ಕರ್ನಾಟಕ ನಾಟಕ ಅಕಾಡೆಮಿ

ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರದ ಪಾತ್ರ ಗುರುತರವಾದುದು. ಕಲೆ ಸಂಸ್ಕೃತಿಗಳನ್ನು ಕಾಪಾಡಲು, ಪ್ರದರ್ಶನ ಕಲೆಗಳನ್ನು ಅಭಿವೃದ್ಧಿ ಪಡಿಸಲು ಸದಾ ಸಿದ್ಧರಾಗಿರುವ ರಾಜ್ಯ ಸರ್ಕಾರ ಪ್ರತಿಯೊಂದು ಕಲಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತನೆ ನಡೆಸಿ ರೂಪಿಸಿದ ಯೋಜನೆಯಲ್ಲಿ ಅಕಾಡೆಮಿಗಳ ಸ್ಥಾಪನೆಯು ಒಂದು.

ಇತಿಹಾಸ ಬದಲಾಯಿಸಿ

ಕರ್ನಾಟಕ ನಾಟಕ ಅಕಾಡೆಮಿಯ ಅಂದಿನ ಮೈಸೂರು ಸರ್ಕಾರದ ಆಡಳಿತದಡಿ 1959ರಲ್ಲಿ ಮೈಸೂರುರಾಜ್ಯ ಸಂಗೀತ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು. ಆಗ ಅದರ ಅಧ್ಯಕ್ಷರಾಗಿದ್ದವರು ಶ್ರೀ ಜಯಚಾಮರಾಜ ಒಡೆಯರ್. ನಂತರ ಈ ಅಕಾಡೆಮಿಯು ವಿದ್ಯಾಇಲಾಖೆಯ ಆಡಳಿತಕ್ಕೆ ಒಳಪಟ್ಟಿತು.ಸಂಬಂಧಪಟ್ಟ ವಿದ್ಯಾಮಂತ್ರಿಗಳೇ ಅಕಾಡೆಮಿಯ ಅಧ್ಯಕ್ಷ ಪದವಿಯನ್ನು ಅಲಂಕರಿಸುತ್ತಾ ಬಂದರು. ಶ್ರೀಯುತರಾದ ಕೆ.ವಿ.ಶಂಕರಗೌಡ, ಎಸ್.ಆರ್.ಕಂಠಿ, ಎ.ಆರ್.ಬದರಿನಾರಾಯಣ್, ಅಣ್ಣಾರಾವ್‍ ಗಣಮುಖಿ ಈ ಸ್ಥಾನವನ್ನಲಂಕರಿಸಿದ ಪ್ರಮುಖರು. ನಂತರ 1978ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ವತಂತ್ರಅಕಾಡೆಮಿಯಾಗಿರೂಪುಗೊಂಡು ನಾಟಕ ಕ್ಷೇತ್ರಕ್ಕೆ ವಿಶಿಷ್ಟ ಆಯಾಮ ನೀಡಿ, ರಂಗಭೂಮಿಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದೆ.

ಅಕಾಡೆಮಿ ಧ್ಯೇಯೋದ್ದೇಶಗಳು ಬದಲಾಯಿಸಿ

  • ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವುದು.
  • ಅಕಾಡೆಮಿಯ ನಾಟಕ ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಇದೇ ರೀತಿಯ ಅಕಾಡೆಮಿಗಳೊಂದಿಗೆ ಮತ್ತು ಕರ್ನಾಟಕದಲ್ಲಿರುವ ಇತರ ಸಂಘ, ಸಂಸ್ಥೆಗಳೊಡನೆ ಸಹಕರಿಸುವುದು.
  • ಅಕಾಡೆಮಿಯ ಕಾರ್ಯಚಟುವಟಿಕೆಗಳ ಉದ್ದೇಶಕ್ಕಾಗಿ ಮತ್ತು ದಾನಗಳ ಮೂಲಕ ವಂತಿಗೆ ದಾನಗಳ ಮೂಲಕ ನಿಧಿಗಳನ್ನು ಸಂಗ್ರಹಿಸುವುದು.
  • ಗ್ರಂಥಾಲಯಗಳನ್ನು ಸ್ಥಾಪಿಸಿ, ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸುವುದು ಮತ್ತು ಪ್ರಕಟಿಸುವುದು.
  • ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕಾರ್ಯಾಗಾರ, ಸಂವಾದ, ಉತ್ಸವಗಳನ್ನು ಏರ್ಪಡಿಸುವುದು.
  • ವಿಚಾರ ಸಂಕಿರಣ, ಸಂವಾದ, ಉತ್ಸವಗಳನ್ನು ನೇರವಾಗಿ ಅಥವಾ ಸಂಘ, ಸಂಸ್ಥೆಗಳೊಂದಿಗೆ ಸಂಯುಕ್ತವಾಗಿ ಏರ್ಪಡಿಸುವುದು.
  • ನಾಟಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು.
  • ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರ ಅಕಾಡೆಮಿಗಳು ಅಪೇಕ್ಷಿಸಿದಾಗ ಸೂಕ್ತ ಸಲಹೆ ನೀಡುವುದು.

ಕರ್ನಾಟಕ ನಾಟಕ ಅಕಾಡೆಮಿಯ ಯೋಜನೆಗಳು ಬದಲಾಯಿಸಿ

  • ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ[೧]
  • ಜೀವಮಾನ ಸಾಧನೆ ಪ್ರಶಸ್ತಿ ವಾರ್ಷಿಕ ಪ್ರಶಸ್ತಿಗಳು[೨]
  • ದತ್ತಿ ಪ್ರಶಸ್ತಿಗಳು ಪುಸ್ತಕ ಬಹುಮಾನ
  • ಭರತನ ನಾಟ್ಯಶಾಸ್ತ್ರ ಪುಸ್ತಕ, ಜಿಲ್ಲಾ ರಂಗಮಾಹಿತಿ,
  • ರಂಗಸಂಪನ್ನರು (ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಮೊದಲ ೨೬ ಪುಸ್ತಕಗಳ ಸಂಪಾದಕರಾಗಿದ್ದರು) ಹಾಗೂ ಅಕಾಡೆಮಿಯ ಇನ್ನಿತರೆ ಪ್ರಕಟಣೆಗಳು
  • ವೃತ್ತಿ ಕಂಪನಿಗಳಲ್ಲಿ ತೊಡಗಿಸಿಕೊಳ್ಳುವ ಯುವಕ/ ಯುವತಿಯರಿಗೆ ಶಿಷ್ಯವೇತನ
  • ವೃತ್ತಿರಂಗಭೂಮಿ ನಾಟಕೋತ್ಸವ
  • ವಿಶ್ವ ರಂಗಭೂಮಿ ದಿನಾಚರಣೆ
  • ವಿಚಾರ ಸಂಕಿರಣ, ಶಿಬಿರ ಕಮ್ಮಟಗಳು/ರಾಜ್ಯ / ಹೊರರಾಜ್ಯ ಉತ್ಸವಗಳು
  • ತಿಂಗಳ ನಾಟಕ ಕಾರ್ಯಕ್ರಮ
  • ದಾಖಲೀಕರಣ
  • ಪೌರಾಣಿಕ ನಾಟಕೋತ್ಸವ /ಗ್ರಾಮೀಣ ಹವ್ಯಾಸಿ ನಾಟಕೋತ್ಸವ
  • ಮಕ್ಕಳ ನಾಟಕ ಮತ್ತು ಶಾಲಾ ಕಾಲೇಜುಗಳಲ್ಲಿ ನಾಟಕ ಪ್ರದರ್ಶನ
  • ರಂಗಭೂಮಿಯ ಬಗ್ಗೆ ಸಂಶೋಧನಾ ಪ್ರಬಂಧಗಳಿಗೆ ಫೆಲೋಶಿಪ್
  • ಗ್ರಾಮೀಣ ಭಾಗದಲ್ಲಿನ ಖಾಸಗಿ ರಂಗಮಂದಿರಗಳಿಗೆ ಲೈಟ್, ಪರದೆಗಳ ವ್ಯವಸ್ಥೆ ಮಾಡುವ ಯೋಜನೆ
  • ಪ್ರಕಟವಾಗದ ಹಾಗೂ ಪ್ರಯೋಗವಾಗದ ನಾಲ್ಕು ನಾಟಕ ರಂಗಪಠ್ಯಗಳಿಗೆ ನಗದು ಬಹುಮಾನ

