ಐಸೊಬಾರ್ (ಹವಾಮಾನವಿಜ್ಞಾನದಲ್ಲಿ)

ಐಸೊಬಾರ್ (ಹವಾಮಾನವಿಜ್ಞಾನದಲ್ಲಿ): ಸಮಾನ ಒತ್ತಡದಲ್ಲಿರುವ ಎರಡು ಸ್ಥಳಗಳನ್ನು ಸೇರಿಸುವ ರೇಖೆ[೧]. ಉದಾಹರಣೆಗೆ ಹವಾಮಾನದ ನಕ್ಷೆಗಳಲ್ಲಿ ಈ ರೇಖೆಗಳನ್ನು ಕಾಣಬಹುದು. ಇಂಥ ಒಂದು ನಕ್ಷೆಯಲ್ಲಿ ಕಾಣುವ ಒತ್ತಡಗಳು ವೀಕ್ಷಣೆ ಮಾಡಿ ದೊರೆತ ಒತ್ತಡಗಳಲ್ಲಿ; ಬದಲು, ಸಮುದ್ರ ಮಟ್ಟಕ್ಕೆ ಸಂಸ್ಕರಿಸಿದಂಥ ಬೆಲೆಗಳು. 1 ಬಾರ್=ಚದರ ಸೆಂಟಿಮೀಟರಿಗೆ 106 ಡೈನುಗಳು. 1 ಮಿಲ್ಲಿಬಾರ್=ಚದರ ಸೆಂಟಿಮೀಟರಿಗೆ 103 ಡೈನುಗಳು. ಪ್ರತಿದಿವಸವೂ ಮುಖ್ಯಪಟ್ಟಣಗಳಲ್ಲಿ 01, 07, 13 ಮತ್ತು 18 ಗಂಟೆಗಳಲ್ಲಿ ವಾತಾವರಣದ ಒತ್ತಡಗಳನ್ನು ಅಳೆದು ಇವನ್ನು ಆ ಸ್ಥಳಗಳು ಸಮುದ್ರ ಮಟ್ಟದಲ್ಲಿದ್ದಿದ್ದರೆ ದೊರೆಯುತ್ತಿದ್ದ ಬೆಲೆಗಳಿಗೆ ಸಂಸ್ಕರಿಸಿ ಸಮಾನ ಒತ್ತಡವಿರುವ ಸ್ಥಳಗಳ ಮೇಲೆ ಒಂದೇ ಒತ್ತಡ ರೇಖೆಯನ್ನು (ಐಸೊಬಾರ್) ಎಳೆಯಲಾಗುತ್ತದೆ[೨].

Isobars in a hurricane over England

ಐಸೊಬಾರುಗಳನ್ನೆಳೆದು ಇವು ಆವರಿಸುವ ಕಡಿಮೆ ಒತ್ತಡ ಮತ್ತು ಅಧಿಕ ಒತ್ತಡದ ಜಾಗಗಳನ್ನು ಗುರುತಿಸಲಾಗುವುದು. ಕಡಿಮೆ ಇರುವ ಜಾಗಗಳ ಸುತ್ತಲೂ ಒತ್ತಡದ ಇಳಿತ ತೀವ್ರವಾಗಿರುವಲ್ಲಿ ಗಾಳಿ ವೇಗವಾಗಿ ಬೀಸುವುದು. ಭೂಮಿಯ ಆವರ್ತನೆ, ಸ್ಥಳದ ಉನ್ನತಿ ಮೊದಲಾದ ಕಾರಣಗಳಿಂದ ಈ ಗಾಳಿ ಸುಳಿಸುಳಿಯಾಗಿ ಬೀಸುತ್ತ ಚಂಡಮಾರುತವಾಗಿ ಸುಳಿಸುಳಿಯಾಗಿ ಪರಿಣಮಿಸುತ್ತದೆ. ಫಕ್ಕನೆ ಒಂದೆಡೆ ಐಸೊಬಾರುಗಳು ಚಿಕ್ಕ ಭಾಗವನ್ನು ಆವರಿಸಿದರೆ ಅಲ್ಲಿ ಅನತಿಕಾಲದಲ್ಲೇ ಸುಳಿಗಾಳಿ ಬೀಸುವುದು ಎಂದು ಮುನ್ನೆಚ್ಚರಿಕೆ ಕೊಡಬಹುದು. ಅಧಿಕ ಒತ್ತಡವಿರುವಲ್ಲಿ ಉತ್ತಮ ಹವೆ ಇರುತ್ತದೆ. ಇನ್ನು ಇಂಥ ಚಿತ್ರಗಳಿಂದ ಗಾಳಿಯ ಬೀಸುವ ದಿಕ್ಕು ಏನು, ಗಾಳಿ ಹೇಗೆ ವೇಗಪುರಿತವಾಗುತ್ತದೆ ಎಂಬುದನ್ನೆಲ್ಲ ಊಹಿಸಿ ಮುನ್ನೆಚ್ಚರಿಕೆ ನೀಡಲು ಸಾಧ್ಯ. ಹೀಗೆ ಶುಭ್ರ ಹವೆ, ಮೋಡ, ಗಾಳಿ, ಮಳೆ ಮುಂತಾದುವುಗಳನ್ನೆಲ್ಲ ಮುಂಚಿತವಾಗಿ ಸೂಚಿಸಲು ಇಂಥ ಐಸೊಬಾರುಗಳ ಚಿತ್ರಗಳು ಸಹಕಾರಿಗಳು. ಐಸೊಬಾರುಗಳು ಒದಗಿಸುವ ಜ್ಞಾನವನ್ನು ಸಮಾನೋಷ್ಣತಾ ರೇಖೆಗಳು (ಐಸೊಥರ್ಮಲ್ ಲೈನ್ಸ್‌), ಗಾಳಿ ಬೀಸುವ ದಿಕ್ಕು, ಸ್ಥಳದ ಉನ್ನತಿ, ಸಮುದ್ರ ಸಾಮೀಪ್ಯ ಮೊದಲಾದವುಗಳೊಡನೆ ತುಲನೆಮಾಡಿ ಹವೆಯನ್ನು ಕುರಿತ ಎಚ್ಚರಿಕೆಗಳನ್ನು ಕೊಡುತ್ತಾರೆ[೩].

ಉಲ್ಲೇಖನಗಳು ಬದಲಾಯಿಸಿ