ಅಶ್ವಿನಿ (ಕಾದಂಬರಿಗಾರ್ತಿ)

ಅಶ್ವಿನಿ ಕಾವ್ಯನಾಮದಲ್ಲಿ ಬರೆಯುತ್ತಿರುವ ಎಂ.ವಿ.ಕನಕಮ್ಮನವರು ಕನ್ನಡ‍ದ ಖ್ಯಾತ ಲೇಖಕಿ. ಇವರ ಕಾದಂಬರಿಗಳು ಧಾರಾವಾಹಿಯಾಗಿ ಕನ್ನಡ‍ದ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಇವರ ಜನನ ಕೋಲಾರ‍ದಲ್ಲಿ ಆಯಿತು. ಎಮ್.ಎಸ್‍ಸಿ ಪದವೀಧರೆಯಾದ ಇವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು ೨೬ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಆಶ್ವಿನಿಯವರು ೭, ನವೆಂಬರ ೨೦೦೭ರಂದು ತಮ್ಮ ೭೪ನೆಯ ವಯಸ್ಸಿನಲ್ಲಿ ನಿಧನರಾದರು.

ಅಶ್ವಿನಿ
ಜನನ(೧೯೩೩-೧೧-೦೧)೧ ನವೆಂಬರ್ ೧೯೩೩
ಚಿಂತಾಮಣಿ, ಕೋಲಾರ ಜಿಲ್ಲೆ, ಕರ್ನಾಟಕ, ಭಾರತ
ಮರಣನವೆಂಬರ್ 7, 2007(2007-11-07)
ಬೆಂಗಳೂರು, ಕರ್ನಾಟಕ, ಭಾರತ
ವೃತ್ತಿಕಾದಂಬರಿಕಾರ, ಕಥೆಗಾರರು,
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿಕಾದಂಬರಿ

ಜೀವನಚರಿತ್ರೆ ಬದಲಾಯಿಸಿ

ಎಂ.ವಿ. ಕನಕಮ್ಮನವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ, ನವಂಬರ್ ೧ರ ೧೯೩೩ನೇ ಇಸವಿಯಲ್ಲಿ. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ರಾಮಯ್ಯನವರು ಹೆಚ್ಚಿನ ಪ್ರೋತ್ಸಾಹ ನೀಡಿದರು. ಸ್ಟಾಟಿಸ್ಟಿಕ್ಸ್ ಓದಲು ಪದವಿಗಾಗಿ ಸೇರಿದ ಕನಕಮ್ಮನವರು ಎಂ.ಎಸ್ಸಿ. ಪರೀಕ್ಷೆಯಲ್ಲೂ ಮೊದಲ ದರ್ಜೆಯಲ್ಲೇ ತೇರ್ಗಡೆ ಹೊಂದಿ ಸ್ನಾತಕೋತ್ತರ ಪದವೀಧರೆ ಎನಿಸಿಕೊಂಡರು. ಪದವೀಧರೆಯಾದ ನಂತರ ಬೆಂಗಳೂರಿನ ಅಕೌಂಟೆಂಟ್ ಜನರಲ್ ರವರ ಕಚೇರಿಯಲ್ಲಿ ಉದ್ಯೋಗ ದೊರೆಯಿತು. ಇದೇ ಸಂದರ್ಭದಲ್ಲಿ ಸರಕಾರ ಸ್ಥಾಪಿಸಿದ ಕೃಷಿ ವಿಶ್ವವಿದ್ಯಾಲಯವು ಪ್ರಾರಂಭವಾದ್ದರಿಂದ, ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಆಡಳಿತಾಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ವಿಶ್ವವಿದ್ಯಾಲಯದಲ್ಲೇ ೨೬ ವರ್ಷಕಾಲ ದೀಘಸೇವೆ ಸಲ್ಲಿಸಿ ೧೯೯೩ರಲ್ಲಿ ನಿವೃತ್ತರಾದರು. ಚಿಕ್ಕಂದಿನಿಂದಲೂ ಓದುವ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ಇವರು ಅಕೌಂಟೆಂಟ್‌ರವರ ಕಚೇರಿಯಲ್ಲಿದ್ದಾಗಲೇ ಕಿರು ಪ್ರಹಸನಗಳನ್ನು ಆಕಾಶವಾಣಿಗಾಗಿ ಬರೆದು ಕೊಡತೊಡಗಿದ್ದರು. ಹೀಗೆ ಪ್ರಾರಂಭವಾದ ಇವರ ಸಾಹಿತ್ಯದ ಬರವಣಿಗೆ ಸಾಗುತ್ತಾ ಬಂದು ‘ನಿಲುಕದ ನಕ್ಷತ್ರ’ ಎಂಬ ಕಾದಂಬರಿಯನ್ನು ರಚಿಸಿದರು. ಕಾದಂಬರಿ ಓದಿದ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದರಾದರೂ ಪ್ರಕಾಶಕರು ಕಾದಂಬರಿಯನ್ನು ಪ್ರಕಟಿಸಲು ಮುಂದೆ ಬಾರದಿದ್ದಾಗ ನಿರಾಶರಾದರು. ಒಮ್ಮೆ ನಾಡಿಗೇರ ಕೃಷ್ಣರಾಯರನ್ನು ಭೇಟಿಯಾಗುವ ಸಂದರ್ಭ ಬಂದಾಗ ನಮ್ಮ ಅಳಲನ್ನು ತೋಡಿಕೊಂಡರು. ಆಗ ವಾಡಿಗೇರರು ಕಾದಂಬರಿಗಿಂತ ಚಿಕ್ಕ ಚಿಕ್ಕ ಲೇಖನಗಳನ್ನು ಪತ್ರಿಕೆಗೆ ಬರೆದು ಕಳುಹಿಸಲು ಸಲಹೆ ನೀಡಿದರು. ಇದರಂತೆ ‘ಕನಕಿಯ ಓಲೆಗಳು’ ಎಂಬ ಹೆಸರಿನಿಂದ ಬರೆದರಾದರೂ ಅವು ಕೂಡಾ ತಕ್ಷಣ ಪ್ರಕಟವಾಗಲಿಲ್ಲ. ಅನಂತರ ಬರೆದ ವೆಂಕಟೂವಿನ ಬುಗುರಿ, ತುಪ್ಪದ ದೀಪ,ನಾನೇಕೆ ಬೇಡವಾದೆ ಮುಂತಾದ ಇಪ್ಪತ್ತು ಕಥೆಗಳು ಸುಧಾ, ಮಯೂರಿ, ಪ್ರಜಾಮತ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡಂತೆ ಇವರಿಗೆ ಪ್ರಖ್ಯಾತಿಯನ್ನೂ ತಂದು ಕೊಟ್ಟಿತು. ಇವರು ಬರೆದ ಮೊದಲ ಕಾದಂಬರಿ ‘ನಿಲುಕದ ನಕ್ಷತ್ರ’ ವನ್ನು ಸಂಯುಕ್ತ ಕರ್ನಾಟಕ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣನವರು ಪ್ರಕಟಿಸಿ ಪ್ರೋತ್ಸಾಹಿಸಿದರು. ನಂತರ ಇವರು ಬರೆದ ಕಪ್ಪುಕೊಳ, ಬೆಸುಗೆ, ಮೃಗತೃಷ್ಣಾ, ಬಿಂದಿಯಾ, ಆಕರ್ಷಿತ, ಯೋಗಾಯೋಗ ಮುಂತಾದ ಇಪ್ಪತ್ತಕ್ಕೂ ಮಿಕ್ಕ ಕಾದಂಬರಿಗಳು ಸುಧಾ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು. ಇವರ ಮನೆಮಾತು ತಮಿಳು, ಓದಿದ್ದು ಕನ್ನಡ, ಇಂಗ್ಲಿಷ್, ಬಾಲ್ಯ ಕಳೆದದ್ದು ತೆಲುಗು ಭಾಷಿತ ಪ್ರದೇಶ, ಉದ್ಯೋಗಿಯಾಗಿ ಕಲಿತದ್ದು ಹಿಂದಿ, ಹೀಗೆ ಹಲವಾರು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಇವರು ರಚಿಸಿದ ಬಹುತೇಕ ಕಾದಂಬರಿಗಳು ನಾಯಕಿ ಪ್ರಧಾನವಾಗಿದ್ದ ಧೈರ್ಯ ಸಾಹಸಗಳ ಪ್ರತೀಕವಾಗಿವೆ. ಇಂತಹ ಸಾಹಸ ಪ್ರವೃತ್ತಿಯನ್ನು ಮೆಚ್ಚುತ್ತಿದ್ದುದರಿಂದಲೇ ಇಂಗ್ಲಿಷ್‌ನ ಕಾದಂಬರಿಗಾರ್ತಿ ಡೆನಿಸ್ ರಾಬಿನ್ಸ್ ರವರ ಕಥೆಯನ್ನು ಆಧಾರವಾಗಿಟ್ಟುಕೊಂಡು ನಮ್ಮ ಪರಿಸರಕ್ಕೆ ಹೊಂದುವಂತೆ ರಚಿಸಿದ್ದು ‘ಕಪ್ಪುಕೊಳ’. ಇಂ. ತೆಲುಗಿನಲ್ಲೂ ಪ್ರಾವೀಣ್ಯತೆ ಪಡೆದಿದ್ದುದರಿಂದ ಯದ್ದನಪೂಡಿ ಸುಲೋಚನ ರವರ ‘ವಿಜೇತ’ ಹಾಗೂ ‘ನಾನು ಲೇಖಕಿ ಅಲ್ಲ’ ಎಂಬ ಎರಡು ಕಾದಂಬರಿಗಳನ್ನು ಕನ್ನಡೀಕರಿಸಿದ್ದಾರೆ. ಇವರು ಬರೆದದ್ದು ಬರೇ ಕಾದಂಬರಿಗಳೇ ಅಲ್ಲದೆ. ಆಗಾಗ್ಗೆ ಪತ್ರಿಕೆಗಳಿಗಾಗಿ ಸಣ್ಣ ಕಥೆಗಳನ್ನೂ ರಚಿಸಿದರು. ಅವೆಲ್ಲವೂ ‘ದಂತಗೋಪುರ’ ಮತ್ತು ‘ತುಪ್ಪದ ದೀಪ’ ಎಂಬ ಸಂಕಲನಗಳಲ್ಲಿ ಸೇರಿವೆ. ಇವರು ರಚಿಸಿದ್ದು ನಿಲುಕದ ನಕ್ಷತ್ರ, ಮೈತ್ರಿ, ಕಪ್ಪುಕೊಳ, ಬೆಸುಗೆ, ಹುತ್ತದ ಸುತ್ತ, ಯೋಗಾಯೋಗ, ವಿಜೇತ, ಮೃಗತೃಷ್ಣಾ, ಆನಂದವನ, ನಾನು ಲೇಖಕಿ ಅಲ್ಲ, ಬಿಂದಿಯಾ, ಆಕರ್ಷಿತ, ನಿಮಿತ್ತ, ಬಾಲ್ಯಸಖ, ಪ್ರೇಮಸೋಪಾನ, ಮತ್ತು ವಿಸ್ಮೃತಿ ಕಾದಂಬರಿಗಳಾದರೆ ‘ತುಪ್ಪದ ದೀಪ’ ಮತ್ತು ‘ದಂತಗೋಪುರ’ ಎಂಬ ಎರಡು ಕಥಾಸಂಕಲನಗಳು. ಹೀಗೆ ಅಶ್ವಿನಿಯವರ ಕಾದಂಬರಿಗಳು ಬಹು ಜನಪ್ರಿಯತೆ ಪಡೆದದ್ದರಿಂದಲೇ ಬೆಸುಗೆ, ಕಪ್ಪುಕೊಳ, ನಿಲುಕದ ನಕ್ಷತ್ರ. ಅವೇ ಹೆಸರಿನಿಂದ ಚಲನಚಿತ್ರವಾಗಿ ತೆರೆಕಂಡಿದ್ದರೆ; ಮೃಗಕೃಷ್ಣಾ ಕಾದಂಬರಿಯು ‘ಕಾಮನಬಿಲ್ಲು’ ಎಂಬ ಹೆಸರಿನಿಂದಲೂ ವಿಸ್ಮೃತಿ ಕಾದಂಬರಿಯು ‘ಮನ ಮಿಡಿಯಿತು’ ಎಂಬ ಹೆಸರಿನಿಂದಲೂ ಚಲನ ಚಿತ್ರಗಳಾಗಿ ಮೆಚ್ಚುಗೆ ಪಡೆದವು. ಅಪಾರ ಜನ ಮೆಚ್ಚುಗೆ ಪಡೆದಿದ್ದ ಅಶ್ವಿನಿಯವರನ್ನು ಸಾಹಿತ್ಯ ವಲಯವು ಗುರುತಿಸಿ ಗೋರೂರು ಪ್ರತಿಷ್ಠಾನ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಸರೋಜದೇವಿಯವರು ತಮ್ಮ ಮಗಳು ಭುವನೇಶ್ವರಿಯ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ

ಕೃತಿಗಳು ಬದಲಾಯಿಸಿ

ಕಾದಂಬರಿ ಬದಲಾಯಿಸಿ

  • ನಿಲುಕದ ನಕ್ಷತ್ರ
  • ಮೈತ್ರಿ
  • ಬೆಸುಗೆ
  • ಕಪ್ಪುಕೊಳ
  • ಮೃಗತೃಷ್ಣಾ
  • ವಿಜೇತ
  • ನಾನು ಲೇಖಕಿ ಅಲ್ಲ
  • ಬಿಂದಿಯಾ
  • ಹುತ್ತದ ಸುತ್ತ
  • ಬಾಲ್ಯ ಸಖಿ
  • ಪ್ರೇಮ ಸೋಪಾನ
  • ವಿಸ್ಮೃತಿ
  • ಆನಂದವನ
  • ಯೋಗಾಯೋಗ
  • ಆನಂದವನ
  • ನಿಮಿತ್ತ
  • ಆಕರ್ಷಿತ
  • ದಂತಗೋಪುರ


ಕಥಾ ಸಂಕಲನ ಬದಲಾಯಿಸಿ

  • ತುಪ್ಪದ ದೀಪ
  • ಕನಕಿಯ ಓಲೆಗಳು

ಚಲನಚಿತ್ರೀಕರಣ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

https://kanaja.karnataka.gov.in/?s=%E0%B2%85%E0%B2%B6%E0%B3%8D%E0%B2%B5%E0%B2%BF%E0%B2%A8%E0%B2%BF