ರಂಗಪ್ರಶಸ್ತಿಗಳು ಬದಲಾಯಿಸಿ

ರಂಗಭೀಷ್ಮಗುಬ್ಬಿ ವೀರಣ್ಣನವರಿಂದ ಮೊದಲುಗೊಂಡು, ಕಳೆದ ಐದು ದಶಕಗಳಿಂದ ರಾಜ್ಯದ ಹವ್ಯಾಸಿ, ವೃತ್ತಿ, ಗ್ರಾಮೀಣರಂಗಭೂಮಿಯ ಹಲವಾರುಖ್ಯಾತ ರಂಗಕರ್ಮಿಗಳನ್ನು, ರಂಗತಜ್ಞರನ್ನು, ನಾಟಕಕಾರರನ್ನು, ನಟ-ನಟಿಯರನ್ನು, ನಿರ್ದೇಶಕರನ್ನು, ನೇಪಥ್ಯತಜ್ಞರನ್ನು ಪ್ರಸಾಧನ ಕಲಾವಿದರನ್ನು ಗುರುತಿಸಿ, ಅವರಿಗೆ ಅವರವರ ಸಾಧನೆ ಪರಿಶ್ರಮಿಗಳಿಗೆ ತಕ್ಕಂತೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿಗೌರವಿಸುವ ರಂಗಪರಂಪರೆಯನ್ನು ಅನುಸರಿಸುತ್ತಿದೆ. ಮಳವಳ್ಳಿ ಸುಂದರಮ್ಮ, ಎಂ.ವಿ.ರಾಜಮ್ಮ, ಲಕ್ಷ್ಮೀಭಾಯಿ, ಆರ್.ನಾಗೇಂದ್ರರಾವ್, ಹೆಚ್.ಎಲ್.ಎನ್.ಸಿಂಹ, ಬಿ.ಜಯಮ್ಮ, ಜಿ.ವಿ.ಸ್ವರ್ಣಮ್ಮ, ಡಿ.ದುರ್ಗಾದಾಸ್, ಪದ್ದಣ್ಣ, ಮಾ.ಹಿರಣ್ಣಯ್ಯ, ಗರುಡ ಶ್ರೀಪಾದರಾವ್, ಪಿ.ಲಂಕೇಶ್, ಹೆಚ್.ಎನ್. ಹೂಗಾರ್, ಸಿ.ಆರ್.ಸಿಂಹ, ಬಿ.ಟಿ.ಧುತ್ತರಗಿ, ಗೌಸ್ ಮಾಸ್ತರ್, ಜಿ.ವಿ.ಮಾಲತಮ್ಮ, ಸಿದ್ಧಲಿಂಗ ಪಟ್ಟಣಶೆಟ್ಟಿ, ಗಿರಡ್ಡಿ ಗೋವಿಂದರಾಜ, ಚಂದ್ರಶೇಖರ ಪಾಟೀಲ ಮುಂತಾದ ಖ್ಯಾತ ನಾಮರಾದ, ಇಲ್ಲಿ ಹೆಸರಿಸದ, ರಂಗಕರ್ಮಿಗಳಿಂದ ಹಿಡಿದುಇತ್ತೀಚಿನ ನೂರಾರು ರಂಗ ಕಲಾವಿದರವರೆಗೆ ರಂಗಗೌರವ ಸಲ್ಲಿಸಿದೆ. ಕನ್ನಡ ರಂಗಭೂಮಿಯಿಂದಲೇ ವೃತ್ತಿಜೀವನ ಪ್ರಾರಂಭಿಸಿ, ಅತ್ಯುನ್ನತವಾದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆಯುವರೆಗೂ ಹಿಮಾಲಯದಷ್ಟು ಕಲಾ ಸೇವೆ ಮಾಡಿದ ನಟ ಸಾರ್ವಭೌಮ ಡಾ.ರಾಜ್‍ಕುಮಾರ್‍ರವರಿಗೆ 1992ರಲ್ಲಿ ಅಕಾಡೆಮಿ ಕಲಾ ಕೌಸ್ತುಭಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೆ, ಫೆಲೋಶಿಫ್‍ಗಳನ್ನು, ಜೀವಮಾನ ರಂಗಸಾಧನೆ ಪ್ರಶಸ್ತಿ, ಸುವರ್ಣ ಕರ್ನಾಟಕ ಗೌರವ ಪುರಸ್ಕಾರ, ಮತ್ತು ದತ್ತಿ ಪ್ರಶಸ್ತಿಗಳನ್ನು ಅಕಾಡೆಮಿ ನೀಡುತ್ತಾ ಬಂದಿದೆ.

ವೃತ್ತಿರಂಗಭೂಮಿ ಪುನಶ್ಚೇತನ ಕಾರ್ಯಕ್ರಮ ಬದಲಾಯಿಸಿ

ಹಲವಾರು ದಶಕಗಳಿಂದ ರಾಜ್ಯದಲ್ಲಿ ಅನೇಕ ವೃತ್ತಿಕಂಪನಿಗಳು ಕಲಾಸೇವೆಯಲ್ಲಿತೊಡಗಿದ್ದು, ನಟನೆಯನ್ನೇತಮ್ಮ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ಈ ವೃತ್ತಿಯಲ್ಲದೆ, ಇತರ ವೃತ್ತಿಅರಿಯದ ಈ ಕಲಾವಿದರ ಕುಟುಂಬಗಳು ಹಳ್ಳಿ ಹಳ್ಳಿಗಳಲ್ಲಿ, ಸಂತೆ ಜಾತ್ರೆಗಳಲ್ಲಿ, ವೃತ್ತಿ ನಾಟಕಗಳನ್ನು ಪ್ರದರ್ಶಿಸುತ್ತಿವೆ. ಆದರೆ, ಎಲ್ಲಾ ಕಂಪನಿಗಳು, ಎಲ್ಲಾಕಾಲದಲ್ಲಿಯೂ ನಾಟಕ ಪ್ರದರ್ಶನ ಅವಕಾಶಗಳಿಲ್ಲದೆ, ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಯನ್ನು ಮನಗಂಡು ಕರ್ನಾಟಕ ಸರ್ಕಾರದ ವಿಶೇಷ ಆರ್ಥಿಕ ಸಹಾಯದಿಂದಾಗಿ ಕರ್ನಾಟಕ ನಾಟಕಅಕಾಡೆಮಿ, ಇವುಗಳ ಪುನಶ್ಚೇತನಕ್ಕಾಗಿ, ಅವುಗಳ ಅವಶ್ಯಕತೆಗೆ ಮತ್ತು ಪರಿಶ್ರಮಕ್ಕೆಅನುಗುಣವಾಗಿಕರ್ನಾಟಕ ನಾಟಕಅಕಾಡೆಮಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಾಲನೆಯಲ್ಲಿರುವ ಕಂಪನಿಗಳ ವರದಿಗಳನ್ನು ಪಡೆದು ಅವುಗಳ ಪುನಶ್ಚೇತನಕ್ಕಾಗಿ ಅನುದಾನ ನೀಡುತ್ತಾ ಬಂದಿದೆ. 2012-13ನೇ ಸಾಲಿನಲ್ಲಿ 21 ಕಂಪನಿಗಳನ್ನು ಗುರುತಿಸಿ, ಅವುಗಳ ವರ್ಷಾವಾರು ಸೇವೆಗೆ ಅನುಗುಣವಾಗಿ ಅನುದಾನ ನೀಡಿದ್ದುಒಟ್ಟುರೂಪಾಯಿ 1ಕೋಟಿ 3ಲಕ್ಷಗಳನ್ನು ವೆಚ್ಚ ಮಾಡಿರುತ್ತದೆ.

ಹಿರಿಯ ಕಲಾವಿದರಿಗೆ ಮಾಸಾಶನ ಬದಲಾಯಿಸಿ

ಜೀವನ ನಿರ್ವಹಣೆಗಾಗಿ ನಾಟಕ ಕ್ಷೇತ್ರವನ್ನೇ ನಂಬಿ, ಕಲಾವಿದರು ತಮ್ಮ ಇಳಿವಯಸ್ಸಿನಲ್ಲಿ ಅನುಭವಿಸುವ ಸಂಕಷ್ಟಗಳನ್ನು ಗಮನಿಸಿ, ಅಂತಹವರಿಗೆ ಊರಗೋಲಾಗಿ ನಿಲ್ಲುವ ಮಾಸಾಶನ ಯೋಜನೆಯ ಮೂಲಕ ಸಾವಿರಾರು ಅರ್ಹಕಲಾವಿದರನ್ನು ಅಕಾಡೆಮಿ ಗುರುತಿಸಿದೆ.ಅಂಥಹವರಿಂದ ಅರ್ಜಿ ಆಹ್ವಾನಿಸಿ, ಅವುಗಳನ್ನು ಅವರವರ ಜಿಲ್ಲಾ ಕೇಂದ್ರಗಳಲ್ಲೇ ಪರಿಶೀಲಿಸಿ, ಸರ್ಕಾರಕ್ಕೆ ಶಿಫಾರಸು ಮಾಡಿ, ಮಾಸಾಶನ ಮಂಜೂರು ಮಾಡುವ ಕಾರ್ಯಕ್ರಮವನ್ನು ವರ್ಷಂಪ್ರತಿ ಮಾಡುತ್ತಾ ಬಂದಿದೆ.

ವಿಶೇಷ ಘಟಕ ಯೋಜನೆ ಬದಲಾಯಿಸಿ

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದಕಲಾವಿದರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೊಡಮಾಡುವ ಅನುದಾನವನ್ನು ಪ್ರತಿ ವರ್ಷ ನಿರ್ದೇಶಕರು ಮತ್ತು ಕಲಾವಿದರನ್ನು ಗುರುತಿಸಿ, ಶಿಬಿರ ನಡೆಸುವ ನಾಟಕ ಪ್ರದರ್ಶನ ಏರ್ಪಡಿಸುವ ಪರಿಪಾಠವನ್ನು ನಡೆಸಿಕೊಂಡು ಬರುತ್ತಿದೆ. ಇದರಿಂದ ಅನೇಕ ಯುವಕ ಯುವತಿಯರು ರಂಗಭೂಮಿಯತ್ತ ಬರಲು ಅನುಕೂಲವಾಗುತ್ತಿದೆ[೩].

ರಂಗಸಮ್ಮಿಲನ ಬದಲಾಯಿಸಿ

ನೆರೆರಾಜ್ಯಗಳೊಡನೆ ರಂಗಸಂಬಂಧ ಕಲ್ಪಿಸಿಕೊಂಡು, ರಂಗಕಾರ್ಯಕ್ರಮಗಳ ಮುಖೇನ ರಾಷ್ಟ್ರೀಯ ಸಾಂಸ್ಕೃತಿಕ ಭಾವೈಕ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ, ರಂಗಸಮ್ಮಿಲನ ಯೋಜನೆಯನ್ನು ನಾಟಕ ಅಕಾಡೆಮಿ ಹಮ್ಮಿಕೊಂಡು ನಡೆಸುತ್ತಿದೆ.ಈ ಯೋಜನೆಯಲ್ಲಿ ದೆಹಲಿ, ಮುಂಬೈ, ಹೈದರಾಬಾದ್, ಕಲ್ಕತ್ತಾ, ಗೋವಾ, ಪುಣೆ ಹೀಗೆ ಮೊದಲಾದ ಕಡೆಗಳಿಗೆ ಕನ್ನಡ ನಾಟಕಗಳನ್ನು ಕಳುಹಿಸುವುದು ಹಾಗೂ ಅವರ ನಾಟಕ ತಂಡಗಳನ್ನು ಇಲ್ಲಿಗೆ ಬರಮಾಡಿಕೊಳ್ಳುವ ಮೂಲಕ ಅನೇಕ ರಂಗಸಮ್ಮಿಲನ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ

ಕರ್ನಾಟಕ ನಾಟಕ ಅಕಾಡೆಮಿ ಸುವರ್ಣ ಸಂಭ್ರಮ ಬದಲಾಯಿಸಿ

ನಾಟಕ ಅಕಾಡೆಮಿ ಸ್ಥಾಪನೆಯಾಗಿ 50 ವರ್ಷ(1959-2009) ಪೂರೈಸಿದ ಸಂದರ್ಭದಲ್ಲಿ ಸುವರ್ಣಸಂಭ್ರಮ ಮಾಲಿಕೆಯಡಿ ಜಿಲ್ಲಾ ರಂಗ ಮಾಹಿತಿ, ಯುವಜನರಿಗಾಗಿ ರಂಗಕೈಪಿಡಿ, ಅಖಿಲಭಾರತ ಮಟ್ಟದ ವಿಚಾರಸಂಕಿರಣಗಳು, ಕನ್ನಡರಂಗಭೂಮಿಯ 150 ವರ್ಷಇತಿಹಾಸದ ಪುಸ್ತಕ ಪ್ರಕಟಣೆ, ನಾಟಕಗಳ ಸಿ.ಡಿ.ತಯಾರಿ, ಮುಂತಾದ ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಜಾರಿಗೆತಂದಿದೆ.

ಬಾಹ್ಯ ಸಂಪರ್ಕ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2018-03-08. Retrieved 2018-11-02.
  2. https://vijaykarnataka.indiatimes.com/topics/%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF
  3. https://vijaykarnataka.indiatimes.com/topics/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF