ಕಲಾಭಿಮಾನಿ ದೇವತೆಗಳು

ಮಾನವನಲ್ಲಿ ಕಾಣಬರುವ ಜ್ಞಾನ, ಸಾಹಿತ್ಯ ಮತ್ತು ಕಲೆಗಳಿಗೆ ಪ್ರೇರಕ ರೂಪರಾದ ಅಭಿಮಾನಿದೇವತೆಗಳ ಕಲ್ಪನೆ ಭಾರತ ಹಾಗೂ ಪುರಾತನ ಗ್ರೀಕ್ ಸಂಸ್ಕೃತಿಯಲ್ಲಿದೆ.

ಗ್ರೀಕ್ ಸಂಸ್ಕೃತಿಯಲ್ಲಿ ಬದಲಾಯಿಸಿ

  • ಗ್ರೀಕ್ ಅತಿ ಪ್ರಾಚೀನರಾದ ಕೋಮರ್ ಮತ್ತು ಹೆಸಿಯದ್ ರ ಕಾವ್ಯಗಳಲ್ಲಿಯೇ ನಾವಿದನ್ನು ನೋಡಬಹುದು. ಹೆಲನಿಕ್ ಸಂಸ್ಕೃತಿಯಲ್ಲಿ ಈ ತತ್ತ್ವ ಗಣನೀಯವಾಗಿ ಉಳಿದು ಬಂದಿದೆ. ಈ ಕಲಾಭಿಮಾನಿದೇವತೆಗಳಲ್ಲಿ ಸ್ತ್ರೀಯರೇ ಹೆಚ್ಚು. ಗ್ರೀಕರ ಪುರಾತನ ಸಂಸ್ಕೃತಿಯಲ್ಲಿ ಕಾಣಬರುವ ಕಲಾಭಿಮಾನಿದೇವತೆಗಳಾರೆಂದರೆ, ಕ್ಲಿಯೋ, ಎಂಟರ್ಪಿ, ಜಲಿಯ, ಮೆಲ್ಪೊಮೆನಿ, ಜರ್ಪ್ಸಿಕೋರಿ ಎರಟೋ, ಪಾಲಿಮ್ನಿಯ, ಯುರೇನಿಯ, ಮತ್ತು ಕ್ಯಾಲಿಯೋಪಿ-ಎಂಬ ಒಂಬತ್ತು ಜನ.
  • ಇವರೆಲ್ಲರೂ ಜ್ಯೂಸ್ ಮತ್ತು ಮೆಮೋಸ್ಟೇನ್ ಳ (ಮೇಧೋಶಕ್ತಿ) ಮಕ್ಕಳಂತೆ. ಮೂಲತಃ ಇವರೆಲ್ಲರೂ ಸಂಗೀತದ ಅಧಿದೇವತೆಗಳು ಮತ್ತು ಇವರ ಗಾನಕ್ಕೆ ಮೇಳ ಹಾಕುವವನೇ ಅಪಾಲೋ. ಇವರು ಒಲಿಂಪಸ್ ಶಿಖರದಲ್ಲಿನ ತಮ್ಮ ನಿವಾಸದಲ್ಲಿದ್ದು ತಮ್ಮ ಹಾಡಿನಿಂದಲೇ ಸಮಸ್ತ ದೇವಗಣವನ್ನೆಲ್ಲ ತೃಪ್ತಿಪಡಿಸಿದರಂತೆ. ಗ್ರೀಕರ ಭಾರತದ ಕಲಾಭಿಮಾನಿ ದೇವತೆಗಳು ತ್ರಿಕಾಲಜ್ಞರು. ವರ್ತಮಾನ, ಭೂತ ಮತ್ತು ಭವಿಷ್ಯದ ಅರಿವು ಇವರಿಗುಂಟು.
