ಅಷ್ಟಾದಶ ವರ್ಣನೆಗಳು

ಮಹಾಕಾವ್ಯದ ಅಂಗಗಳು ಎಂದು ಪ್ರಸಿದ್ಧವಾಗಿರುವ ನಗರ, ಅರ್ಣವ, ಶೈಲ, ಋತು, ಚಂದ್ರೋದಯ, ಸೂರ್ಯೋದಯ, ವನವಿಹಾರ, ಜಲಕ್ರೀಡೆ, ಮಧುಪಾನವಿನೋದ, ಸುರತೋತ್ಸವ, ವಿಯೋಗ, ವಿವಾಹ, ಕುಮಾರಜನನ, ಮಂತ್ರಾಲೋಚನೆ, ದೂತಕಾರ್ಯ, ವಿಜಯಯಾತ್ರೆ, ಯುದ್ಧ, ನಾಯಕನ ವಿಜಯ-ಎಂಬ ವರ್ಣನೀಯ ವಿಷಯಗಳನ್ನು ಅಷ್ಟಾದಶ ವರ್ಣನೆಗಳೆಂದು ವ್ಯವಹರಿಸುವುದು ರೂಢಿಯಾಗಿದೆ. ಇವನ್ನು ಕಾವ್ಯಸ್ಥಾನಗಳೆಂದೂ ಸ್ಥಲಗಳೆಂದೂ ವರ್ಣಕಗಳೆಂದೂ ಲಾಕ್ಷಣಿಕರು ಬೇರೆ ಬೇರೆಯಾಗಿ ಕರೆದಿರುವುದುಂಟು. ಪ್ರಾಚೀನ ಸಂಸ್ಕೃತ ಆಲಂಕಾರಿಕನಾದ ದಂಡಿ (ಸು. 7 ಅಥವಾ 8ನೆಯ ಶತಮಾನ) ಕಾವ್ಯಾದರ್ಶವೆಂಬ ತನ್ನ ಅಲಂಕಾರ ಶಾಸ್ತ್ರಗ್ರಂಥದಲ್ಲಿ ಸರ್ಗಬಂಧ ಅಥವಾ ಮಹಾಕಾವ್ಯದ ವರ್ಣನಾಂಗಗಳಾಗಿ ಮೊದಲಬಾರಿಗೆ ನಿರೂಪಿಸಿರುತ್ತಾನೆ. ಅಂದಿನಿಂದ ಸಂಸ್ಕೃತದಲ್ಲೂ ದೇಶಭಾಷೆಗಳಲ್ಲೂ ಅಲಂಕಾರಿಕರು ಮಹಾಕಾವ್ಯಲಕ್ಷಣವನ್ನು ಕುರಿತ ತಮ್ಮ ವಿವರಣೆಗಳಲ್ಲಿ ಅವುಗಳಲ್ಲಿ ಎಲ್ಲವನ್ನೋ ಕೆಲವನ್ನೋ ಉಲ್ಲೇಖಿಸಿರುತ್ತಾರೆ. ರುದ್ರಟನ (ಸು. 850) ಕಾವ್ಯಾನುಶಾಸನ, ಭೋಜದೇವನ (ಸು. 1005-54) ಸರಸ್ವತೀ ಕಂಠಾಭರಣ, ಹೇಮಚಂದ್ರನ (1088-1172) ಕಾವ್ಯಾನುಶಾಸನ, ವಾಗ್ಭಟನ (ಸು.1150ರಿಂದೀಚೆ) ಕಾವ್ಯಾನುಶಾಸನ, ಅಮರಚಂದ್ರಸೂರಿ ಮತ್ತು ಅರಿಸಿಂಹಕೃತವಾದ (13ನೆಯ ಶತಮಾನ)ಕಾವ್ಯ ಕಲ್ಪಲತಾ ಅಥವಾ ಕವಿಶಿಕ್ಷಾ, ವಿಶ್ವನಾಥನ (1300-84) ಸಾಹಿತ್ಯದರ್ಪಣ, ವಿದ್ಯಾನಾಥನ (14ನೆಯ ಶತಮಾನದ ಮೊದಲ ಪಾದ) ಪ್ರತಾಪರುದ್ರ ಯಶೋಭೂಷಣ, ಕೇಶವಮಿಶ್ರಕೃತವಾದ (16ನೆಯ ಶತಮಾನದ ಉತ್ತರಾರ್ಧ) ಅಲಂಕಾರ ಶೇಖರ, ಶ್ರೀಕೃಷ್ಣಕವಿಯ (1600ರಿಂದೀಚೆ) ಮಂದಾರ ಮಕರಂದ ಚಂಪು, ನರಸಿಂಹಕವಿಯ (18ನೆಯ ಶತಮಾನ) ನಂಜರಾಜ ಯಶೋಭೂಷಣ, ಕಾಂತಿಚಂದ್ರ ವಿದ್ಯಾರತ್ನನ (19ನೆಯ ಶತಮಾನ) ಕಾವ್ಯ ದೀಪಿಕಾ- ಈ ಕೆಲವು ಅಲಂಕಾರ ಶಾಸ್ತ್ರ ಗ್ರಂಥಗಳಲ್ಲೂ ವಿಶ್ವಕೋಶದಂತೆ ವಿಷಯ ಸಂಗ್ರಹವನ್ನುಳ್ಳ ಅಗ್ನಿಪುರಾಣ (ಸು. 11ನೆಯ ಶತಮಾನ), ಕೆಳದಿ ಬಸವರಾಜನ ಶಿವತತ್ತ್ವರತ್ನಾಕರ-ಇಂಥ ಕೆಲವು ಕೃತಿಗಳಲ್ಲೂ ದಂಡಿ ನಿರೂಪಿಸಿರುವ ವರ್ಣನೆಗಳನ್ನು ಯಥಾವತ್ತಾಗಿಯೂ ಯಥೋಚಿತವಾಗಿಯೂ ಮಹಾಕಾವ್ಯದ ಉಪಯುಕ್ತಾಂಗಗಳಾಗಿ ಮತ್ತೆ ಮತ್ತೆ ನಿರೂಪಿಸಿರು ವುದು ಕಂಡುಬರುತ್ತದೆ. ಹೀಗೆಯೇ ಕನ್ನಡದಲ್ಲಿ ಶ್ರೀ ವಿಜಯನ ಕವಿರಾಜಮಾರ್ಗ (ಸು. 850), ನಾಗವರ್ಮ II ನ ಕಾವ್ಯಾವಲೋಕನ, ಉದಯಾದಿತ್ಯನ ಉದಯಾದಿತ್ಯಲಂಕಾರ (ಸು. 1150), ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವ (ಸು. 1240), ಮಾಧವನ ಮಾಧವಾಲಂಕಾರ (ಸು. 1500), ಮಂಗರಾಜನ ಅಭಿನವಾಭಿದಾನಂ (1398), ನಿಜಗುಣ ಶಿವಯೋಗಿಯ ವಿವೇಕಚಿಂತಾಮಣಿ (ಸು. 1500)-ಈ ಕೆಲವು ಅಲಂಕಾರ ಮತ್ತು ಅಲಂಕಾರೇತರ ಗ್ರಂಥಗಳಲ್ಲೂ ಅಷ್ಟಾದಶವರ್ಣನೆಗಳ ವಿವರಣೆ ಬರುತ್ತದೆ. ಸಂಸ್ಕೃತದಲ್ಲಾಗಲಿ ಕನ್ನಡದಲ್ಲಾಗಲಿ ಲಾಕ್ಷಣಿಕರೂ ಇತರರೂ ದಂಡಿಯ ಕಾವ್ಯಾದರ್ಶದಲ್ಲಿ ಸಾಮಾನ್ಯವೂ ಪ್ರಾತಿನಿಧಿಕವೂ ಆಗಿ ಹೇಳಿರುವ ಕೆಲವು ವರ್ಣನೆಗಳನ್ನೇ ಶಾಸ್ತ್ರನಿಯಮಾನುಸಾರವಾಗಿ ಗತಾನುಗತಿಕವಾಗಿ ಉಲ್ಲೇಖಿಸುತ್ತ ಹೋದುದರಿಂದ ಅಷ್ಟಾದಶವರ್ಣನೆಯೆಂಬುದು ಮಹಾಕಾವ್ಯದ ಒಂದು ಪ್ರಸ್ಥಾನವಾಗಿ ರೂಢಿಗೆ ಬಂತು. ವಿಷ್ಣುಧರ್ಮೋತ್ತರಪುರಾಣ (ಸು. 5 ಅಥವಾ 6ನೆಯ ಶತಮಾನ) ಮತ್ತು ಭಾಮಹನ ಕಾವ್ಯಾಲಂಕಾರ (ಸು. 6ಅಥವಾ 7ನೆಯ ಶತಮಾನ)-ಇವುಗಳಲ್ಲಿ ಮಹಾಕಾವ್ಯದ ರಾಜನೈತಿಕ ಸಾರಸಾಮಗ್ರಿಯೂ ಇತಿವೃತ್ತದ ಹಂದರವೂ ಆದ ಮಂತ್ರ ದೂತ ಪ್ರಯಾಣ ಆಜಿ ನಾಯಕಾಭ್ಯುದಯ ಎಂಬ ಐದು ಅಂಗಗಳು ಮಹಾಕಾವ್ಯದಲ್ಲಿ ಆವಶ್ಯಕಾಂಗಗಳಾಗಿ ಉಕ್ತವಾಗಿವೆ. ಭಾರವಿ ಹಾಕಿದ ಸಂಪ್ರದಾಯವನ್ನು ನೋಡಿಕೊಂಡೇ ಭಾಮಹಾದಿಗಳು ಮಂತ್ರದೂತಾದಿಗಳನ್ನು ಮಹಾಕಾವ್ಯದ ಮುಖ್ಯಾಂಗಗಳಾಗಿ ಪರಿಗಣಿಸಿದರೆಂದು ಕೆಲವರು ಭಾವಿಸಿದ್ದಾರೆ. ಇವು ಒಳಕೊಳ್ಳುವಂತೆ ದಂಡಿ ವರ್ಣನೀಯ ವಿಷಯಗಳ ವಿವರಗಳನ್ನು ಬೆಳೆಸಿದ್ದಾನೆ. ದಂಡಿಗೆ ಅನಂತರದಲ್ಲಿ ರುದ್ರಟ, ಹೇಮಚಂದ್ರ, ಅಮರಚಂದ್ರಸೂರಿ, ಕೇಶವಮಿತ್ರ ಮೊದಲಾದವರು ಸ್ವತಂತ್ರಿಸಿ ವರ್ಣನಾಂಗಗಳನ್ನೂ ಅದರ ಉಪಾಂಗಗಳನ್ನೂ ಬಿಡಿಬಿಡಿಸಿ ಬೆಳೆಸಿರುತ್ತಾರೆ. ಮಹಾಕಾವ್ಯವೆಂದರೆ ಅಷ್ಟಾದಶವರ್ಣನೆಗಳಿಂದ ರಚಿತವಾದುದು ಎಂದು ಅಭಿಪ್ರಾಯವಾಗುವಂತೆ ಅದಕ್ಕೆ ಪ್ರಾಶಸ್ತ್ಯಕೊಟ್ಟಿರುವುದು ಹಲವರು ಆಲಂಕಾರಿಕರಲ್ಲಿ ಕಾಣುತ್ತದೆ. ವಿದ್ಯಾನಾಥ ಕವಿರಾಜಮಾರ್ಗಕಾರ ಮೊದಲಾದವರಲ್ಲಿ ಇದನ್ನು ಗಮನಿಸಬಹುದು. ಪುರ್ವೋಕ್ತವಾದ ನಗರಾರ್ಣಾವಾದಿ ಅಂಗಗಳಲ್ಲಿ ಕೆಲವು ನ್ಯೂನವಾಗಿದ್ದರೂ ಮಹಾಕಾವ್ಯತ್ವಕ್ಕೆ ದೋಷವಿಲ್ಲವೆಂದೂ ಕವಿ ವರ್ಣಿಸಿರುವಷ್ಟು ಅಂಗಗಳೇ ತಮ್ಮ ಕಾವ್ಯಗುಣಗಳಿಂದ ಕಾವ್ಯಜ್ಞರನ್ನು ಸಂತೋಷಪಡಿಸುವಂತಿದ್ದರೆ ಸಾಕೆಂದೂ ದಂಡಿಯೇ ಅಭಿಪ್ರಾಯ ಪಟ್ಟಿರುತ್ತಾನೆ. ಇದನ್ನು ಮೊದಮೊದಲಿನ ಕೆಲವು ಲಾಕ್ಷಣಿಕರು ಒಪ್ಪಿದ್ದಾರೆ. ಹೇಮಚಂದ್ರನ ಕಾವ್ಯಾನುಶಾಸನದಲ್ಲಿ ನಗರಾರ್ಣವಾದಿ ವರ್ಣನೆಗಳನ್ನು ಕಾವ್ಯದಲ್ಲಿ ಕಡ್ಡಾಯವಾಗಿ ಅಥವಾ ವಿಕಲ್ಪವಾಗಿ ಬಳಸುವುದರ ಬಗೆಗೆ ವಿಚಾರ ನಡೆದಿದೆ; ಔಚಿತ್ಯದೃಷ್ಟಿಯನ್ನು ವಿಮರ್ಶಿಸಿದೆ. ವರ್ಣನೆಗಳ ಸಂಖ್ಯೆಗಾಗಲಿ ಸರಣಿಗಾಗಲಿ ಭಂಗವಾಗದ ಹಾಗೆ ಅವುಗಳನ್ನು ಮಹಾಕಾವ್ಯದಲ್ಲಿ ವರ್ಣಿಸತಕ್ಕದ್ದೆಂದು ಗಣ್ಯರಾದ ಶಾಸ್ತ್ರಕಾರರು ಯಾರೂ ಸಾಮಾನ್ಯವಾಗಿ ವಿಧಿಸಲಿಲ್ಲ. ಕಾವ್ಯ ಮೈಗೊಳ್ಳುವುದು ಕಥೆಯಿಂದ; ಕಥೆ ವರ್ಣನೆಗಳ ಪರಿಪೋಷಣೆಯಿಂದ; ವರ್ಣನಾಂಗಗಳು ಕಥಾರೀತಿ ಮತ್ತು ಕಥೆಯ ಆವಶ್ಯಕತೆಗೆ ಅನುಗುಣವಾಗಿ ಸಹಜವಾಗಿ ವರ್ಣಿತವಾಗಿದ್ದರೆ ಕಾವ್ಯದ ಸೊಬಗು ಹೆಚ್ಚುತ್ತದೆ-ಎನ್ನುವುದೇ ಪ್ರಸಿದ್ಧವಾದ ಆಲಂಕಾರಿಕರ ಅಭಿಪ್ರಾಯ. ಭೋಜನು ಸರಸ್ವತೀಕಂಠಾಭರಣದಲ್ಲಿ ರೂಢಿಯ 18 ವರ್ಣನೆಗಳು ಕಾವ್ಯದಲ್ಲಿ ರಸಪೋಷಕವಾಗಿ ಬಳಸಲ್ಪಡುತ್ತವೆಯೆಂದಿದ್ದಾನೆ; ಆ ಮೂಲಕವಾಗಿ ಆತ ಕಾವ್ಯಸ್ಥಾನಗಳಲ್ಲಿ ರಸಪ್ರಾಧಾನ್ಯವನ್ನು ಒತ್ತಿ ಹೇಳಿದ್ದಾನೆ. ಸಂಸ್ಕೃತದಲ್ಲಾಗಲಿ ಕನ್ನಡದಲ್ಲಾಗಲಿ ಉತ್ತಮ ಮಹಾಕಾವ್ಯಗಳು ಅಷ್ಟಾದಶವರ್ಣನಾತ್ಮಕವಾಗಿ ಕಟ್ಟಿದವುಗಳಲ್ಲ. ಅವುಗಳಲ್ಲಿ ಅಷ್ಟಾದಶವರ್ಣನೆ ಗಳು ಕವಿಯಿಷ್ಟದಂತೆ ಸಂದರ್ಭೋಚಿತವಾಗಿ ಸ್ವಲ್ಪ ಹೆಚ್ಚೋ ಕಡಿಮೆಯೋ ಆಗಿ ಪ್ರಾಶಸ್ತ್ಯ ಪಡೆದು ವರ್ಣಿತವಾಗಿರುತ್ತವೆ. ಕಥೆ ಪಾತ್ರ ರಸ ಮೊದಲಾದವುಗಳಲ್ಲಿ ಔಚಿತ್ಯದೃಷ್ಟಿಯನ್ನು ಮೀರಿ, ಅವನ್ನು ಮರೆಸಿಬಿಡುವ ಮಟ್ಟಿಗೆ ವರ್ಣನೆಗಳ ಹಾವಳಿ ಹೆಚ್ಚಾದಾಗ, ಅಂಥ ಮಹಾಕಾವ್ಯಗಳಲ್ಲಿ ಕವಿ ಅಷ್ಟಾದಶ ವರ್ಣನೆಗಳ ಕೋಟಲೆಗೆ ಒಳಗಾಗಿ ಕೃತಕವಾದ ಕಾವ್ಯಮಾರ್ಗವನ್ನು ಹಿಡಿದಿದ್ದಾನೆಂದು ಹೇಳಬಹುದು. ಇದಕ್ಕೆ ಸಂಸ್ಕೃತದಲ್ಲೂ ಕನ್ನಡದಲ್ಲೂ ಇತರ ದೇಶ ಭಾಷೆಗಳಲ್ಲೂ ಬೇಕಾದ ಹಾಗೆ ನಿದರ್ಶನಗಳಿವೆ.