ಖಿಜ಼ರ್ ಖಾನ್
ಖಿಜ಼ರ್ ಖಾನ್ ದೆಹಲಿಯ ಸುಲ್ತಾನನಾಗಿದ್ದ ಅಲ್ಲಾವುದ್ದೀನ್ ಖಲ್ಜಿಯ (1296-1316) ಹಿರಿಯ ಮಗ.
ಜೀವನ
ಬದಲಾಯಿಸಿಅಲ್ಲಾವುದ್ದೀನ್ 1303ರಲ್ಲಿ ಮೇವಾಡವನ್ನು ಜಯಿಸಿದಾಗ[೧] ಅದರ ರಾಜಧಾನಿಯಾದ ಚಿತ್ತೂರಿಗೆ ಖಿಜ಼ರಾಬಾದ್ ಎಂದು ನಾಮಕರಣ ಮಾಡಿ ಖಿಜ಼ರ್ ಖಾನನನ್ನು ಅಲ್ಲಿ ಗವರ್ನರಾಗಿ ನೇಮಿಸಿ ದೆಹಲಿಗೆ ಹಿಂದಿರುಗಿದ. ಅದನ್ನು ಮತ್ತೆ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ರಜಪೂತರ ಒತ್ತಡದಿಂದಾಗಿ 1311ರ ವೇಳೆಗೆ ಖಿಜ಼ರ್ ಖಾನ್ ಚಿತ್ತೂರನ್ನು ಬಿಟ್ಟು ಹೊರಡಬೇಕಾಯಿತು. ಮಲ್ಲಿಕ್ ಕಾಫುರನ ನೇತೃತ್ವದಲ್ಲಿ ದಕ್ಷಿಣದ ಕಡೆಗೆ ವಿಜಯಯಾತ್ರೆ ಹೊರಟ ಅಲ್ಲಾವುದ್ದೀನನ ಸೇನೆ ದೇವಗಿರಿಯ ರಾಮಚಂದ್ರದೇವನನ್ನು ಮಣಿಸಿದಾಗ,[೨] ಅವನಲ್ಲಿ ಆಶ್ರಯ ಪಡೆದಿದ್ದ ಗುಜರಾತಿನ ಮಾಜಿ ದೊರೆ ರಾಯಿ ಕರ್ಣದೇವನ[೩][೪] ಮಗಳಾದ ದೇವಲಾದೇವಿಯನ್ನು ಸೆರೆಹಿಡಿದು ಗುಜರಾತಿನ ಗವರ್ನರಾದ ಆಲ್ಪ್ ಖಾನನ ಮೂಲಕ ದೆಹಲಿಯ ಸುಲ್ತಾನ ಅಲ್ಲಾವುದ್ದೀನನಿಗೆ ಒಪ್ಪಿಸಲಾಯಿತು. ಆಕೆಯನ್ನು ಖಿಜ಼ರ್ ಖಾನ್ ಮದುವೆಯಾದ (1307).[೫] ಕವಿ ಅಮೀರ್ ಖುಸ್ರು ಇವರಿಬ್ಬರ ಪ್ರೇಮವನ್ನು ಕುರಿತ ಕವನವನ್ನು ರಚಿಸಿದ್ದಾನೆ.[೬][೭]
ಅಲ್ಲಾವುದ್ದೀನ್ ಖಲ್ಜಿಯ ಮರಣಾನಂತರ (1316) ಖಿಜ಼ರ್ ಖಾನನೇ ಸುಲ್ತಾನನಾಗುವನೆಂದು ನಿರೀಕ್ಷಿಸಲಾಗಿತ್ತು. ಆದರೆ ಆ ವೇಳೆಗೆ ಪ್ರಬಲನಾಗಿದ್ದ ಮಲ್ಲಿಕ್ ಕಾಫುರ್ ಅಲ್ಲಾವುದ್ದೀನನದೆನ್ನಲಾದ ಉಯಿಲೊಂದನ್ನು ಪ್ರಕಟಪಡಿಸಿ, ಅದರಂತೆ ಅಲ್ಲಾವುದ್ದೀನನ ಐದಾರು ವರ್ಷಗಳ ಮಗನಾದ ಷಿಹಾಬುದ್ದೀನನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ಅವನ ಪರವಾಗಿ ತಾನೇ ರಾಜ್ಯವಾಳತೊಡಗಿದ.[೮] ಖಿಜ಼ರ್ ಖಾನನ ಮತ್ತು ಅವನ ತಮ್ಮ ಷಾದೀ ಖಾನನ ಕಣ್ಣುಗಳನ್ನು ಕೀಳಿಸಿದ. ಅಲ್ಲಾವುದ್ದೀನನ ಹೆಂಡತಿಯ ಸಂಪತ್ತನ್ನೆಲ್ಲ ದೋಚಿಕೊಂಡು ಅವಳನ್ನು ಸೆರೆಮನೆಗೆ ಕಳುಹಿಸಿದ. ಅಲ್ಲಾವುದ್ದೀನನ ಮೂರನೆಯ ಮಗನಾದ ಮುಬಾರಕನೂ ಸೆರೆಯಾದ. ಅವನ ಕಣ್ಣುಗಳನ್ನೂ ಕೀಳಿಸುವುದು ಮಲ್ಲಿಕ್ ಕಾಫುರನ ಉದ್ದೇಶವಾಗಿತ್ತು. ಆದರೆ ಅಲ್ಲಾವುದ್ದೀನನ ಸೇವಕರು ಕೆಲವರು ಕಾಫುರನನ್ನು ಕೊಲೆ ಮಾಡಿದರು.[೯] ಅವನ ಮೂವತ್ತೈದು ದಿನಗಳ ಆಡಳಿತ ಕೊನೆಗೊಂಡಿತು. ಸೆರೆಯಿಂದ ಬಿಡುಗಡೆ ಹೊಂದಿದ ಮುಬಾರಕ್ ರಾಜಪ್ರತಿನಿಧಿಯಾದ.[೧೦] ಆದರೆ ಅರವತ್ನಾಲ್ಕು ದಿನಗಳ ರಾಜಪ್ರತಿನಿಧಿ ಆಡಳಿತದ ಅನಂತರ ಆತ ಷಿಹಾಬುದ್ದೀನನ ಕಣ್ಣು ಕೀಳಿಸಿ ತಾನೇ ಸಿಂಹಾಸನವನ್ನೇರಿದ.[೧೧] ಅಂತೂ ಖಿಜ಼ರ್ ಖಾನನಿಗೆ ರಾಜ್ಯ ದಕ್ಕಲಿಲ್ಲ.
