ಎರ್ರಾಪ್ರೆಗ್ಗಡ

ತೆಲುಗು ಕವಿ

ಎರ್ರಾಪ್ರೆಗ್ಗಡ (తెలుగు:ఎర్రాప్రగడ) ಆಂಧ್ರ ಮಹಾಭಾರತ ಕರ್ತೃಗಳಾದ ಕವಿತ್ರಯರಲ್ಲಿ ಮೂರನೆಯವ. ಗುಂಟೂರು ಜಿಲ್ಲೆಯ ಗುಡ್ಲೂರು ನಿವಾಸಿ. 14ನೆಯ ಶತಮಾನದ ಪುರ್ವಾರ್ಧದಲ್ಲಿದ್ದನೆಂದು ವಿದ್ವಾಂಸರ ಅಭಿಮತ. ಈತನಿಗೆ ಶಂಭುದಾಸನೆಂಬ ಹೆಸರೂ ಇತ್ತು. ಈತ ಮಹಾಶಿವಭಕ್ತನಾದ ನಿಯೋಗಿಬ್ರಾಹ್ಮಣ. ನನ್ನಯ ಮತ್ತು ತಿಕ್ಕನರು ಬರೆಯದೆ ಉಳಿಸಿದ ಅರಣ್ಯಪರ್ವದ ಭಾಗವನ್ನು ಈತ ನನ್ನಯನ ರೀತಿಯಲ್ಲಿಯೇ ಬರೆದು ಪುರೈಸಿದ ಪ್ರತಿಭಾಶಾಲಿ. ಲಕ್ಷ್ಮೀನೃಸಿಂಹಪುರಾಣ ಎಂಬ ಒಂದು ಪ್ರಬಂಧಕಾವ್ಯವನ್ನು ಬಹಳ ಅಚ್ಚುಕಟ್ಟಾಗಿ ಬರೆದು ಪ್ರಬಂಧ ಪರಮೇಶ್ವರ ಎಂಬ ಬಿರುದಿಗೆ ಪಾತ್ರನಾದ. ಕವಿಯ ಇನ್ನೊಂದು ಕೃತಿ ಹರಿವಂಶ. ಇದನ್ನು ಆಹೋಬಲ ನಾರಸಿಂಹಸ್ವಾಮಿಗೆ ಸಮರ್ಪಿಸಿದ್ದಾನೆ. ಭಾರತದ ಅನುಬಂಧದಂತಿರುವ ಈ ಕಾವ್ಯದಲ್ಲಿ ಶ್ರೀಕೃಷ್ಣನ ಸಮಗ್ರಚರಿತ್ರೆ ಬಂದಿದೆ. ಎರ್ರಾಪ್ರೆಗ್ಗಡನ ಕವಿತಾವೈಭವ ಈ ಕಾವ್ಯದಲ್ಲಿ ಪುರ್ಣವಾಗಿ ಪ್ರಕಾಶಕ್ಕೆ ಬಂದಿದೆ. ಶ್ರೀಕೃಷ್ಣನ ಬಾಲಲೀಲೆ, ಶೃಂಗಾರ, ರಾಜನೀತಿ, ಶೌರ್ಯ ಮೊದಲಾದ ಗುಣಾತಿಶಯಗಳನ್ನು ಲಲಿತಪದಬಂಧುರವಾದ ಸುಂದರ ಶೈಲಿಯಲ್ಲಿ, ಹೃದಯಾನಂದಕರವಾಗಿ ಚಿತ್ರಿಸಿದ್ದಾನೆ. ಈತ ಒಂದು ರಾಮಾಯಣವನ್ನು ಬರೆದನೆಂದು ಹೇಳಿದೆಯಾದರೂ ಆ ಗ್ರಂಥ ಸಿಕ್ಕಿಲ್ಲ.[೧]

ಎರ್ರಾಪ್ರೆಗ್ಗಡದ ತೈಲ ವರ್ಣಚಿತ್ರ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖಗಳು ಬದಲಾಯಿಸಿ

  1. "Vaishanava yugamu" (PDF). Archived from the original (PDF) on 2009-03-04. Retrieved 2017-07-18.