ಕೊಡೆ

(ಆತಪತ್ರ ಇಂದ ಪುನರ್ನಿರ್ದೇಶಿತ)

ಕೊಡೆ ಅಥವಾ ಛತ್ರಿಯು ಕಟ್ಟಿಗೆ ಅಥವಾ ಲೋಹದ ಅಡ್ಡಪಟ್ಟಿಗಳಿಂದ ಆಧಾರಪಡೆದ, ಸಾಮಾನ್ಯವಾಗಿ ಒಂದು ಕಟ್ಟಿಗೆಯ, ಲೋಹದ, ಅಥವಾ ಪ್ಲಾಸ್ಟಿಕ್ ಕೋಲಿನ ಮೇಲೆ ಆರೋಹಿತವಾದ ಒಂದು ಮಡಚಬಲ್ಲ ಮೇಲಾವರಣ. ಇದನ್ನು ಒಬ್ಬ ವ್ಯಕ್ತಿಯನ್ನು ಮಳೆ ಅಥವಾ ಬೆಳಕಿನಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿರುತ್ತದೆ. ಕೆಲವು ಕೊಡೆಗಳು ಕೇವಲ ಮಳೆಯಿಂದ ರಕ್ಷಣೆ ಒದಗಿಸಲು ವಿನ್ಯಾಸಗೊಂಡಿರುತ್ತವೆ. ಮತ್ತೆ ಕೆಲವು ಸೂರ್ಯನಿಂದ ರಕ್ಷಣೆ ಒದಗಿಸಲು ವಿನ್ಯಾಸಗೊಂಡಿರುತ್ತವೆ. ಹಲವುವೇಳೆ ಇಂತಹ ಕೊಡೆಗಳಲ್ಲಿ ವ್ಯತ್ಯಾಸ ಮೇಲಾವರಣಕ್ಕೆ ಬಳಸಲ್ಪಡುವ ವಸ್ತುವಿನಲ್ಲಿರುತ್ತದೆ; ಕೆಲವು ಕೊಡೆಗಳು ಜಲನಿರೋಧಕವಾಗಿರುವುದಿಲ್ಲ. ಕೊಡೆಗಳ ಮೇಲಾವರಣಗಳನ್ನು ಬಟ್ಟೆ ಅಥವಾ ಮೆದುವಾದ ಪ್ಲಾಸ್ಟಿಕ್‍ನಿಂದ ತಯಾರಿಸಿರಬಹುದು.

ಕೊಡೆಗಳು ಮುಖ್ಯವಾಗಿ ವೈಯಕ್ತಿಕ ಬಳಕೆಗೆ ಬರುವಷ್ಟು ಗಾತ್ರ ಹೊಂದಿರುವ, ಕೈಯಲ್ಲಿ ಹಿಡಿಯುವ, ಸಾಗಿಸಬಲ್ಲ ಸಾಧನಗಳಾಗಿರುತ್ತವೆ. ಗಾಲ್ಫ್ ಕೊಡೆಗಳು ಅತ್ಯಂತ ದೊಡ್ಡ ಕೈ ಹಿಡಿಯ ಕೊಡೆಗಳಾಗಿವೆ. ಕೊಡೆಗಳನ್ನು ಎರಡು ವರ್ಗಗಳಾಗಿ ವಿಭಜಿಸಬಹುದು: ಸಂಪೂರ್ಣವಾಗಿ ಬಾಗಿಕೊಳ್ಳಬಹುದಾದ ಕೊಡೆಗಳು, ಇವುಗಳಲ್ಲಿ ಮೇಲಾವರಣವನ್ನು ಆಧರಿಸಿರುವ ಲೋಹದ ಕೋಲು ಒಳಸರಿಯುತ್ತದೆ, ಮತ್ತು ಹೀಗೆ ಕೊಡೆಯು ಕೈಚೀಲದಲ್ಲಿ ಹಿಡಿಸುವಷ್ಟು ಚಿಕ್ಕದಾಗುತ್ತದೆ; ಮತ್ತು ಬಾಗಿಕೊಳ್ಳದ ಕೊಡೆಗಳು, ಇವುಗಳಲ್ಲಿ ಆಧಾರ ದಂಡವು ಒಳಸರಿಯುವುದಿಲ್ಲ ಮತ್ತು ಕೇವಲ ಮೇಲಾವರಣವನ್ನು ಬಾಗಿಸಬಹುದು. ಕೈಯಾರೆ ನಿರ್ವಹಿಸಲಾದ ಕೊಡೆಗಳು ಮತ್ತು ಲಂಘಕವನ್ನು ಹೊಂದಿದ ಸ್ವಯಂಚಾಲಿತ ಕೊಡೆಗಳ ನಡುವೆ ಮತ್ತೊಂದು ವ್ಯತ್ಯಾಸವನ್ನು ಮಾಡಬಹುದು. ಲಂಘಕವಿರುವ ಕೊಡೆಗಳು ಗುಂಡಿ ಒತ್ತುತ್ತಿದ್ದಂತೆ ತೆರೆದುಕೊಳ್ಳುತ್ತವೆ.

ಕೈಯಲ್ಲಿ ಹಿಡಿಯಬಹುದಾದ ಕೊಡೆಗಳು ಯಾವುದೋ ಪ್ರಕಾರದ ಕೈಹಿಡಿಯನ್ನು ಹೊಂದಿರುತ್ತವೆ, ಕಟ್ಟಿಗೆಯ ಅಥವಾ ಪ್ಲಾಸ್ಟಿಕ್ ಉರುಳೆ ಅಥವಾ ಬಾಗಿದ, ಸೊಟ್ಟನೆಯ ಕೈಹಿಡಿ (ಛಡಿಯ ಕೈಹಿಡಿಯಂತೆ). ಕೊಡೆಗಳು ಒಂದು ಶ್ರೇಣಿಯ ಬೆಲೆ ಮತ್ತು ಗುಣಮಟ್ಟದಲ್ಲಿ, ಅಗ್ಗದ, ರಿಯಾಯಿತಿ ಅಂಗಡಿಗಳಲ್ಲಿ ಮಾರಾಟಮಾಡಲಾದ ಸಾಧಾರಣ ಗುಣಮಟ್ಟದ ಮಾದರಿಗಳಿಂದ ಹಿಡಿದು ದುಬಾರಿ, ನವುರಾಗಿ ತಯಾರಿಸಲಾದ, ವಿನ್ಯಾಸಕಾರರ ಗುರುತುಪಟ್ಟಿಯಿರುವ ಮಾದರಿಗಳವರೆಗೆ ಲಭ್ಯವಿವೆ. ಹಲವು ಜನರಿಗಾಗಿ ಸೂರ್ಯನನ್ನು ಪ್ರತಿಬಂಧಿಸಬಲ್ಲ ಹೆಚ್ಚು ದೊಡ್ಡ ಕೊಡೆಗಳನ್ನು ಹಲವುವೇಳೆ ಭದ್ರಪಡಿಸಿದ ಅಥವಾ ಅರೆಭದ್ರ ಸಾಧನಗಳಾಗಿ ಬಳಸಲಾಗುತ್ತದೆ ಮತ್ತು ಒಳಾಂಗಣ ಮೇಜುಗಳು, ಅಥವಾ ಇತರ ಹೊರಾಂಗಣ ಪೀಠೋಪಕರಣಗಳೊಂದಿಗೆ, ಅಥವಾ ಬಿಸಿಲಿರುವ ಕಡಲತೀರದಲ್ಲಿ ನೆರಳಿಗಾಗಿ ಬಳಸಲಾಗುತ್ತದೆ. ಆಧುನಿಕ ಕೊಡೆಯ ನೇರ ಪೂರ್ವಾಧಿಕಾರಿಯಾದ ಬಾಗಿಸಬಲ್ಲ/ಮಡಚಬಲ್ಲ ಕೊಡೆಯು ಚೀನಾದಲ್ಲಿ ಹುಟ್ಟಿಕೊಂಡಿತು.[೧] ಚೀನಾದ ಈ ಕೊಡೆಗಳು ಆಂತರಿಕವಾಗಿ ಆಧಾರ ಹೊಂದಿದ್ದವು ಮತ್ತು ಇವುಗಳಲ್ಲಿ ಮಡಚಬಲ್ಲ, ಹಿಂದೆ ಸರಿಸಬಲ್ಲ ಮತ್ತು ವಿಸ್ತರಿಸಬಲ್ಲ ಕೀಲುಗಳು ಜೊತೆಗೆ ಇಂದು ಬಳಕೆಯಲ್ಲಿರುವ ಕೊಡೆಗಳನ್ನು ಹೋಲುವ ಜಾರಿಸಬಲ್ಲ ಸನ್ನೆಕೋಲುಗಳು ಇದ್ದವು.

ಉಲ್ಲೇಖಗಳು ಬದಲಾಯಿಸಿ

  1. Ong, Siew Chey (2005). China condensed: 5000 years of history & culture (1st ed.). Singapore: Times Editions Marshall Cavendish. p. 170. ISBN 978-981-261-067-6.
"https://kn.wikipedia.org/w/index.php?title=ಕೊಡೆ&oldid=817684" ಇಂದ ಪಡೆಯಲ್ಪಟ್ಟಿದೆ