ಕೊಂಗು ರಾಜ್ಯವು ತಮಿಳುನಾಡಿನ ಸೇಲಂ ಮತ್ತು ಕೊಯಮತ್ತೂರು ಜಿಲ್ಲೆಗಳ ಪ್ರದೇಶವನ್ನೊಳಗೊಂಡಿದ್ದ ಪ್ರಾಚೀನರಾಜ್ಯ.

Kongu Nadu
கொங்குநாடு
Geographical area
Coimbatore, largest metropolitan city in the region.
Coimbatore, largest metropolitan city in the region.
Kongu Nadu region within Tamil Nadu
Kongu Nadu region within Tamil Nadu
Country ಭಾರತ
RegionSouth India
Government
 • BodyGovernment of Tamil Nadu
Area
 • Total೨೫,೮೬೪ km (೯,೯೮೬ sq mi)
Population
 (2011)[೧]
 • Total೧೭.೬ million
 • Density೬೦೭/km (೧,೫೭೦/sq mi)
Languages
 • OfficialTamil
Time zoneUTC+5:30 (IST)
PIN
635-642xxx
Vehicle registrationTN 27-42, TN 47, TN 52, TN 54, TN 56, TN 66, TN 77-78, TN 88, TN 99
Largest cityCoimbatore
Literacy62.61%
Civic agencyGovernment of Tamil Nadu

ವ್ಯುತ್ಪತ್ತಿ ಬದಲಾಯಿಸಿ

ಕೊಂಗು ಎಂಬ ಹೆಸರು ಹೇಗೆ ಬಂತೆಂಬ ಬಗ್ಗೆ ಅನೇಕ ವಿವರಣೆಗಳುಂಟು. ಹೂ ಗಿಡ ಬಳ್ಳಿಗಳು ತುಂಬಿದ್ದ ಆ ಪ್ರದೇಶ ಹೂವಿನ ನಸುಗಂಪಿನಿಂದಲೂ ಜೇನಿನ ಸವಿಯಿಂದಲೂ ಕೂಡಿದ್ದುದರಿಂದ ಅದಕ್ಕೆ ಈ ಹೆಸರು ಬಂದಿರಬಹುದೆಂಬುದು ಒಂದು ಊಹೆ. ಈ ಪ್ರದೇಶಕ್ಕೆ ಆ ಹೆಸರು ಯಾವಾಗ ಬಂತೆಂದು ನಿರ್ದಿಷ್ಟವಾಗಿ ತಿಳಿದಿಲ್ಲ.

ಕ್ರಿಸ್ತಶಕೆಯ ಆರಂಭದ ಅನಂತರ, ರಟ್ಟ ವಂಶದವರು ಇಲ್ಲಿ ತಮ್ಮ ಆಡಳಿತವನ್ನು ಪ್ರಾರಂಭಿಸಿದಂದಿನಿಂದ, ಈ ಹೆಸರು ಕಾಣಬರುತ್ತದೆ. ರಾಜಾಕ್ಕಳ್ ಚರಿತಂ ಗ್ರಂಥದಲ್ಲಿ ಇದನ್ನು ಸ್ವತಂತ್ರ ರಾಜ್ಯವೆಂದು ಹೇಳಲಾಗಿದೆ. ಇದು ಬೆಟ್ಟಗುಡ್ಡಗಳ ಪ್ರದೇಶ. ಇಲ್ಲಿ ಐವತ್ತಕ್ಕಿಂತ ಹೆಚ್ಚು ಬೆಟ್ಟಗಳಿವೆ. ಕಾವೇರಿ ಇಲ್ಲಿಯ ಮುಖ್ಯ ನದಿ. ನೊಯಲ್, ಭವಾನಿ ಮತ್ತು ಅಮರಾವತಿ ಇವು ಉಪನದಿಗಳು. ಕೊಂಗು ನಾಡಿನ 1,800 ವರ್ಷಗಳ ಚರಿತ್ರೆಯಲ್ಲಿ ಅನೇಕ ಅರಸು ಮನೆತನಗಳು ಆಳಿದುವು.

