ಕಡಲ ಚಿರತೆ
ಹೈಡ್ರುರ್ಗ ಲೆಪ್ಟೋನಿಕ್ಸ್ ಎಂಬ ವೈಜ್ಞಾನಿಕ ನಾಮವುಳ್ಳ ಸಮುದ್ರವಾಸಿ ಸ್ತನಿ (ಸೀ ಲೆಪರ್ಡ್). ಸೀಲ್ ಪ್ರಾಣಿಗಳ ಕುಟುಂಬವಾದ ಫೋಸಿಡೀಗೆ ಸೇರಿದೆ (ಗಣ ಪಿನ್ನಿಪಿಡಿಯ). ಕಡಲ ಕರಡಿ, ಕಡಲ ಆನೆ, ಕಡಲ ಸಿಂಹ ಮುಂತಾದುವು ಇದರ ಸಂಬಂಧಿಗಳು. ಇದರ ತೌರು ದಕ್ಷಿಣಮೇರು ಪ್ರದೇಶ. ದಕ್ಷಿಣ ಮೇರುವಿನ ಸೀಲ್ ಎಂದೂ ಇದನ್ನು ಕರೆಯುತ್ತಾರೆ.[೧][೨]
ಕಡಲ ಚಿರಲೆಯ ಲಕ್ಷಣಗಳುಸಂಪಾದಿಸಿ
ಮಿರಮಿರನೆ ಮಿರುಗುವ ಹಳದಿ ಬಣ್ಣದ ಕೂದಲಿರುವ ಚರ್ಮ. ಚಿರತೆಗಳಿಗಿರುವಂತೆ, ಮೈಮೇಲೆ ಅಸಂಖ್ಯಾತ ಕಪ್ಪು ಮಚ್ಚೆಗಳು ಮತ್ತು ಇದರ ಕ್ರೂರಸ್ವಭಾವ ಇವುಗಳಿಂದಾಗಿ ಇದಕ್ಕೆ ಕಡಲ ಚಿರತೆ ಎಂಬ ಹೆಸರು ಬಂದಿದೆ. ಇತರ ಸೀಲ್ ಪ್ರಾಣಿಗಳಲ್ಲಿರುವಂತೆ ಇದರ ಹಿಂಗಾಲುಗಳು ಹಿಂದಕ್ಕೆ ಬಾಗಿವೆ. ಅದರಿಂದ ಇದಕ್ಕೆ ನೆಲದ ಮೇಲೆ ನಡೆಯಲಾಗುವುದಿಲ್ಲ. ಎರಡು ಜೊತೆ ಕಾಲುಗಳಲ್ಲೂ ಜಾಲಪಾದವಿದೆ. ಮೂಗಿನ ಹೊಳ್ಳೆಗಳು ಮೂತಿಯ ತುದಿಯಲ್ಲಿರುವುದರ ಬದಲು ಮೊಸಳೆಗಳಲ್ಲಿರುವಂತೆ ಮೂತಿಯ ಮೇಲ್ಭಾಗದಲ್ಲಿವೆ. ಹೀಗಿರುವುದು ಈಜುತ್ತಿರುವಾಗ ಉಸಿರಾಡಲು ಸಹಾಯಕ. ಕಿವಿಗಳಿಗೆ ಅಲಿಕೆಗಳಿಲ್ಲ. ಮೀನು ಇದರ ಪ್ರಧಾನ ಆಹಾರ. ಅಲ್ಲದೆ ಪೆಂಗ್ವಿನ್ ಹಕ್ಕಿಗಳನ್ನೂ ಇದು ಬೇಟೆಯಾಡುವುದು. (ನೋಡಿ : ಸೀಲ್)[೩][೪]