಿಶ್ವಾಮಿತ್ರನನ್ನು ಒತ್ತಾಯಪಡಿಸಿದ. ಮೊದಲು ಒಪ್ಪದಿದ್ದರೂ ಮೇಲಿಂದ ಮೇಲೆ ಬಲವಂತ ಮಾಡಿದಾಗ ಗುರು ಶಿಷ್ಯನಿಗೆ ಒಂದು ಕಿವಿ ಮಾತ್ರ ಕಪ್ಪಾಗಿರುವ ೮೦೦ ಬಿಳಿಯ ಕುದುರೆಗಳನ್ನು ತಂದೊಪ್ಪಿಸಬೇಕೆಂದು ಅಪ್ಪಣೆ ಮಾಡಿದ. ಭೂಲೋಕದಲ್ಲಿ ಎಲ್ಲೂ ಅಂಥ ಕುದುರೆಗಳು ಕಾಣಲಿಲ್ಲವಾಗಿ ಗಾಲವ ವಿಷ್ಣುವನ್ನು ಕುರಿತು ತಪಸ್ಸು ಮಾಡಿದ. ವಿಷ್ಣುವಿನ ಆಜ್ಞೆಯಂತೆ ಗರುಡ ಈತನನ್ನು ಯಯಾತಿ ರಾಜನಲ್ಲಿಗೆ ಕರೆತಂದು ಬಿಟ್ಟ. ಯಯಾತಿ ತನ್ನ ಮಗಳು ಮಾಧವಿಯನ್ನು ಗಾಲವನಿಗೆ ಒಪ್ಪಿಸಿ ಅವಳನ್ನು ಯಾವ ರಾಜನಿಗಾದರೂ ಕೊಟ್ಟು ಕುದುರೆಗಳನ್ನು ಸಂಪಾದಿಸಿಕೊಳ್ಳಬೇಕೆಂದು ತಿಳಿಸಿದ. ಪ್ರಸವಾನಂತರ ಮತ್ತೆ ತನ್ನ ಕನ್ಯತ್ವವನ್ನು ಪಡೆದುಕೊಳ್ಳುವ ವರವನ್ನೀಕೆ ಪಡೆದಿದ್ದಳು. ಗಾಲವ ಮಾಧವೀಯನ್ನು ಇಕ್ಷ್ವಾಕು ವಂಶದ ಹರ್ಯಶ್ವ, ದಿವೋದಾಸ, ಔಶೀರನೆಂಬ ರಾಜರುಗಳಿಗೆ ಒಪ್ಪಿಸಿ ತಲಾ ೨೦೦ ಕುದುರೆಗಳಂತೆ ೬೦೦ ಕುದುರೆಗಳನ್ನು ಸಂಪಾದಿಸಿದ. ಮಿಕ್ಕ ೨೦೦ ಕುದುರೆಗಳಿಗೆ ಪ್ರತಿಯಾಗಿ ಮಾಧವಿಯನ್ನು ವಿಶ್ವಾಮಿತ್ರನಿಗೇ ಒಪ್ಪಿಸಿದ. ಈ ಉಲ್ಲೇಖ ಮಹಾಭಾರತದಲ್ಲಿದೆ.

ವಿಶ್ವಾಮಿತ್ರನ ಮಕ್ಕಳಲ್ಲಿ ಒಬ್ಬನ ಹೆಸರು ಗಾಲವ. ಒಮ್ಮೆ ಹನ್ನೆರಡು ವರ್ಷ ಕ್ಷಾಮ ಬಂದಾಗ ಭಿಕ್ಷಾವೃತ್ತಿಯನ್ನು ಬಯಸದ ವಿಶ್ವಾಮಿತ್ರ ಹೆಂಡತಿ ಮಕ್ಕಳನ್ನು ಬಿಟ್ಟು ಎಲ್ಲಿಯೋ ಹೊರಟುಹೋದ. ಆಗ ಆತನ ಹೆಂಡತಿ ತನ್ನ ಮಕ್ಕಳಲ್ಲಿ ಒಬ್ಬನನ್ನು ಮಾರಿ ಜೀವನ ನಡೆಸಬೇಕೆಂದು ಬಯಸಿದ ಒಬ್ಬನ ಕುತ್ತಿಗೆಗೆ ದರ್ಭೆ ಹುರಿಯನ್ನು ಬಿಗಿದು ಕರೆದೊಯ್ಯುತ್ತಿದ್ದಳು. ನಡುದಾರಿಯಲ್ಲಿ ಸತ್ಯವ್ರತನೆಂಬ ಅರಸು ಇವಳನ್ನು ಸಂಧಿಸಿ ಸಮಾಚಾರ ತಿಳಿದು ಆ ಕುಟುಂಬದ ಹೊಣೆಯನ್ನು ತಾನು ಹೊರುವುದಾಗಿ ಅಭಯವಿತ್ತ. ಈ ರೀತಿ ಕುತ್ತಿಗೆಗೆ ಗಾಳ ಹಾಕಿಸಿಕೊಂಡವನಾದುದರಿಂದ ಈತನಿಗೆ ಗಾಲವನೆಂಬ ಹೆಸರಾಯಿತು. ಈ ವೃತ್ತಾಂತವನ್ನು ದೇವೀಭಾಗವತ, ವಾಯುಪುರಾಣ ಮುಂತಾದ ಕಡೆ ಉಲ್ಲೇಖಿಸಲಾಗಿದೆ.

"https://kn.wikipedia.org/w/index.php?title=ಗಾಲವ&oldid=1147992" ಇಂದ ಪಡೆಯಲ್ಪಟ್ಟಿದೆ