ಏಷ್ಯದ ಶಾಸನಗಳು, ನಾಣ್ಯಗಳು
ಏಷ್ಯದ ಶಾಸನಗಳು, ನಾಣ್ಯಗಳು: ಏಷ್ಯದ ಶಾಸನಗಳನ್ನು, ಅವುಗಳನ್ನು ಬರೆಯಲು ಬಳಸಲಾಗಿರುವ ಲಿಪಿಗಳ ದೃಷ್ಟಿಯಿಂದ, ಭಾವಲಿಪಿಗಳ (ಈಡಿಯೋಗ್ರಾಫ್) ಮತ್ತು ಧ್ವನಿನಿರೂಪಕ (ಫೊನೆಟಿಕ್) ವರ್ಣಲಿಪಿಗಳ (ಆಲ್ಫಬೆಟ್) ಶಾಸನಗಳೆಂದು ಸಾಮಾನ್ಯವಾಗಿ ವಿಂಗಡಿಸಬಹುದಾಗಿದೆ.
ಭಾವಲಿಪಿ ಶಾಸನ
ಬದಲಾಯಿಸಿಭಾವಲಿಪಿ ಶಾಸನಗಳ ಪೈಕಿ ಪ್ರ.ಶ.ಪು. ಸು. 20ನೆಯ ಶತಮಾನದಲ್ಲಿ ಹುಟ್ಟಿರಬಹುದಾದ (ಇಂದಿನ ಇರಾಕ್ ದೇಶದ) ಸುಮೇರಿಯನ್ ಜನಾಂಗದವರ ನೂರಾರು ಶಿಲಾ ಮತ್ತು ಜೇಡಿಮಣ್ಣಿನ ಫಲಕ ಶಾಸನಗಳೇ ಪ್ರಾಚೀನತಮವಾದವು. ಇವುಗಳನ್ನು ಬರೆಯುವಲ್ಲಿ ಬೆಣೆಯಾಕಾರದ (ಕ್ಯೂನಿಫಾರಂ) ಭಾವಲಿಪಿಗಳನ್ನು ಬಳಸಲಾಗಿದೆ. ಇಂಥ ಲಿಪಿಗಳನ್ನು ತಮ್ಮ ಶಾಸನಗಳಿಗಾಗಿ ಬಳಸಿಕೊಂಡವರಲ್ಲಿ ಬ್ಯಾಬಿಲೋನಿಯನ್, ಅಸ್ಸಿರಿಯನ್ ಮತ್ತು ಪರ್ಷಿಯನ್ ಜನಾಂಗದವರು ಸೇರಿದ್ದಾರೆ. ವಿಶ್ವ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಹಮುರಬಿಯ ಧರ್ಮಸೂತ್ರಗಳ ಶಿಲಾಸ್ತಂಭ ಶಾಸನ ಇದೇ ಲಿಪಿಯಲ್ಲಿದೆ. ಅಲ್ಲದೆ ಏಷ್ಯ ಮೈನರಿನ ಇಲಾಮೈಟ್, ಕಸ್ಸೆನೈಟ್, ಹಿಟ್ಟೈಟ್, ಮಿಟನ್ನಿ, ಹುರ್ರಿಯನ್, ಉರರ್ತು, ಕ್ಯಾಪ್ಪಡೋಸಿಯನ್, ಕೇನನೈಟ್ ಇತ್ಯಾದಿ ಜನಾಂಗಗಳವರು ಪ್ರಾಚೀನ ಕಾಲದಲ್ಲಿ ಸುಮೇರಿಯನ್ನರ ಈ ಬೆಣೆಯಾಕಾರದ ಭಾವಲಿಪಿಗಳನ್ನು ಬಳಸಿ ತಮ್ಮ ಶಾಸನಗಳನ್ನು ಬರೆಯುತ್ತಿದ್ದರೆನ್ನುವುದಕ್ಕೆ ಆಧಾರಗಳಿವೆ. ಈ ಲಿಪಿಯ ಇತ್ತೀಚೆಗಿನ ಶಾಸನ ಪ್ರ.ಶ.ಪು. 6ನೆಯ ವರ್ಷದ್ದಾಗಿದ್ದು, ಪ್ರಸಕ್ತಶಕದ ಪ್ರಾರಂಭದ ವೇಳೆಗೆ ಈ ಲಿಪಿಯ ಬಳಕೆ ತಪ್ಪಿಹೋಯಿತೆಂದು ಊಹಿಸಲಾಗಿದೆ.[೧]
ಪಶ್ಚಿಮ ಪಾಕಿಸ್ತಾನ ಹಾಗೂ ವಾಯವ್ಯ ಮತ್ತು ಪಶ್ಚಿಮ ಭಾರತ
ಬದಲಾಯಿಸಿಪಶ್ಚಿಮ ಪಾಕಿಸ್ತಾನ ಹಾಗೂ ವಾಯವ್ಯ ಮತ್ತು ಪಶ್ಚಿಮ ಭಾರತದಲ್ಲಿ ಪ್ರ.ಶ.ಪು. ಸು. 2400 ರಿಂದ 1700 ರವರೆಗೆ ಪ್ರಚಲಿತವಾಗಿದ್ದ ಸಿಂಧೂ ಕಣಿವೆಯ (ಅಥವಾ ಹರಪ್ಪ) ಸಂಸ್ಕೃತಿಗೆ ಸಂಬಂಧಿಸಿದ ನೂರಾರು ಸಾಬೂನುಗಲ್ಲಿನ ಮುದ್ರ್ರೆಗಳು ದೊರೆತಿವೆ. ಅವುಗಳ ಮೇಲಿನ ಬರೆಹಗಳಿಗೆ ಆ ಕಾಲದ ಭಾರತೀಯರು 200ಕ್ಕೂ ಹೆಚ್ಚಿನ ಸಾಂಕೇತಿಕಾಕ್ಷರಗಳನ್ನು ಬಳಸಿರುವರು. ಈ ಚಿತ್ರ ಲಿಪಿಯನ್ನು ಅರ್ಥೈಸಲು ಇಲ್ಲಿಯವರೆಗೆ ಅನೇಕ ಪ್ರಯತ್ನಗಳು ನಡೆದಿದ್ದರೂ ಸರ್ವಸಮ್ಮತವಾದ ಪರಿಹಾರ ದೊರೆಯದಾಗಿದೆ.ಏಷ್ಯ ಮೈನರ್ ಮತ್ತು ಉತ್ತರ ಸಿರಿಯದ ನಿವಾಸಿಗಳಾಗಿದ್ದ ಹಿಟ್ಟೈಟ್ ಜನಾಂಗದವರ ಚಿತ್ರಲಿಪಿ ಶಾಸನಗಳು ಪ್ರ.ಶ.ಪು.1500 ರಿಂದ 600ರ ವರೆಗಿನವು. ಈ ಶಾಸನಗಳ ಸಾಂಕೇತಿಕ ಚಿತ್ರಗಳನ್ನು ಅರ್ಥೈಸುವಲ್ಲಿಯೂ ವಿದ್ವಾಂಸರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಗಳಿವೆ. ಕಾಲಕ್ರಮೇಣ ಈ ಜನಾಂಗದವರು ಬ್ಯಾಬಿಲೋನಿಯನ್ನರ ಭಾವಲಿಪಿಗಳನ್ನು ಬಳಸಿ ತಮ್ಮದೇ ಆದ ಬೆಣೆಯಾಕಾರದ ಲಿಪಿಮಾಲೆಯನ್ನು ಸೃಷ್ಟಿಸಿಕೊಂಡರೆನ್ನುವುದಕ್ಕೆ ಶಾಸನಗಳ ಆಧಾರವಿದೆ.
ಫ್ರಿಜಿಯನ್ ಜನಾಂಗದವರ ಕೆಲವು ಶಾಸನಗಳು
ಬದಲಾಯಿಸಿಪ್ರ.ಶ.ಪು. 8ನೆಯ ಶತಮಾನದ ವೇಳೆಗೆ ಏಷ್ಯ ಮೈನರಿನಲ್ಲಿ ಅತಿ ಪ್ರಬಲರಾಗಿದ್ದ ಫ್ರಿಜಿಯನ್ ಜನಾಂಗದವರ ಕೆಲವು ಶಾಸನಗಳು ಪ್ರ.ಶ.ಪು. 8-7ನೆಯ ಶತಮಾನಗಳಷ್ಟು ಹಳೆಯವು. ಇವರ ಶಾಸನಗಳಲ್ಲಿಯ ಲಿಪಿಗೆ ಗ್ರೀಕ್ ಲಿಪಿಯೇ ಮೂಲ. ಇವರ ರೋಮನ್ ಯುಗದ ಶಾಸನಗಳಂತೂ ಗ್ರೀಕ್ ಲಿಪಿಯಲ್ಲೇ ಇವೆ. ಏಷ್ಯ ಮೈನರಿನ ಪ್ಯಾಂಫಿಲಿಯದವರ ಪ್ರಾಚೀನ ಶಾಸನಗಳ ಲಿಪಿಯೂ ಗ್ರೀಕ್ ಲಿಪಿಯಿಂದಲೇ ಹುಟ್ಟಿದ್ದಾಗಿದೆ. ಅನಂತರ ಕಾಲದ ಗ್ರೀಕ್-ಅರಮೈಯಿಕ್ ಮಿಶ್ರಿತ ಲಿಪಿಯ ಶಾಸನಗಳೂ ದೊರೆತಿವೆ.ಫ್ರಿಜಿಯನ್ ರಾಷ್ಟ್ರದ ಪತನದ ಅನಂತರ ಏಷ್ಯ ಮೈನರಿನ ಪ್ರಭಾವಶಾಲಿ ರಾಷ್ಟ್ರವಾಗಿ ಬೆಳಗಿದ ಲಿಡಿಯದ ಶಾಸನಗಳು ಹಲವು ಪ್ರ.ಶ.ಪು. 5-4ನೆಯ ಶತಮಾನಗಳಷ್ಟು ಪುರಾತನವಾದವು. ಲಿಡಿಯನ್ ಲಿಪಿಗೂ ಗ್ರೀಕ್ ಲಿಪಿಯೇ ಮೂಲ. ಲಿಡಿಯನ್ ಮತ್ತು ಗ್ರೀಕ್ ದ್ವಿಭಾಷಾಶಾಸನಗಳೂ ಎರಡು ದೊರೆತಿವೆ. ಲಿಡಿಯನ್ ಲಿಪಿಯನ್ನು ಸಾಮಾನ್ಯವಾಗಿ ಬಲದಿಂದ ಎಡಕ್ಕೆ ಬರೆಯಲಾಗುತ್ತಿತ್ತು.ಲಿಡಿಯಕ್ಕೆ ದಕ್ಷಿಣದಲ್ಲಿದ್ದ ಕೇರಿಯನ್ ರಾಷ್ಟ್ರದ ಶಾಸನಗಳ ಪೈಕಿ ಪ್ರಾಚೀನತಮ ವಾದದ್ದು ಪ್ರ.ಶ.ಪು. 7ನೆಯ ಶತಮಾನದಷ್ಟು ಹಳೆಯದು. ಕೇರಿಯನ್ ಲಿಪಿಯೂ ಗ್ರೀಕ್ ಲಿಪಿಯಿಂದಲೇ ಹುಟ್ಟಿದ್ದಾದರೂ ಸ್ವಲ್ಪಮಟ್ಟಿಗೆ ಅದು ಕ್ರೀಟ್ ಮತ್ತು ಸೈಪ್ರಸ್ಗಳ ಪ್ರಾಚೀನ ಲಿಪಿಗಳಿಂದಲೂ ಪ್ರಭಾವಿತವಾಗಿತ್ತು.[೨]
ಚೀನದ ಪ್ರಾಚೀನ ಮತ್ತು ಆಧುನಿಕ ಸ್ವದೇಶೀ ಲಿಪಿಗಳು
ಬದಲಾಯಿಸಿಚೀನದ ಪ್ರಾಚೀನ ಮತ್ತು ಆಧುನಿಕ ಸ್ವದೇಶೀ ಲಿಪಿಗಳು ಭಾವಲಿಪಿಗಳೇ ಆಗಿವೆ. ಆ ನಾಡಿನಲ್ಲಿ ದೊರೆತಿರುವ ಅನೇಕ ಕಂದು ಕಂಚಿನ ಪ್ರತಿಮೆಗಳ ಮೇಲಿನ ಶಾಸನಗಳ ಮೇಲಿನ ಪೈಕಿ ಪ್ರ.ಶ.ಪು. 12-11ನೆಯ ಶತಮಾನದಷ್ಟು ಹಳೆಯವು ಕೇವಲ ಕೆಲವೇ ಭಾವಲಿಪಿಗಳಿಂದ ಕೂಡಿರುತ್ತವೆ. ಆ ಕಾಲದಿಂದೀಚೆಗಿನ ಕಂದು ಕಂಚಿನ ಪ್ರತಿಮಾಶಾಸನಗಳ ಪಾಠಗಳು ಸಾಕಷ್ಟು ದೀರ್ಘವಾಗಿದ್ದು ಅವುಗಳಲ್ಲಿ ಹೆಚ್ಚಿನವು ತೇದಿಯ ವಿವರಗಳನ್ನೂ ಒಳಗೊಂಡಿರುತ್ತವೆ. ಚೀನದ ಉತ್ತರ ಹೋನಾನ್ ಪ್ರಾಂತ್ಯದ ಷಿಯಾವೊ-ತುನ್ ಗ್ರಾಮದಲ್ಲಿ ಉತ್ಖನನ ಸಮಯದಲ್ಲಿ ದೊರೆತ ನೂರಾರು ಎಲುಬುಗಳ ಹಾಗೂ ಆಮೆಚಿಪ್ಪುಗಳ ಚೂರುಗಳ ಮೇಲಿನ ಪ್ರಾಚೀನ ಭಾವಲಿಪಿಗಳ ಪೈಕಿ ಕೆಲವಾದರೂ ಪ್ರ.ಶ.ಪು. 11ನೆಯ ಶತಮಾನದಷ್ಟು ಹಳೆಯವೆಂಬುದು ಕೆಲವು ಸಂಶೋಧಕರ ಅಭಿಪ್ರಾಯ. ತಮ್ಮ ತಮ್ಮ ಭವಿಷ್ಯಗಳ ಬಗೆಗೆ ಜನ ಕೇಳಿದ ಪ್ರಶ್ನೆಗಳಿಗೆ ಕಾಲಜ್ಞಾನಿಗಳು ನೀಡಿದ ಉತ್ತರಗಳನ್ನೇ ಈ ಚೂರುಗಳ ಮೇಲೆ ಬರೆಯಲಾಗಿದೆ ಎಂದು ನಂಬಲಾಗಿದೆ. ಚೀನದ ರಾಜಧಾನಿ ಪೀಕಿಂಗಿನ ಕನ್ಪ್ಯುಷಿಯನ್ ದೇವಾಲಯದ ಮಹಾದ್ವಾರದಲ್ಲಿ ಇಡಲಾಗಿರುವ ನಗಾರಿರೂಪದ ಕಲ್ಲುಗಳ ಮೇಲೆ ಕೊರೆಯಲಾಗಿರುವ ಭಾವಲಿಪಿ ಶಾಸನಗಳು ಪ್ರ.ಶ.ಪು. 9ನೆಯ ಶತಮಾನಕ್ಕಿಂತಲೂ ಪುರ್ವಕಾಲದವು. ಚೀನದಲ್ಲಿ ಕೇವಲ ಕೆಲವೇ ಶಿಲಾಶಾಸನಗಳು ದೊರೆತಿರುವುದು ಅಚ್ಚರಿಯ ಸಂಗತಿ. ಪ್ರಾಚೀನ ಚೀನೀಯರು ಮರದ ಹಲಗೆ, ಬಿದಿರು, ಕಾಗದ ಮುಂತಾದ ನಶ್ವರವಸ್ತುಗಳ ಮೇಲೆ ಬರೆಯುತ್ತಿದ್ದುದ್ದೇ ಇದಕ್ಕೆ ಕಾರಣವೆಂದು ಊಹಿಸಲಾಗಿದೆ. ಚೀನದ ನೇರ ಪ್ರಭಾವಕ್ಕೊಳಗಾದ ಜಪಾನ್, ಕೊರಿಯ, ಉತ್ತರ ವಿಯಟ್ನಾಂ, ಮಂಗೋಲಿಯ ಮುಂತಾದ ಕೆಲವು ರಾಷ್ಟ್ರಗಳದ್ದೂ ಇದೇ ಪರಿಸ್ಥಿತಿ, ಚೀನೀ ತುರ್ಕಿಸ್ತಾನದ ಮರುಭೂಮಿಯಲ್ಲಿ ನಡೆಸಲಾದ ಅಗೆತಗಳಲ್ಲಿ ಮರದ ಹಲಗೆ, ಚರ್ಮ, ಭೂರ್ಜಪತ್ರ ಇತ್ಯಾದಿಗಳ ಮೇಲೆ ಬರೆಯಲಾದ ಪ್ರಾಚೀನ ದಾಖಲೆಗಳು ದೊರೆತಿರುವುದು ಈ ಊಹೆಗೆ ಪೋಷಕವಾಗಿದೆ. ಟಿಬೆಟ್ಟಿನ ಉತ್ತರಕ್ಕೆ ಚೀನದಲ್ಲಿ 10-13ನೆಯ ಶತಮಾನಗಳಲ್ಲಿ ಅಸ್ತಿತ್ವದಲ್ಲಿದ್ದ ತಂಗುತ್ ಅಥವಾ ಪಶ್ಚಿಮ ಹಿಯ ರಾಷ್ಟ್ರದ ಅರಸರ ಕೆಲವು ಭಾವಲಿಪಿಶಾಸನಗಳು 11-13ನೆಯ ಶತಮಾನಗಳವಾಗಿವೆ.
ಚೀನದಲ್ಲಿ ಪ್ರಾಚೀನ ಶಾಸನ
ಬದಲಾಯಿಸಿಚೀನದಲ್ಲಿ ಪ್ರಾಚೀನ ಶಾಸನಗಳ ಅಧ್ಯಯನ ಹಿಂದಿನಿಂದಲೂ ನಡೆದುಬಂದಿದೆ. 11ನೆಯ ಶತಮಾನದಲ್ಲಿ ಪ್ರಕಟವಾದ ಗ್ರಂಥವೊಂದರಲ್ಲಿ ಚೀನದ 400 ಪ್ರಾಚೀನ ಶಾಸನಗಳನ್ನು ಕುರಿತ ಸಂಶೋಧನಾತ್ಮಕ ವಿವರಣೆಗಳಿವೆ.ಪ್ರಾಚೀನ ಸಿರಿಯದ ಬಿಬ್ಲೋಸ್ ಜನಾಂಗಕ್ಕೆ ಸೇರಿದ ಶಾಸನಗಳದು ಪ್ರ.ಶ.ಪು. ಸು. 1500-1300ರ ಒಂದು ರೀತಿಯ ಚಿತ್ರಲಿಪಿಯಾಗಿದೆ. ಈ ಶಾಸನಗಳ ಭಾಷೆ ಫಿನಿಷಿಯನ್ ಎಂದೂ ಬಳಸಲಾಗಿರುವ ಸಾಂಕೇತಿಕ ಚಿತ್ರಗಳಿಗೂ ಅವುಗಳ ಧ್ವನಿರೂಪಕ ಮೌಲ್ಯಗಳಿಗೂ ಸಂಬಂಧವಿಲ್ಲವೆಂದೂ ಆದಕಾರಣ ಈ ಲಿಪಿಯನ್ನು ಉಚ್ಛಾರಾಂಶದ (ಸಿಲ್ಯಾಬಿಕ್) ಲಿಪಿಯೆನ್ನಬೇಕೆಂದೂ ವಿದ್ವಾಂಸರ ಅಭಿಪ್ರಾಯ. ಈ ಶಾಸನಗಳಲ್ಲಿ ಉಪಯೋಗಿಸಲಾಗಿರುವ ಸಾಂಕೇತಿಕಾಕ್ಷರಗಳಿಗೂ ಈಜಿಪ್ಟ್, ಕ್ರೀಟ್, ಸೈಪ್ರಸ್, ಕೇನನ್, ಸಿಂಧೂ ಕಣಿವೆ ಮುಂತಾದ ಪ್ರಾಂತ್ಯಗಳ ಸಾಂಕೇತಿಕಾಕ್ಷರಗಳಿಗೂ ಗಮನಾರ್ಹ ಪ್ರಮಾಣದ ಹೋಲಿಕೆಗಳಿರುವುದು ಕುತೂಹಲಕಾರಿಯಾದ ವಿಷಯ. ಸೈಪ್ರಸಿನಲ್ಲಿ ಇಲ್ಲಿಯವರೆಗೆ ಸು.200 ಪ್ರಾಚೀನ ಶಾಸನಗಳು ದೊರೆತಿದ್ದು, ಅವುಗಳಲ್ಲಿ ಹೆಚ್ಚಿನವು ಗ್ರೀಕ್ ಭಾಷೆಯಿಂದ ಪ್ರಭಾವಿತವಾಗಿವೆ. ಈ ದ್ವೀಪದಲ್ಲಿ ಪ್ರ.ಶ.ಪು. 6-2ನೆಯ ಶತಮಾನಗಳಲ್ಲಿ ಉಚ್ಚಾರಾಂಶದ ಲಿಪಿಗಳನ್ನು ಬಳಸಿ ಶಾಸನಗಳನ್ನು ಬರೆಯಲಾಗುತ್ತಿತ್ತು. ಅದರ ಮೊದಲಿನ ಭಾವಲಿಪಿ ಶಾಸನಗಳು ಪ್ರ.ಶ.ಪು.ಸು. 2100 ರಿಂದ 1200ರ ವರೆಗಿನವಾಗಿದೆ.
ಪರ್ಷಿಯಾದ ಶಾಸನ
ಬದಲಾಯಿಸಿಪ್ರಾಚೀನ ಪರ್ಷಿಯಾದ ಪ್ರ.ಶ.ಪು. 6-3ನೆಯ ಶತಮಾನಗಳಿಗೆ ಸೇರಿದ ಶಾಸನಗಳ ಬೆಣೆಯಾಕಾರದ ಲಿಪಿ ಉಚ್ಚಾರಾಂಶದ ಲಿಪಿಯೂ ಹೌದು; ಧ್ವನಿನಿರೂಪಕ ವರ್ಣಮಾಲೆಯೂ ಹೌದು. ಈ ಲಿಪಿಯ ಉತ್ಪತ್ತಿಗೆ ಆರಮೇಯಿಕ್ ಲಿಪಿ ಮೂಲವೆಂದು ಪರಿಗಣಿಸಲಾಗಿದೆ. ಈ ಲಿಪಿಯ ಶಾಸನಗಳಲ್ಲಿ ಹಲವು ಪರ್ಷಿಯದ ಪರ್ಸೆಪೊಲಿಸ್ ನಗರದ ಅದ್ಭುತ ಐತಿಹಾಸಿಕ ಕಟ್ಟಡಗಳಲ್ಲಿ ಕಾಣಸಿಗುತ್ತವೆ. ಈ ಲಿಪಿಯ ಬಂಗಾರದ, ಬೆಳ್ಳಿಯ ಹಾಗೂ ಜೇಡಿಮಣ್ಣಿನ ಫಲಕಶಾಸನಗಳೂ ದೊರೆತಿವೆ. ಕಾಲಕ್ರಮದಲ್ಲಿ ಜಂಬು ಕಾಗದದ ಬಳಕೆ ಹೆಚ್ಚಿದಂತೆ ಈ ಲಿಪಿಯ ಶಾಸನಗಳ ಸಂಖ್ಯೆ ಕಡಿಮೆ ಆಗುತ್ತ ಬಂತು.ಧ್ವನಿನಿರೂಪಕ ವರ್ಣಮಾಲೆಗಳನ್ನು ಬಳಸಿ ಬರೆದ ಶಾಸನಗಳ ಪೈಕಿ ದಕ್ಷಿಣ ಅರೇಬಿಯದಲ್ಲಿ ದೊರೆತಿರುವ, ಪ್ರ.ಶ.ಪು. 8ನೆಯ ಶತಮಾನದ ದಕ್ಷಿಣ ಸಿಮಿಟಿಕ್ ಶಾಸನಗಳೇ ಪ್ರಾಚೀನತಮವಾದವು. ದಕ್ಷಿಣ ಅರೇಬಿಯದ ಪ್ರಾಚೀನ ಇತಿಹಾಸ, ಭಾಷೆ, ಲಿಪಿ-ಇವುಗಳನ್ನು ಕುರಿತ ನಮ್ಮ ತಿಳಿವಳಿಕೆ ಪುರ್ತಿ ಈ ಶಾಸನಗಳ ಮೇಲೆ ಆಧಾರಿತವಾಗಿದೆ, ಈ ಪ್ರಾಂತ್ಯದಲ್ಲಿ ಇಲ್ಲಿಯವರೆಗೆ ನೂರಾರು ಶಾಸನಗಳು ದೊರೆತಿದ್ದು, ಅವುಗಳ ಸುಂದರ ಲಿಪಿಯನ್ನು ಸಬೀಯನ್ ಎಂದೂ ಕರೆಯುವುದು ವಾಡಿಕೆಯಲ್ಲಿದೆ. ಅವುಗಳಲ್ಲಿ ಹೆಚ್ಚಿನವನ್ನು ಬಲದಿಂದ ಎಡಕ್ಕೆ ಬರೆಯಲಾಗಿದೆ ಮತ್ತು ಆ ಶಾಸನಗಳು ಪ್ರಾಚೀನತಮ ಅರಾಬಿಕ್ ಭಾಷೆಯ ಮೇಲೆ ಬೆಳಕು ಚೆಲ್ಲುವಂಥವಾಗಿವೆ. ಉತ್ತರ ಅರೇಬಿಯದ ವಾಯವ್ಯ ಸಿರಿಯ ಮತ್ತು ಟ್ರಾನ್ಸ್ ಜಾರ್ಡನ್ ಪ್ರಾಂತ್ಯಗಳಲ್ಲೂ ಸು. 1,800 ದಕ್ಷಿಣ ಸಿಮಿಟಿಕ್ ಶಾಸನಗಳು ದೊರೆತಿದ್ದು, ಅವು ಪ್ರ.ಶ.ಪು. ಸು. 500 ರಿಂದ ಪ್ರ.ಶ. ಸು. 400ರ ವರೆಗಿನವಾಗಿವೆ.
ಕೇನನೈಟ್ ಶಾಖೆಯ ಭಾಷೆಗಳೂ ಆರಮೇಯಿಕ್ ಶಾಖೆಯ ಭಾಷೆ
ಬದಲಾಯಿಸಿಸರಿಸುಮಾರಾಗಿ ಈಗ ಪ್ಯಾಲೆಸ್ಟೈನ್ ಇರುವ ಭಾಗಕ್ಕೆ ಸಂಬಂಧಿಸಿದ ಕೇನನೈಟ್ ಶಾಖೆಯ ಭಾಷೆಗಳೂ ಆರಮೇಯಿಕ್ ಶಾಖೆಯ ಭಾಷೆಗಳೂ ವಾಯವ್ಯ ಸಿಮಿಟಿಕ್ ಕುಟುಂಬಕ್ಕೆ ಸೇರಿದವು. ಇವುಗಳ ಪೈಕಿ ಕೇನನೈಟ್ ಶಾಖೆಯ ಹಿಬ್ರೂವಿನಲ್ಲಿರುವ ಶಾಸನಗಳು ಕೆಲವು ಮಾತ್ರ ಇಸ್ರೇಲಿನಲ್ಲಿ ದೊರೆಯುತ್ತವೆ. ಪ್ಯಾಲೆಸ್ಟೈನಿನಲ್ಲಿ ಮೇಲಿಂದ ಮೇಲೆ ನಡೆದುಹೋದ ಯುದ್ಧ್ದಗಳ ಪರಿಣಾಮವಾಗಿ ಅಲ್ಲಿಯ ಅನೇಕ ಶಾಸನಗಳು ನಾಶಗೊಂಡಿರಬಹುದೆಂದು ಊಹಿಸಲಾಗಿದೆ. ಆದರೂ, ದೊರೆತಿರುವ ಶಾಸನಗಳು ರಾಷ್ಟ್ರದ ಪ್ರಾಚೀನ ಇತಿಹಾಸ,ಭಾಷೆ ಮತ್ತು ಲಿಪಿಗಳ ಅಧ್ಯಯನಕ್ಕೆ ಸಾಕಷ್ಟು ಸಹಕಾರಿಯಾಗಿವೆ. ಹೀಬ್ರೂ ಶಾಸನಗಳ ಪೈಕಿ ಪ್ರಾಚೀನತಮವಾದದ್ದೆಂದರೆ ಪ್ರ.ಶ.ಪು. 11ನೆಯ ಶತಮಾನದ ಗೆಜೆ಼ರ್ ಪಂಚಾಂಗ. ಇದರ ಅಕ್ಷರಗಳಲ್ಲಿ ಹಲವು ಉತ್ತರ ಸಿಮಿಟಿಕ್ ಶಾಸನಗಳ ಅಕ್ಷರಗಳಿಗೆ ಸರಿಹೊಂದುತ್ತವೆ. ಜೂಡಿಯ ಅಥವಾ ದಕ್ಷಿಣ ಪ್ಯಾಲೆಸ್ಟೈನಿನ ಶಾಸನಗಳಲ್ಲಿ ಪ್ರ.ಶ.ಪು. ಸು. 700ರ ಸಿಲೋಂ ಶಾಸನ ಪ್ರಾಚೀನತಮವಾದದ್ದು. ಪ್ಯಾಲೆಸ್ಟೈನಿನ ಬರೆಹಗಳಿಂದ ಕೂಡಿದ ಹಲವು ತೂಕದ ಬಟ್ಟುಗಳೂ ಅಳತೆಗಳೂ ದೊರೆತಿವೆ. ಅಲ್ಲದೆ, ಕೇನನೈಟ್ ಶಾಖೆಯ ಇತರ ಭಾಷೆಗಳಾದ ಮೋಬೈಟ್, ಅಮೋನೈಟ್ ಮತ್ತು ಎಡೋಮೈಟ್ ಭಾಷೆ ಲಿಪಿಗಳ ಶಾಸನಗಳೂ ದೊರೆತಿದ್ದು, ಅವು ಪ್ರ.ಶ.ಪು. 9-7ನೆಯ ಶತಮಾನದವಾಗಿವೆ. ಬಿಬ್ಲೋಸ್ ಜನಾಂಗದವರ ಫಿನಿಷಿಯಿನ್ ಭಾಷೆಯ ಪ್ರಾಚೀನತಮ ಶಾಸನಗಳ ಪ್ರಸ್ತಾಪ ಮೇಲೆ ಬಂದಿದೆ. ಅನಂತರಕಾಲದ ಫಿನಿಷಿಯದ ಶಾಸನಗಳು ಆ ಪ್ರಾಂತ್ಯದಲ್ಲಷ್ಟೇ ಅಲ್ಲದೆ ಸೈಪ್ರಸ್, ಗ್ರೀಸ್, ಉತ್ತರ ಆಫ್ರಿಕ, ಮಾಲ್ಪ, ಸಿಸಿಲಿ, ಸಾರ್ಡೀನಿಯ, ಫ್ರಾನ್ಸ್, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲೂ ದೊರೆತಿವೆ. ಲಿಪಿ ಶಾಸ್ತ್ರದೃಷ್ಟಿಯಿಂದ ಫಿನಿಷಿಯನ್ ಶಾಸನಗಳಿಗಿರುವ ಸ್ಥಾನ ಮಹತ್ತ್ವದ್ದು.
ಆರಮೇಯನ್ ಜನಾಂಗ
ಬದಲಾಯಿಸಿಪ್ರ.ಶ.ಪು.11-10ನೆಯ ಶತಮಾನಗಳಿಂದ ಮೆಸೊಪೊಟೇಮಿಯ ಮತ್ತು ಪಶ್ಚಿಮ ಸಿರಿಯಗಳಲ್ಲಿ ಪ್ರಬಲರಾಗಿ ಬೆಳಗಿದ ಆರಮೇಯನ್ ಜನಾಂಗದವರ ಪ್ರಾಚೀನತಮ ಆರಮೇಯಿಕ್ ಶಾಸನ ಪ್ರ.ಶ.ಪು. 9ನೆಯ ಶತಮಾನದಷ್ಟು ಹಳೆಯದು. ಆ ವೇಳೆಗೆ ಆರಮೇಯಿಕ್ ಲಿಪಿ ಪರ್ಷಿಯನ್ ಸಾಮ್ರಾಜ್ಯದ ಪಶ್ಚಿಮ ಪ್ರಾಂತ್ಯಗಳಲ್ಲಿ ಅಧಿಕೃತವಾಗಿ ಬಳಕೆಗೆ ಬಂದಿತ್ತು. ಅಚ್ಚರಿಯ ಸಂಗತಿಯೆಂದರೆ, ಹೆಚ್ಚಿನ ಮಹತ್ತ್ವದ ಆರಮೇಯಿಕ್ ಶಾಸನಗಳು ದೊರೆತಿರುವುದು ಆರಮೇಯನರ ಆಳ್ವಿಕೆಗೆ ಹೊರಗಿದ್ದ ಅಸ್ಸಿರಿಯ, ಪರ್ಷಿಯ, ಕ್ಯಾಪ್ಪಡೋಸಿಯ, ಲಿಸಿಯ, ಲಿಡಿಯ, ಸಿಲಿಸಿಯ, ಉತ್ತರ ಅರೇಬಿಯ, ಗ್ರೀಸ್, ಆಫ್ಘಾನಿಸ್ತಾನ, ಭಾರತ, ಪಾಕಿಸ್ತಾನ ಇತ್ಯಾದಿ ದೂರದೇಶಗಳಲ್ಲಿ ಮತ್ತು ಆರಮೇಯನರ ಪ್ರಭಾವ ಸಾಕಷ್ಟು ಇಳಿಮುಖವಾದ ಅನಂತರ, ಈ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ದೊರೆತಿರುವ ಅಶೋಕನ ಆರಮೇಯಿಕ್ ಶಾಸನವನ್ನೂ ಆಫ್ಘಾನಿಸ್ತಾನದಲ್ಲಿ ದೊರೆತಿರುವ ಅದೇ ಚಕ್ರವರ್ತಿಯ ಪ್ರ.ಶ.ಪು. ಗ್ರೀಕ್-ಆರಮೇಯಿಕ್ ದ್ವಿಭಾಷಾಶಾಸನವನ್ನೂ ಪ್ರಸ್ತಾಪಿಸಬಹುದಾಗಿದೆ.ಆರಮೇಯಿಕ್ ಲಿಪಿಯಿಂದ ಹುಟ್ಟಿದ ಹೀಬ್ರೂ ಲಿಪಿಯಲ್ಲಿ ಬರೆದ ರೋಮ್ ಮತ್ತು ವೆನೋಸಗಳಲ್ಲಿಯ ಸಮಾಧಿಗುಹೆಗಳ ಮೇಲಿನ ಯೆಹೂದ್ಯ ಶಾಸನಗಳು 6ನೆಯ ಶತಮಾನದಿಂದ ಕಾಣಿಸಿಕೊಳ್ಳುತ್ತವೆ.
ನಬತೇಯನ್ ಜನಾಂಗ
ಬದಲಾಯಿಸಿಉತ್ತರ ಅರೇಬಿಯ, ಟ್ರಾನ್ಸ್‌ಜಾರ್ಡನ್ ಮತ್ತು ಸಿನಾಯ್ಗಳ ಮಧ್ಯಭಾಗದ ನಿವಾಸಿಗಳಾಗಿದ್ದ ನಬತೇಯನ್ ಜನಾಂಗದವರದು ಅರಾಬಿಕ್ ಸಂಸ್ಕೃತಿಯೇ ಆಗಿದ್ದರೂ ಅವರ ಪ್ರ.ಶ.ಪು. 2-ಪ್ರ.ಶ. 2ನೆಯ ಶತಮಾನಗಳ ಶಾಸನಗಳು ಆರಮೇಯಿಕ್ ಭಾಷೆಯಲ್ಲಿವೆ. ಈಜಿಪ್ಟ್ ಮತ್ತು ಇಟಲಿಯಲ್ಲೂ ಈಜಿಯನ್ ದ್ವೀಪವಾದ ಕೋಸ್ನಲ್ಲೂ ಕೆಲವು ನಬತೇಯನ್ ಶಾಸನಗಳು ದೊರೆತಿವೆ.
ರೋಮನ್ ಲಿಪಿ
ಬದಲಾಯಿಸಿಇಂದಿನ ಮಾನವ ಸಮಾಜದಲ್ಲಿ ರೋಮನ್ ಲಿಪಿಯನ್ನು ಬಿಟ್ಟರೆ ಹೆಚ್ಚಾಗಿ ಬಳಕೆಯಲ್ಲಿರುವುದು ಅರೇಬಿಕ್ ಲಿಪಿ. 7-8ನೆಯ ಶತಮಾನಗಳಲ್ಲಿ, ಇಸ್ಲಾಂ ಧರ್ಮ ಹುಟ್ಟಿದ ಅನಂತರ, ಅರಬರು ಕೈಗೊಂಡ ವಿಜಯ ಪ್ರಯಾಣಗಳ ಪರಿಣಾಮವಾಗಿ ಇಂದು ಭಾರತದಿಂದ ಅಟ್ಲಾಂಟಿಕ್ ಸಾಗರದವರೆಗಿನ ಪ್ರದೇಶಗಳಲ್ಲಿ ಅರಾಬಿಕ್ ಭಾಷೆ ಒಂದಲ್ಲ ಒಂದು ರೂಪದಲ್ಲಿ ಪ್ರಚಲಿತವಾಗಿದೆ. ಭಾಷೆಗಿಂತಲೂ ಹೆಚ್ಚಾಗಿ ಹರಡಿದ ಅರಾಬಿಕ್ ಲಿಪಿ ಇಂದು ಪರ್ಷಿಯ, ಬಾಲ್ಕನ್ ದ್ವೀಪ ಕಲ್ಪ, ಆಗ್ನೇಯ ರಷ್ಯ, ಪಶ್ಚಿಮ, ಮಧ್ಯ ಹಾಗೂ ಆಗ್ನೇಯ ಏಷ್ಯ ಮತ್ತು ಆಫ್ರಿಕದ ಬಹುಭಾಗಗಳಲ್ಲಿ ಬಳಕೆಯಲ್ಲಿದೆ. ಈ ಲಿಪಿಯ ಪ್ರಾಚೀನತಮ ಸುಳುಹುಗಳು ಕಾಣಸಿಗುವುದು ಸಿರಿಯದ ನಬತೇಯನರ 324ರ ಒಂದು ಶಾಸನದಲ್ಲಿ ಅರಾಬಿಕ್ ಲಿಪಿಯ ಪುರ್ಣ ಬೆಳೆವಣಿಗೆಯನ್ನು ತೋರಿಸಿಕೊಡುವ ಪ್ರಾಚೀನತಮ ಶಾಸನ 512ರದಾಗಿದ್ದು, ಅದು ಗ್ರೀಕ್-ಸಿರಿಯಕ್-ಅರಾನೊಲ್ ಭಾಷೆಗಳಲ್ಲಿದೆ. ಆರಮೇಯಿಕ್ನಂತೆಯೇ ಅರಾಬಿಕ್ ಲಿಪಿಯೂ ಬಲದಿಂದ ಎಡಕ್ಕೆ ಬರೆಯುವಂಥದು. 7ನೆಯ ಶತಮಾನದಿಂದ ಶಾಸನಗಳಲ್ಲಿ ಕಾಣಿಸಿಕೊಳ್ಳುವ ಕೂಫಿಕ್ ಹಾಗೂ ನಸ್ಖಿ ಲಿಪಿಗಳು ಅರಾಬಿಕ್ನ ಎರಡು ಮಾದರಿಗಳೇ ಆಗಿದ್ದು, ಕಾಲಕ್ರಮೇಣ ಹುಟ್ಟಿದ ಇತರ ಅನೇಕ ಲಿಪಿಗಳ ಮೂಲಲಿಪಿಗಳಾಗಿವೆ.ಸಿರಿಯದ ಮರುಭೂಮಿಯಲ್ಲಿ ನೆಲೆಸಿದ ಪಾಲ್ಮೈರದ ಅರಬರ ಪ್ರ.ಶ.ಪು. 1-ಪ್ರ.ಶ. 3ನೆಯ ಶತಮಾನಗಳ ಶಾಸನಗಳು ಆರಮೇಯಿಕ್ನಿಂದ ಹುಟ್ಟಿದ ಪಾಲ್ಮೈರೀನ್ ಲಿಪಿಯಲ್ಲಿವೆ. ಇಂಥ ಶಾಸನಗಳು ಪ್ಯಾಲೆಸ್ಟೈನ್, ಉತ್ತರ ಆಫ್ರಿಕ, ಹಂಗರಿ, ಇಟಲಿ, ಇಂಗ್ಲೆಂಡ್ ಮುಂತಾದ ದೂರದೇಶಗಳಲ್ಲೂ ದೊರೆತಿವೆ.
ಸಿರಿಯಕ್ ಲಿಪಿ
ಬದಲಾಯಿಸಿಆರಮೇಯಿಕ್ ಲಿಪಿಯಿಂದಲೇ ಹುಟ್ಟಿದ ಸಿರಿಯಕ್ ಲಿಪಿಯನ್ನು ಬಳಸಿ ಬರೆಯಲಾಗಿರುವ ಕ್ರೈಸ್ತಧರ್ಮದವರ ಸಮಾಧಿಗಳ ಮೇಲಿನ ಶಾಸನಗಳು 1ನೆಯ ಶತಮಾನದಿಂದ ಕಾಣಿಸಿಕೊಳ್ಳುತ್ತವೆ. ಕ್ರೈಸ್ತಧರ್ಮವನ್ನು ಹರಡಿಸುವ ಸಲುವಾಗಿ 7ನೆಯ ಶತಮಾನದಲ್ಲಿ ಮಧ್ಯ ಏಷ್ಯ ಹಾಗೂ ಚೀನಕ್ಕೆ ಬಂದ ನೆಸ್ಟೋರಿಯನ್ ಚರ್ಚಿನ ಧರ್ಮಪ್ರಚಾರಕರು ಸಿರಿಯಕ್ ಲಿಪಿಯದೇ ಒಂದು ಮಾದರಿಯಾದ ನೆಸ್ಟೋರಿಯನ್ ಲಿಪಿಯ ಶಾಸನಗಳನ್ನು ಆ ಪ್ರದೇಶಗಳಲ್ಲಿ ಕೆತ್ತಿಸಿದ್ದಾರೆ. ಇವುಗಳಲ್ಲಿ 781ರ ನೆಸ್ಟೋರಿಯನ್-ಚೀನಿ ದ್ವಿಭಾಷಾ ಶಾಸನವೊಂದೂ ಸೇರಿದೆ.13-14ನೆಯ ಶತಮಾನಗಳ ಅನೇಕ ನೆಸ್ಟೋರಿಯನ್ ಶ್ಮಶಾನಗಳನ್ನು ರಷ್ಯಾದ ದಕ್ಷಿಣ ಸೈಬೀರಿಯದಲ್ಲಿ ಪತ್ತೆ ಹಚ್ಚಲಾಗಿದೆ. ಅವುಗಳಲ್ಲಿ ಹಲವು ನೆಸ್ಟೋರಿಯನ್ ಶಾಸನಗಳು ದೊರೆತಿವೆ. ಕ್ರೈಸ್ತಧರ್ಮದವರೂ ಬ್ಯಾಬಿಲೋನಿಯದ ನಿವಾಸಿಗಳೂ ಆಗಿದ್ದ ಮ್ಯಾಂಡೇಯನ್ ಜನಾಂಗದವರ 7-8ನೆಯ ಶತಮಾನಗಳ ಕೆಲವು ಶಾಸನಗಳು ದೊರೆತಿವೆ. ಅವನ್ನು ಸೀಸದ ಮೇಲೆ ಹಾಗೂ ಮಣ್ಣ ಬೋಗುಣಿಗಳ ಒಳಭಾಗದಲ್ಲಿ ಬರೆದಿದೆ. ಭಾಷೆ ಆರಮೇಯಿಕ್, ಪರ್ಷಿಯನ್ ಹಾಗೂ ಅರಾಬಿಕ್ಗಳಿಂದ ಪ್ರಭಾವಿತವಾಗಿದೆ.
ಏಷ್ಯಾದಲ್ಲಿ ಆರಮೇಯಿಕ್ ಲಿಪಿಯ ವಿಕಾಸ
ಬದಲಾಯಿಸಿಜರತುಷ್ಟ್ರ, ಯೆಹೂದ್ಯ, ಕ್ರೈಸ್ತ, ಬೌದ್ಧ ಮತ್ತು ಇಸ್ಲಾಂ ಧರ್ಮಗಳ ಮುನ್ನಡೆಯೊಂದಿಗೆ ಏಷ್ಯಾದಲ್ಲಿ ಆರಮೇಯಿಕ್ ಲಿಪಿಯ ವಿಕಾಸವೂ ನಡೆದುಬಂದಿತ್ತು. ಅಶೋಕನ ಕೆಲವು ಶಾಸನಗಳ ಖರೋಷ್ಠಿ ಲಿಪಿ ಆರಮೇಯಿಕ್ನಿಂದಲೇ ಹುಟ್ಟಿದ್ದು. 4-5ನೆಯ ಶತಮಾನಗಳ ಅನಂತರ ಬಳಕೆ ತಪ್ಪಿಹೋದ ಖರೋಷ್ಠಿ ಲಿಪಿಯ ಶಾಸನಗಳು ಮತ್ತು ದಾಖಲೆಗಳು ಪುರ್ವ ಆಫ್ಘಾನಿಸ್ತಾನದ ಗಾಂಧಾರಪ್ರಾಂತ್ಯ, ಉತ್ತರ ಪಂಜಾಬ್ ಹಾಗೂ ಪುರ್ವ ತುರ್ಕಿಸ್ತಾನಗಳಲ್ಲಿ ದೊರೆತಿವೆ. ಆರಮೇಯಿಕ್ನಿಂದ ಪರ್ಷಿಯನರು ರೂಪಿಸಿಕೊಂಡ ಪಹ್ಲವಿ ಲಿಪಿಯ, ಪಹ್ಲವಿ ಭಾಷೆಯ ಶಾಸನಗಳು ಪ್ರ.ಶ.ಪು. 3-ಪ್ರ.ಶ. 3ನೆಯ ಶತಮಾನಗಳವು. ಈ ಶಾಸನಗಳಲ್ಲಿ ಆರಮೇಯಿಕ್ ಭಾಷೆಯ ಕೆಲವು ಶಬ್ದಗಳನ್ನು ಭಾವಲಿಪಿಯಲ್ಲಿ ಬರೆಯಲಾಗಿರುವುದು ಕುತೂಹಲಕಾರಿಯಾದ ಸಂಗತಿ.ರಷ್ಯದ ಇಂದಿನ ಉಜೆ಼್ಬಕಿಸ್ತಾನದಲ್ಲಿ ವಾಸಿಸುತ್ತಿದ್ದ ಸೋಗ್ಡಿಯನ್ ಜನಾಂಗದವರ ಸೋಗ್ಡಿಯನ್ ಲಿಪಿಯೂ ಆರಮೇಯಿಕ್ ಲಿಪಿ ಮತ್ತು ಭಾಷೆಗಳೂ ಮಧ್ಯ ಏಷ್ಯದಲ್ಲಿ ಪ್ರಚಾರದಲ್ಲಿದ್ದವು. 9ನೆಯ ಶತಮಾನದ ಮಧ್ಯೆ ಏಷ್ಯದ ತ್ರಿಭಾಷಾ ಶಾಸನವೊಂದು ತುರ್ಕಿ-ಸೋಗ್ಡಿಯನ್-ಚೀನಿ ಭಾಷೆಗಳಲ್ಲಿದೆ. ಸೋಗ್ಡಿಯನ್ ಶಾಸನವೊಂದು ಭಾರತದ ಲದಾಖಿನಲ್ಲೂ ದೊರತಿದೆ. ಪುರ್ವ ತುರ್ಕಿಸ್ತಾನದಲ್ಲೂ ವಾಯವ್ಯ ಚೀನದಲ್ಲೂ 2-9ನೆಯ ಶತಮಾನಗಳ ಸೋಗ್ಡಿಯನ್ ಹಸ್ತಪ್ರತಿಗಳಿದ್ದವು. 7-8ನೆಯ ಶತಮಾನಗಳ ಹಲವು ಶಾಸನಗಳು ಮಧ್ಯ ಸೈಬೀರಿಯ, ವಾಯವ್ಯ ಮಂಗೋಲಿಯ ಮತ್ತು ಈಶಾನ್ಯ ತುರ್ಕಿಸ್ತಾನದಲ್ಲಿ ದೊರೆತಿದ್ದು, ಅವುಗಳ ಲಿಪಿ ಸೈಬೀರಿಯನ್ ಅಥವಾ ಕೊಕ್ ತುರ್ಕಿ ಆಗಿದೆ. ಈ ಲಿಪಿ ಸೋಗ್ಡಿಯನ್ ಲಿಪಿಯಿಂದ ಹುಟ್ಟಿರಬಹುದು. ಈ ಶಾಸನಗಳ ಭಾಷೆ ಪ್ರಾಚೀನ ತುರ್ಕಿ.
ಇತಿಹಾಸ
ಬದಲಾಯಿಸಿಪ್ರ.ಶ.ಪು. 3ನೆಯ ಶತಮಾನದಿಂದೀಚೆಗೆ, ಎಂದರೆ ಭಾರತದ ಇತಿಹಾಸ ಕಾಲ ಆರಂಭವಾದಾಗಿನಿಂದ, ದೇಶದ ಮೂಲೆಮೂಲೆಗಳಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ದೊರೆಯುವ ಶಾಸನಗಳೇ ಅದರ ಚರಿತ್ರೆಗೆ ಆಧಾರ. ಈ ಶಾಸನಗಳ ಪೈಕಿ ಹೆಚ್ಚಿನವು ಬಿಡಿ ಅಥವಾ ಬಂಡೆಕಲ್ಲುಗಳ ಮತ್ತು ತಾಮ್ರದ ತಗಡುಗಳ ಮೇಲೆ ಕೊರೆಯಲ್ಪಟ್ಟವು. ಬಂಗಾರ, ಬೆಳ್ಳಿ, ಕಬ್ಬಿಣ, ಕಂದು ಕಂಚು, ಮರ, ಭೂರ್ಜ ಪತ್ರ, ಸಾಚಿಪತ್ರ, ಬಟ್ಟೆ, ಚರ್ಮ, ಇಟ್ಟಿಗೆ ಇತ್ಯಾದಿಗಳ ಮೇಲೂ ಶಾಸನಗಳನ್ನು ಬರೆಯಲಾಗುತ್ತಿತ್ತೆನ್ನುವುದಕ್ಕೆ ನಿದರ್ಶನಗಳು ಇಲ್ಲವೇ ಸೂಚನೆಗಳು ದೊರೆತಿವೆ ಅಶೋಕನ ಶಾಸನಗಳನ್ನು ಬರೆಯುವಲ್ಲಿ ಬ್ರಾಹ್ಮೀ, ಖರೋಷ್ಠಿ, ಗ್ರೀಕ್ ಮತ್ತು ಆರಮೇಯಿಕ್ ಲಿಪಿಗಳನ್ನು ಬಳಸಲಾಗಿದೆ. ಇಂದಿನ ಭಾರತದ ಎಲ್ಲ ಹಿಂದೂ ಲಿಪಿಗಳು ಹಾಗೂ ನೇಪಾಳ, ಟಿಬೆಟ್, ಪುರ್ವ ತುರ್ಕಿಸ್ತಾನ, ಮಯನ್ಮಾರ್, ಥೈಲೆಂಡ್, ಮಲೇಷಿಯ, ಇಂಡೋನೇಷ್ಯ, ಕಾಂಬೋಡಿಯ, ದಕ್ಷಿಣ ವಿಯೆಟ್ನಾಂ, ಶ್ರೀಲಂಕ ಮುಂತಾದ ರಾಷ್ಟ್ರಗಳಲ್ಲಿ ಇಂದಿಗೂ ಬಳಕೆಯಲ್ಲಿರುವ ಅಥವಾ ಇಸ್ಲಾಮಿನ ಪ್ರಭಾವ ಹೆಚ್ಚಾಗುವ ತನಕ ಬಳಕೆಯಲ್ಲಿದ್ದ, ಲಿಪಿಗಳು ಅಶೋಕನ ಕಾಲದ ಬ್ರಾಹ್ಮೀ ಲಿಪಿಯಿಂದಲೇ ಹುಟ್ಟಿದವು.
ಅಶೋಕನ ಶಾಸನಗಳು
ಬದಲಾಯಿಸಿಅಶೋಕನ ಶಾಸನಗಳು ಪ್ರಾಕೃತ, ಗ್ರೀಕ್ ಮತ್ತು ಆರಮೇಯಿಕ್ ಭಾಷೆಗಳಲ್ಲಿವೆ. 3-4ನೆಯ ಶತಮಾನದ ವೇಳೆಗೆ ಉತ್ತರ ಭಾರತದಲ್ಲೂ 4ನೆಯ ಶತಮಾನದ ಉತ್ತರಾರ್ಧದ ವೇಳೆಗೆ ದಕ್ಷಿಣ ಭಾರತದಲ್ಲೂ ಅಲ್ಲಿಯ ತನಕ ಪ್ರಧಾನ ಶಾಸನಭಾಷೆಯಾಗಿ ಮೆರೆದ ಪ್ರಾಕೃತವನ್ನು ಸಂಸ್ಕೃತ ಆಕ್ರಮಿಸಿಕೊಂಡಿತು. ಕಾಲಕ್ರಮೇಣ ಭಾರತದ ಮತ್ತು ಭಾರತದಿಂದ ಪ್ರಭಾವಿತವಾದ ಮಧ್ಯ ಮತ್ತು ಆಗ್ನೇಯ ಏಷ್ಯದ ರಾಷ್ಟ್ರಗಳ ಶಾಸನಗಳನ್ನು ಪ್ರಾಂತೀಯ ಭಾಷೆಗಳಲ್ಲೂ ಬರೆಯುವ ರೂಢಿ ಬಂತು. ಉತ್ತರ ಭಾರತದ ಪ್ರಾಂತೀಯ ಭಾಷೆಗಳು ಬಳಕೆಗೆ ಬಂದದ್ದು ಅನಂತರ. ಉತ್ತರ ಭಾರತದಿಂದ ಪ್ರಭಾವಿತವಾದ ಮಧ್ಯ ಮತ್ತು ಆಗ್ನೇಯ ಏಷ್ಯದ ರಾಷ್ಟ್ರಗಳ ಶಾಸನಗಳನ್ನು ಬರೆಯುವಲ್ಲಿ ಪ್ರಾಂತೀಯ ಭಾಷೆಗಳು ಬಳಕೆಗೆ ಬಂದವು. ಉತ್ತರ ಭಾರತದ ಪ್ರಾಂತೀಯ ಭಾಷೆಗಳ ಪೈಕಿ 10ನೆಯ ಶತಮಾನದಿಂದ ಮರಾಠಿ, 11ನೆಯ ಶತಮಾನದಿಂದ ಹಿಂದಿ ಮತ್ತದರ ಉಪಭಾಷೆಗಳು, 13ನೆಯ ಶತಮಾನದಿಂದ ಒರಿಯ, 13-14ನೆಯ ಶತಮಾನದಿಂದ ಕಾಶ್ಮೀರಿ ಮತ್ತದರ ಉಪಭಾಷೆಗಳು, 16ನೆಯ ಶತಮಾನದಿಂದ ಅಸ್ಸಾಮಿನ ಅಹೋಂ, 17ನೆಯ ಶತಮಾನದಿಂದ ಮೈಥಿಲೀ ಶಾಸನಭಾಷೆಗಳಾಗಿ ಕಾಣಿಸಿಕೊಳ್ಳುತ್ತವೆ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ಕೆಲವು ಗುಹೆಗಳಲ್ಲಿ ಕೊರೆಯಲಾಗಿರುವ ಶಾಸನಗಳು ತಮಿಳು ಭಾಷೆಯಲ್ಲಿದ್ದು ಅವು 3ನೆಯ ಶತಮಾನದಷ್ಟಾದರೂ ಹಳೆಯವೆಂದು ಲಿಪಿಶಾಸ್ತ್ರದೃಷ್ಟಿಯಿಂದ ಹೇಳಬಹುದಾಗಿದೆ. ಕನ್ನಡಶಾಸನಗಳ ಮಟ್ಟಿಗೆ 5ನೆಯ ಶತಮಾನದ ಮಧ್ಯ ಭಾಗದಲ್ಲಿ ಹುಟ್ಟಿದ ಹಲ್ಮಿಡಿ ಶಾಸನವೇ ಇದುವರೆಗೆ ತಿಳಿದಿರುವಂತೆ ಪ್ರಾಚೀನತಮವಾದದ್ದು. ತೆಲುಗುಭಾಷೆಯ ಪ್ರಾಚೀನತಮ ಶಾಸನ 6ನೆಯ ಶತಮಾನದ ಉತ್ತರಾರ್ಧಕ್ಕೆ ಸೇರಿದ್ದು. 13-14ನೆಯ ಶತಮಾನದಿಂದ ಮಲಯಾಳಂ ಮತ್ತು ತುಳು ಶಾಸನಗಳು (ಐದಾರು) ಕಾಣಿಸಿಕೊಳ್ಳುತ್ತವೆ.ಭಾರತದ ನೇರ ಪ್ರಭಾವಕ್ಕೊಳಗಾಗಿದ್ದ ರಾಷ್ಟ್ರಗಳ ಪೈಕಿ ಪಾಕಿಸ್ತಾನದಲ್ಲಿ ಅಶೋಕನ ಆರಮೇಯಿಕ್ ಮತ್ತು ಪ್ರಾಕೃತ ಶಾಸನಗಳೂ ಆಫ್ಘಾನಿಸ್ತಾನದಲ್ಲಿ ಅವನ ಗ್ರೀಕ್ ಮತ್ತು ಆರಮೇಯಿಕ್, ಶಾಸನಗಳೂ ನೇಪಾಲದಲ್ಲಿ ಅದೇ ಅರಸನ ಪ್ರಾಕೃತ ಶಾಸನಗಳೂ ದೊರೆತಿವೆ.
ಸಂಸ್ಕೃತ ಶಾಸನ ಹಾಗೂ ನೀವಾರೀ ಶಾಸನ
ಬದಲಾಯಿಸಿನೇಪಾಲದಲ್ಲಿ ಪ್ರ.ಶ. 5ನೆಯ ಶತಮಾನದಿಂದ ಸಂಸ್ಕೃತ ಶಾಸನಗಳೂ 14-15ನೆಯ ಶತಮಾನದಿಂದ ನೀವಾರೀ ಶಾಸನಗಳೂ ಕಾಣಿಸಿಕೊಳ್ಳುತ್ತವೆ. ಬರ್ಮದಲ್ಲಿ ಸಂಸ್ಕೃತ, ಮೋನ್ ಮತ್ತು ಪ್ಯು ಭಾಷೆಗಳ ಶಾಸನಗಳು ಪ್ರ.ಶ. 6ನೆಯ ಶತಮಾನದಿಂದಲೂ ಥೈಲೆಂಡಿನ ಸಂಸ್ಕೃತ ಮತ್ತು ಸಯಾಮೀ ಶಾಸನಗಳು ಪ್ರ.ಶ. 5-6ನೆಯ ಶತಮಾನದಿಂದಲೂ ಇಂಡೋನೇಷ್ಯದ ಸಂಸ್ಕೃತ ಮತ್ತು ಕವಿ ಶಾಸನಗಳು ಅನುಕ್ರಮವಾಗಿ ಪ್ರ.ಶ. 5, 8ನೆಯ ಶತಮಾನಗಳಿಂದಲೂ ಕಾಂಬೋಡಿಯದ ಸಂಸ್ಕೃತ ಮತ್ತು ಖ್ಮೆರ್ ಶಾಸನಗಳು ಅನುಕ್ರಮವಾಗಿ 5, 7ನೆಯ ಶತಮಾನಗಳಿಂದಲೂ ದಕ್ಷಿಣ ವಿಯೆಟ್ನಾಮಿನ (ಪ್ರಾಚೀನ ಚಂಪ) ಸಂಸ್ಕೃತ ಶಾಸನಗಳು 4-5ನೆಯ ಶತಮಾನಗಳಿಂದಲೂ ಕಾಣಿಸಿಕೊಳ್ಳುತ್ತವೆ. ಶ್ರೀಲಂಕದಲ್ಲಿ ಪ್ರಾಕೃತ ಹಾಗೂ ಪಾಲಿಭಾಷೆಗಳೇ ಪ್ರಧಾನ ಶಾಸನ ಭಾಷೆಗಳಾಗಿದ್ದುವಾಗಿದ್ದರಿಂದ ಅಲ್ಲಿ ದೊರೆತಿರುವ ಸಂಸ್ಕೃತ ಶಾಸನಗಳು ಕೆಲವು ಮಾತ್ರ. ಆ ದ್ವೀಪದ ಪ್ರಾಕೃತ, ಪಾಲಿ ಶಾಸನಗಳ ಪೈಕಿ ಪ್ರಾಚೀನತಮವಾದವು ಪ್ರ.ಶ.ಪು. 2ನೆಯ ಶತಮಾನದವು. ಪ್ರಾಚೀನತಮ ಸಂಸ್ಕೃತ, ಶ್ರೀಲಂಕ ಶಾಸನಗಳು ಅನುಕ್ರಮವಾಗಿ 5,8ನೆಯ ಶತಮಾನಗಳವು. 11ನೆಯ ಶತಮಾನದ ಚೋಳರ ಹಲವು ಶಾಸನಗಳೂ ಸೇರಿದಂತೆ ಅನೇಕ ತಮಿಳು ಶಾಸನಗಳು ಶ್ರೀಲಂಕದಲ್ಲಿ ದೊರೆತಿವೆ.ಭಾರತದಲ್ಲಿ ಅರಬ್ಬೀ ಮತ್ತು ಪರ್ಷಿಯನ್ ಶಾಸನಗಳು ಪ್ರ.ಶ. 12ನೆಯ ಶತಮಾನದ ಕೊನೆಯ ದಶಕದಿಂದ ದೊರೆಯುತ್ತವೆ. ಈ ಶಾಸನಗಳಲ್ಲಿ ಹೆಚ್ಚಿನವು ಮಸೀದಿಗಳಲ್ಲೂ ಸಮಾಧಿಗಳ ಮೇಲೂ ಬರೆಯಲಾದವು. ಅರಬ್ಬೀ-ಪರ್ಷಿಯನ್ ಶಾಸನಗಳ ಪೈಕಿ ಹೆಚ್ಚಿನವುಗಳಲ್ಲಿ ಪರ್ಷಿಯನ್ ಭಾಷೆಯನ್ನು ಬಳಸಲಾಗಿದೆ. ಭಾರತಕ್ಕೆ ಬಂದು ನೆಲೆಸಿದಾಗಿನಿಂದಲೂ ಮುಸ್ಲಿಂ ಇತಿಹಾಸಕಾರರು ನಾಡಿನ ಬೇರೆ ಬೇರೆ ಮಹಮ್ಮದೀಯ ಅರಸುಮನೆತನಗಳ ಚರಿತ್ರೆಯನ್ನು ಬರೆದಿಟ್ಟಿರುವರಾದ ಕಾರಣ, ಇತಿಹಾಸ ದೃಷ್ಟಿಯಿಂದ ಭಾರತದ ಅರಬ್ಬೀ-ಪರ್ಷಿಯನ್ ಶಾಸನಗಳಿಗೆ ಹೆಚ್ಚಿನ ಮಹತ್ತ್ವವಿಲ್ಲ.
ನಾಣ್ಯಗಳು
ಬದಲಾಯಿಸಿನಿರ್ದಿಷ್ಟ ತೂಕದ ನಾಣ್ಯಗಳನ್ನು ಮಾನವ ಮಾಡತೊಡಗಿದ್ದು ಪ್ರ.ಪು 7ನೆಯ ಶತಮಾನದಲ್ಲಿ ಮಾತ್ರ. ಅದರ ಮೊದಲು ಜಗತ್ತಿನ ಎಲ್ಲೆಡೆಗಳಲ್ಲೂ ವಸ್ತುಗಳ ಅದಲುಬದಲಿಯಿಂದಲೇ ವ್ಯಾಪಾರ ಸಾಗುತ್ತಿತ್ತು. ನಾಣ್ಯಗಳೂ ಹುಟ್ಟುವ ಮೊದಲು ಚಿನ್ನದ ಉಂಗುರಗಳೂ ಓಲೆಗಳೂ ಆಭರಣಗಳಾಗಿರುವುದರ ಜೊತೆಗೆ ಹಣದ ಕೆಲಸವನ್ನೂ ಪುರೈಸುತ್ತಿದ್ದವು.ಪ್ರ.ಶ.ಪು. 7ನೆಯ ಶತಮಾನದಲ್ಲಿ ಏಷ್ಯ ಮೈನರಿನ ಲಿಡಿಯದ ಖಾಸಗಿ ವ್ಯಾಪಾರಿಯೊಬ್ಬ (ಚಿನ್ನ ಮತ್ತು ಬೆಳ್ಳಿಗಳಿಂದಾದ) ಇಲೆಕ್ಟ್ರಂ ಎಂಬ ಮಿಶ್ರಲೋಹದಿಂದ ಅವರೆಯ ರೂಪದ ತುಂಡುಗಳನ್ನು ಮಾಡಿ ಅವುಗಳ ಮೇಲೆ ತನ್ನದೇ ಆದ ಒಂದು ಗುರುತನ್ನು ಮುದ್ರಿಸಿದಾಗ ಜಗತ್ತಿನ ಪ್ರಾಚೀನತಮ ನಾಣ್ಯಗಳು ಹೊರಬಿದ್ದವು. ಅಂದಿನಿಂದ ಜಗತ್ತಿನ ಬೇರೆ ಬೇರೆ ಪ್ರಾಂತ್ಯಗಳಲ್ಲಿ, ಕಾಲಗಳಲ್ಲಿ ಬೇರೆ ಬೇರೆ ಅರಸುಮನೆತನಗಳಿಂದ, ನಗರಗಳಿಂದ, ಸಂಘಸಂಸ್ಥೆಗಳಿಂದ, ವ್ಯಕ್ತಿಗಳಿಂದ ಹೊರಡಿಸಲಾಗಿರುವ ನಾಣ್ಯಗಳಿಗೆ ಲೆಕ್ಕವಿಲ್ಲ. ಮಾನವನ ಗತಕಾಲದ ಇತಿಹಾಸವನ್ನು ಪುನಾರಚಿಸುವಲ್ಲಿ ಶಾಸನಾದಿ ದಾಖಲೆಗಳು ಮುಖ್ಯ ಮೂಲ ಸಾಮಗ್ರಿಗಳಾದರೆ, ನಾಣ್ಯಗಳು ಪೋಷಕ ಆಧಾರವಸ್ತುಗಳಾಗಿವೆ; ಅವು ಇತರ ಐತಿಹಾಸಿಕ ಆಧಾರಗಳ ಅಧ್ಯಯನದಿಂದ ಉಂಟಾಗಬಹುದಾದ ತಪ್ಪು ತಿಳಿವಳಿಕೆಗಳನ್ನು ತಿದ್ದುವಂಥವೂ ಹೌದು. ಅಲ್ಲದೆ, ಪ್ರಾಚೀನಕಾಲದಿಂದಲೂ ಜಗತ್ತಿನ ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದ ವಿವಿಧ ಜನಾಂಗಗಳು ಯುದ್ಧ, ವ್ಯಾಪಾರ, ಧರ್ಮಪ್ರಚಾರ ಇತ್ಯಾದಿಗಳ ಮೂಲಕ ದೂರದೂರದ ರಾಷ್ಟ್ರಗಳ ಮೇಲೆ ಉಂಟುಮಾಡಿರಬಹುದಾದ ಪ್ರಭಾವವನ್ನು ತಿಳಿದುಕೊಳ್ಳುವಲ್ಲಿ ನಾಣ್ಯಗಳ ಪಾತ್ರ ಅತಿ ಮುಖ್ಯವಾದದ್ದು.ಷ್ಯ ಮೈನರಿನ ಲಿಡಿಯ ಅಯೋನಿಯ ದ್ವೀಪಗಳು, ತ್ರೋಅಸ್, ಈಲಿಸ್, ಲೆಸ್ಟೋಸ್, ಮೈಸಿಯ, ಬಿಥಿನಿಯ ರಾಷ್ಟ್ರಗಳು ಪ್ರ.ಶ.ಪು. 7-5ನೆಯ ಶತಮಾನಗಳ ಅವಧಿಯಲ್ಲಿ ಹೊರಡಿಸಿದ ಇಲೆಕ್ಟ್ರಂ ನಾಣ್ಯಗಳು ದೊರೆತಿವೆ. ಅವುಗಳ ಮೇಲ್ಭಾಗದಲ್ಲಿ ಸಿಂಹದ ಮುಖಮುದ್ರೆಯೂ ಹಿಂಭಾಗದಲ್ಲಿ ಎರಡು ಮೂರು ಮುದ್ರೆಗಳೂ ಕಂಡುಬರುತ್ತವೆ, ಏಷ್ಯ ಮೈನರಿನ ಅನೇಕ ರಾಷ್ಟ್ರಗಳು ಹಾಗೂ ಸ್ವತಂತ್ರ ನಗರಗಳು ಹೊರಡಿಸಿದ ಬಂಗಾರದ ಮತ್ತು ಬೆಳ್ಳಿಯ ನಾಣ್ಯಗಳು ಪ್ರ.ಶ.ಪು. 6ನೆಯ ಶತಮಾನದಿಂದಲೂ ಕಂದು ಕಂಚಿನ ನಾಣ್ಯಗಳು ಪ್ರ.ಶ.ಪು. 5ನೆಯ ಶತಮಾನದಿಂದಲೂ ಕಂಡುಬಂದಿವೆ. ಆ ಪ್ರದೇಶದಲ್ಲಿ ಗ್ರೀಕರ, ರೋಮನರ, ಈಜಿಪ್ಟಿನ ಟಾಲೆಮಿ ವಂಶದವರ ನಾಣ್ಯಗಳೂ ದೊರೆತಿವೆ.
ಪ್ರಾಚೀನ ಸಾಹಿತ್ಯ
ಬದಲಾಯಿಸಿಭಾರತದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳ ಪೈಕಿ ಪ್ರಾಚೀನತಮವಾದವು ಪುರಾಣಗಳು. ಪ್ರಾಚೀನ ಸಾಹಿತ್ಯದಲ್ಲಿ ಬಂಗಾರ, ಬೆಳ್ಳಿ ಮತ್ತು ತಾಮ್ರದ ಪುರಾಣಗಳ ಪ್ರಸ್ತಾಪವಿದ್ದರೂ ಬಂಗಾರದ ಪುರಾಣಗಳು ಇಲ್ಲಿಯವರೆಗೆ ದೊರೆತಿಲ್ಲ. ಈ ನಾಣ್ಯಗಳ ಮೇಲೆ ಸಾಂಕೇತಿಕ ಮುದ್ರೆಗಳು ಕಂಡುಬರುವ ಕಾರಣ ಇವನ್ನು ಮುದ್ರೆಯೊತ್ತಿನ ನಾಣ್ಯಗಳೆಂದು ಕರೆಯುವುದು ವಾಡಿಕೆ. ಸೂರ್ಯ, ಆನೆ, ಹಸು, ರಥ, ಕುದುರೆ, ವೃಷಭ, ಮರ, ಹುಲಿ, ಸಿಂಹ ಇತ್ಯಾದಿಗಳು ಈ ಮುದ್ರೆಗಳು, ಪರದೇಶಗಳ ಸತ್ತೇರ್, ಡೇರಿಕ್, ದೀನಾರ ಮುಂತಾದ ನಾಣ್ಯಗಳೂ ಭಾರತದಲ್ಲಿ ದೊರೆತಿವೆ. ಪ್ರ.ಶ.ಪು. 2-1ನೆಯ ಶತಮಾನಗಳ ಅವಧಿಯಲ್ಲಿ ವಾಯವ್ಯ ಭಾರತದ ಕೆಲವು ಪ್ರಾಂತ್ಯಗಳ ದೊರೆಗಳಾಗಿ ಮೆರೆದ ಇಂಡೋ-ಗ್ರೀಕ್ ಅರಸುಗಳ ಗ್ರೀಕ್ ಮತ್ತು ಖರೋಷ್ಠೀ ಆಲೇಖ್ಯಗಳಿಂದ ಕೂಡಿದ ನಾಣ್ಯಗಳೂ ಪ್ರ.ಶ.ಪು. 3ನೆಯ ಶತಮಾನದಿಂದ 3ನೆಯ ಶತಮಾನದವರೆಗಿನ ಅವಧಿಯಲ್ಲಿ ಮಧ್ಯಭಾರತ, ಕರ್ನಾಟಕ, ಆಂಧ್ರಪ್ರದೇಶಗಳ ಅರಸುಗಳಾಗಿದ್ದ ಶಾತವಾಹನರ (ಬೆಳ್ಳಿ-ತಾಮ್ರಗಳ) ಮಿಶ್ರಲೋಹದ ಹಾಗೂ ಸೀಸದ ನಾಣ್ಯಗಳೂ ಶಾತವಾಹನರ ಅಧೀನರಾಗಿ ಬನವಾಸಿ, ಚಂದ್ರವಳ್ಳಿ ಇತ್ಯಾದಿ ಪ್ರಾಂತ್ಯಗಳನ್ನು ಆಳುತ್ತಿದ್ದ ಚುಟು ಮತ್ತು ಮಹಾರಠಿಗಳ ನಾಣ್ಯಗಳೂ ಉಂಟು. ಕ್ರಿಸ್ತಶಕದ ಪ್ರಾರಂಭದಿಂದೀಚೆಗಿನ ಭಾರತದಲ್ಲಿ ರಾಜ್ಯವಾಳಿದ ಕುಷಾನರ, ಗುಪ್ತರ, ಶಕಜನಾಂಗದ, ಪಶ್ಚಿಮ ಕ್ಷತ್ರಪರ, ವರ್ಧಮಾನವಂಶದವರ ರಜಪುತ ಅರಸುಮನೆತನಗಳ, ಕಲ್ಯಾಣದ ಪಶ್ಚಿಮ ಚಾಳೂಕ್ಯರ, ವೇಂಗಿಯ ಪುರ್ವ ಚಾಲುಕ್ಯರ, ಕರ್ನಾಟಕದ ಕಲಚುರಿಗಳ, ತಮಿಳುನಾಡಿನ ಚೋಳರ, ಪಾಂಡ್ಯರ, ಕೇರಳದ ಚೇರರ, ತಲಕಾಡಿನ ಗಂಗರ, ವಿಜಯನಗರ ಸಾಮ್ರಾಟರ ನಾಣ್ಯಗಳು ಬೇಕಷ್ಟು ದೊರೆತಿವೆ. ದೆಹಲಿಯ ಸುಲ್ತಾನರು ಮತ್ತು ಮೈಸೂರಿನ ಸುಲ್ತಾನರೂ ಸೇರಿದಂತೆ ಭಾರತದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ರಾಜ್ಯಗಳನ್ನು ಕಟ್ಟಿ ಆಳಿದ ಮಹಮ್ಮದೀಯ ಅರಸುಮನೆತನಗಳ ನಾಣ್ಯಗಳಂತೂ ಹೇರಳ. 1661 ರಿಂದ ಮದ್ರಾಸಿನ ಟಂಕಶಾಲೆಯಿಂದ ಈಸ್ಟ್ ಇಂಡಿಯ ಕಂಪನಿಯವರ ಪಗೋಡ ನಾಣ್ಯಗಳು ಕಣ್ಮರೆಯಾಗಿ ರೂಪಾಯಿ ನಾಣ್ಯಗಳ ಇತಿಹಾಸ ಪ್ರಾರಂಭವಾಯಿತು. ಭಾರತದ ಕೆಲವು ಭಾಗಗಳಲ್ಲಿ ಕೆಲವು ಶತಮಾನಗಳ ಹಿಂದೆ ಇಂಡೋ-ಪೋರ್ಚುಗೀಸ್, ಇಂಡೋ-ಡೇನಿಸ್, ಇಂಡೋ-ಫ್ರೆಂಚ್ ಇಂಡೋ-ಡಚ್ ನಾಣ್ಯಗಳೂ ಚಲಾವಣೆಯಲ್ಲಿದ್ದವು.
ಪ್ರಾಚೀನ ಬರ್ಮ
ಬದಲಾಯಿಸಿಪ್ರಾಚೀನ ಚೀನದಲ್ಲಿ ಬೇಸಾಯದ ಉಪಕರಣಗಳನ್ನೇ ವ್ಯಾಪಾರ ಕ್ಷೇತ್ರದಲ್ಲಿ ಉಪಯೋಗಿಸುತ್ತಿದ್ದರಾಗಿ ಆ ದೇಶದ ಪ್ರ.ಶ.ಪು. 8ನೆಯ ಶತಮಾನದ ಪ್ರಾಚೀನತಮ ನಾಣ್ಯಗಳು ಅಂಥ ಉಪಕರಣಗಳ ರೂಪದಲ್ಲೇ ಇದ್ದವು. ಅನಂತರ ಕಾಲದ ಚೀನದ ಬಂಗಾರ, ಬೆಳ್ಳಿ ಮತ್ತು ಕಂದು ಕಂಚಿನ ಪ್ರಾಚೀನ ನಾಣ್ಯಗಳು ದೊರೆತಿವೆ. 622ರಲ್ಲಿ ತಂಗ್ ವಂಶದವರು ಹೊರಡಿಸಿದ ನಾಣ್ಯಗಳು ಅವುಗಳಿಂದೀಚೆಗಿನ ಚೀನೀ ನಾಣ್ಯಗಳಿಗೆ ಮಾದರಿಗಳಾದವು. ಕೊರಿಯ, ವಿಯೆಟ್ನಾಂ ಹಾಗೂ ಇಂಡೋನೇಷ್ಯ ರಾಷ್ಟ್ರಗಳ ಗತಕಾಲದ ನಾಣ್ಯಗಳು ಚೀನಿ ನಾಣ್ಯಗಳಿಂದ ಪ್ರಭಾವಿತವಾಗಿದ್ದವು. ಹಾಗೆಯೇ ಜಪಾನಿನ ನಾಣ್ಯಗಳೂ ಸ್ವಲ್ಪ ಮಟ್ಟಿಗೆ ಚೀನೀ ಪ್ರಭಾವವನ್ನು ಪ್ರದರ್ಶಿಸುವಂಥವಾಗಿದ್ದುವು. ಜಪಾನಿನಲ್ಲಿ 5ನೆಯ ಶತಮಾನದಿಂದ ಲೋಹನಾಣ್ಯಗಳ ಚಲಾವಣೆ ಪ್ರಾರಂಭವಾಯಿತೆನ್ನ ಬಹುದಾಗಿದೆ. ಆ ರಾಷ್ಟ್ರದಲ್ಲಿ 1870ರಲ್ಲಿ ಯುರೋಪಿನ ಮಾದರಿಯ ನಾಣ್ಯಪದ್ಧತಿಯನ್ನು ಜಾರಿಗೆ ತರಲಾಯಿತು.ಪ್ರಾಚೀನ ಬರ್ಮದಲ್ಲಿ ಬಸವನ ಹುಳುವಿನ ಚಿಪ್ಪಿನ ಆಕಾರದ ಬೆಳ್ಳಿ ನಾಣ್ಯಗಳೂ ಪ್ರಾಚೀನ ಥೈಲೆಂಡಿನಲ್ಲಿ ವಲಯಾಕಾರದ ಬೆಳ್ಳಿ ನಾಣ್ಯಗಳೂ ಚಲಾವಣೆಯಲ್ಲಿದ್ದವು 12ನೆಯ ಶತಮಾನದ ಶ್ರೀಲಂಕ ಅರಸುಗಳ ನಾಣ್ಯಗಳು ತಮಿಳುನಾಡಿನ ಚೋಳರ ನಾಣ್ಯಗಳಿಂದ ಪ್ರಭಾವಿತವಾಗಿದ್ದವು. 16-17ನೆಯ ಶತಮಾನಗಳಲ್ಲಿ ಹಿಂದೂ ಮಹಾಸಾಗರ ಹಾಗೂ ಪರ್ಷಿಯನ್ ಖಾರಿಯ ಪ್ರದೇಶಗಳಲ್ಲಿ ಲಾರಿನ್ ಎಂಬ ಬೆಳ್ಳಿ ಸರಿಗೆಯ ತುಂಡುಗಳು ನಾಣ್ಯಗಳಾಗಿದ್ದು, ಅವು ಶ್ರೀಲಂಕದಲ್ಲಿ ಗಾಳದ ಕೊಕ್ಕೆಯ ರೂಪದಲ್ಲಿ ವ್ಯವಹಾರದಲ್ಲಿದ್ದವು. ಕಾಗದದ ಹಣ ಚೀನದಲ್ಲಿ 9ನೆಯ ಶತಮಾನದಷ್ಟು ಹಿಂದೆಯೇ ಚಲಾವಣೆಗೆ ಬಂದಿತ್ತು.