ಉತ್ನೂರು: ಆಂಧ್ರಪ್ರದೇಶ ರಾಜ್ಯದ ಮೆಹಬೂಬ್ನಗರ ಜಿಲ್ಲೆಯಲ್ಲಿರುವ ನವಶಿಲಾ ಯುಗದ ಬೂದಿದಿಬ್ಬ. ಧಾರವಾಡ ಶಿಲಾಶ್ರೇಣಿಯ ಕೊನೆಯ ಭಾಗದಲ್ಲಿರುವ ಈ ಗ್ರಾಮದ ವಾಯವ್ಯದಲ್ಲಿ 60 ಚ.ಮೀ ಮತ್ತು 1-3 ಮೀ ಎತ್ತರವಿರುವ ಒಂದು ಬೂದಿ ದಿಬ್ಬವಿದೆ. ಹೈದರಾಬಾದಿನ ಭೂವಿಜ್ಞಾನ ಸರ್ವೇಕ್ಷಣ ಇಲಾಖೆ ಮೊದಲ ಬಾರಿಗೆ ತನ್ನ ನಿಯತಕಾಲಿಕೆಯಲ್ಲಿ ಇದನ್ನು ಪ್ರಕಟಿಸಿತು. ಬೂದಿದಿಬ್ಬದ ಹಲವು ಭಾಗಗಳು ನಾಶವಾಗಿದ್ದು, ಆ ಭಾಗಗಳಲ್ಲಿ ಕಪ್ಪು ಮತ್ತು ಕೆಂಪು, ಆದಿಚಾರಿತ್ರಿಕ ಕಾಲದ ಚಿತ್ರಿತ ಹಾಗೂ ಇತರ ಮಣ್ಪಾತ್ರೆಗಳು ದೊರಕಿದ್ದವು. ಬೂದಿದಿಬ್ಬದ ಸೃಷ್ಟಿ, ಕಾಲ, ಸೃಷ್ಟಿಯಾದ ಬಗೆ, ಬೂದಿಕಿಟ್ಟ ಮತ್ತು ದಿಬ್ಬದಲ್ಲಿಯ ವಸ್ತು ಅವಶೇಷಗಳ ಸಾಂಸ್ಕೃತಿಕ ಮಹತ್ತ್ವವನ್ನು ತಿಳಿಯಲು ಅಲ್ಚಿನ್ 1957ರಲ್ಲಿ ದಿಬ್ಬದ ಕೆಲವು ಭಾಗಗಳಲ್ಲಿ ಉತ್ಖನನ ಕೈಗೊಂಡ. 12 ಪದರಗಳನ್ನು ಗುರುತಿಸಲಾಯಿತು. ಸುಟ್ಟ ಸಗಣಿಯ ಬೂದಿ ಮತ್ತು ಕಂದುಬಣ್ಣದ ಜೇಡಿಮಣ್ಣಿನ ಪದರುಗಳು ಒಂದರ ತರುವಾಯ ಇನ್ನೊಂದರಂತೆ ಅನುಕ್ರಮವಾಗಿ ಕಂಡುಬಂದವು. ಜಾನುವಾರುಗಳ ಕೊಟ್ಟಿಗೆಯ ಅವಶೇಷ ಮತ್ತು ಗೊರಸಿನ ಪಡಿಯಚ್ಚು ಸಹ ದೊರಕಿವೆ. 1ನೆಯ ಹಂತದಲ್ಲಿ ಕೊಟ್ಟಿಗೆಯ ಸುತ್ತಲೂ ಮುಳ್ಳುಬೇಲಿಯ ಕುರುಹುಗಳೊಡನೆ ನೆಲದಲ್ಲಿ ಮೂಡಿದ ಎತ್ತಿನ ಕಾಲಿನ ಗೊರಸಿನ ಪಡಿಯಚ್ಚು ಒಂದು ಉತ್ಖನನದ ಗುಂಡಿಯಲ್ಲಿ ಕಂಡುಬಂದಿತು. ಎತ್ತಿನ ಎಲುಬುಗಳು ಮತ್ತು ಮಣ್ಣಿನ ಪಾತ್ರೆಯ ಚೂರುಗಳು ಕಂಡುಬಂದಿವೆ. ಈ ಹಂತದಲ್ಲಿ ಇದ್ದ ಜಾಗದಲ್ಲಿಯೇ ಸಗಣಿಯನ್ನು ಸುಟ್ಟಿರುವುದು ಕಂಡುಬಂದಿದೆ. ಒಂದು ಗುಂಡಿಯಲ್ಲಿ ಶಿಶುವಿನ ಒಂದು ಶವಕುಣಿ ದೊರಕಿದೆ. 2ನೆಯ ಹಂತದಲ್ಲಿ ಮತ್ತೊಂದು ಕೊಟ್ಟಿಗೆ, ಬೂದಿಯ ಗುಪ್ಪೆ, ಮಣ್ಪಾತ್ರೆಯ ಚೂರುಗಳು, ಕಲ್ಲಿನ ಉಪಕರಣಗಳು, ಎತ್ತಿನ ಎಲುಬುಗಳು ಹಾಗೂ ಇನ್ನಿತರ ಅವಶೇಷಗಳು ದೊರಕಿವೆ. 3ನೆಯ ಹಂತದಲ್ಲಿ ಮೇಲೆ ಉಲ್ಲೇಖಿಸಿದ ಮಾದರಿಯ ದನದ ಕೊಟ್ಟಿಗೆಗಳು, ಕಲ್ಲಿನಿಂದ ನಿರ್ಮಿಸಿದ ಬೇಲಿಗಳು ಮತ್ತು ಮಾನವರ ವಾಸ್ತವ್ಯದ ಕುರುಹುಗಳು ಹಾಗೂ ಆಗಾಗ್ಗೆ ಸಗಣಿಯನ್ನು ಸುಟ್ಟಿರುವ ಲಕ್ಷಣಗಳಿವೆ. 4ನೆಯ ಹಂತದಲ್ಲಿ ಇಂತಹ ಬೂದಿಕಿಟ್ಟಗಳನ್ನು ಗೋಡೆಯ ಬದಿಗೆ ಸಮನಾಗಿ ಹರಡಿರು ವಂತೆಯೂ ಮತ್ತು ಗುಪ್ಪೆಯಲ್ಲಿರುವಂತೆಯೂ ಕಂಡುಬಂದಿದೆ. 5ನೆಯ ಹಂತದಲ್ಲಿ ಈ ನೆಲೆಯನ್ನು ಕಬ್ಬಿಣಯುಗದ ಮತ್ತು ಆದಿಚಾರಿತ್ರಿಕ ಕಾಲದ ಜನರು ತ್ಯಜಿಸಿ ಮತ್ತೆ ಬಂದು ನೆಲೆಸಿರುವುದನ್ನು ಇವರ ಕಾಲದ ಮಣ್ಣಿನ ಪಾತ್ರೆಗಳಿಂದ ಕಂಡುಕೊಳ್ಳಲಾಗಿದೆ. ಒಟ್ಟಾರೆಯಾಗಿ ಇಲ್ಲಿ 5 ಬಾರಿ ವ್ಯವಸ್ಥಿತವಾಗಿ ಸಗಣಿಯ ದಿಬ್ಬವನ್ನು ಸುಡಲಾಗಿದೆ. ಮಾನವ ವಾಸ್ತವ್ಯದ ಅವಶೇಷಗಳು ಬೂದಿ ಪದರಗಳಲ್ಲಿ ದೊರಕಿಲ್ಲವಾದರೂ ನವಶಿಲಾಯುಗದ ಬೂದು ಬಣ್ಣದ ಮಡಕೆ ಚೂರುಗಳು, ಇದ್ದಿಲು ಮತ್ತು ಎತ್ತಿನ ಎಲುಬುಗಳು ದಿಬ್ಬದ ಹೊರಭಾಗಗಳಲ್ಲಿ ಕಂಡುಬಂದಿವೆ. ಒಟ್ಟಾರೆ ಇವು 1-4ನೆಯ ಹಂತಗಳಿಗೆ ಸೇರಿದವು.

ನವಶಿಲಾಯುಗ ಕಾಲದ ಬಹುತೇಕ ಮಣ್ಪಾತ್ರೆಗಳನ್ನು ಹೆಚ್ಚಾಗಿ ಕೈಯಿಂದ ತಯಾರಿಸಲಾಗಿದೆ. ಇವು ಬೂದು, ಕಪ್ಪು, ಬಿಸ್ಕತ್, ಕಂದು, ಚಾಕೊಲೇಟ್ ಮುಂತಾದ ವಿವಿಧ ಬಣ್ಣಗಳ ಮಣ್ಪಾತ್ರೆಗಳಾಗಿವೆ. ಕೆಲವು ಮಣ್ಪಾತ್ರೆಗಳನ್ನು ಸುಟ್ಟ ಅನಂತರ ಕಾವಿವರ್ಣವನ್ನು ಪಾತ್ರೆಯ ಅಂಚಿನಲ್ಲಿ ಎಳೆಯಾಗಿ ಹಚ್ಚಿರುವುದು ಕಂಡುಬಂದಿದೆ. ಗೀರುಚಿತ್ರ ಅಲಂಕರಣೆಗಳು ಕೆಲವು ಪಾತ್ರೆಗಳಲ್ಲಿವೆ. ಮಣ್ಪಾತ್ರೆ ಪ್ರಕಾರಗಳು ಸೀಮಿತವಾಗಿವೆ. ಹೊರಚಾಚಿದ ಅಂಚಿನ ಹೂಜಿಗಳು, ಬೋಗುಣಿಗಳು, ಚಕಮಕಿ ಕಲ್ಲಿನ ಅಲಗುಗಳು, ಅರ್ಧಚಂದ್ರಾಕೃತಿ, ಉಂಟೆಗಲ್ಲು ಮತ್ತು ಚಕ್ಕೆಗಳು ದೊರಕಿವೆ. ಬೂದುಬಣ್ಣದ ನೀಸ್ ಶಿಲೆಯ ಕೊಡಲಿ ಮತ್ತು ಹಸುರು ಶಿಸ್ತ್ ಶಿಲೆಯ ಕೆತ್ತಿದ ಮತ್ತು ನಯಗೊಳಿಸಿದ ಶಿಲೋಪಕರಣ ಸಹ ಪತ್ತೆಯಾಗಿವೆ. ಆದಿಕಬ್ಬಿಣ ಮತ್ತು ಆದಿಚಾರಿತ್ರಿಕ ಹಂತದಲ್ಲಿ ದೊರಕಿರುವ ಬಹುತೇಕ ಮಣ್ಪಾತ್ರೆಗಳು ಚಕ್ರದಿಂದ ತಯಾರಿಸಿದ ಕಡುಕೆಂಪು ಅಥವಾ ಮಾಸಿದ ಕೆಂಪು ವರ್ಣದ್ದಾಗಿವೆ. ಆಳ ಬೋಗುಣಿಗಳು, ತಟ್ಟೆಗಳು, ಕಪ್ಪು ಮತ್ತು ಕೆಂಪು ಬಣ್ಣದ ಟ್ಯೂಲಿಪ್ ಹೂವಿನಾಕಾರದ ಬೋಗುಣಿ, ಅಂಚಿರುವ ಬೋಗುಣಿ ಮತ್ತು ಮುಚ್ಚಳಗಳು ಮುಂತಾದ ಪ್ರಕಾರಗಳಿವೆ. ಉತ್ಖನನ ಗುಂಡಿಯ 9ನೆಯ ಪದರದಲ್ಲಿ ಶಿಶುವಿನ ಒಂದು ಸಮಾಧಿ ದೊರೆತಿದೆ. ಪಕ್ಕೆಲುಬುಗಳು, ಕಾಲಿನ ಮೂಳೆ ಮತ್ತು ತಲೆಬುರುಡೆಯ ಭಾಗಗಳು ಸಂಪೂರ್ಣವಾಗಿ ನುಜ್ಜಗುಜ್ಜಾಗಿರುವುದರಿಂದ ಇದು ನವಜಾತ ಶಿಶುವಿನ ಅಸ್ಥಿಭಾಗಗಳೆಂದು ಊಹಿಸಲಾಗಿದೆ. ಪ್ರಾಣಿ ಅವಶೇಷಗಳು ಬಹುಮಟ್ಟಿಗೆ ಎತ್ತು, ಜಿಂಕೆ ಮತ್ತು ಮೇಕೆಗಳದ್ದಾಗಿವೆ. 5ನೆಯ ಹಂತ ಇಂಗಾಲ-14 ತಂತ್ರದಿಂದ ಪ್ರ.ಶ.ಪು. 2295±155 ಅವಧಿಯದೆಂದು ಪರಿಗಣಿಸ ಲಾಗಿದೆ. ಸಾಪೇಕ್ಷವಾಗಿ 4ನೆಯ ಹಂತವನ್ನು ಪ್ರ.ಶ.ಪು. 1250 ಎಂದು ತೀರ್ಮಾನಿಸಲಾಗಿದೆ. ರಾಯಚೂರು ಜಿಲ್ಲೆಯ ದೋಆಬ್ ಪ್ರದೇಶದಲ್ಲಿ ಕಂಡುಬರುವ ಆದಿ ನವಶಿಲಾಯುಗದ ಕಾಲದ ಜನರು ಸೆಗಣಿ ದಿಬ್ಬಗಳನ್ನು ನಿಗದಿತ ಕಾಲಾವಧಿಗಳಲ್ಲಿ ಸುಡುತ್ತಿದ್ದರು. ಇದರಿಂದ ಬೂದಿದಿಬ್ಬಗಳ ರಚನೆಯಾಗುತ್ತಿತ್ತು. ಇದು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ್ದು ಹೊಸ ಬೂದಿದಿಬ್ಬಗಳಿಗೆ ಎಡೆ ಮಾಡಿಕೊಡುತ್ತಿತ್ತು. ಹೋಳಿ ಮತ್ತು ದೀಪಾವಳಿ ಹಬ್ಬಗಳ ಆಚರಣೆಯ ಸಂದರ್ಭಗಳಲ್ಲಿ ಸಗಣಿಯನ್ನು ಸಾಂಕೇತಿಕವಾಗಿ ಸುಡುವ ಧಾರ್ಮಿಕ ಪದ್ಧತಿ ಇಂದಿಗೂ ಈ ಭಾಗದಲ್ಲಿ ಉಳಿದುಬಂದಿದೆ.

"https://kn.wikipedia.org/w/index.php?title=ಉತ್ನೂರು&oldid=715503" ಇಂದ ಪಡೆಯಲ್ಪಟ್ಟಿದೆ