ಉತ್ಪಾದನ ಗಣತಿ ಎಂದರೆ ಉತ್ಪಾದನೆಯ ಘಟಕಗಳ ಎಣಿಕೆ (ಸೆನ್ಸಸ್ ಆಫ್ ಪ್ರೊಡಕ್ಷನ್). ಉತ್ಪಾದನೆಯ ಗಣತಿಯೂ ಜನಗಣತಿಯಂತೆಯೇ ಎಂದು ಹೇಳಬಹುದಾದರೂ ಇವೆರಡಕ್ಕೂ ವ್ಯತ್ಯಾಸಗಳುಂಟು.

ಹಿನ್ನೆಲೆ ಬದಲಾಯಿಸಿ

ಎಲ್ಲ ಕಾಲ ದೇಶಗಳಲ್ಲೂ ಜನಗಣತಿ ಒಂದೇ ತರಹ. ಏಕೆಂದರೆ ಎಣಿಕೆಗೆ ಒಳಗಾದ ಘಟಕವನ್ನು ಸುಲಭವಾಗಿ ಗುರುತಿಸಬಹುದು; ಅದು ಸುಲಭವಾಗಿ ವ್ಯಾಖ್ಯೆಗೆ ಸಿಗುವಂಥದು. ಆದರೆ ಇದು ಹಾಗಲ್ಲ. ಎಣಿಕೆಗೆ ಒಳಪಡಿಸಬೇಕಾದ ಉತ್ಪಾದನ ಘಟಕ ಯಾವುದು ಎಂಬುದನ್ನು ನಿರ್ಣಯಿಸುವುದು ಬಲುಕಷ್ಟ. ಜನಗಣತಿಯ ಉದ್ದೇಶ ಹೆಚ್ಚು ಸರಳ, ನೇರ. ಉತ್ಪಾದನೆಯ ಗಣತಿಯ ಉದ್ದೇಶದ ವ್ಯಾಖ್ಯೆ ಕಠಿನತರ, ಭಿನ್ನ ಭಿನ್ನವೂ ಹೌದು. ಉತ್ಪಾದನೆಯನ್ನು ಕುರಿತ ಭಾವನೆಗಳೂ ಕಾಲದಿಂದ ಕಾಲಕ್ಕೆ ಬದಲಾಗುತ್ತಿವೆ. 18ನೆಯ ಶತಮಾನದ ಫ್ರೆಂಚ್ ಪ್ರಕೃತಿ ಪ್ರಾಧಾನ್ಯವಾದಿಗಳ ದೃಷ್ಟಿಯಲ್ಲಿ ವ್ಯವಸಾಯೋತ್ಪಾದನೆಯೊಂದೇ ನಿಜವಾದ ಉತ್ಪಾದನೆ. ಆದರೆ ಇಂದಿನ ದೃಷ್ಟಿ ತುಂಬ ವಿಶಾಲ. ಕಮ್ಯೂನಿಸ್ಟ್ ವ್ಯವಸ್ಥೆಯಲ್ಲೂ ಬಂಡವಾಳವಾದಿ ವ್ಯವಸ್ಥೆಯಲ್ಲೂ ಉತ್ಪಾದನೆಯ ಮೊತ್ತದ ಬಗ್ಗೆ ಭಿನ್ನ ಕಲ್ಪನೆಗಳಿವೆ.[೧]

ಗಣನೆ ಬದಲಾಯಿಸಿ

ಗಣತಿಯೆಂಬುದು ವ್ಯಾಪಕಾರ್ಥವುಳ್ಳ ಪದ. ಗಣತಿ ಮಾಡಲು ಒಂದು ದೇಶ ಅಥವಾ ಪ್ರದೇಶವನ್ನು ಇಡಿಯಾಗಿ ಗಣನೆಗೆ ತೆಗೆದುಕೊಳ್ಳಬೇಕಾದದ್ದು ಅವಶ್ಯ. ಅಲ್ಲಿನ ಒಟ್ಟು ಉತ್ಪಾದನೆಯ ಲೆಕ್ಕ ತೆಗೆದುಕೊಂಡಾಗಲೇ ಉತ್ಪಾದನ ಗಣತಿ ಸಮಗ್ರವೆನಿಸಿಕೊಳ್ಳುತ್ತದೆ. ವ್ಯವಸಾಯ ಗಣತಿ, ಕೈಗಾರಿಕೆಯ ಹಾಗೂ ಗಣಿ ಉದ್ಯಮದ ಗಣತಿ, ವಿತರಣೆಯ ಗಣತಿ ಅಥವಾ ವ್ಯವಹಾರ ಗಣತಿ-ಎಂದು ಬೇರೆ ಬೇರೆ ವಿಭಾಗಗಳಲ್ಲಿ ಉತ್ಪಾದಕ ಘಟಕಗಳ ಎಣಿಕೆ ಮಾಡುವುದು ಆಧುನಿಕ ಪದ್ಧತಿ.

ಪ್ರಶ್ನಾವಳಿ ಬದಲಾಯಿಸಿ

ಉತ್ಪಾದನ ಗಣತಿಯ ಬಗ್ಗೆ ಸಮಗ್ರ ಧೋರಣೆ ತಳೆದ ಮೊದಲ ರಾಷ್ಟ್ರವೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನಗಳು. ಮೊದಲ ಬಾರಿಗೆ ಅಲ್ಲಿನ ಕಾಂಗ್ರೆಸ್ಸು ಈ ಬಗ್ಗೆ ಕ್ರಮ ಕೈಕೊಂಡಿದ್ದು 1810ರಲ್ಲಿ. ಜನಗಣತಿಯ ಅಧಿಕಾರಿಗಳು ತಂತಮ್ಮ ಜಿಲ್ಲೆ, ಪ್ರದೇಶ ಮತ್ತು ವಿಭಾಗಗಳಲ್ಲಿನ ತಯಾರಿಕಾಸಂಸ್ಥೆಗಳ ಮತ್ತು ಅವುಗಳ ತಯಾರಿಕೆಗಳ ಲೆಕ್ಕ ತೆಗೆಯಬೇಕೆಂಬ ಉದ್ದೇಶಕ್ಕೆ ಅನುಸಾರವಾಗಿ ಮುಂದೆ (1818) ಒಂದು ಪ್ರಶ್ನಾವಳಿ ಸಿದ್ಧವಾಯಿತು. ತಯಾರಿಕೆಯ ಸ್ವರೂಪ, ಅದಕ್ಕೆ ಹೂಡಲಾದ ಕಚ್ಚಾ ಸಾಮಗ್ರಿ, ನೇಮಕವಾಗಿದ್ದ ಸಿಬ್ಬಂದಿಯ ಸಂಖ್ಯೆ, ವೆಚ್ಚಗಳು, ಬಂಡವಾಳ, ಉತ್ಪಾದನೆ ಇವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.[೨]

ಒಂದು ಕೈಗಾರಿಕೆಯಲ್ಲಿನ ಹಾಗೂ ದೇಶದ ಎಲ್ಲ ಕೈಗಾರಿಕೆಗಳಲ್ಲಿನ ಎಲ್ಲ ಸಂಸ್ಥೆಗಳ ನಿವ್ವಳ ಉತ್ಪತ್ತಿಗಳ ಮೊತ್ತ ಬಲು ಮುಖ್ಯ. ಏಕೆಂದರೆ ಇದರಿಂದ ಸ್ಥೂಲವಾಗಿ ಅಲ್ಲಿನ ರಾಷ್ಟ್ರೀಯ ಉತ್ಪನ್ನಕ್ಕೆ ಕೈಗಾರಿಕೆಗಳ ಕೊಡುಗೆಯೆಷ್ಟೆಂಬುದು ಗೊತ್ತಾಗುತ್ತದೆ. ಉತ್ಪಾದನೆಯಾದ ಪ್ರತಿಯೊಂದು ಪದಾರ್ಥದ ಆರ್ಥಿಕ ವೆಚ್ಚ, ಶ್ರಮ, ಸಾಮಗ್ರಿ ಇಂಧನಗಳೇ ಮುಂತಾದ ಗ್ರಾಸಗಳ ವೆಚ್ಚಗಳ ವಿವರ-ಇವೆಲ್ಲವೂ ದೊರಕುವುದರಿಂದ ಆರ್ಥಿಕ ವಿಶ್ಲೇಷಣೆಗೆ ಇದೇ ಆಧಾರ. ನಿವ್ವಳ ಉತ್ಪತ್ತಿಗೂ ನಿಯೋಜಿತ ಬಂಡವಾಳಕ್ಕೂ ಇರುವ ಸಂಬಂಧದ ಪರಿಶೀಲನೆಯಿಂದ ಬಂಡವಾಳದ ಉತ್ಪಾದಕತೆಯೂ ನಿವ್ವಳ ಉತ್ಪತ್ತಿಗೂ ಕೂಲಿಗೂ ಇರುವ ಸಂಬಂಧದಿಂದ ಕಾರ್ಮಿಕರ ಉತ್ಪಾದಕತೆಯೂ ವ್ಯಕ್ತಪಡುತ್ತದೆ. ಒಟ್ಟು ಉತ್ಪತ್ತಿಯಲ್ಲಿ ಶ್ರಮದ ಪಾಲೆಷ್ಟೆಂಬುದನ್ನು ಒಟ್ಟು ವೇತನ ಹಾಗೂ ಕೂಲಿಗಳ ಮೊತ್ತದಿಂದ ತಿಳಿಯುವುದು ಸಾಧ್ಯ. ಉಳಿದ ಭಾಗ ಇತರ ವೆಚ್ಚಗಳಿಗೆ ಸಂಬಂಧಿಸಿದ್ದು ವ್ಯತ್ಯಾಸದ ಅಧ್ಯಯನ ಆರ್ಥಿಕವಾಗಿ ಬಲು ಮುಖ್ಯ. ಉತ್ಪಾದನೆ ಶ್ರಮಪ್ರಧಾನವೇ ಅಥವಾ ಬಂಡವಾಳ ಪ್ರಧಾನವೇ, ಕೈಗಾರಿಕೆ (ಹಾಗೂ ದೇಶ) ಆರ್ಥಿಕ ಪ್ರಗತಿಯ ದಿಕ್ಕಿನಲ್ಲಿ ಸಾಗುತ್ತಿದೆಯೇ-ಮುಂತಾದ ಸ್ವಾರಸ್ಯಕರ ಅಂಶಗಳ ಮುಸುಕು ತೆರೆದು ಮುಂದೆ ನಿಲ್ಲುತ್ತವೆ. ಪ್ರಚಲಿತ ಅನುಭೋಗಕ್ಕೆ ಒದಗುವ ಪದಾರ್ಥಗಳ ಉತ್ಪಾದನೆಯಷ್ಟು, ಹೊಸ ಹೊಸ ಬಂಡವಾಳವಾಗಿ ಪರಿವರ್ತನೆಗೊಳ್ಳುವ ಪದಾರ್ಥದ (ಉತ್ಪಾದಕ ಸರಕಿನ) ಉತ್ಪಾದನೆಯೆಷ್ಟು-ಎಂಬುದೆಲ್ಲವೂ ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ಬಲು ಉಪಯುಕ್ತ, ಅತ್ಯಂತ ಅವಶ್ಯ.

ಗುರಿ ಬದಲಾಯಿಸಿ

ಒಂದೊಂದು ಉತ್ಪಾದನ ಘಟಕಕ್ಕೆ ಸಂಬಂಧಿಸಿದ ಅಂಕಿಗಳನ್ನು ಸಂಗ್ರಹಿಸುವುದು ಆಧುನಿಕ ಗಣತಿಯ ವಿಧಾನ. ನಾನಾ ಪದಾರ್ಥಗಳ ತಲೆಕಟ್ಟುಗಳ ಅಡಿಯಲ್ಲಿ ಇವುಗಳನ್ನೆಲ್ಲ ಒಟ್ಟುಮಾಡುವುದು ಸುಲಭವಾಗುತ್ತದೆ.

ಕಾಲದ ಒಂದು ಗೊತ್ತಾದ ಬಿಂದುವಿನಲ್ಲಿದ್ದಂತೆ ಗಣನೆ ಮಾಡುವುದೇ ಉತ್ಪಾದನ ಗಣತಿಯಲ್ಲಿ ಸಾಮಾನ್ಯವಾಗಿ ಅನುಸರಿಸುವ ವಿಧಾನ. ಆದರೆ ಉತ್ಪಾದನೆಯೆಂಬುದು ಒಂದು ಅನುಸ್ಯೂತ ಪ್ರವಾಹ. ಆದ್ದರಿಂದ ಭಾರತ, ಬ್ರಿಟನ್, ಅಮೆರಿಕಗಳಂಥ ಕೆಲವು ದೇಶಗಳ ಗಣತಿಗೆ ಒಂದು ಗೊತ್ತಾದ ಕಾಲದಲ್ಲಿ ಸಂಭವಿಸಿದ ಉತ್ಪತ್ತಿಯ ಎಣಿಕೆಯೇ ಗುರಿ (ಪ್ರವಾಹ). ಆದರೆ ಉತ್ಪಾದೀ ಸಾಧನಗಳ ರಚನೆ ಹಾಗೂ ವಿತರಣೆಯ ಗಣತಿಯೇ ಐರೋಪ್ಯ ರಾಷ್ಟ್ರಗಳ ಪದ್ಧತಿ. ಉತ್ಪಾದನ ಸಂಸ್ಥೆಗಳನ್ನು ಕುರಿತ ವಿವರಗಳಿಗೆ ಈ ದೇಶದಲ್ಲಿ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ.

ಆರ್ಥಿಕ ಚಟುವಟಿಕೆಯ ಮಟ್ಟವನ್ನಳೆಯುವುದಕ್ಕೆ ಉತ್ಪಾದನೆಯ ಅಂಕಿ-ಅಂಶಗಳನ್ನು ಬಳಸುವುದು ಇಂದು ಎಲ್ಲ ಮುಂದುವರಿದ ದೇಶಗಳ ಪದ್ಧತಿ. ಆರ್ಥಿಕ ಚಟುವಟಿಕೆಗಳ ಏರಿಳಿತಗಳನ್ನು ತಡೆಗಟ್ಟಿ ಬೆಳೆವಣಿಗೆಗೆ ಉತ್ತೇಜನ ನೀಡಲು ಸರ್ಕಾರ ಕೈಗೊಳ್ಳಬೇಕಾದ ನಾನಾ ಆರ್ಥಿಕ ಕ್ರಮಗಳಿಗೆ ಈ ಅಂಕಿಗಳೇ ಆಧಾರ. ಕೈಗಾರಿಕೆ ಹಾಗೂ ವ್ಯವಸಾಯೋತ್ಪಾದನೆಯ ಸೂಚ್ಯಂಕಗಳ ರಚನೆ ಹಾಗೂ ಪ್ರಕಟನೆಗೆ ಈಚೆಗೆ ಹೆಚ್ಚು ಹೆಚ್ಚು ಗಮನ ನೀಡಲಾಗಿದೆ. *

ಉತ್ಪಾದನ ಗಣತಿ ಹಾಗೂ ರಾಷ್ಟ್ರೀಯ ವರಮಾನ : ಒಂದು ದೇಶದ ಸಮಗ್ರ ಆರ್ಥಿಕ ಪ್ರಗತಿಯ ಸೂಚಕವಾದ ರಾಷ್ಟ್ರೀಯ ವರಮಾನವನ್ನು ಅಳೆಯಲು ಬಳಸುವ ಮೂರು ಮುಖ್ಯ ವಿಧಾನಗಳಲ್ಲಿ ಗಣತಿ ವಿಧಾನವೂ ಒಂದು. ವರಮಾನ ಗಣತಿ ವಿಧಾನವೂ ಖರ್ಚು, ಬಂಡವಾಳ ನಿಯೋಜನೆ ಮತ್ತು ಉಳಿತಾಯ ಗಣತಿ ವಿಧಾನವೂ ಉಳಿದ ಎರಡು. ಈ ವಿಧಾನಗಳಲ್ಲಿ ಯಾವುದನ್ನು ಅನುಸರಿಸಬಹುದು, ಅಥವಾ ಒಂದಕ್ಕಿಂತ ಹೆಚ್ಚು ವಿಧಾನಗಳನ್ನು ಅನುಸರಿಸಬೇಕೆ ಎಂಬುದು ಒಂದು ದೇಶದ ಆರ್ಥಿಕ ಬೆಳವಣಿಗೆಯ ಮಟ್ಟ., ಅಂಕಿ-ಅಂಶಗಳ ಲಭ್ಯತೆ ಮತ್ತು ಜನಗಳ ವಿದ್ಯಾಮಟ್ಟ-ಇವೆಲ್ಲವನ್ನೂ ಅವಲಂಬಿಸಿರುತ್ತದೆ.