  • ಮಾನವ ಲೋಕದ ಕವಿಗಳಲ್ಲಿ ಮೂಡುವ ಕಾವ್ಯ, ದಾರ್ಶನಿಕ ವಿಚಾರ, ಆಳುವವನ ಧಾರ್ಮಿಕ ಪ್ರಜ್ಞೆ-ಇವುಗಳೆಲ್ಲಕ್ಕೂ ಬೇಕಾದ ಪ್ರೇರಣೆ ಈ ದೇವತೆಗಳಿಂದಲೇ ಬರಬೇಕು. ಈ ದೇವತೆಗಳು ಹಾಡಿದ ಕಾವ್ಯವನ್ನು ಅವರು ನುಡಿಸಿದಂತೆ ನುಡಿಯುವವನೇ ಕವಿ. ಈ ದೇವಕನ್ಯೆಯರು ಅವಿವಾಹಿತರು, ಶುದ್ಧಚಾರಿತ್ರರು. ಪ್ರತಿಭಾನ್ವಿತರಾದ ಕವಿಗಳು ಮತ್ತು ಸಂಗೀತಗಾರರನ್ನು ಇವರ ಔರಸಪುತ್ರರೆಂದು ಗಣಿಸುವುದುಂಟು.
  • ಲೀನಸ್ ಯುರೇನಿಯಳ ಮಗನೆಂದೂ ಹೈಮೆನಿಯಸ್ ಕ್ಲಿಯೋಳ ಮಗನೆಂದೂ ತಮೈರಸಿಸ್ ಮೆಲ್ಪಮೆನಿಯ ಮಗನೆಂದೂ ಹೇಳಿದೆ. ಒಂಬತ್ತು ಜನ ದೇವತೆಗಳಲ್ಲದೆ ತಿಯೋರಿಸ್, ಪ್ರಾಕ್ಸಿಸ್, ನೀಟೆ ಮೊದಲಾದ ಇನ್ನೂ ಅನೇಕ ಕಲಾಭಿಮಾನಿದೇವತೆಗಳ ಹೆಸರು ಗ್ರೀಕ್ ಸಾಹಿತ್ಯದ ಮುಂದಿನ ಬೆಳೆವಣಿಗೆಯಲ್ಲಿ ಕಾಣುತ್ತವೆ. ಮೂಲದಲ್ಲಿ ಇದ್ದ ಒಂಬತ್ತು ಜನ ಕಲಾಭಿಮಾನಿದೇವತೆಗಳಲ್ಲಿ ಮೊದ ಮೊದಲು ಯಾವ ವೃತ್ತಿ ವೈವಿಧ್ಯವೂ ಕಾಣಬರದಿದ್ದರೂ ರೋಮನ್ ಸಂಸ್ಕೃತಿಯ ವೇಳೆಗೆ ವೈವಿಧ್ಯ ತಲೆದೋರುತ್ತದೆ. *ಉದಾಹರಣೆಗೆ-ಕ್ಲಿಯೋ ಇತಿಹಾಸದ ಅಧಿದೇವತೆಯೆಂದೂ ಎಂಟರ್ಪಿ ಕೊಳಲ ಗಾನದ ಮೂಲದೇವತೆಯೆಂದೂ ಯುರೇನಿಯ ಖಗೋಳ ಶಾಸ್ತ್ರದ ಅಭಿಮಾನಿದೇವತೆಯೆಂದೂ ಗಣಿಸಲಾಗಿದೆ. ಆದರೆ ಉಳಿದ ಆರು ದೇವತೆಗಳು ಕಾವ್ಯ, ಅಲಂಕಾರ, ದರ್ಶನ, ಬೇಸಾಯ ಮುಂತಾದ ಜ್ಞಾನದ ವಿವಿಧ ಪ್ರಕಾರಗಳನ್ನೂ ಜೊತೆಗೂಡಿಯೇ ಪ್ರತಿನಿಧಿಸುತ್ತಾರೆ. ಅಂದಮೇಲೆ ಕಲಾಭಿಮಾನಿ ದೇವತೆಗಳಲ್ಲಿ ಕಾಣಬರುವ ಈ ವೃತ್ತಿವೈವಿಧ್ಯ ಹೆಸರಿಸುವಷ್ಟು ಸುವ್ಯವಸ್ಥಿತವಾಗಿರುವಂತೆ ಕಾಣುವುದಿಲ್ಲ.

ಭಾರತದ ಸಂಸ್ಕೃತಿಯಲ್ಲಿ ಬದಲಾಯಿಸಿ

  • ಪುರಾತನ ಭಾರತೀಯ ಸಂಸ್ಕೃತಿಯೂ ಈ ಕಲ್ಪನೆಗೆ ಹೊರತಲ್ಲ. ಸರಸ್ವತಿಯನ್ನು ವಿದ್ಯಾಧಿದೇವತೆಯೆಂದೂ ಲಕ್ಷ್ಮಿಯನ್ನು ಐಶ್ವರ್ಯದ ಮೂಲದೇವತೆಯೆಂದೂ ವಿನಾಯಕನನ್ನು ವಿಘ್ನೇಶ್ವರನೆಂದೂ ಕಲ್ಪಿಸಲಾಗಿದೆ. ಗಂಧರ್ವರು, ಕಿನ್ನರರೇ ಮುಂತಾದ ದೇವಗಣಗಳು ಸಂಗೀತ ನೃತ್ಯ ಮತ್ತು ಸಾಹಿತ್ಯದಲ್ಲಿ ಪಾರಂಗತರಾಗಿದ್ದರೆಂಬ ಮಾತು ಭಾರತೀಯ ಪುರಾಣಗಳಲ್ಲಿ ಕಾಣಬರುತ್ತದೆ. ಇಂದ್ರನ ಸಭೆಯಲ್ಲಿ ನಡೆಯುತ್ತಿದ್ದ ಇವರ ಕಲಾಪ್ರದರ್ಶನ ದೇವತೆಗಳ ಕಣ್ಮನಗಳನ್ನು ತಣಿಸುತ್ತಿದ್ದಿತಂತೆ.
  • ಶ್ರೀವೈಷ್ಣವ ಸಂಪ್ರದಾಯದಲ್ಲಿ ವಿದ್ಯಾಧಿದೇವತೆಯ ಸ್ಥಾನ ಹಯಗ್ರೀವನಿಗೆ ಸಲ್ಲುತ್ತದೆ. ತಮ್ಮ ಕಲೆಯ ಕೌಶಲ್ಯಕ್ಕೆ ಕುಮಾರಸ್ವಾಮಿಯೇ ಅಧಿದೇವತೆಯೆಂದು ಈಶ್ವರನ ಮಗನಾದ ಕುಮಾರಸ್ವಾಮಿಯನ್ನು ಆರಾಧಿಸುವ ಸಂಪ್ರದಾಯ ಶಿಲ್ಪಿಗಳಲ್ಲಿ ಕಾಣಬರುತ್ತದೆ. ಲಯಕರ್ತನೂ ನಟಭಯಂಕರನೂ ಆದ ನಟರಾಜ ನೃತ್ಯಕಲೆಯ ಮೂರ್ತಸ್ವರೂಪನೇ ಆಗಿದ್ದಾನೆ.
  • ಭಾರತೀಯ ಕವಿಗಳು ಮತ್ತು ಕಲೋಪಾಸಕರು ತಮ್ಮ ಕೃತಿಗೆ ಬೇಕಾದ ಸ್ಫೂರ್ತಿಪಡೆಯಲು ವಾಗ್ದೇವಿಯನ್ನು ಆರಾಧಿಸುವುದುಂಟು. ತಮ್ಮ ಗ್ರಂಥರಚನೆಗೆ ಮುನ್ನ ಶಾರದಾಸ್ತುತಿ, ವಿನಾಯಕಸ್ತುತಿ, ಇವರೆಲ್ಲರಲ್ಲಿಯೂ ಕಾಣಬರುವ ಸಾಮಾನ್ಯ ಗುಣ. ಭಾರತೀಯ ಸಂಸ್ಕೃತಿಯಲ್ಲಿ ಕಾಣಬರುವ ಕಲಾಭಿಮಾನಿ ದೇವತೆಗಳ ಕಲ್ಪನೆ ಗ್ರೀಕರಲ್ಲಿರುವಷ್ಟು ಸುವ್ಯವಸ್ಥಿತವಾಗಿರದಿದ್ದರೂ ಇಲ್ಲಿ ಕಾಣುವ ಕೆಲವೇ ಸಂಖ್ಯೆಯ ಕಲಾಭಿಮಾನಿದೇವತೆಗಳು ಭಾರತೀಯರ ಸಾಹಿತ್ಯ, ಕಲೆ ಮತ್ತು ಸೌಂದರ್ಯೋಪಾಸನೆಗೆ ಸೂಕ್ತವಾದ ಪ್ರೇರಕಶಕ್ತಿಗಳೆನಿಸಿದ್ದಾರೆ.
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: