ಉತ್ತರ ಅಮೆರಿಕದ ಪುರಾತತ್ವ

ಉತ್ತರ ಅಮೆರಿಕದ ಪುರಾತತ್ವ ಇದು ಉತ್ತರ ಅಮೆರಿಕ ಖಂಡದ ಪುರಾತತ್ವದ ಬಗ್ಗೆ ನಡೆಸಿದ ಅಧ್ಯಯನ.

ಹಿನ್ನೆಲೆ

ಬದಲಾಯಿಸಿ

1936ರಲ್ಲಿ ಪ್ರಾಕ್ತನ ಶಾಸ್ತ್ರಜ್ಞರು ನ್ಯೂ ಮೆಕ್ಸಿಕೋ ಪ್ರಾಂತ್ಯದ ಫಲ್ಸಮ್ ಎಂಬಲ್ಲಿ ಆಳಿದ ಕಾಡೆಮ್ಮೆಗಳ ಅವಶೇಷಗಳೊಂದಿಗೆ ಕಲ್ಲಿನ ಆಯುಧಗಳನ್ನು ಕಂಡುಹಿಡಿಯುವವರೆಗೂ ಅಮೆರಿಕದಲ್ಲಿ ಮಾನವ ಕೇವಲ ಕೆಲವು ಸಹಸ್ರ ವರ್ಷಗಳಿಂದ ಮಾತ್ರ ವಾಸಿಸುತ್ತಿದ್ದನೆಂದು ನಂಬಲಾಗಿತ್ತು. ಈ ಸಂಶೋಧನೆಯಿಂದ ದೊರಕಿದ ಮಾಹಿತಿಗಳು ಅತ್ಯಂತ ನೂತನ (ಪ್ಲಸ್ಟೊಸೀನ್) ಯುಗದ ಅಂತ್ಯಕಾಲದಿಂದ ಮಾನವರು ಇಲ್ಲಿ ಬೇಟೆಯಾಡಿ ಆಹಾರ ಸಂಗ್ರಹಿಸುವ ಹಂತದಲ್ಲಿದ್ದರೆಂದೂ ಮುಂದೆ ಕೆಲವರು ಏಷ್ಯದ ಸೈಬೀರಿಯದಿಂದ ಬೇರಿಂಗ್ ಜಲಸಂಧಿ ಮತ್ತು ಅಲಾಸ್ಕ ಮಾರ್ಗವಾಗಿ ಅಮೆರಿಕಕ್ಕೆ ಬಂದರೆಂದೂ ನಿರೂಪಿಸಿದೆ. ಆ ವೇಳೆಗೆ ಯೂರೋಷ್ಯದಲ್ಲಿ ಆಧುನಿಕ ಮಾನವ (ಹೋಮೋಸೇಷಿಯನ್) ನೆಲೆಸಿದ್ದು ಪೂರ್ವಶಿಲಾಯುಗದ ಅಂತ್ಯಕಾಲದಲ್ಲಿ ಮುಂದುವರಿದಿದ್ದ ಸಂಸ್ಕøತಿಯನ್ನನುಸರಿಸುತ್ತಿದ್ದುದ್ದರಿಂದ ಉತ್ತರ ಅಮೆರಿಕದಲ್ಲೂ ಮೊದಲಿನ ಕೈಗೊಡಲಿಯ ಅಥವಾ ತತ್ಸಮಕಾಲದ ಇತರ ಸಂಸ್ಕøತಿ ಕಂಡುಬರದಿರುವುದು ಸಹಜವಾಗಿದೆ. ಏಷ್ಯ, ಅಮೆರಿಕ ಖಂಡಗಳ ಮಧ್ಯೆ ಇರುವ ಬೆರಿಂಗ್ ಜಲಸಂಧಿಯ ಅಗಲ 56ಮೈಲಿ. ಹಿಮಯುಗದಲ್ಲಿ ಸಮುದ್ರಮಟ್ಟ ತಗ್ಗಿದಾಗ ಇವುಗಳ ಮಧ್ಯೆ ಭೂಸೇತುವೆ ಏರ್ಪಟ್ಟು ಏಷ್ಯದ ಮಾನವನ ಮತ್ತು ಪ್ರಾಣಿಗಳ ಸಂತತಿಗಳು ಈ ಹೊಸ ಭೂ ಭಾಗವನ್ನು ಪ್ರವೇಶಿಸಿರಬಹುದೆಂದು ತಿಳಿದು ಬಂದಿದೆ.[]

ಪ್ರಾಚೀನ ಕಾಲ

ಬದಲಾಯಿಸಿ

ಉತ್ತರ ಅಮೆರಿಕದಲ್ಲಿತ್ತೆಂದು ಈವರೆಗೆ ತಿಳಿದುಬಂದಿರುವ ಅತ್ಯಂತ ಪ್ರಾಚೀನ ಸಂಸ್ಕøತಿಯ ಜನರು ಆಹಾರ ಸಂಗ್ರಹಣೆಯ ಹಂತದಲ್ಲಿದ್ದವರು. ಇವರು ಚಕಮಕಿಕಲ್ಲಿನ ತುಂಡು ಕತ್ತಿಗಳನ್ನೂ ಬರೆಯುವ ಆಯುಧಗಳನ್ನೂ ಚಾಕು ಮೊನೆಗಳನ್ನೂ ಬಳಸುತ್ತಿದ್ದರು. ಆ ಸಂಸ್ಕøತಿಯ ಮಾಹಿತಿಗಳು ನವಾಡದ ತ್ಯುಲಿಸ್ಪ್ರಿಂಗ್ ಮತ್ತು ಟೆಕ್ಸಾಸಿನ ಫ್ರೀಸೆನ್‍ಹ್ಯಾನ್ ಗುಹೆಯಲ್ಲಿ ಅತ್ಯಂತ ನೂತನ ಯುಗದ ಪ್ರಾಣಿಗಳ ಅವಶೇಷಗಳೊಂದಿಗೆ ದೊರಕಿವೆ. ಈ ಆಯುಧಗಳು ಯಾವುದೇ ನಿರ್ದಿಷ್ಟ ಉಪಯೋಗಕ್ಕೂ ಮಾಡಿದವುಗಳಾಗಿರಲಿಲ್ಲ.

ಆನಂತರ ವಿಸ್ಕಾನ್ಸಿನ್ ಹಿಮಯುಗ ಕಾಲದಲ್ಲಿ ಉತ್ತರ ಅಮೆರಿಕದ ಆದಿಮಾನವರು ದೊಡ್ಡ ಪ್ರಾಣಿಗಳ ಬೇಟೆಯನ್ನು ಮುಖ್ಯ ಕಸಬನ್ನಾಗಿ ಮಾಡಿಕೊಂಡು ಹಿಮಯುಗದ ಆನೆ, ಒಂಟೆ ಮತ್ತು ಕಾಡುಕೋಣಗಳನ್ನು ಕೊಂದು ಜೀವಿಸುತ್ತಿದ್ದರು. ಆ ಜನರ ಆಯುಧಗಳಲ್ಲಿ ವಿಶಿಷ್ಟವಾದುವೆಂದರೆ 2-3 ಅಂಗುಲ ಉದ್ದದ ಈಟಿಯಾಕಾರದಲ್ಲಿದ್ದು ಮುಂಚಾಚಿಕೊಂಡಿರುತ್ತಿದ್ದ ಮೊನೆಗಳು ಮತ್ತು ಒರೆಯುವ ಆಯುಧಗಳು. ಕೊಲರ್ಯಾಡೊ, ಟೆಕ್ಸಾಸ್ ಮತ್ತು ನ್ಯೂ ಮೆಕ್ಸಿಕೋ ಪ್ರದೇಶಗಳಲ್ಲಿ ಬಹುವಾಗಿ ದೊರಕಿರುವ ಈ ಅವಶೇಷಗಳು ಸಾಂಡಿಯ ಗುಹೆಯಲ್ಲಿ ವಿಶೇಷವಾಗಿರುವುದರಿಂದ ಈ ಸಂಸ್ಕøತಿಯನ್ನು ಸಾಂಡಿಯ ಸಂಸ್ಕøತಿಯೆಂದೂ ಈ ಮೊನೆಗಳನ್ನು ಸಾಂಡಿಯ ಮೊನೆಗಳೆಂದೂ ಕರೆಯಲಾಗಿದೆ. ಈ ಸಂಸ್ಕøತಿ ಬಹುಶಃ ಕ್ರಿ.ಪೂ. 15,000 ವರ್ಷಗಳಷ್ಟು ಹಳೆಯದು.[]

ಅನಂತರದ ಸಂಸ್ಕøತಿಗಳಲ್ಲಿ ಕ್ಲೋವಿಸ್ ಮೊನೆಗಳು ವಿಶಿಷ್ಟವಾಗಿರುವ ಕ್ಲೋವೀಸ್ ಸಂಸ್ಕøತಿಯ ಅವಶೇಷಗಳು ರಾಕೀ ಪರ್ವತದ ಪೂರ್ವದಲ್ಲಿ ಇಲ್ಲ ಪ್ರದೇಶಗಳಲ್ಲೂ ಮೈದಾನ ಪ್ರದೇಶಗಳಲ್ಲೂ ಕಂಡು ಬಂದಿವೆ. ಈಟಿಯಾಕಾರದ ಈ ಮೊನೆಗಳ ಉದ್ದ 3" ಅಥವಾ ಅದಕ್ಕೂ ಹೆಚ್ಚು.. ಇವುಗಳ ಪಾಶ್ರ್ವಗಳೆರಡೂ ಸಮಾನಾಂತರವಾಗಿಯೋ ಅಲ್ಪಸ್ವಲ್ಪ ಬಾಗಿದಂತೆಯೂ ಇರುತ್ತಿದ್ದುವು. ಈ ಸಂಸ್ಕøತಿಯ ಕಾಲವನ್ನು ನಿರ್ಣಯಿಸುವುದಾಗಿಲ್ಲ. ಆದರೆ ಇದರ ಆನಂದರದ ಫಾಲ್ಸಮ್ ಸಂಸ್ಕøತಿ ಸುಮಾರು 10.000 ವರ್ಷ ಹಳತೆಂದು ಇಂಗಾಲ-14 ಕಾಲನಿರ್ಧರಣ ರೀತಿಯಿಂದ ತಿಳಿದುಬಂದಿರುವುದರಿಂದ ಈ ಸಂಸ್ಕøತಿ ಅದಕ್ಕೂ ಹಳತೆಂದು ಖಂಡಿತವಾಗಿ ಹೇಳಬಹುದು.[]

ಫಾಲ್ಸಮ್ ಸಂಸ್ಕøತಿ ಉತ್ತರ ಅಮೆರಿಕದ ಪ್ರಾಕ್ತನ ಸಂಸ್ಕøತಿಗಳಲ್ಲೆಲ್ಲ ಹೆಚ್ಚು ಪ್ರಸಿದ್ಧ. ನ್ಯೂ ಮೆಕ್ಸಿಕೋದಲ್ಲಿರುವ ಈ ನೆಲೆಯಲ್ಲಿನ ಅವಶೇಷಳ ಪೈಕಿ ಈಟಿಯಾಕಾರದ ಸುಂದರ ಮೊನೆಗಳು ಸಿಕ್ಕಿವೆ. ಈ ಮೊನೆಗಳ ಅಡಿಭಾಗ ಅರ್ಧನಿಮ್ನ ರೇಖೆ (ಕಾನ್‍ಕೇವ್) ಅಂದರೆ ಆಚೀಚೆ ಕಿವಿಯನ್ನು ಹೋಲುವ ಉಬ್ಬು, ಇವುಗಳ ಉದ್ದ ಸುಮಾರು 2". ಇವುಗಳ ಉದ್ದಕ್ಕೂ ಅರೆಗೊಳವೆಯಾಕಾರದ ತಗ್ಗುಗಳಿರುವುದರಿಂದ ನೋಡಲು ಹೆಚ್ಚು ಸುಂದರ. ಬೇಟೆಯ ಭರ್ಜಿ ಮೊನೆಗಳಾಗಿ ಇವುಗಳ ಉಪಯೋಗ. ಅಳಿದುಹೋದ ಪ್ಲಿಸ್ಟೊಸೀನ್ ಯುಗದ ಪ್ರಾಣಿಗಳ ಅವಶೇಷಗಳೊಂದಿಗೆ ದೊರಕಿರುವುದರಿಂದಲೂ ಇಂಗಾಲ-14 ರೀತಿಯಿಂದ ಕಾಲನಿರ್ಣಯ ಮಾಡಿರುವುದರಿಂದಲೂ ಈ ಸಂಸ್ಕøತಿ ಕ್ರಿ.ಪೂ. 10,000ದ್ದು ಅಥವಾ ಇನ್ನೂ ಮೊದಲಿನದು ಎಂಬುದು ನಿಸ್ಸಂದೇಹ. ಈ ಸಂಸ್ಕøತಿಯ ಅವಶೇಷಗಳು ಉತ್ತರ ಅಮೆರಿಕದ ದೊಡ್ಡ ಮೈದಾನ ಪ್ರದೇಶಗಳಲ್ಲಿ ಮಾತ್ರ ಕಂಡು ಬಂದಿವೆ.

ಫಾಲ್ಸಮ್ ಸಂಸ್ಕøತಿಯ ಅನಂತರದ ಅದೇ ಬಗೆಯ ಆದರೆ ಅಷ್ಟು ಸುಂದರವಲ್ಲದ ಮೊನೆಗಳನ್ನುಪಯೋಗಿಸುತ್ತಿದ್ದ ಸಂಸ್ಕøತಿಯ ಅವಶೇಷಗಳು ಇನ್ನೂ ಹಲವೆಡೆಗಳಲ್ಲಿ ದೊರಕಿವೆ. ಇವುಗಳಲ್ಲಿ ಅಂಗೊಸ್ಟುರ, ಸ್ಕಾಟ್ಸ್‍ಬಫ್, ಪ್ಲೇನ್‍ವ್ಯೂ ಮತ್ತು ಈಡನ್ ಸಂಸ್ಕøತಿಗಳು ಗಮನಾರ್ಹ, ಇವುಗಳ ಕಾಲ ಸ್ಥೂಲವಾಗಿ ಕ್ರಿ.ಪೂ. 4000-2000. ಪ್ಲೇನ್ ವ್ಯೂ ಸಂಸ್ಕøತಿಗೆ ಸೇರಿದ ಮೊನೆಗಳು ಕ್ಲೋವಿಸ್ ಮೊನೆಗಳನ್ನೇ ಹೋಲುತ್ತವೆ. ಆದರೆ ಅವುಗಳ ಮೇಲೆ ಅರ್ಧ ನಿಮ್ನರೇಖೆಯ ತಗ್ಗುಗಳಿಲ್ಲ. ಸ್ಕಾಟ್ಸ್‍ಬಫ್ ಮೊನೆಗಳಲ್ಲಿ ಸಮಾನಾಂತರದ ಚಕ್ಕೆಗಳನ್ನು ತೆಗೆದಿದೆ. ಅವಿಗಳಲ್ಲಿ ಅಗಲವಾದ ಅಡಿ ಭಾಗಗಳಿವೆ. ಈಡನ್ ಮೊನೆಗಳು ಹೆಚ್ಚು ಉದ್ದ. ಅವುಗಳ ಒಂದು ಪಾಶ್ರ್ವ ಭುಜಾಕಾರ. ಚಾಕುಗಳಂತೆ ಅವುಗಳ ಉಪಯೋಗ.

ಕ್ರಮೇಣ ಹಿಮಗಡ್ಡೆ ಕರಗಿದಾಗ ತೆರವಾದ ಮಾರ್ಗವನ್ನನುಸರಿಸಿದ ಈ ಜನ ಉತ್ತರ ಅಮೆರಿಕದ ಪೂರ್ವ ದಕ್ಷಿಣ ಭಾಗಗಳಲ್ಲಿ ಹರಡಿದರು. ಉತ್ತರ ಅಮೆರಿಕದ ಪೂರ್ವ ಪ್ರದೇಶಗಳಲ್ಲಿ ಹರಡಿದ ಸಂಸ್ಕøತಿಯನ್ನು ಪುರಾ (ಆರ್ಕೇಯಿಕ್) ಸಂಸ್ಕøತಿಯೆಂದು ಹೆಸರಿಸಲಾಗಿದೆ. ಈ ಸಂಸ್ಕøತಿಯ ಕಾಲ ಕ್ರಿ.ಪೂ. ಮೊದಲನೆಯ ಸಹಸ್ರ ಮಾನವೆಂಬುದು ಪುರಾತತ್ತ್ವಜ್ಞರ ನಿರ್ಣಯ. ನಿಸರ್ಗ ಸಹಜವಾದ ಸಸ್ಯಮೂಲ ಆಹಾರ ಸಂಗ್ರಹಣೆ, ಬೇಟೆ ಮತ್ತು ಮೀನುಗಾರಿಕೆಗಳಿಂದ ಈ ಜನರ ಜೀವನ ಸಾಗುತ್ತಿತ್ತು. ಕೆಲವಾರು ಆಯುಧಗಳನ್ನು ನುಣುಪು ಮಾಡಲಾಗುತ್ತಿತ್ತು. ತಾಮ್ರದಿಂದ ಮಾಡಿದ್ದ ಕೊರೆಯುವ ಆಯುಧಗಳನ್ನು ಇವರು ವಿರಳವಾಗಿ ಬಳಸುತ್ತಿದ್ದರು. ಚಾಕು ಮತ್ತು ಮುಂಚಾಚಿದ ಭರ್ಜಿ ಮೊನೆಗಳನ್ನೂ ಹರಿತವಾದ ಆಯುಧಗಳನ್ನೂ ಇವರು ಬಳಸುತ್ತಿದ್ದರೆಂಬುದೂ ಕಂಡುಬಂದಿದೆ. ಈ ಜನರ ಆಯುಧಗಳ ಮೊನೆಗಳು ದೊಡ್ಡವು. ಅಡಿಯಲ್ಲಿ ಹಿಡಿ. ಇವರು ನಾಯಿ ಸಾಕುತ್ತಿದ್ದರು. ವ್ಯಾಪಾರವೂ ತಕ್ಕಮಟ್ಟಿಗೆ ರೂಢಿಯಲ್ಲಿತ್ತು. ಸತ್ತವರ ದೇಹಗಳಿಗೆ ಕೆಮ್ಮಣ್ಣು ಲೇಪಿಸಿ. ಈ ಹೆಣಗಳನ್ನು ಗುಂಡಿಗಳಲ್ಲಿ ಕೂರಿಸಿಯೊ ಮಡಿಸಿಟ್ಟೊ ಹೂಳುವುದು ಇವರ ಪದ್ಧತಿ.[]

ಜನಜೀವನ

ಬದಲಾಯಿಸಿ

ರಾಕೀ ಪರ್ವತಗಳ ಪಶ್ಚಿಮದ ಮೈದಾನ ಪ್ರದೇಶಗಳಲ್ಲೂ ನೈಋತ್ಯ ಭಾಗಗಳಲ್ಲೂ ಇದ್ದ ಜನಕ್ಕೆ ವ್ಯವಸಾಯ ಗೊತ್ತಿರಲಿಲ್ಲ. ಕಾಡಿನ ಗಿಡಮರಗಳಿಂದ ಆಹಾರ ಸಂಗ್ರಹಿಸಿಯೂ ಆಗಾಗ ಕಾಡುಕೋಣ, ಜಿಂಕೆ, ಕಾಡುಕುರಿ, ತೋಳ, ಇಲಿ ಮುಂತಾದ ಪ್ರಾಣಿಗಳನ್ನು ಬೇಟಿಯಾಡಿಯೂ ಬದುಕುತ್ತಿದ್ದರು. ಬೇಟೆಗೆ ಭರ್ಜಿಗಳನ್ನೂ ಬಲೆಗಳನ್ನೂ ಬಳಸುವುದು ರೂಢಿ. ಇವರಲ್ಲಿ ಕಲ್ಲಿನ ಮೊನೆಗಳಿಗೆ ಪ್ರಮುಖ್ಯವಿರಲಿಲ್ಲ. ತುಂಡು ಕತ್ತಿ, ಒರೆಯುವ ಆಯುಧ, ಅರೆಯುವ ಕಲ್ಲು, ಇವು ಪ್ರಮುಖ ಉಪಕರಣಗಳು. ವಾಸ ಸಾಮಾನ್ಯವಾಗಿ ಗುಹೆಗಳಲ್ಲಿ-ಆದ್ದರಿಂದ ಇವರ ಅವಶೇಷಗಳು ಸುರಕ್ಷಿತವಾಗಿ ದೊರಕಿವೆ. ಈ ಜನರ ಸಂಸ್ಕøತಿಗಳನ್ನು ಮರುಭೂಮಿ (ಡೆಸರ್ಟ್) ಸಂಸ್ಕøತಿಗಳೆಂದು ಕರೆಯಲಾಗಿದೆ. ಕ್ರಿ. ಪೂ.2000ದಲ್ಲಿ ಪ್ರಾರಂಭವಾಗಿ ಇತ್ತೀಚಿನವರೆಗೂ ಇವು ರೂಢಿಯಲ್ಲಿದ್ದುವು.

ನವಾಡದ ತ್ಯುಲಿಸ್ಪ್ರಿಂಗ್ ಎಂಬಲ್ಲಿ ಸತ್ತ ಪ್ರಾಣಿಗಳ ಅವಶೇಷಗಳೊಂದಿಗೆ ಚಕ್ಕೆ ಕಲ್ಲಿನ ಮತ್ತು ಕೆಲವು ಒರಟು ಕಲ್ಲಿನ ಆಯುಧಗಳೂ ದೊರಕಿವೆ. ಅದೇ ಪ್ರದೇಶದ ಜಿಪ್ಸಮ್ ಗುಹೆಯಲ್ಲಿ ದೊರಕಿದ ಆಯುಧಗಳೂ ಉಪಕರಣಗಳೂ ಸತ್ತ ಪ್ರಾಣಿಗಳ ಅವಶೇಷಗಳೂ ಇಂಗಾಲ-14 ಕಾಲಗಣನೆಯ ರೀತ್ಯಾ 10,455-8,533 ವರ್ಷಗಳಷ್ಟು ಪುರಾತನವೆನಿಸಿದೆ. ಯೂಟಾ ಪ್ರಾಂತ್ಯದ ಡೇಂಜರ್ ಗುಹೆಯಲ್ಲಿ ದೊರಕಿದ ಮೊನೆಗಳೂ ಅರೆಯುವ ಕಲ್ಲುಗಳೂ ಕ್ರಿ. ಪೂ. 9,000 ವರ್ಷಗಳಷ್ಟು ಹಳೆಯವು. ಅರಿeóÉೂೀನ ಮತ್ತು ನ್ಯೂ ಮೆಕ್ಸಿಕೋಗಳಲ್ಲಿನ ಕೊಚೀಸ್ ಸಂಸ್ಕøತಿಯಲ್ಲಿ ಅರೆಯುವ ಕಲ್ಲುಗಳು ಪ್ರಮುಖವಾದುವು. ಆಳಿದ ಜಾತಿಯ ಆನೆ, ಕುದುರೆ ಮತ್ತು ಕಾಡೆಮ್ಮೆಗಳ ಅವಶೇಷಗಳೂ ದೊರಕಿವೆ. []

ಉತ್ತರ ಅಮೆರಿಕದ ವಾಯವ್ಯ ಪ್ರದೇಶಗಳಲ್ಲಿ ಬೇಟೆಯೇ ಮುಖ್ಯ ಕಸುಬಾಗಿದ್ದ ಹಾಗೂ ಮೀನುಗಾರಿಕೆಯಲ್ಲೂ ಪರಿಶ್ರಮ ಪಡೆದಿದ್ದು, ಜಿಂಕೆ ಕೊಂಬಿನ ಮತ್ತು ಕಲ್ಲಿನ ಆಯುಧಗಳನ್ನು ಉಪಯೋಗಿಸುತ್ತಿದ್ದ ಸಂಸ್ಕøತಿಗಳ ಅವಶೇಷಗಳು ಸಿಕ್ಕಿವೆ. ವಾಷಿಂಗ್ಟನ್ ಮತ್ತು ಒರೆಗಾನ್ ಪ್ರದೇಶಗಳಲ್ಲಿ ದೊರಕಿರುವ ಮಾಹಿತಿಗಳ ಕಾಲ ಕ್ರಿ. ಪೂ. 8,000.

ಶಿಲಾಯುಗ

ಬದಲಾಯಿಸಿ

ಆಲಾಸ್ಕ ಮತ್ತು ಕೆನಡದ ಉತ್ತರ ಭಾಗಗಳಲ್ಲಿ ಡೆನ್‍ಬಿಗ್ ಎಂದು ಹೆಸರಾದ ಸಂಸ್ಕøತಿಯ ಮಾಹಿತಿಗಳು ವಿಶೇಷವಾಗಿ ಕಂಡುಬಂದಿವೆ. ಈ ಸಂಸ್ಕøತಿಯಲ್ಲಿ ವಿಶಿಷ್ಟ ರೀತಿಯ ಆಯುಧಗಳೂ ಆಶ್ರಕಾಕಾರದ ಚಕ್ಕೆ ಕಲ್ಲಿನಾಯುಧಗಳೂ ಕೊರೆಯುವ ಆಯುಧಗಳೂ ಮುಖ್ಯ. ಕ್ರಿ..ಪೂ. 6,500 ರಷ್ಟು ಇವು ಪುರಾತನ. ಪಶ್ಚಿಮ ಭಾಗಗಳಲ್ಲಿ ಕ್ರಿಸ್ತಶಕೆಯ ಆದಿಯ ವೇಳೆಗೆ ಮರುಭೂಮಿಯ ಸಂಸ್ಕøತಿಯ ಪ್ರಭಾವದಿಂದ ಜೋಳದ ವ್ಯವಸಾಯವೇ ಮುಖ್ಯ ಕಸುಬಾಗಿದ್ದ ಹಲವಾರು ಪಂಗಡಗಳು ಹುಟ್ಟಿಕೊಂಡುವು. ಈ ಪಂಗಡಗಳಲ್ಲಿ ಆನಸಾಜಿû ಜನ ಎತ್ತರವಾದ ಪ್ರಸ್ಥಭೂಮಿ ಪ್ರದೇಶಗಳಲ್ಲೂ ನೀರಾವರಿಯಿಂದ ಜೋಳದ ವ್ಯವಸಾಯ ಮಾಡುತ್ತಿದ್ದ ಹಹೋಕಮ್ ಜನ ಮರಳ್ಗಾಡು ಪ್ರದೇಶಗಳಲ್ಲೂ ಸಸ್ಯಾಹಾರ ಸಂಗ್ರಹಿಸಿ ಜೀವನ ನಡೆಸುತ್ತಿದ್ದ ಮೊಗೊಲಾನ್-ಮಿಂಬ್ರೆಸ್ ಜನ ಬೆಟ್ಟಗುಡ್ಡ ಪ್ರದೇಶಗಳಲ್ಲೂ ನೆಲೆಸಿದ್ದರು. ಆನಸಾಜಿû ಜನ ಕ್ರಿ. ಶ 2ನೆಯ ಶತಮಾನದಿಂದ ಭೂಮಿ ಅಗೆದು ಜೋಳಬೆಳೆದು ಅರೆದು ತಿನ್ನುತ್ತಿದ್ದರು. ಕಾಡಿನಲ್ಲಿ ಬೆಳೆದ ಸಸ್ಯ, ಕುಂಬಳಕಾಯಿ, ಬೇಟೆಯಲ್ಲಿ ಕೊಂದ ಸಣ್ಣ ಕಾಡುಪ್ರಾಣಿಗಳು ಇತರ ಆಹಾರ. ಜೇಡಿಮಣ್ಣಿನ ಕೊಳವೆಗಳಲ್ಲಿ ಹೊಗೆಸೊಪ್ಪು ಸೇದುವುದಿವರ ಚಟ. ಇವರಿಗೆ ಮಣ್ಣಿನ ಪಾತ್ರಗಳ ಉಪಯೋಗ ಗೊತ್ತಿರಲಿಲ್ಲ. ಗುಹೆಗಳಲ್ಲಿ ಚರ್ಮದ ಅರಿವೆಗಳಿಂದ ಶವಗಳನ್ನು ಸುತ್ತಿ ಹೂಳುವುದು ಇವರ ಪದ್ಧತಿ. ಸಣ್ಣ ಗ್ರಾಮಗಳಲ್ಲಿ ವರ್ತುಲಾಕಾರದ ಗುಡಿಸಲುಗಳಲ್ಲಿವರ ವಾಸ. ಕ್ರಿ. ಶ. 500-700ರ ಸುಮಾರಿನಲ್ಲಿ ಹುರುಳಿ ವ್ಯವಸಾಯವೂ ಬಾತುಕೋಳಿ ಪೋಷಣೆಯೂ ಬಳಕೆಗೆ ಬಂದುವು. ಬಿಲ್ಲುಬಾಣಗಳ ಉಪಯೋಗ ಆರಂಭವಾಯಿತು. ಕೊನೆಗೆ ಮಣ್ಣಿನ ಪಾತ್ರಗಳೂ ಬಳಕೆಗೆ ಬಂದುವು. ಪ್ವೆಬ್ಲೊ ಸಂಸ್ಕøತಿ ಕಾಲದಲ್ಲಿನ (700-1300) ಗ್ರಾಮಗಳು ಹೆಚ್ಚು ವಿಶಾಲ. ಬೆಟ್ಟಗಳ ತಪ್ಪಲುಗಳಂತೂ ಜನಭರಿತ. ಒಂದರಿಂದ ನಾಲ್ಕು ಅಂತಸ್ತುಗಳ ಸುಮಾರು ಒಂದು ಸಾವಿರ ಕೋಣೆಗಳಿರುತ್ತಿದ್ದ ವಿಶಾಲ ಭವನಗಳಿದ್ದುವು. ಪ್ವೆಬ್ಲೊ ಸಂಸ್ಕøತಿಯ ಅಂತ್ಯಕಾಲದಲ್ಲಿ (ಕ್ರಿ. ಶ. 1300-1700) ಆನಸಾಜಿû ಜನರಿನ್ನೂ ಶಿಲಾಯುಗ ಸಂಸ್ಕøತಿ ಮಟ್ಟದಲ್ಲೇ ಇದ್ದರೂ ಸ್ಪೇನಿನ ಜನರ ಪ್ರವೇಶದಿಂದ ಇಲ್ಲಿ ಐರೋಪ್ಯ ಸಂಸ್ಕøತಿಯ ಪ್ರಭಾವ ಕ್ರಮೇಣ ಹರಡಿತು.

ಪೂರ್ವದ ಪ್ರದೇಶಗಳಲ್ಲಿ ಪುರಾ ಸಂಸ್ಕøತಿ ಕ್ರಮೇಣ ಕೊನೆಗೊಂಡು ಬಹುಶಃ ಕ್ರಿ. ಪೂ 500ರ ಮಧ್ಯಕಾಲದಲ್ಲಿ ಮನ್ಯ (ಮುಡ್‍ಲ್ಯಾಂಡ್) ಸಂಸ್ಕøತಿ ಬೆಳೆಯಿತು. ಉತ್ತರ ದಿಕ್ಕಿನಿಂದ ಮಣ್ಣಿನ ಪಾತ್ರೆಗಳ ತಯಾರಿಕೆಯನ್ನೂ ಸಮಾಧಿ ದಿಬ್ಬ ನಿರ್ಮಿಸುವ ವಿಧಾನವನ್ನು ನೈಋತ್ಯ ಪ್ರದೇಶಗಳಿಂದ ಜೋಳದ ವ್ಯವಸಾಯವನ್ನು ಈ ಕಾಲದ ಜನ ಕಲೆತರು. ಧೂಮಪಾನವೂ ನೇಯ್ಗೆಯೂ ಇವರಿಗೆ ಗೊತ್ತಿದ್ದುವು. ಈ ಗುಂಪಿಗೆ ಸೇರಿದ ಅಡೆನಾ ಸಂಸ್ಕøತಿ ಒಹಾಯೊ, ಇಂಡಿಯಾನ, ಕೆಂಟಕಿ, ಮರ್ಜೀನಿಯ ಮತ್ತು ಪೆನಸ್ಸಿವೇನಿಯದ ಹಲವಾರು ಪ್ರದೇಶಗಳಲ್ಲೂ ಇಲಿನಾಯ್, ಮಿಸಿಸಿಪಿ, ಲವೀಸಿಯಾನ, ಫ್ಲಾರಿಡ, ಓಕ್ಲಹೋಮ ಮತ್ತು ನ್ಯೂಯಾರ್ಕ್ ಪ್ರಾಂತ್ಯಗಳಲ್ಲೂ ಹಬ್ಬಿತ್ತು.

ಈ ಪ್ರದೇಶಗಳಲ್ಲಿ ಕ್ರಿ. ಶ. 1000ದ ಸುಮಾರಿನಲ್ಲ್ಲಿ ಕಾಡುಪ್ರದೇಶ ಸಂಸ್ಕøತಿಗಳು ಕೊನೆಗೊಂಡು ಮಧ್ಯ ಸಂಸ್ಕøತಿ ತಲೆದೋರಿತು. ಈ ಸಂಸ್ಕøತಿಯಲ್ಲಿ ಅಂಥ ಮುನ್ನಡೆಯೇನೂ ಕಂಡುಬರದಿದ್ದರೂ ಸಾಮಾಜಿಕ ಜೀವನರಂಗದಲ್ಲಿ ಸಾಂಪ್ರದಾಯಿಕತೆ ಬೆಳೆಯಿತು. ಈ ಕಾಲಕ್ಕೆ ಸಂಬಂಧಿಸಿದ ಚಚ್ಚೌಕ ದೇವಾಲಯಗಳ ಹಾಗೂ ಸಾಮೂಹಿಕ ಭವನಗಳ ಅವಶೇಷಗಳು ಹೆಚ್ಚಾಗಿ ಕಂಡುಬಂದಿವೆ. ಈ ರೀತಿಯ ಕಟ್ಟಡದ ಅವಶೇಷವೊಂದು 16 ಎಕರೆ ಭೂಮಿಯನ್ನಾಕ್ರಮಿಸಿಕೊಂಡಿದೆ. ಇದು 1,080' ಉದ್ದ, 710' ಅಗಲ, ಸುಮಾರ 100' ಎತ್ತರ. ಜೇಡಿಮಣ್ಣು, ಕಲ್ಲು, ಶಂಖ, ತಾಮ್ರಗಳ ರೆಕ್ಕೆಯಿರುವ ಸರ್ಪದ ಹಾಗೂ ನೃತ್ಯನಿರತ ಪಕ್ಷಿಮಾನವನ ಶಿಲ್ಪಗಳು ಹೇರಳ.[]

ಭಿನ್ನತೆ

ಬದಲಾಯಿಸಿ

ಉತ್ತರ ಅಮೆರಿಕದ ಇತರ ಪ್ರದೇಶಗಳಲ್ಲಿ ಬೇಟೆ, ಮೀನುಗಾರಿಕೆ ಮತ್ತು ಆಹಾರ ಸಂಗ್ರಹಣೆಯಿಂದ ಜೀವಿಸುತ್ತಿದ್ದ ಹಿಂದುಳಿದ ಜನಾಂಗಗಳು ಇತ್ತೀಚಿನವರೆಗೂ ಉಳಿದು ಬಂದಿದ್ದುವು. ಭಿನ್ನವಾದ ವಾಯುಗುಣವೇ ಮುಂತಾದ ನಾನಾ ಭೌತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದುರ ಫಲವಾಗಿ ಈ ವಿವಿಧ ಪ್ರದೇಶಗಳ ಸಂಸ್ಕøತಿಗಳಲ್ಲಿ ವೈವಿಧ್ಯ ಬೆಳೆಯಿತು. ಇತ್ತೀಚಿನವರೆಗೂ ಇವು ಶಿಲಾಯುಗದ ಹಂತದಲ್ಲೇ ಉಳಿದು ಬಂದಿದ್ದುವು. ಸಾಮಾಜಿಕ ವ್ಯವಸ್ಥೆ ಮಾತ್ರ ಸಂಕೀರ್ಣವಾಯಿತು. ಸಮಾಜದಲ್ಲಿ ನಾಯಕ ಮತ್ತು ಶ್ರೀಮಂತ, ಜನಸಾಮಾನ್ಯ ಮತ್ತು ದಾಸ್ಯವರ್ಗಗಳು ರೂಢಿಯಲ್ಲಿದ್ದುವು. ಸಂಪ್ರದಾಯಿಕ ಆಚರಣೆ ಮತ್ತು ವೈಭವ ಪ್ರದರ್ಶನಗಳಿಗಾಗಿ ಹೆಚ್ಚು ಐಶ್ವರ್ಯದ ಪೋಲಾಗುತ್ತಿತ್ತು. []

ಉಲ್ಲೇಖಗಳು

ಬದಲಾಯಿಸಿ