ಕಾಲ ಬದಲಾಯಿಸಿ

ಕ್ರಿ.ಪೂ.ದಲ್ಲಿ ಈ ಪ್ರದೇಶದಲ್ಲಿ ವ್ಯಾಪಿಸಿದ್ದ ಇತಿಹಾಸ ಪೂರ್ವಕಾಲದ ನಾಗರಿಕತೆ ಪುರಾತತ್ವಶೋಧನೆಗಳಿಂದ ಬೆಳಕಿಗೆ ಬಂದಿದೆ. ಬೃಹತ್ ಶಿಲಾಸಮಾಧಿಗಳು ಹೆಚ್ಚು ಸಂಖ್ಯೆಯಲ್ಲಿ ದೊರಕಿವೆ. ಸೀಸರ್, ಆಗಸ್ಟಸ್, ಟೈಬರಿಯಸ್, ಕ್ಲಾಡಿಯಸ್ ಮುಂತಾದವರ, ಕ್ರಿಸ್ತಶಕದ ಪ್ರಾರಂಭಕಾಲಕ್ಕೆ ಸೇರಿದ, ಅನೇಕ ರೋಮನ್ ನಾಣ್ಯಗಳು ಈ ಪ್ರದೇಶದಲ್ಲಿ ದೊರಕಿರುವುದರಿಂದ ಆ ವೇಳೆಗೆ ಐರೋಪ್ಯ ದೇಶಗಳೊಂದಿಗೆ ಈ ಪ್ರದೇಶ ವ್ಯಾಪಾರ ಸಂಪರ್ಕ ಬೆಳೆಸಿಕೊಂಡಿತ್ತೆಂದು ತಿಳಿದುಬರುತ್ತದೆ. ಶಾಸನ ಸಂಶೋಧನ ಇಲಾಖೆ ಈ ಪ್ರದೇಶದಲ್ಲಿ ಸು.900 ಶಾಸನಗಳನ್ನು ಪತ್ತೆ ಹಚ್ಚಿದೆ. ಅವುಗಳಲ್ಲಿ 6 ಚೋಳರ ಕಾಲಕ್ಕೂ 300 ಕೊಂಗು ಚೋಳರ ಕಾಲಕ್ಕೂ 10 ಗಂಗರ ಕಾಲಕ್ಕೂ 60 ಹೊಯ್ಸಳ ಸಂತತಿಯ ಕಾಲಕ್ಕೂ 10 ಮಧುರೆಯ ನಾಯಕ ಮನೆತನದ ಕಾಲಕ್ಕೂ 120 ಕೊಂಗು ಪಾಂಡ್ಯರ ಕಾಲಕ್ಕೂ, 80 ವಿಜಯನಗರ ಸಾಮ್ರಾಜ್ಯದ ಕಾಲಕ್ಕೂ 20 ಉಮ್ಮತ್ತೂರು ಮತ್ತು ತೆರಕಣಾಂಬಿ ಮನೆತನದ ಕಾಲಕ್ಕೂ 30 ಮೈಸೂರಿನ ಅರಸರಿಗೂ ಸಂಬಂಧಿಸಿದ ಶಾಸನಗಳಾಗಿವೆ. ಅಲ್ಲದೆ ಅನೇಕ ಕೈಬರಹದ ಪ್ರತಿಗಳು ದೊರೆತಿವೆ. ಇಂಥ ಕೃತಿಗಳಲ್ಲಿ ಬಹಳ ಅಮೂಲ್ಯವಾದ್ದು ಕೊಂಗು ದೇಶ ರಾಜಾಕ್ಕಳ್ ಚರಿತಂ. ಮೇಲ್ಕಂಡ ಈ ಆಧಾರಗಳೆಲ್ಲ ಕೊಂಗುನಾಡಿನ ಚರಿತ್ರೆಯನ್ನು ತಿಳಿಯಲು ಬಹುಮಟ್ಟಿಗೆ ಸಹಕಾರಿಯಾಗಿವೆ.

ಇತಿಹಾಸ ಬದಲಾಯಿಸಿ

ಪ್ರಾಚೀನ ಕಾಲದಲ್ಲಿ ಪಶುಪಾಲನೆ ಇಲ್ಲಿಯ ಜನರ ಮುಖ್ಯ ಕಸುಬಾಗಿದ್ದುದಾಗಿ ತಿಳಿದುಬಂದಿದೆ. ಸಂಘಸಾಹಿತ್ಯದ ಕಾಲದಿಂದ ಕೊಂಗುಮಂಡಲದ ಇತಿಹಾಸಯುಗ ಪ್ರಾರಂಭವಾಯಿತು. ಮಾಲವರ್, ಕೋಸರ್, ಕೊಂಗರು ಮೊದಲಾದ ಬುಡಕಟ್ಟುಗಳ ಜನರು ಅಲ್ಲಿ ವಾಸಿಸುತ್ತಿದ್ದರು. ಕೊಂಗುನಾಡನ್ನಾಳಿದ ಐತಿಹಾಸಿಕ ಮನೆತನಗಳಲ್ಲಿ ನಾಗಸಂತತಿ ಮೊದಲನೆಯದು. ಅನಂತರ ಸಂಘ ಸಾಹಿತ್ಯಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ತಮಿಳು ಅರಸುಮನೆತನಗಳಲ್ಲೊಂದಾದ ಚೇರ ಸಂತತಿ ಕೊಂಗುನಾಡಿನ ಮೇಲೆ ತನ್ನ ಆಡಳಿತವನ್ನು ಸ್ಥಾಪಿಸಿತು. ಈ ಕಾರಣದಿಂದಲೇ ಚೇರ ರಾಜರಿಗೆ ಕೊಂಗು ಚೇರ ಎಂಬ ಹೆಸರು ರೂಢಿಗೆ ಬಂತು. ಕೊಂಗು ನಾಡಿನ ಕರೂರು ಪಟ್ಟಣ ಚೇರ ಮಂಡಲಾಧಿಕಾರಿಯ ರಾಜಧಾನಿಯಾಗಿತ್ತು. ಕೊಂಗುನಾಡಿನ ಮೇಲೆ ಚೇರರ ಆಡಳಿತ ಕ್ರಿ.ಶ.3ನೆಯ ಶತಮಾನದ ಮಧ್ಯಭಾಗದಲ್ಲಿ ಕೊನೆಗೊಂಡಿತು. ಅನಂತರ ಕನ್ನಡದ ಅರಸುಮನೆತನಗಳು ಈ ಪ್ರದೇಶದ ಮೇಲೆ ಬಹುಕಾಲ ಆಡಳಿತ ನಡೆಸಿದುವು.

ರಾಜಾಕ್ಕಳ್ ಚರಿತಂ ತಿಳಿಸುವಂತೆ ರಟ್ಟ ಮನೆತನದ ವೀರರಾಯ ಚಕ್ರವರ್ತಿ ಅಲ್ಲಿಯ ಸಿಂಹಾಸನವನ್ನೇರಿದ. ರಟ್ಟ, ರಥಿಕ, ರೆಡ್ಡಿ ಹಾಗೂ ರಾಷ್ಟ್ರಕೂಟ ಎಂಬುದಾಗಿ ವಿದ್ವಾಂಸರು ಕರೆದಿರುವ ಈ ಜನರು ಉತ್ತರ ಭಾಗದಿಂದ ಮೈಸೂರಿನ ಮೂಲಕ ವಲಸೆ ಬಂದು ಕೊಂಗು ಪ್ರದೇಶದಲ್ಲಿ ತಮ್ಮ ಅಧಿಕಾರ ಸ್ಥಾಪಿಸಿದರು. ಸ್ಕಂಧಪುರ ಇವರ ರಾಜಧಾನಿಯಾಗಿತ್ತು. 250ರಿಂದ 450ರ ವರೆಗೆ ರಟ್ಟಮನೆತನದ ಏಳು ರಾಜರು ಕೊಂಗು ನಾಡನ್ನಾಳಿದರು. ಇವರ ಆಳ್ವಿಕೆಯಲ್ಲಿ ಜೈನ ಮತ ವಿಶೇಷವಾಗಿ ಪ್ರಸಾರವಾಯಿತು. ಆ ಕಾಲದ ಜೈನ ಬಸದಿಗಳ ಭಗ್ನಾವಶೇಷಗಳು ಕೊಯಮತ್ತೂರು ಜಿಲ್ಲೆಯಲ್ಲಿ ಕಾಣಬಂದಿವೆ. ರಟ್ಟರ ಕೊನೆಯ ರಾಜ, ತಿರುವಿಕ್ರಮ, ಜೈನಮತದಿಂದ ಶೈವಪಂಥಕ್ಕೆ ಪರಿವರ್ತನೆಯಾದ. ರಟ್ಟವಂಶೀಯರು ಸುವ್ಯವಸ್ಥಿತವಾದ ಆಡಳಿತವನ್ನು ಜಾರಿಗೆ ತಂದಿದ್ದರು. 450ರ ಸುಮಾರಿನಲ್ಲಿ ಕೊಂಗು ಮಂಡಲ ಗಂಗರ ಅಧೀನವಾಯಿತು.

ಒಂದನೆಯ ಮಾಧವ ಕೊಂಗಣಿವರ್ಮ ಗಂಗಮನೆತನವನ್ನು ಸ್ಥಾಪಿಸಿ ಕೊಂಗು ದೇಶವನ್ನು ಸ್ವಾಧೀನಪಡಿಸಿಕೊಂಡ. ಸು.450ರಿಂದ 870ರ ವರೆಗೆ 21 ಜನ ಗಂಗ ಅರಸರು ಕೊಂಗು ನಾಡನ್ನು ಆಳಿದರು. ದುರ್ವಿನೀತ, ಭೂವಿಕ್ರಮ ಹಾಗೂ 3ನೆಯ ಕೊಂಗುಣಿ ವರ್ಮರ ಆಳ್ವಿಕೆಯ ಕಾಲದಲ್ಲಿ ಕೊಂಗು ನಾಡು ಸಂಪದ್ಭರಿತವಾಗಿತ್ತು. 725ರ ಅನಂತರ ತಲಕಾಡು ಗಂಗ ವಂಶದ ಸ್ವತಂತ್ರ ಶಾಖೆಯೊಂದು ಕೊಂಗು ಗಂಗರೆಂಬ ಹೆಸರಿನಿಂದ ಇಲ್ಲಿ ಸ್ಥಾಪಿತವಾದಂತೆ ಕಂಡುಬರುತ್ತದೆ. ಗಂಗರ ಆಳ್ವಿಕೆಯ ಕಾಲದಲ್ಲಿ ಕೊಂಗು ರಾಜ್ಯವನ್ನು ಆಡಳಿತ ಸೌಕರ್ಯಕ್ಕಾಗಿ ವಿಷಯ ಅಥವಾ ನಾಡುಗಳೆಂದು ವಿಂಗಡಿಸಲಾಗಿತ್ತು. ತೊರೆನಾಡು-500, ಕೊಂಗುನಾಡು-2000 ಮತ್ತು ಮಲೆನಾಡು-1000 ಎಂಬ ವಿಭಾಗಗಳಿದ್ದುವು. ಈ ವಿಭಾಗಗಳು ಒಬ್ಬೊಬ್ಬ ಪ್ರಾಂತ್ಯಾಧಿಕಾರಿಯ ಆಡಳಿತಕ್ಕೊಳಪಟ್ಟಿದ್ದುವು. ಗ್ರಾಮಗಳು ಆಡಳಿತ ಘಟಕಗಳಾಗಿದ್ದುವು. ಗವುಂಡ (ಗೌಡ) ಮುಖ್ಯವಾದ ಗ್ರಾಮಾಧಿಕಾರಿ. ಗವುಂಡನಿಗೆ ಸಹಾಯಕನಾಗಿ ಮಣೆಗಾರ ಎಂಬ ಅಧಿಕಾರಿಯಿದ್ದ. ಕೊಯಮತ್ತೂರು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಇಂದಿಗೂ ಇರುವ ಗವುಂಡರು ಗಂಗರ ಆಡಳಿತದ ಸಂಕೇತವಾಗಿದ್ದಾರೆ. ಗಂಗರ ಆಳ್ವಿಕೆಯ ಕೊನೆಗಾಲದಲ್ಲಿ ಪಲ್ಲವ, ಬಾಣ ಮತ್ತು ಅಡಿಗೈಮಾನ್ ಶಾಖೆಗಳು ಕೊಂಗುನಾಡಿನ ಹಲವು ಭಾಗಗಳಲ್ಲಿ ತಲೆಯೆತ್ತಿದುವು. ಆ ಕಾಲದಲ್ಲಿ ಶೈವ ಮತ್ತು ಜೈನ ಪಂಥಗಳು ಇಲ್ಲಿ ಪ್ರಬಲವಾಗಿದ್ದುವು.

11ನೆಯ ಶತಮಾನದ ಪ್ರಾರಂಭದಿಂದ ಕೊಂಗು ಮಂಡಲ ಚೋಳರ ಅಧೀನಕ್ಕೆ ಬಂತು. 1114ರಲ್ಲಿ ಹೊಯ್ಸಳ ವಿಷ್ಣುವರ್ಧನ ಗಂಗವಾಡಿಯನ್ನಾಕ್ರಮಿಸಿದ್ದ ಚೋಳರನ್ನು ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿದಾಗ ಕೊಂಗು ಪ್ರದೇಶದ ಹಲವು ಭಾಗಗಳು ಹೊಯ್ಸಳ ರಾಜ್ಯಕ್ಕೆ ಸೇರಿದುವು. 3ನೆಯ ವೀರಬಲ್ಲಾಳನ ಕಾಲದಲ್ಲಿ ಕೊಂಗು ಮಂಡಲ ಪೂರ್ಣವಾಗಿ ಹೊಯ್ಸಳರ ವಶವಾಯಿತು. ಹೊಯ್ಸಳರ ತರುವಾಯ ಇದು ವಿಜಯನಗರ ಸಾಮ್ರಾಜ್ಯದಲ್ಲಿ ಐಕ್ಯವಾಗಿತ್ತು. ವಿಜಯನಗರದ ಪತನಾನಂತರ ಸ್ವಲ್ಪ ಕಾಲದವರೆಗೂ ಮಧುರೆಯ ನಾಯಕರು ಕೊಂಗುನಾಡನ್ನು ಆಳಿದರು. 17ನೆಯ ಶತಮಾನದ ಮಧ್ಯಭಾಗದಲ್ಲಿ ಕಂಠೀರವ ನರಸರಾಜ ಒಡೆಯರು ಕೊಯಮತ್ತೂರು ಜಿಲ್ಲೆಯನ್ನು ವಶಪಡಿಸಿಕೊಂಡರು. ಚಿಕ್ಕದೇವರಾಜ ಒಡೆಯರು ಕೊಂಗು ಮಂಡಲವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡರು. ಹೈದರ್ ಮತ್ತು ಟಿಪ್ಪುಸುಲ್ತಾನನ ಕಾಲದಲ್ಲಿ ಕೊಂಗು ನಾಡಿನ ಸುತ್ತಮುತ್ತಣ ಪ್ರದೇಶಗಳು ಮೈಸೂರು ರಾಜ್ಯದಲ್ಲಿ ಸೇರಿದ್ದುವು. 1799ರಲ್ಲಿ ಟಿಪ್ಪುವಿನ ಮರಣಾನಂತರ ಈ ಪ್ರದೇಶ ಬ್ರಿಟಿಷರ ವಶವಾಗಿ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಯಿತು. ಅನಂತರ ಮದ್ರಾಸು ಪ್ರಾಂತ್ಯದಲ್ಲೂ ತರುವಾಯ ಮದ್ರಾಸು ರಾಜ್ಯದಲ್ಲೂ ಮುಂದುವರಿದ ಕೊಂಗುಮಂಡಲ ಈಗ ತಮಿಳುನಾಡಿನ ಭಾಗವಾಗಿದೆ.

ಉಲ್ಲೇಖ ಬದಲಾಯಿಸಿ

  1. "Census of India". Government of India. 2001.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: