ಕರಸಹರ್ : ಪ್ರಾಚೀನ ಭಾರತ ಚರಿತ್ರೆಯಲ್ಲಿ ಅಗ್ನಿದೇಶ ಎಂದು ಪ್ರಸಿದ್ಧವಾಗಿದ್ದ ಈ ರಾಜ್ಯ ಭಾರತ-ಚೀನಗಳ ನಡುವೆ, ಮಧ್ಯ ಏಷ್ಯದಲ್ಲಿದ್ದು ಚೀನದಲ್ಲಿ ಭಾರತೀಯ ಸಂಸ್ಕೃತಿ ಹರಡಲು ಬಹಳ ಸಹಾಯಮಾಡಿತು. ಡಾರೀಮ್ ನದೀ ಬಯಲಿಗೆ ಸಮೀಪದಲ್ಲಿ ಕುಚಿ, ತುರ್ಫಾನ್ ಮುಂತಾದ ಕೇಂದ್ರಗಳ ಮಾರ್ಗದಲ್ಲಿದ್ದು ಪ್ರ.ಶ.ಪು. ಕಾಲದಿಂದಲೂ ಸಂಸ್ಕೃತಿಯ ಕೇಂದ್ರವಾಗಿತ್ತು. ಕುಚಿ ರಾಜ್ಯದೊಡನೆ ಸೇರಿ ಚೀನದ ಪ್ರಭಾವ ಕಡಿಮೆ ಮಾಡಲು ಮೊದಲಿನಿಂದಲೂ ಯತ್ನಿಸಿತು. ಪ್ರ.ಶ.ಪು. 2ನೆಯ ಶತಮಾನದಲ್ಲಿ ಇದು ಚೀನ ದೇಶದ ಆಳ್ವಿಕೆಗೆ ಒಳಪಟ್ಟಿತ್ತಾದರೂ 75ರಲ್ಲಿ ಕರಸಹರ್ನ ರಾಜನಾದ ಶುಯೆನ್ ಮತ್ತು ಅವನ ಮಗ ಜೊಂಗ್, ಚೀನಿ ರಾಜನ ಮೇಲೆ ದಂಗೆ ಎದ್ದು ಸ್ವತಂತ್ರರಾದರು. ಆದರೆ ಮುಂದೆ ಕೆಲವೇ ವರ್ಷಗಳಲ್ಲಿ ಚೀನಿಯರು ಆಗ ಕರಸಹರ್ನ ದೊರೆಯಾಗಿದ್ದ ಕುವಾಂಗನನ್ನು ಕೊಂದು ನಗರಗಳನ್ನು ಲೂಟಿಮಾಡಿ, ಜನಗಳನ್ನು ಅತೀವ ಹಿಂಸೆಗೆ ಗುರಿಮಾಡಿದರು. ಕರಸಹರ್ ಮತ್ತೆ ಚೀನಿ ಆಳ್ವಿಕೆಗೆ ಒಳಪಟ್ಟಿತು. 8ನೆಯ ಶತಮಾನದ ವರೆಗೆ ಚೀನಿ ಆಡಳಿತದಲ್ಲಿದ್ದ ಕರಸಹರ್ ರಾಜ್ಯದಲ್ಲಿ ಸ್ವಾತಂತ್ರ್ಯಕ್ಕೋಸ್ಕರ ದಂಗೆಗಳು ನಡೆಯುತ್ತಲೇ ಇದ್ದವು. 755ರ ಅನಂತರ ಕರಸಹರ್ ರಾಜ್ಯ ಟಿಬೆಟ್ ರಾಜ್ಯಕ್ಕೆ ಸೇರಿಹೋಯಿತು. ಇದರಿಂದ ಪುರ್ಣವಾಗಿ ಚೀನಿ ಪ್ರಭಾವ ತಪ್ಪಿಹೋಯಿತು. ಕರಸಹರ್ ಬೌದ್ಧಧರ್ಮ ಕೇಂದ್ರವಾಗಿತ್ತು. 7ನೆಯ ಶತಮಾನದಲ್ಲಿ, ಸರ್ವಾಸ್ತಿವಾದ ಪ್ರಕಾರಕ್ಕೆ ಸೇರಿದ ಎರಡು ಸಾವಿರ ಬೌದ್ಧಬಿಕ್ಷುಗಳು, ಇಲ್ಲಿದ್ದ ಹತ್ತು ವಿಹಾರಗಳಲ್ಲಿ ವಾಸಿಸುತ್ತಿದ್ದರು. ಸಂಸ್ಕೃತ ಬೌದ್ಧಗ್ರಂಥಗಳನ್ನು ಅವರು ವಿವಿಧ ಭಾಷೆಗಳಿಗೆ ತರ್ಜುಮೆ ಮಾಡುತ್ತಿದ್ದರು. ತುರ್ಫಾನಿಗೆ ಈ ಗ್ರಂಥಗಳನ್ನು ಕಳುಹಿಸಿಕೊಟ್ಟು, ಬೌದ್ಧಧರ್ಮ ಪ್ರಚಾರಕ್ಕೆ ಕಾರಣರಾದರು. ಕುಚಿ ದೇಶದೊಡನೆ ಸಂಪರ್ಕಗಳನ್ನು ಹೊಂದಿದ್ದು, ಭಾರತೀಯ ಸಂಸ್ಕೃತಿಯ ಅನೇಕ ಲಕ್ಷಣಗಳನ್ನು ಕರಸಹರ್ ಜನಗಳು ಅಳವಡಿಸಿಕೊಂಡರು. ಆ ಕಾಲದ ಅನೇಕ ಬೌದ್ಧ ನಿವೇಶನಗಳು ಕರಸಹರ್ನಲ್ಲಿ ದೊರಕಿವೆ. ಇಲ್ಲಿ ದೊರಕಿರುವ ಅವಶೇಷಗಳಿಂದ ಹೀನಯಾನ ಬೌದ್ಧಧರ್ಮ ಮತ್ತು ಕಲೆ ಉಚ್ಛ್ರಾಯಸ್ಥಿತಿಯಲ್ಲಿದ್ದುವೆಂದು ವ್ಯಕ್ತವಾಗುತ್ತದೆ.

"https://kn.wikipedia.org/w/index.php?title=ಕರಸಹರ್&oldid=639341" ಇಂದ ಪಡೆಯಲ್ಪಟ್ಟಿದೆ