ಕರ್ಟ್ ಆಲ್ಡರ್

ಜರ್ಮನ್ ರಸಾಯನಶಾಸ್ತ್ರಜ್ಞ
(ಆಲ್ಡರ್ ಕರ್ಟ್ ಇಂದ ಪುನರ್ನಿರ್ದೇಶಿತ)

ಕರ್ಟ್ ಆಲ್ಡರ್ (1902-58). ಜರ್ಮನಿಯ ರಸಾಯನವಿಜ್ಞಾನಿ. ಬರ್ಲಿನ್ ವಿಶ್ವವಿದ್ಯಾನಿಲಯದ ಪದವೀಧರ. ಆಟ್ಟೊ ಪಾಲ್ ಹೆರ್ಮಾನ್ ಡೀಲ್ಸ್ ಎಂಬ ಜರ್ಮನಿಯ ರಸಾಯನವಿಜ್ಞಾನಿಯ ಶಿಷ್ಯತ್ವದಲ್ಲಿ ಕೀಲ್ ವಿಶ್ವವಿದ್ಯಾನಿಲಯದಲ್ಲಿ ಅಭ್ಯಸಿಸಿ ಡಾಕ್ಟರೇಟ್ ಪಡೆದ (1926). ಎರಡು ವರ್ಷಗಳ ಅನಂತರ ಈ ಗುರುಶಿಷ್ಯರು ನಡೆಸಿದ ರಾಸಾಯನಿಕ ಸಂಶೋಧನೆಗಳ ಫಲ ಇಂದು ಡೀಲ್ಸ್-ಆಲ್ಡರ್ ಪ್ರತಿಕ್ರಿಯೆ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಡಯೀನ್ ಎಂಬ ರಾಸಾಯನಿಕ ಸಂಯುಕ್ತಗಳ ನರೆವಿನಿಂದ ಸಾವಯವ ಸಂಶ್ಲೇಷಣೆಗಳನ್ನು (ಆರ್ಗೇನಿಕ್ ಸಿಂಥೆಸಸ್) ಇವರು ಕಂಡುಹಿಡಿದರು. ಈ ಸಂಶೋಧನೆಯನ್ನು ಗಮನಿಸಿ 1950ರ ರಸಾಯನಶಾಸ್ತ್ರದ ನೊಬೆಲ್ ಬಹುಮಾನವನ್ನು ಇವರೀರ್ವರಿಗೂ ಒಟ್ಟಾಗಿ ನೀಡಲಾಯಿತು. ಆಲ್ಡರ್ 1934-36ರವರೆಗೆ ಕೀಲ್ ವಿಶ್ವವಿದ್ಯಾನಿಲಯದಲ್ಲಿಯೂ 1936-40ರವರೆಗೆ ಐ.ಜಿ. ಫಾರ್ಬೆನ್ ಪ್ರಯೋಗಾಲಯದಲ್ಲಿಯೂ ಕೆಲಸ ಮಾಡಿದ. 1940ರಲ್ಲಿ ಕುಲಾನ್ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ನಿರ್ದೇಶಕ ಮತ್ತು ಪ್ರಾಧ್ಯಾಪಕನಾಗಿ ಸೇರಿದ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬೃಹದಣುಗಳ ರಚನೆಗೆ ಆಲ್ಡರ್ ತನ್ನ ಸಂಶೋಧನೆಯ ಫಲಿತಾಂಶಗಳನ್ನು ಅನ್ವಯಿಸಿದ್ದಾನೆ.

ಕರ್ಟ್ ಆಲ್ಡರ್

ಉಲ್ಲೇಖಗಳು ಬದಲಾಯಿಸಿ

[೧] [೨] [೩]

  1. https://www.nobelprize.org/nobel_prizes/chemistry/laureates/1950/alder-bio.html
  2. https://www.nobelprize.org/nobel_prizes/chemistry/laureates/1950/alder-facts.html
  3. https://www.britannica.com/biography/Kurt-Alder