ಉಲ್ಲೇಖಗಳು
ಬದಲಾಯಿಸಿ- ↑ Banarsi Prasad Saksena 1992, p. 366.
- ↑ Kishori Saran Lal 1950, pp. 192–193.
- ↑ Jayapalan, N. (2001). History of India. Atlantic Publishers & Distri. p. 24. ISBN 978-81-7156-928-1. Archived from the original on 2017-04-25.
- ↑ Majumdar 1956, p. 190.
- ↑ Banarsi Prasad Saksena 1992, pp. 400–402.
- ↑ "The Padmavat affair". The Hindu. 12 February 2017. Retrieved 14 April 2017.
- ↑ Mukherji, Aban; Vatsal, Tulsi (25 October 2015). "'Karan Ghelo': Translating a Gujarati classic of love and passion, revenge and remorse". Scroll.in. Archived from the original on 28 March 2016. Retrieved 14 April 2017.
- ↑ Banarsi Prasad Saksena 1992, p. 425.
- ↑ Banarsi Prasad Saksena 1992, p. 427.
- ↑ Banarsi Prasad Saksena 1992, pp. 427–428.
- ↑ Abraham Eraly 2015, pp. 178–179.
ಗ್ರಂಥಸೂಚಿ
ಬದಲಾಯಿಸಿ- Banarsi Prasad Saksena (1992). "The Khiljis: Alauddin Khilji". In Mohammad Habib and Khaliq Ahmad Nizami (ed.). A Comprehensive History of India: The Delhi Sultanat (A.D. 1206–1526). Vol. 5 (Second ed.). The Indian History Congress / People's Publishing House. OCLC 31870180.
- Kishori Saran Lal (1950). History of the Khaljis (1290-1320). Allahabad: The Indian Press. OCLC 685167335.
- Majumdar, Asoke Kumar (1956). Chaulukyas of Gujarat. Bharatiya Vidya Bhavan. OCLC 4413150.
- Abraham Eraly (2015). The Age of Wrath: A History of the Delhi Sultanate. Penguin Books. p. 178. ISBN 978-93-5118-658-8.