ಆರ್ಥಿಕ ಉತ್ತೇಜಕಗಳು

ಆರ್ಥಿಕ ಉತ್ತೇಜಕಗಳು ಉದ್ಯಮ ವ್ಯವಸ್ಥಾಪಕ ಶಕ್ತಿ ಮತ್ತು ಸದವಕಾಶಗಳ ಜೊತೆಗೆ ಆರ್ಥಿಕ ಪ್ರಗತಿಯನ್ನು ತ್ವರೆಗೊಳಿಸಲು ಅಗತ್ಯವಾಗಿ ಇರಬೇಕಾದ ಉತ್ತೇಜಕಗಳು. ಎಕನಾಮಿಕ್ ಇನ್ಸೆಂಟಿವ್ಸ್ ವ್ಯವಸ್ಥಾಪಕರು ತಮ್ಮ ಶಕ್ತಿಯನ್ನು ಹೇಗೆ ಉಪಯೋಗಿಸಿ ಕೊಳ್ಳುತ್ತಾರೆಂಬುದು ಅವರ ಉತ್ತೇಜಕಗಳಿಗೆ ಹೇಗೆ ಎಂಥ ಪ್ರತಿಕ್ರಿಯೆ ತೋರಿಸುತ್ತಾರೆಂಬು ದನ್ನು ಅವಲಂಬಿಸಿರುತ್ತದೆ. ದುಡಿಮೆ, ಉಳಿತಾಯ ಮತ್ತು ಬಂಡವಾಳ ಹೂಡುವಿಕೆ-ಇವು ಬೆಳೆವಣಿಗೆ ಚಟುವಟಿಕೆಗಳು, ಉದ್ಯಮ ವ್ಯವಸ್ಥಾಪಕ, ಬಂಡವಾಳ ಹೂಡುವವ ಹೊಸದನ್ನು ಕಂಡುಹಿಡಿಯುವವ ಮತ್ತು ಅಭಿವೃದ್ಧಿಗೆ ಸಹಾಯಕವಾಗುವ ಅಭಿಪ್ರಾಯಗಳನ್ನು ಪ್ರಚಾರಮಾಡುವವ- ಇವರೆಲ್ಲರೂ ಬೆಳೆವಣಿಗೆಯ ನಿಯೋಗಿಗಳು. ಇವರೆಲ್ಲರ ಕಾರ್ಯ ಚಟುವಟಿಕೆಗಳಿಗೆ ಸಾಕಷ್ಟು ಉತ್ತೇಜನವಿಲ್ಲದಿದ್ದರೆ ಆರ್ಥಿಕ ಪ್ರಗತಿ ತ್ವರಿತಗತಿಯಲ್ಲಿ ನಡೆಯುವುದಿಲ್ಲ. ವೈಯಕ್ತಿಕ ಸ್ವಾತಂತ್ರ್ಯವಿರುವ ಹಾಗೂ ವೈಯಕ್ತಿಕ ಲಾಭದೃಷ್ಟಿ ಪ್ರಧಾನವಾಗಿ ರುವ ಆರ್ಥಿಕ ವ್ಯವಸ್ಥೆಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜಕಗಳು ಮಾರುಕಟ್ಟೆಯ ಅಗೋಚರ ಶಕ್ತಿಗಳ ತಾಕಲಾಟದಿಂದ ತಾವಾಗಿಯೇ ಉದಿಸುವುವು. ಆದರೆ ಇಂದಿನ ಪ್ರಪಂಚದಲ್ಲಿ ಮುಖ್ಯವಾಗಿ ಯೋಜನಾನುಸಾರವಾಗಿ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಲ್ಲಿ ಉತ್ತೇಜಕಗಳು ಸರ್ಕಾರದ ರೀತಿನೀತಿಯನ್ನು ಅವಲಂಬಿಸಿರುವುವು.

ವರ್ಗೀಕರಣ ಬದಲಾಯಿಸಿ

ಉತ್ತೇಜಕಗಳನ್ನು ಆರ್ಥಿಕ ಉತ್ತೇಜಕಗಳು ಮತ್ತು ಆರ್ಥಿಕೇತರ ಉತ್ತೇಜಕಗಳೆಂದು ವರ್ಗೀಕರಿಸಬಹುದು. ಆರ್ಥಿಕ ಉತ್ತೇಜಕ ಆದಾಯ ಅಥವಾ ಫಾಯಿದೆ ತರುವ ಯೋಜನೆ ಅಥವಾ ಕ್ರಮಗಳಿಗೆ ಅನ್ವಯಿಸುತ್ತದೆ. ಅಂದರೆ ಲಾಭದ ನಿರೀಕ್ಷೆಯನ್ನು ಹೆಚ್ಚಿಸುವ ಉತ್ತೇಜಕಗಳು ಆರ್ಥಿಕ ಉತ್ತೇಜಕಗಳು. ಲಾಭದ ನಿರೀಕ್ಷೆ ಹೆಚ್ಚಿದಾಗ ಕೆಲಸ ಮಾಡುವ ಪ್ರೇರಣೆ ಚುರುಕಾಗುತ್ತದೆ ಮತ್ತು ಇದರಿಂದ ಆರ್ಥಿಕ ಪ್ರಗತಿಯುಂಟಾಗುತ್ತದೆ. ಆರ್ಥಿಕೇತರ ಉತ್ತೇಜಕಗಳು ಹಣದ ರೂಪದ ಲಾಭಕ್ಕೆ ಅನ್ವಯಿಸುವುದಿಲ್ಲ. ಸಮಾಜದಲ್ಲಿ ಗೌರವಯತ ಸ್ಥಾನಮಾನಗಳನ್ನು ದೊರಕಿಸಿ ಕೊಳ್ಳುವುದಕ್ಕೆ, ಪ್ರಶಂಸೆ ಪಡೆಯುವುದಕ್ಕೆ ಅಥವಾ ಲೋಕಹಿತಾರ್ಥವಾಗಿ ಹೆಚ್ಚು ಕೆಲಸ ಮಾಡಿ ಪ್ರಗತಿ ಸಾಧಿಸುವುದಕ್ಕೆ ಅನ್ವಯಿಸುತ್ತದೆ. ಇವೆರಡರಲ್ಲಿ ಆರ್ಥಿಕ ಉತ್ತೇಜಕಗಳೇ ಆರ್ಥಿಕ ಬೆಳೆವಣಿಗೆಗೆ ಹೆಚ್ಚು ಸಹಾಯಕವೆಂಬುದು ಅನುಭವದಿಂದ ತಿಳಿದುಬಂದಿದೆ.

ಆರ್ಥಿಕ ಉತ್ತೇಜಕದ ಬಗೆಗಳು ಬದಲಾಯಿಸಿ

  • ಆರ್ಥಿಕ ಉತ್ತೇಜಕಗಳು ಎರಡು ಬಗೆಯವಾಗಿವೆ. ಆದಾಯ ಅಥವಾ ಫಾಯಿದೆಯ ನಿರೀಕ್ಷೆಯನ್ನು ಸೂಚಿಸುವ ಉತ್ತೇಜಕಗಳು ಫಲಾಶ್ವಾಸನಾ ಉತ್ತೇಜಕಗಳು. ನಿಯಮಿತವಾದ ಕೆಲಸವನ್ನು ಮಾಡಿದ್ದರೆ ದಂಡ ತೆರಬೇಕಾದ ಪ್ರಸಂಗವಿದ್ದರೆ ಅಥವಾ ಮತ್ತಾವ ರೀತಿಯಲ್ಲಾದರೂ ನಷ್ಟ ಅನುಭವಿಸಬೇಕಾಗಿದ್ದರೆ ಸರಿಯಾಗಿ ಕೆಲಸಮಾಡಬೇಕೆಂಬ ಪ್ರೇರಣೆ ಉಂಟಾಗುತ್ತದೆ. ಇಂಥ ಉತ್ತೇಜಕ ಶಿಕ್ಷಾರೂಪ ಉತ್ತೇಜಕವೆನೆಸಿಕೊಳ್ಳುತ್ತದೆ.
  • ಲೈಬಿನ್ಸ್ಟಿನ್ ಫಲಾತ್ಮಕ ಉತ್ತೇಜಕಗಳನ್ನು ಎರಡು ಬಗೆಯಾಗಿ ವಿಂಗಡಿಸಿದ್ದಾರೆ. ಒಂದು ವೈಯಕ್ತಿಕ ಲಾಭ ತರುವಂಥದು. ಇನ್ನೊಂದು ದೇಶಕ್ಕೆ ಲಾಭ ತರುವಂಥದು. ಬಂದ ಲಾಭ ಉದ್ಯಮಿಗಳಲ್ಲೇ ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಸ್ಥಳಾಂತರ ಹೊಂದುವುದರಿಂದ ಯಾವುದಾದ ರೊಂದು ವರ್ಗಕ್ಕೆ ಲಾಭವಾಗುತ್ತದೆ. ಆದರೆ ಇದರಿಂದ ರಾಷ್ಟ್ರದ ಒಟ್ಟು ಉತ್ಪಾದನೆ ಹೆಚ್ಚಿದಂತಾಗುವುದಿಲ್ಲ. ಇಂಥ ಉತ್ತೇಜಕದಿಂದ ಆರ್ಥಿಕ ಪ್ರಗತಿಗೆ ಅನುಕೂಲವಾಗುವುದಿಲ್ಲ. ಯಾವ ಉತ್ತೇಜಕಗಳು ರಾಷ್ಟ್ರದ ಒಟ್ಟು ಉತ್ಪಾದನೆಯನ್ನು ಹೆಚ್ಚುವಂತೆ ಮಾಡುತ್ತವೆಯೋ ಅವು ಸಮಷ್ಟಿ ಉತ್ತೇಜಕಗಳೆನಿಸುತ್ತವೆ. ಆರ್ಥಿಕ ಪ್ರಗತಿಗೆ ಇಂಥ ಉತ್ತೇಜಕಗಳ ಆವಶ್ಯಕತೆ ಇದೆಯೇ ಹೊರತು ವ್ಯಕ್ತಿನಿಷ್ಠ ಉತ್ತೇಜಕಗಳದ್ದಲ್ಲ.

ಕೆಲಸಕಾರ್ಯ ಬದಲಾಯಿಸಿ

  • ಬಂಡವಾಳಶಾಹಿಯಲ್ಲಿ ವ್ಯವಸ್ಥಾಪಕನ ಮೂಲ ಉದ್ದೇಶ ಲಾಭಗಳಿಕೆಯೇ ಆಗಿರುವುದರಿಂದ ಅವನು ದುಡಿದಷ್ಟೂ ಆದಾಯ ಹೆಚ್ಚುವ ಸಂಭವವಿರುವುದರಿಂದ ಅವನಿಗೆ ಸಹಜವಾದ ಆರ್ಥಿಕ ಉತ್ತೇಜನವಿರುತ್ತದೆ. ಅವನ ದಕ್ಷತೆಗೂ ಲಾಭಕ್ಕೂ ನೇರ ಸಂಬಂಧ ವಿರುವುದರಿಂದ ಅದಕ್ಷತೆಗೆ ಅಲ್ಲಿ ಅವಕಾಶವಿಲ್ಲ. ಸಂಬಳಕ್ಕಾಗಿ ದುಡಿಯುವ ಕಾರ್ಯನಿರ್ವಾಹಕನಂತೆ ಅವನು ದಕ್ಷತೆಯ ಕಡೆಗೆ ಹೆಚ್ಚು ಗಮನ ಕೊಡದೆ ಇರುವುದಕ್ಕೆ ಸಾಧ್ಯವಿಲ್ಲ.
  • ಒಬ್ಬನದೇ ಜವಾಬ್ದಾರಿ ಇರುವ ಉದ್ಯಮಗಳಲ್ಲಿ ಆರ್ಥಿಕ ಉತ್ತೇಜಕ ಈ ರೀತಿಯಾಗಿ ತಾನಾಗಿಯೇ ಇರುತ್ತದೆಯಾದ್ದರಿಂದ ಬಂಡವಾಳಶಾಹಿಯಲ್ಲಿ ಆರ್ಥಿಕ ಉತ್ತೇಜನ ಹೆಚ್ಚಾಗಿ ಇದೆಯೆಂಬ ಅಭಿಪ್ರಾಯವಿದೆ. ಆದರೆ ಬಂಡವಾಳಶಾಹಿಯ ಬೆನ್ನೆಲುಬಾದ ಕೂಡು ಬಂಡವಾಳ ಸಂಸ್ಥೆಗಳ ವಿಷಯದಲ್ಲಿ ಈ ಅಭಿಪ್ರಾಯ ಸಮಂಜಸವಾಗಿ ಕಾಣುವುದಿಲ್ಲ. ಷೇರುಗಳ ಮೂಲಕ ಬಂಡವಾಳವನ್ನು ಒದಗಿಸಿ ಉದ್ಯಮದ ಸ್ವಾಮ್ಯವನ್ನು ಹಲವಾರು ಮಂದಿ ಹೊಂದಿದ್ದರೂ ಅವರೆಲ್ಲ ನೇರವಾಗಿ ಉದ್ಯಮದ ಆಡಳಿತದಲ್ಲಿ ಭಾಗವಹಿಸುವುದಿಲ್ಲ.
  • ಕಾರ್ಯನಿರ್ವಾಹಕನ ದಕ್ಷತೆಗೂ ಅವನ ಆದಾಯಕ್ಕೂ ನೇರ ಸಂಬಂಧ ಇಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಕಾರ್ಯನಿರ್ವಾಹಕ ಉದ್ಯಮ ಲಾಭ ನಷ್ಟಗಳಿಗೆ ನೇರ ಬಾಧ್ಯಸ್ಥನಾಗಿರುವುದಿಲ್ಲ. ಆದರೂ ಕೂಡು ಬಂಡವಾಳ ಸಂಸ್ಥೆಯ ಕಾರ್ಯನಿರ್ವಾಹಕ ಸರ್ಕಾರಿ ಉದ್ಯಮ ಸಂಸ್ಥೆಯ ಕಾರ್ಯನಿರ್ವಾಹಕನಷ್ಟು ಬೇಜವಾಬ್ದಾರಿಯಿಂದ ಇರಲು ಸಾಧ್ಯವಿಲ್ಲ. ತನ್ನ ಪ್ರಗತಿಗೂ ತಾವು ಕೆಲಸಮಾಡುತ್ತಿರುವ ಸಂಸ್ಥೆಯ ಪ್ರಗತಿಗೂ ಬಹುಮಟ್ಟಿಗೆ ಸಂಬಂಧವಿರುವುದರಿಂದ ದಕ್ಷತೆಯಿಂದ ಕೆಲಸಮಾಡುವುದಕ್ಕೆ ಉತ್ತೇಜನವಿದೆ.
  • ಆದ್ದರಿಂದ ಒಟ್ಟಿನಲ್ಲಿ ಬಂಡವಾಳಶಾಹಿಯಲ್ಲಿ ಹೆಚ್ಚು ದುಡಿಯಲು ಉತ್ತೇಜನವಿದೆ ಎಂದ ಹಾಗಾಯಿತು. ಆದರೆ ಕಾರ್ಮಿಕರ ದೃಷ್ಟಿಯೇ ಬೇರೆ. ಅವರ ಅಭಿಪ್ರಾಯದಲ್ಲಿ ಬಂಡವಾಳಶಾಹಿಯಲ್ಲಿ ಕಾರ್ಮಿಕರಿಗೆ ಸಾಕಷ್ಟು ಉತ್ತೇಜನ ದೊರಕುವುದಿಲ್ಲ. ಬಂಡವಾಳಗಾರರು ಕಾರ್ಮಿಕರನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುವ ಪ್ರಸಂಗಗಳೇ ಹೆಚ್ಚು.
  • ಕಾರ್ಮಿಕರ ದುಡಿಮೆಗೆ ಸರಿಯಾದ ಕೂಲಿ ಕೊಡದೆ, ಅವರಿಗೆ ವಸತಿ, ವೈದ್ಯಕೀಯ ಮುಂತಾದ ಅನುಕೂಲತೆಗಳನ್ನು ಕಲ್ಪಿಸದೆ ಮತ್ತು ಅವರ ಭದ್ರತೆಗೆ ಬೇಕಾದ ಯೋಜನೆಗಳನ್ನು ಕೈಗೊಳ್ಳದೆ ಇರುವುದರಿಂದ ಅವರು ಯಾವಾಗಲೂ ಅತೃಪ್ತರಾಗಿರುತ್ತಾರೆ. ಅವರಿಗೆ ತೃಪ್ತಿಯಿಲ್ಲದೆ ಅವರು ಕೆಲಸ ಮಾಡುತ್ತಿರುವ ಸಂಸ್ಥೆಯ ಪ್ರಗತಿ ಸಾಧ್ಯವಿಲ್ಲ. ಕಾರ್ಮಿಕರಿಗೆ ಬಂಡವಾಳಶಾಹಿ ಸಾಕಷ್ಟು ಉತ್ತೇಜನಗಳನ್ನು ಕೊಡುವುದಿಲ್ಲ ವೆಂಬ ಆರೋಪವಿದೆ. ಆದರೂ ಈ ಪದ್ಧತಿಯಲ್ಲಿಯೂ ದಕ್ಷ ಕಾರ್ಮಿಕರಿಗೆ ಉತ್ತೇಜನ ನೀಡಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಾಲೀಕರು ಮತ್ತು ಕಾರ್ಮಿಕರ ನಡುವಣ ತಿಕ್ಕಾಟ ಬದಲಾಯಿಸಿ

  • ಸಮತಾವಾದಿ ಸಮಾಜ ಹೆಚ್ಚು ಆರ್ಥಿಕ ಉತ್ತೇಜನಗಳನ್ನು ಒದಗಿಸುತ್ತದೆಂಬುದು ಹಲವರ ಅಭಿಪ್ರಾಯ. ವಿವಿಧ ವರ್ಗಗಳ ನಡುವಣ ಅಂತರ ಕಡಿಮೆ ಇರುವ, ಮಾಲೀಕರು ಮತ್ತು ಕಾರ್ಮಿಕರು ಎಂಬ ವರ್ಗಗಳಿಲ್ಲದಿರುವ ಮತ್ತು ದುಡಿಮೆಯಿಲ್ಲದೆ ಸಂಪಾದನೆ ಸಾಧ್ಯವಿಲ್ಲದಿರುವ ಸಮಾಜ ದಲ್ಲಿ ಕೆಲಸಮಾಡಿ ಆರ್ಥಿಕ ಪ್ರಗತಿ ಸಾಧಿಸಲು ಉತ್ತೇಜನವಿರುವ ಸಂಭವ ಹೆಚ್ಚು. ಸಾಮಾಜಿಕ ಒಡೆತನ ಒಂದೇ ವರ್ಗಕ್ಕೆ ಹೆಚ್ಚು ಆದಾಯ ದೊರಕುವುದನ್ನು ತಪ್ಪಿಸುವುದರಿಂದ ಅದು ಕೆಲಸಗಾರರ ದಕ್ಷತೆಯನ್ನು ಹೆಚ್ಚಿಸುವದರಲ್ಲಿ ಸಂಶಯವಿಲ್ಲ.
  • ಮಾಲೀಕರು ಮತ್ತು ಕಾರ್ಮಿಕರ ನಡುವಣ ತಿಕ್ಕಾಟ ತಪ್ಪುವುದರಿಂದ ಕಾರ್ಮಿಕರ ಶಕ್ತಿ ಮತ್ತು ಕಾಲ ಅಪವ್ಯಯವಾಗುವುದು ತಪ್ಪಿ ಉತ್ಪಾದನೆ ಹೆಚ್ಚಲು ಸಹಾಯಕವಾಗುತ್ತದೆ. ಸಮತಾವಾದಿ ಸಮಾಜದಲ್ಲಿ ವೈಯಕ್ತಿಕ ಲಾಭದ ಪ್ರೇರಣೆ ಇಲ್ಲದಿರುವುದರಿಂದ ಕೂಲಿ ಮತ್ತು ಇತರ ರೀತಿಯ ಉತ್ತೇಜನಗಳೇ ಮುಖ್ಯ ಆರ್ಥಿಕ ಉತ್ತೇಜನಗಳು. ದಕ್ಷತೆಯಿಂದ ಕೆಲಸಮಾಡಿ ಯಶಸ್ಸು ಗಳಿಸಿದವರಿಗೆ ಸಾರ್ವಜನಿಕವಾಗಿ ಸರ್ಕಾರ ಗೌರವ ತೋರಿಸುವುದು ಮತ್ತು ಅದಕ್ಷರಾದವರನ್ನು ಸಾರ್ವಜನಿಕವಾಗಿ ಖಂಡನೆಗೆ ಗುರಿ ಮಾಡುವುದು ಸಮತಾವಾದಿ ಸಮಾಜದಲ್ಲಿ ಒಂದು ಮುಖ್ಯ ಉತ್ತೇಜನವಾಗಿದೆ. ಕಾರ್ಮಿಕರಿಗೆ ಒದಗಿಸುವ ವಸತಿ, ವೈದ್ಯಕೀಯ ಸಹಾಯ, ಮನರಂಜನೆ, ಭದ್ರತೆ ಮುಂತಾದ ಅನುಕೂಲತೆಗಳು ಬಂಡವಾಳ ಶಾಹಿಯಲ್ಲಿರುವಂತೆಯೇ ಇರುತ್ತವೆ.
  • ಆದರೆ ಇಲ್ಲಿ ಅನುಕೂಲತೆಗೆ ಬಂಡವಾಳ ಶಾಹಿಯಲ್ಲಿ ಕೊಡುವ ಗಮನಕ್ಕಿಂತ ಹೆಚ್ಚು ಗಮನ ಕೊಡಲಾಗುತ್ತದೆ. ಈ ರೀತಿಯ ಉತ್ತೇಜನಗಳಿಗೆ ಒಂದು ಹೊಸ ರೂಪವೇ ದೊರಕುತ್ತದೆ. ಆದ್ದರಿಂದಲೇ ಕಾರ್ಮಿಕರ ದೃಷ್ಟಿಯಲ್ಲಿ ಸಮತಾವಾದಿ ಸಮಾಜ ಹೆಚ್ಚು ಆರ್ಥಿಕ ಉತ್ತೇಜನಗಳನ್ನು ದೊರಕಿಸುತ್ತದೆ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಲೋಕಹಿತಾರ್ಥ ಉದ್ದೇಶದ ಆಧಾರದ ಮೇಲೆ ಪ್ರಯತ್ನಿಸುತ್ತದೆ. ಮೊದಲನೆಯ ದೃಷ್ಟಿಗಿಂತ ಎರಡನೆಯ ದೃಷ್ಟಿ ಕಾರ್ಮಿಕ ವರ್ಗಕ್ಕೆ ಹೆಚ್ಚು ಹಿತವಾಗಿ ಕಾಣುತ್ತದೆ.

ಆರ್ಥಿಕ ಬೆಳೆವಣಿಗೆಗೆ ಸಹಾಯಕವಾಗುವ ಉತ್ತೇಜನಗಳು ಬದಲಾಯಿಸಿ

  1. ಕಾರ್ಮಿಕರಿಗೆ ಕೊಡುವ ಉತ್ತೇಜನಗಳು;
  2. ಸಂಶೋಧನೆಗೆ ನೀಡುವ ಉತ್ತೇಜನಗಳು;
  3. ವ್ಯವಸ್ಥಾಪನ ಕಾರ್ಯಕ್ಕೆ ಕೊಡುವ ಉತ್ತೇಜನಗಳು;
  4. ಉಳಿತಾಯ ಮತ್ತು ಬಂಡವಾಳ ಹೂಡುವಿಕೆಗೆ ಕೊಡುವ ಉತ್ತೇಜನಗಳು ಎಂಬುದಾಗಿ ವರ್ಗೀಕರಿಸಬಹುದು.

ಆರ್ಥಿಕ ಉತ್ತೇಜಕದ ವೈಶಿಷ್ಟ್ಯ ಬದಲಾಯಿಸಿ

  • ಕಾರ್ಮಿಕರಿಗೆ ಫಲಾಶ್ವಾಸನಾ ಉತ್ತೇಜಕಗಳು ಮತ್ತು ಶಿಕ್ಷಾರೂಪ ಉತ್ತೇಜಕಗಳು ಎರಡನ್ನೂ ಒದಗಿಸಬಹುದು. ಸರಿಯಾದ ರೀತಿಯಲ್ಲಿ ಕೆಲಸಮಾಡದಿದ್ದರೆ ದಂಡ ತೆರಬೇಕಾದರೆ ಅಥವಾ ಕೆಲಸ ಕಳೆದುಕೊಳ್ಳುವ ಭಯವಿದ್ದರೆ ಕೆಲಸಗಾರರು ದಕ್ಷತೆಯ ಕಡೆಗೆ ಹೆಚ್ಚು ಗಮನಕೊಡುತ್ತಾರೆ. ಇಂಥ ಶಿಕ್ಷಾರೂಪ ಉತ್ತೇಜಕಗಳು ಉತ್ಪಾದನೆಯನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಗಿರುವುದು ನಿಜ. ಆದರೆ ಉತ್ಪಾದನೆಯನ್ನು ಹೆಚ್ಚಿಸಲು ಇವುಗಳನ್ನೇ ಅವಲಂಬಿಸಬಾರದು. ಫಲಾಶ್ವಾಸನಾ ಉತ್ತೇಜಕಗಳು ಉತ್ಪಾದನೆಯನ್ನು ಹೆಚ್ಚಿಸುವುದರಲ್ಲಿ ಬಹಳ ಸಹಕಾರಿಯಾಗಿವೆ.
  • ದಕ್ಷತೆಯ ಆಧಾರದ ಮೇಲೆ ಕೆಲಸಗಾರರ ವೇತನವನ್ನು ನಿಗದಿಮಾಡುವುದು, ಉದ್ಯಮ ಸಂಸ್ಥೆಯ ಆಡಳಿತದಲ್ಲಿ ಕೆಲಸಗಾರರು ಭಾಗವಹಿಸಲು ಅವಕಾಶ ಕಲ್ಪಿಸುವುದು, ಕೆಲಸಗಾರರು ಸಂಸ್ಥೆಯ ಲಾಭದಲ್ಲಿ ಪಾಲ್ಗೊಳ್ಳಲು ಅವಕಾಶಮಾಡುವುದು, ಬೋನಸ್ ಕೊಡುವುದು, ವಸತಿ, ವೈದ್ಯಕೀಯ, ಮನರಂಜನೆ ಮುಂತಾದ ಅನುಕೂಲತೆಗಳನ್ನು ಕಲ್ಪಿಸಿಕೊಡುವುದು ಇಂಥ ಉತ್ತೇಜಕಗಳ ಮೂಲಕ ಕಾರ್ಮಿಕರು ಉತ್ಪಾದನೆಯನ್ನು ಹೆಚ್ಚಿಸುವಂತೆ ಮಾಡಬಹುದು.
  • ಉದ್ಯಮ ವ್ಯವಸ್ಥಾಪಕರು ವಿವಿಧ ಉತ್ಪಾದನಾಂಗಗಳನ್ನು ಸರಿಯಾಗಿ ಉಪಯೋಗಿಸಿ ಕೊಂಡು ಪ್ರಗತಿ ಸಾಧಿಸಬೇಕು. ವ್ಯವಸ್ಥಾಪಕರು ಮತ್ತು ನಿರ್ವಾಹಕರಿಗೆ ಲಾಭದ ನಿರೀಕ್ಷೆಯಿಂದ ಉತ್ತೇಜನ ದೊರಕುತ್ತದೆ ಮತ್ತು ಪೈಪೋಟಿಯೂ ದಕ್ಷತೆಯನ್ನು ಹೆಚ್ಚಿಸಿಕೊಳ್ಳುವ ಕಡೆ ಗಮನ ಕೊಡು ವಂತೆ ಮಾಡುತ್ತದೆ. ಸರ್ಕಾರದ ತೆರಿಗೆ ವಿನಾಯಿತಿ ಮುಂತಾದುವುಗಳ ಮೂಲಕ ಉದ್ಯಮ ವ್ಯವಸ್ಥಾಪಕರಿಗೆ ಸಾಕಷ್ಟು ಲಾಭ ಕೈಸೇರುವಂತೆ ಮಾಡಬಹುದು.
  • ಏಕಸ್ವಾಮ್ಯ ಪ್ರವೃತ್ತಿಯನ್ನು ತಡೆಹಿಡಿಯುವ ಮೂಲಕ ಉತ್ಪಾದನೆಗೆ ಸಹಾಯಕವಾಗುವ ಪೈಪೋಟಿ ಕಡಿಮೆಯಾಗದಂತೆ ಮಾಡಬಹುದು. ಆರ್ಥಿಕ ಪ್ರಗತಿಯಲ್ಲಿ ಸಂಶೋಧನೆ ಮಹತ್ತರ ಪಾತ್ರ ವಹಿಸುತ್ತದೆ. ಹೊಸ ಉತ್ಪಾದನಾ ವಿಧಾನಗಳನ್ನು ಕಂಡುಹಿಡಿಯುವುದು ಮತ್ತು ಆ ಮೂಲಕ ತಾಂತ್ರಿಕ ಪ್ರಗತಿಯನ್ನು ಸಾಧಿಸುವುದು ಆವಶ್ಯಕ. ಇದಕ್ಕೂ ಸಾಕಷ್ಟು ಉತ್ತೇಜನವಿರಬೇಕು. ಹೊಸದನ್ನು ಕಂಡುಹಿಡಿದ ವರಿಗೆ ಸಂಭಾವನೆ ಕೊಡುವುದು, ಪಾರಿತೋಷಕ ಮುಂತಾದುವುಗಳಿಂದ ಪುರಸ್ಕರಿಸುವುದು-ಇವುಗಳಿಂದ ಸಂಶೋಧಕರಿಗೆ ಉತ್ತೇಜನ ದೊರಕುತ್ತದೆ.
  • ಸದಾ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ತನ್ನ ಅನುಭವದ ಆಧಾರದ ಮೇಲೆ ಕಾರ್ಯವಿಧಾನದಲ್ಲಿ ಹೊಸ ಮಾರ್ಗವನ್ನು ತೋರಿಸಬಹುದು. ಅಂಥ ಕಾರ್ಮಿಕರ ಕೆಲಸವನ್ನು ಮೆಚ್ಚಿ ಯೋಗ್ಯ ಪುರಸ್ಕಾರ ಕೊಟ್ಟರೆ ಆ ಕಾರ್ಯಕ್ಕೆ ಉತ್ತೇಜನ ದೊರಕುತ್ತದೆ. ರಾಷ್ಟ್ರದ ಆರ್ಥಿಕ ಪ್ರಗತಿಯಾಗ ಬೇಕಾದರೆ ಜನ ಹೆಚ್ಚು ಉಳಿತಾಯ ಮಾಡಿ ಬಂಡವಾಳ ಹೂಡಲು ಹಣ ಒದಗಿಸಬೇಕು. ಉಳಿಸಿದ ಹಣವನ್ನು ಬಚ್ಚಿಡದೆ ಬಂಡವಾಳ ಹೂಡಲು ಒದಗಿಸಬೇಕಾದರೆ ಅದರಿಂದ ಸಾಕಷ್ಟು ಪ್ರತಿಫಲ ಬರುವಂತಿರಬೇಕು. ಅಂದರೆ ಬಡ್ಡಿಯ ದರ ಆಕರ್ಷಕವಾಗಿರಬೇಕು.
  • ಬಂಡವಾಳ ಹೂಡುವವರಿಗೆ ಆಕರ್ಷಕ ಲಾಭ ದೊರುಕುವಂ ತಿರಬೇಕು. ಅವಶ್ಯವಾದ, ಆದರೆ ತತ್ಕ್ಷಣದಲ್ಲಿ ಸಾಕಷ್ಟು ಪ್ರತಿಫಲ ನೀಡದಿರುವ ಕೈಗಾರಿಕೆಗಳಲ್ಲಿ ಬಂಡವಾಳ ಹೂಡುವವರಿಗೆ ಉತ್ತೇಜನ ಕೊಡಲು ಸರ್ಕಾರ ಸಹಾಯಧನ ನೀಡುವುದು ಮತ್ತು ತೆರಿಗೆ ವಿನಾಯಿತಿ ಕೊಡುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕು. ಅಂದರೆ ಉತ್ತೇಜನಗಳನ್ನೊಳಗೊಂಡ ಖಜಾನೆ ನೀತಿಯನ್ನು ಸರ್ಕಾರ ಅನುಸರಿಸಬೇಕು. ಉದ್ಯಮಿಗಳ ಅಂಚಿನ ಲಾಭದ ಮೇಲೆ ಬೀಳುವ ತೆರಿಗೆಯ ಭಾರವನ್ನು ಇಳಿಸುವುದರಿಂದ ಖಾಸಗಿ ಉದ್ಯಮಿಗಳಿಗೆ ಉತ್ತೇಜನ ದೊರಕುತ್ತದೆ.
  • ರಾಷ್ಟ್ರದ ಹಿಂದುಳಿದ ಭಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಬಂಡವಾಳ ಹೂಡಲು ಉದ್ಯಮಿಗಳು ಹಿಂಜರಿಯುತ್ತಾರೆ. ಅಂಥ ಸ್ಥಳಗಳಿಗೆ ಉದ್ಯಮಿಗಳನ್ನು ಆಕರ್ಷಿಸಲು ಸರ್ಕಾರ ಪುಕ್ಕಟೆಯಾಗಿ ಅಥವಾ ಕಡಿಮೆ ದರದಲ್ಲಿ ಆವಶ್ಯಕ ಅನುಕೂಲತೆಗಳನ್ನು ಒದಗಿಸಿಕೊಡಬೇಕು ಮತ್ತು ಸಹಾಯಧನ ನೀಡುವುದರ ಮೂಲಕ ಉತ್ತೇಜನ ಕೊಡಬೇಕು. ಅಂತರಿಕವಾಗಿ ದೊರಕುವ ಬಂಡವಾಳವೇ ಹೆಚ್ಚಿನ ಪ್ರಮಾಣದ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಲದೇ ಇರುವುದರಿಂದ ವಿದೇಶೀ ಬಂಡವಾಳವನ್ನು ಆಕರ್ಷಿಸಲು ಸರಿಯಾದ ಉತ್ತೇಜನಗಳನ್ನು ದೊರಕಿಸಬೇಕು.
  • ಖಾಸಗೀ ಉದ್ಯಮವನ್ನು ರಾಷ್ಟ್ರೀಕರಿಸಬಹುದೆಂಬ ಭಯವನ್ನು, ನಿವಾರಿಸುವುದು, ಗಳಿಸಿದ ಲಾಭವನ್ನು ಸ್ವದೇಶಕ್ಕೆ ಕಳುಹಿಸಲು ವಿದೇಶೀ ವಿನಿಮಯದ ತೊಂದರೆ ಇಲ್ಲದಂತೆ ಮಾಡುವುದು- ಮುಂತಾದ ಅನುಕೂಲತೆಗಳನ್ನು ಕೊಡುವುದರ ಜೊತೆಗೆ ತೆರಿಗೆ ವಿನಾಯಿತಿ ಕೊಡುವುದರ ಮೂಲಕ ಲಾಭದ ನಿರೀಕ್ಷೆಯನ್ನು ಹೆಚ್ಚಿಸಿ ಉತ್ತೇಜನ ಕೊಡಬೇಕು.
  • ಆರ್ಥಿಕಪ್ರಗತಿಗೆ ನೆರವಾಗುವ ಉತ್ತೇಜಕಗಳನ್ನು ಒದಗಿಸುವುದು ಆಧುನಿಕ ಸರ್ಕಾರದ ಒಂದು ಮುಖ್ಯ ಹೊಣೆಯಾಗಿದೆ. ಮಾರುಕಟ್ಟೆಯ ಅಗೋಚರ ಶಕ್ತಿಗಳ ತಾಕಲಾಟದಿಂದ ಉತ್ತೇಜಕಗಳು ತಾವಾಗಿಯೇ ದೊರಕುವುದು ಸ್ವತಂತ್ರ ಆರ್ಥಿಕತೆಯಲ್ಲಿ ಮಾತ್ರ ಸಾಧ್ಯ. ಆದರೆ ಸ್ವತಂತ್ರ ಆರ್ಥಿಕತೆ ಅದರ ಪುರ್ಣಾರ್ಥದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ ಮತ್ತು ಆರ್ಥಿಕ ಚಟುವಟಿಕೆಗಳು ಬರಿಯ ಅಗೋಚರ ಶಕ್ತಿಗಳಿಂದಲೇ ನಿರ್ಣಯವಾಗುವುದಿಲ್ಲ.
  • ಆದ್ದರಿಂದ ಇಂದಿನ ಆರ್ಥಿಕತೆಯಲ್ಲಿ, ಅದರಲ್ಲೂ ಯೋಜನಾನುಸಾರವಾಗಿ ಪ್ರಗತಿ ಸಾಧಿಸುತ್ತಿರುವ ರಾಷ್ಟ್ರಗಳಲ್ಲಿ ಸರ್ಕಾರ ಉದ್ದೇಶಪುರ್ವಕವಾಗಿ ಉತ್ತೇಜಕಗಳನ್ನು ಒದಗಿಸಬೇಕಾಗಿದೆ. ಸರ್ಕಾರ ಉತ್ತೇಜಕಗಳನ್ನು ಒದಗಿಸುವುದರಲ್ಲಿ ಯಶಸ್ವಿಯಾದರೆ ಹೆಚ್ಚಿನ ಆರ್ಥಿಕ ಪ್ರಗತಿಯಾಗುವುದರಲ್ಲಿ ಸಂಶಯವಿಲ್ಲ.