ಒಂದು ದೇಶದ ಜನ ಒಂದು ವರ್ಷದಲ್ಲಿ ಉತ್ಪಾದನೆ ಮಾಡಿದ ಸರಕು ಸೇವೆಗಳ ಹಣದ ಮೌಲ್ಯವೇ ರಾಷ್ಟ್ರೀಯ ವರಮಾನವೆನ್ನಬಹುದು. ಒಂದು ನಿರ್ದಿಷ್ಟ ಅವಧಿಯಲ್ಲಿ ಹೊರದೇಶಗಳಿಂದ ಬಂದ ನಿವ್ವಳ ಆದಾಯವನ್ನು ಒಳಗೊಂಡು ಒಂದು ರಾಷ್ಟ್ರದ ವಿವಿಧ ಆರ್ಥಿಕ ಕ್ಷೇತ್ರಗಳಿಂದ ಸೇರಿಸಲಾದ ಸರಕು ಸೇವೆಗಳ ಉತ್ಪಾದನೆಯ ನಿವ್ವಳ ಬೆಲೆಯ ಉತ್ಪಾದನ ಗಣತಿಯೇ ರಾಷ್ಟ್ರೀಯ ವರಮಾನದ ಲೆಕ್ಕಾಚಾರಕ್ಕೆ ಆಧಾರ. ಉತ್ಪಾದನೆಯಾದ ಸರಕು ಸೇವೆಗಳ ಮೌಲ್ಯವನ್ನು ಮಾರುಕಟ್ಟೆಯ ಬೆಲೆಯ ಲೆಕ್ಕದಲ್ಲಿ ಕಟ್ಟಿದ್ದಾದರೆ ಅದು ಮಾರುಕಟ್ಟೆಯ ಬೆಲೆಯಾಧಾರದ ರಾಷ್ಟ್ರೀಯ ವರಮಾನ. ಅದರ ಬದಲು ಉತ್ಪಾದನೆಯ ವಿವಿಧ ಅಂಗಗಳು ಪಡೆಯುವ ಬೆಲೆಗೆ ಅನುಗುಣವಾಗಿ ಮೌಲ್ಯ ನಿಷ್ಕರ್ಷೆ ಮಾಡಿದ್ದಾದರೆ ಅದು ಉತ್ಪಾದನಾಂಗಗಳ ಬೆಲೆಗಳ ರೀತಿಯ ರಾಷ್ಟ್ರೀಯ ವರಮಾನ. ಈ ರೀತಿ ಉತ್ಪಾದನ ಗಣತಿ ಮಾಡುವಾಗ ಒಂದು ದೇಶದಲ್ಲಿ ವಾಸಿಸುತ್ತಿರುವವರ ಶ್ರಮ ಮತ್ತು ಬಂಡವಾಳಗಳ ಮೂಲಕ ಆದ ಉತ್ಪಾದನೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಆದರೆ ಇಂಥವರು ಯಾರು ಎಂಬುದನ್ನು ಕೆಲವು ವೇಳೆ ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಒಬ್ಬ ವ್ಯಕ್ತಿ ಖಾಯಂ ಆಗಿ ಒಂದು ದೇಶದವನೇ ಆದರೂ ಆತ ಇನ್ನೊಂದು ದೇಶದಲ್ಲಿ ಕೆಲಸ ಮಾಡುತ್ತಿರಬಹುದು. ಆತ ಕೆಲಸ ಮಾಡುತ್ತಿರುವ ಸಂಸ್ಥೆಯ ಮಾಲೀಕ ಮೂರನೆಯ ದೇಶದವನಾಗಿರಬಹುದು. ಒಂದು ದೇಶದ ಖಾಯಂ ನಿವಾಸಿ ಯಾರು ಎಂಬುದರ ಬಗ್ಗೆ ಎಲ್ಲ ದೇಶಗಳಲ್ಲೂ ಏಕರೀತಿಯ ಅರ್ಥವಿವರಣೆಯಿಲ್ಲ.[೩]

ಅಂಕಿಅಂಶ ಬದಲಾಯಿಸಿ

ಉತ್ಪಾದನ ಗಣತಿಯ ಮೂಲಕ ರಾಷ್ಟ್ರೀಯ ವರಮಾನವನ್ನು ಅಳೆಯಬೇಕಾದರೆ ಮುಖ್ಯವಾಗಿ ವಿವಿಧ ಉತ್ಪನ್ನಗಳ ಅಂಕಿ-ಅಂಶಗಳು ಸಿಕ್ಕಬೇಕು; ಈ ಅಂಕಿ-ಅಂಶಗಳು ಆದಷ್ಟು ಖಚಿತವಾಗಿರಬೇಕು. ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಉತ್ಪಾದಕರು ಸಾಮಾನ್ಯವಾಗಿ ಅಂಕಿ-ಅಂಶ ಇಟ್ಟಿರುತ್ತಾರೆ. ಇವನ್ನು ಸಂಗ್ರಹಿಸಲು ಸಾಕಷ್ಟು ನಿಪುಣರೂ ಅಲ್ಲಿ ಇರುತ್ತಾರೆ. ರಾಷ್ಟ್ರೀಯ ವರಮಾನವನ್ನು ಅಳೆಯುವಾಗ ಉತ್ಪಾದನೆಯ ಅಥವಾ ಸೇವೆಗಳ ಮೌಲ್ಯ ಎರಡು ಸಲ ಎಣಿಕೆಗೆ ಸೇರದಂತೆ ನೋಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಬ್ರೆಡ್ಡಿನ ಉತ್ಪಾದನೆಯ ಲೆಕ್ಕ ಹಾಕುವಾಗ ಅದರಲ್ಲಿ ಅಡಕವಾಗಿರುವ ಗೋದಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು. ಒಂದು ವರ್ಷದಲ್ಲಿ ಒಂದು ಗುಂಪಿನ ಜನರಿಂದ ಉತ್ಪಾದನೆಯಾದ ಒಟ್ಟು ಉತ್ಪಾದನೆಯಲ್ಲಿ ಬೇರೆಯವರಿಂದ ಪಡೆಯಲಾದ ಉತ್ಪಾದನೆಯನ್ನು ಕಳೆದರೆ ಉಳಿಯುವುದೇ ನಿಜವಾದ ಉತ್ಪಾದನೆ. ಬ್ರೆಡ್ಡಿನಲ್ಲಿ ವಸ್ತುತಃ ಅಡಕವಾಗಿರುವ ಗೋದಿಯ ಪ್ರಮಾಣ ಎಲ್ಲರಿಗೂ ಸುಲಭವಾಗಿ ತಿಳಿಯುತ್ತದೆ. ಅದೇ ರೀತಿ ಉಣ್ಣೆಯ ಬಟ್ಟೆಯ ಉತ್ಪಾದನೆಯಲ್ಲಿ ಉಣ್ಣೆ ಸೇರಿರುವುದಾದರೂ ಆ ಬಟ್ಟೆಯ ಉತ್ಪಾದನೆಯಲ್ಲಿ ಪ್ರತಿ ವರ್ಷವೂ ಉಣ್ಣೆಯದಾರ ತೆಗೆಯುವ ಮತ್ತು ಬಟ್ಟೆ ನೇಯುವ ಯಂತ್ರಗಳ ಸವೆದು ಹೋದ ಭಾಗವೂ ಸೇರಿರುತ್ತದೆಯೆನ್ನುವುದು ಗೋಚರವಾಗುವುದಿಲ್ಲ. ಬಂಡವಾಳ ವಸ್ತುವಿನ ಸವೆತ ಸಂರಕ್ಷಣೆಗಳ ವೆಚ್ಚವನ್ನೂ ಒಟ್ಟು ಉತ್ಪಾದನೆಯಲ್ಲಿ ಕಳೆಯಬೇಕಾಗುತ್ತದೆ.

ದೇಶಾವಾರು ವಿಂಗಡನೆ ಬದಲಾಯಿಸಿ

ಅಭಿವೃದ್ಧಿ ಹೊಂದಿಲ್ಲದ ಅಥವಾ ಹೊಸದಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ರಾಷ್ಟ್ರೀಯ ವರಮಾನವನ್ನು ಉತ್ಪಾದನ ಗಣತಿಯ ವಿಧಾನದ ಮೂಲಕ ಅಳೆಯಲು ಅನೇಕ ತೊಂದರೆಗಳಿವೆ. ಮೊದಲನೆಯದಾಗಿ ಉತ್ಪಾದನೆಯ ಮೌಲ್ಯವನ್ನು ಅಳೆಯುವಾಗ ಸಾಮಾನ್ಯವಾಗಿ ದೇಶದಲ್ಲಿ ಉತ್ಪನ್ನವಾಗುವ ಸರಕು ಮತ್ತು ಸೇವೆಗಳ ಬಹುಭಾಗ ಹಣಕ್ಕೆ ಪ್ರತಿಯಾಗಿ ವಿನಿಮಯವಾಗುತ್ತದೆಂದು ಒಪ್ಪಬಹುದು. ಆದರೆ ಭಾರತದಂಥ ದೇಶದಲ್ಲಿ ಉತ್ಪಾದನೆಯಾಗುವ ಸರಕು ಸೇವೆಗಳ ಗಣನೀಯ ಪ್ರಮಾಣ ಮಾರುಕಟ್ಟೆಗೆ ಬರುವುದೇ ಇಲ್ಲ. ಈ ಭಾಗ ಉತ್ಪಾದಕರಿಂದಲೇ ಅನುಭೋಗಿಸಲ್ಪಡುತ್ತದೆ. ಅಥವಾ ಬೇರೆ ವಸ್ತು ಸೇವೆಗಳಿಗೆ ವಿನಿಮಯವಾಗುತ್ತದೆ. ಆದ್ದರಿಂದ ಇವುಗಳಿಗೆ ನಾವು ಬೆಲೆ ಕಟ್ಟಬೇಕಾಗುತ್ತದೆ. ಇದು ಸುಲಭವಲ್ಲ. ಇಂಥ ಪರಿಸ್ಥಿತಿಯಲ್ಲಿ ದೇಶದ ವರಮಾನವನ್ನು ವರ್ಗೀ ಕರಣ ಮಾಡುವಾಗ ಹಣ ಬಳಸುವ ಹಾಗೂ ಹಣ ಬಳಸದ ವಿಭಾಗಗಳೆಂದು ವರ್ಗೀ ಕರಣ ಮಾಡಬೇಕಾಗುತ್ತದೆ.[೪]

ಎರಡನೆಯದಾಗಿ ಭಾರತದಂಥ ದೇಶದಲ್ಲಿ ಅನೇಕ ಉತ್ಪಾದಕರು ಉತ್ಪಾದನೆಯ ಪ್ರಮಾಣ ಮತ್ತು ಬೆಲೆಯ ವಿಷಯದಲ್ಲಿ ಯಾವ ಖಚಿತ ಅಂದಾಜನ್ನೂ ಹೊಂದಿಲ್ಲದ್ದರಿಂದ ಉತ್ಪಾದನೆಗೆ ಬೆಲೆ ಕಟ್ಟುವುದು ಕಷ್ಟ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆರ್ಥಿಕ ಅಂಕಿ-ಅಂಶಗಳು ನೇರವಾಗಿ ಉತ್ಪಾದಕರಿಂದ ಸಂಗ್ರಹಿತವಾಗುತ್ತವೆ. ಅವರು ತಾವು ತೊಡಗಿರುವ ಆರ್ಥಿಕ ಚಟುವಟಿಕೆಗಳ ಮೂಲಕ ಆಗುವ ಉತ್ಪಾದನೆಯ ಪ್ರಮಾಣ ಮತ್ತು ಬೆಲೆಯ ಅರಿವನ್ನು ಪಡೆದಿರುತ್ತಾರೆ. ಆದರೆ ಉತ್ಪಾದಕರಿಂದ ನೇರವಾಗಿ ಉತ್ಪಾದನೆಯ ಬೆಲೆಯನ್ನು ಸಂಗ್ರಹಿಸುವಾಗ ಹಿಂದುಳಿದ ದೇಶಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕೋಟ್ಯಂತರ ಜನರನ್ನು ನೇರವಾಗಿ ಸಂದರ್ಶಿಸುವುದರಲ್ಲಿ ಆಗುವ ಅಗಾಧ ಖರ್ಚು, ಮಾಹಿತಿ ಸಂಗ್ರಹಿಸಲು ಅಗತ್ಯವಾದ ತಜ್ಞರ ಅಭಾವ, ಅತ್ಯಧಿಕ ಜನರ ನಿರಕ್ಷರತೆ, ಸ್ವಂತ ಅನುಭೋಗಕ್ಕಾಗಿಯೇ ನಡೆಯುತ್ತಿರುವ ಬಹುಪಾಲು ಉತ್ಪಾದನೆ, ಉತ್ಪಾದಕರಲ್ಲಾಗಲಿ ಅನುಭೋಗಿಗಳಲ್ಲಾಗಲಿ ತಮ್ಮ ಉತ್ಪಾದನ ಅಥವಾ ಅನುಭೋಗದ ವಿಷಯದಲ್ಲಿ ಯಾವ ಲೆಕ್ಕವನ್ನೂ ಇಡುವ ಅಭ್ಯಾಸವಿಲ್ಲದ ಸ್ಥಿತಿ-ಇವು ಮುಖ್ಯ ಸಮಸ್ಯೆಗಳು. ಇಂಥ ಸಂದರ್ಭಗಳಲ್ಲಿ ಉತ್ಪಾದನೆಯ ಬೆಲೆಯನ್ನೂ ಅಳೆಯುವಾಗ ಸ್ವಲ್ಪಮಟ್ಟಿಗೆ ಊಹೆಯ ಅಂಶವನ್ನು ಸೇರಿಸಬೇಕಾಗುತ್ತದೆ. ಅದರಲ್ಲೂ ಸಣ್ಣ ಪ್ರಮಾಣದ ಉದ್ಯಮಗಳಲ್ಲಿ ಮತ್ತು ಗೃಹೋದ್ಯಮಗಳಲ್ಲಿ ಈ ಊಹೆಯ ಪ್ರಮಾಣ ಹೆಚ್ಚು.

ಮೂರನೆಯದಾಗಿ ಪಾಶ್ಚಾತ್ಯ ದೇಶಗಳಲ್ಲಿರುವಂತೆ ಭಾರತದಲ್ಲಿ ಕಸುಬುಗಳನ್ನು ವ್ಯವಸಾಯ, ಕೈಗಾರಿಕೆ, ವ್ಯಾಪಾರ ಈ ರೀತಿ ನಿರ್ದಿಷ್ಟವಾಗಿ ವಿಂಗಡಣೆ ಮಾಡಲು ಸಾಧ್ಯವಿಲ್ಲ. ಒಂದೇ ಗುಂಪಿನವರು ವ್ಯವಸಾಯ ಕೈಗಾರಿಕೆ ವ್ಯಾಪಾರಗಳೇ ಮುಂತಾದ ಚಟುವಟಿಕೆಗಳಲ್ಲಿ ನಿರತರಾಗಿರುವ ಸಂಭವವೂ ಉಂಟು. ಉದಾಹರಣೆಗೆ, ಬೇಸಾಯಗಾರರಲ್ಲೆ ಅನೇಕರು ಪಟ್ಟಣಗಳಲ್ಲಿನ ಕೈಗಾರಿಕೆಗಳಲ್ಲೂ ಕೆಲಸ ಮಾಡಬಹುದು. ವ್ಯವಸಾಯದ ಕೆಲಸ ಇಲ್ಲದಾಗ ಸಣ್ಣ ಕೈಗಾರಿಕೆಗಳಲ್ಲೊ ಕೂಲಿ ಕೆಲಸಗಳಲ್ಲೂ ನಿರತರಾಗಬಹುದು. ಆದ್ದರಿಂದ ಕೈಗಾರಿಕಾ ಮೂಲದಿಂದ ಉತ್ಪನ್ನವಾಗುವ ವರಮಾನವನ್ನು ಅಳೆಯುವಾಗ ಆ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಕೈಗಾರಿಕಾ ಕೆಲಸದಿಂದ ಮಾತ್ರ ವರಮಾನ ಪಡೆಯುತ್ತಿದ್ದಾರೆಂದು ಹೇಳಲಾಗುವುದಿಲ್ಲ.

ನಾಲ್ಕನೆಯದಾಗಿ ಭಾರತದಂಥ ದೊಡ್ಡ ದೇಶದಲ್ಲಿ ಒಂದು ಪ್ರದೇಶದ ಪರಿಸ್ಥಿತಿ ಇನ್ನೊಂದರಲ್ಲಿರುವುದಿಲ್ಲ. ಒಂದು ಪ್ರದೇಶದಲ್ಲಿ ಸಂಗ್ರಹಿಸಲಾದ ಅಂಕಿ-ಅಂಶಗಳ ಆಧಾರದ ಮೇಲೆ ಮಾಡಬಹುದಾದ ನಿರ್ಧಾರವನ್ನು ಬೇರೊಂದು ಪ್ರದೇಶಕ್ಕೆ ಅನ್ವಯಿಸಲು ಸಾಧ್ಯವಿಲ್ಲ. ಆದ್ದರಿಂದ ರಾಷ್ಟ್ರೀಯ ವರಮಾನದ ಅಂದಾಜು ಮಾಡುವಾಗ ಸಂಗ್ರಹಿಸುವ ಅಂಕಿ-ಅಂಶಗಳ ಸ್ವರೂಪದ ಸ್ಪಷ್ಟ ಕಲ್ಪನೆ ಇರುವುದಗತ್ಯ.

ಈ ಎಲ್ಲ ತೊಂದರೆಗಳ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಅಂಕಿ-ಅಂಶಗಳನ್ನು ಸಂಗ್ರಹಿಸುವುದೇ ದೊಡ್ಡ ಸಮಸ್ಯೆ. ವ್ಯವಸಾಯ ಕ್ಷೇತ್ರಗಳಲ್ಲಿ ಉತ್ಪನ್ನ ಬೆಲೆ ಮತ್ತು ಉತ್ಪಾದನೆಯ ಖರ್ಚುಗಳ ವಿಷಯದಲ್ಲಿ ಇರುವ ಅಂಕಿ-ಅಂಶಗಳು ಸಾಮಾನ್ಯವಾಗಿ ಕಾರ್ಖಾನೆಗಳಿಗೆ ಮಾತ್ರ ಸೀಮಿತವಾಗಿದೆ. ಸರ್ಕಾರದ ಕಾರ್ಯಗಳ ಬಗ್ಗೆ ಇರುವ ಅಂಕಿ-ಅಂಶಗಳು ವಿಪುಲವಾಗಿದ್ದರೂ ಅವನ್ನು ನಿರ್ದಿಷ್ಟವಾದ ಆರ್ಥಿಕ ವಿಂಗಡಣೆಗೆ ಒಳಪಡಿಸುವುದು ಕಷ್ಟ. ಕೆಲಸದಲ್ಲಿ ನಿರತರಾಗಿರುವವರ ಅಂಕಿ-ಅಂಶಗಳು ನಿಖರವಾಗಿಲ್ಲ. ಅಂತರರಾಷ್ಟ್ರೀಯ ಲೆಕ್ಕದಲ್ಲೂ ಅಂಕಿ-ಅಂಶಗಳು ಪೂರ್ಣವಾಗಿ ಖಚಿತವಾಗಿರುವುದೆಂದು ಹೇಳಲು ಸಾಧ್ಯವಿಲ್ಲ.

ಅಪೂರ್ಣತೆ ಬದಲಾಯಿಸಿ

ಈ ತೊಂದರೆಗಳ ಜೊತೆಗೆ ಅನೇಕ ಆರ್ಥಿಕ ವಿಭಾಗಗಳಲ್ಲಿ ಅಂಕಿ-ಅಂಶಗಳು ದೊರಕುವುದಿಲ್ಲ. ವ್ಯವಸಾಯದಲ್ಲಿ ಉತ್ಪಾದನೆಯ ಖರ್ಚಿನ ರಚನೆ, ವ್ಯವಸಾಯದಲ್ಲಿ ನಿರತರಾಗಿರುವವರ ಅನುಭೋಗಿ ವೆಚ್ಚ ಮತ್ತು ಅವರ ಉಳಿತಾಯ-ಇವುಗಳ ಬಗ್ಗೆ ನಿಖರವಾದ ಅಂಕಿ-ಅಂಶಗಳು ಸಿಕ್ಕುವುದಿಲ್ಲ. ಪಟ್ಟಣದಲ್ಲಿರುವ ಜನರಲ್ಲೂ ವಿವರವಾದ ಅನುಭೋಗಿ ಖರ್ಚು ಮತ್ತು ಉಳಿತಾಯದ ಬಗ್ಗೆ ಅಂಕಿ-ಅಂಶಗಳು ಸಿಗುವುದಿಲ್ಲ. ವಿವಿಧ ವರ್ಗಗಳಲ್ಲಿ ಯಾವ ರೀತಿಯಲ್ಲಿ ಆದಾಯ ಹಂಚಿಕೆಯಾಗಿದೆ ಎಂಬ ವಿಷಯದಲ್ಲಿ ಖಚಿತವಾದ ಅಂಕಿ-ಅಂಶಗಳ ಅಭಾವವಿದೆ. ಮನೆಗೆಲಸ, ಗ್ರಾಮಾಂತರ ಸಾರಿಗೆ, ಬಂಡವಾಳ ಶೇಖರಣೆ-ಇವುಗಳ ಬಗ್ಗೆ ಸರಿಯಾದ ಅಂಕಿ-ಅಂಶಗಳು ಸಿಗುವುದಿಲ್ಲ. ಒಟ್ಟಿನಲ್ಲಿ ಅಂಕಿ-ಅಂಶಗಳ ಅಭಾವ ಅಥವಾ ಅಪೂರ್ಣತೆಯ ಕಾರಣದಿಂದ ಉತ್ಪಾದನ ಗಣತಿ ಬಲು ಕಷ್ಟದ ಕೆಲಸ.[೫]

ವರಮಾನ ಬದಲಾಯಿಸಿ

ಒಂದು ದೇಶದ ರಾಷ್ಟ್ರೀಯ ವರಮಾನವನ್ನು ಅಳೆಯುವಾಗ ಉತ್ಪಾದನ ಗಣತಿ ಹಾಗೂ ವರಮಾನ ಗಣತಿ, ಈ ಎರಡು ವಿಧಾನಗಳನ್ನೂ ಉಪಯೋಗಿಸಬಹುದು. ಭಾರತದಲ್ಲೂ ರಾಷ್ಟ್ರೀಯ ವರಮಾನವನ್ನು ಅಳೆಯುವಾಗ ಈ ಎರಡು ವಿಧಾನಗಳಲ್ಲಿ ಯಾವುದೊಂದನ್ನೂ ಪೂರ್ತಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ಅನ್ವಯಿಸಲು ಸಾಧ್ಯವಿಲ್ಲ. ಇವೆರಡನ್ನೂ ಹೊಂದಿಸಿ ಬಳಸಬೇಕಾಗುತ್ತದೆ.

ಗಣತಿಯ ಅಂಕಿ-ಅಂಶಗಳ ಅಭಾವವಿರುವ ಕಡೆ ಅಥವಾ ಅಪೂರ್ಣವಾಗಿರುವ ಕಡೆ ಊಹೆಯ ನೆರವು ಪಡೆಯಬೇಕಾಗುತ್ತದೆ. ಇದರಿಂದ ರಾಷ್ಟ್ರೀಯ ವರಮಾನದ ಅಂದಾಜುಗಳು ಪೂರ್ಣವಾಗಿ ಸರಿಯಾಗಿರುತ್ತವೆಂದು ಹೇಳಲಾಗುವುದಿಲ್ಲ. ಉತ್ಪಾದನ ಅಂಕಿ-ಅಂಶಗಳು ಸರಿಯಾಗಿ ದೊರೆಯುವ ಪಾಶ್ಚಾತ್ಯ ದೇಶಗಳಲ್ಲೂ ರಾಷ್ಟ್ರೀಯ ವರಮಾನದ ಅಂದಾಜು ಪೂರ್ಣವಾಗಿ ಸರಿಯಾಗಿರುವುದಿಲ್ಲ.

ಈಗ ಭಾರತದಲ್ಲಿ ಪ್ರತಿಯೊಂದು ರಾಜ್ಯದಲ್ಲೂ ಅಂಕಿ-ಅಂಶಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಕೇಂದ್ರೀಯ ಅಂಕಿ-ಅಂಶ ಸಂಸ್ಥೆಯ ಒಂದು ಭಾಗವಾಗಿ ರಾಷ್ಟ್ರೀಯ ವರಮಾನ ಅಂದಾಜು ಘಟಕ ಕೆಲಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಂಕಿ-ಅಂಶ ಸಂಗ್ರಹಣಾಧಿಕಾರಿಗಳ ಸಭೆ ಆಗಾಗ ಸೇರಿ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮಗಳ ಫಲವಾಗಿ ಸಂಗ್ರಹಿಸಿದ ಅಂಕಿ-ಅಂಶಗಳ ಗುಣ ಮತ್ತು ವ್ಯಾಪಕತೆ ಹೆಚ್ಚುತ್ತಿದೆ. ಆದ್ದರಿಂದ ಉತ್ಪಾದನ ಗಣತಿಯ ವಿಧಾನದಿಂದ ಹೆಚ್ಚು ಹೆಚ್ಚು ನಿಖರವಾಗಿ ರಾಷ್ಟ್ರೀಯ ವರಮಾನದ ಅಂದಾಜು ಮಾಡುವುದು ಸಾಧ್ಯವಾಗಿದೆ.

[೬]


ಉಲ್ಲೇಖಗಳು ಬದಲಾಯಿಸಿ

  1. https://discovery.nationalarchives.gov.uk/details/r/C18672
  2. https://www.jstor.org/stable/2341146
  3. https://www.tandfonline.com/doi/pdf/10.1080/02664767900000007
  4. https://www.census.gov/econ/manufacturing.html
  5. http://censusindia.gov.in/Census_And_You/economic_activity.aspx
  6. https://www.researchgate.net/publication/23536375_100_Years_of_the_Census_of_Production_in_the_UK