ಅಬು ಸಿಂಬೆಲ್
ಅಬು ಸಿಂಬೆಲ್ ಇದು ಪ್ರಾಚೀನ ಈಜಿಪ್ಟ್ ಎರಡನೆಯ ರ್ಯಾಮ್ಸೆಸ್ ದೊರೆಯ (ಕ್ರಿ.ಪೂ.ಸು.13ನೆಯ ಶತಮಾನ) ದೇವಾಲಯ ಸಮೂಹ ಇರುವ ಸ್ಥಳ.
ಇರುವ ಜಾಗ
ಬದಲಾಯಿಸಿಈಜಿಪ್ಟಿನ ಆಸ್ವಾನ್ ಪ್ರಾಂತದಲ್ಲಿ (ಪ್ರಾಚೀನ ನುಬಿಯ) ನೈಲ್ ನದೀತೀರದಲ್ಲಿದೆ. ಮರಳುಗಲ್ಲಿನ ಹೆಬ್ಬಂಡೆಗಳನ್ನು ಕೊರೆದು ಈ ದೇವಾಲಯಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಎರಡು ಸುಪ್ರಸಿದ್ಧವಾದುವು. ದೊಡ್ಡ ದೇವಾಲಯದ ಮುಂಭಾಗದಲ್ಲಿ ದೊರೆಯ ನಾಲ್ಕು ಬೃಹದ್ ವಿಗ್ರಹಗಳನ್ನು ಬಾಗಿಲ ಇಕ್ಕಡೆಗಳಲ್ಲೂ ಎರಡೆರಡರಂತೆ ಕಡೆದಿದ್ದಾರೆ. ಕುಳಿತಿರುವ ಈ ಒಂದೊಂದು ವಿಗ್ರಹದ ಎತ್ತರ 67`.ಭಾರ 1,200ಟನ್. ಇವುಗಳ ಕಾಲುಗಳ ಮೇಲೆ ಮತ್ತು ಸಮೀಪದಲ್ಲಿ ಮುಂದೆ ಈ ವಲಯಕ್ಕೆ ದಾಳಿಯಿಟ್ಟು ಗ್ರೀಕ್, ಕಾರಿಯನ್ ಮತ್ತು ಫೊನೀಶಿಯನ್ ಯೋಧರು ತಮ್ಮ ಹೆಸರುಗಳನ್ನು ಸ್ವಂತ ಲಿಪಿಗಳಲ್ಲಿ ಕೆತ್ತಿದ್ದಾರೆ. ಇವು (ವಿಶೇಷವಾಗಿ ಫೊನೀಶಿಯನ್) ಆಯಾ ಲಿಪಿಗಳ ಬಳಕೆಯ ಬಗ್ಗೆ ಅತ್ಯಂತ ಪ್ರಾಚೀನ ಕುರುಹುಗಳು. [೧]
ನಿರ್ಮಾಣ
ಬದಲಾಯಿಸಿಈ ದೇವಾಲಯಗಳ ನಿರ್ಮಾಣಕಾಲ 3200 ವರ್ಷಗಳಿಗಿಂತಲೂ ಹಿಂದೆ. ಈಜಿಪ್ಟಿನ ದೇವಾಂಶ ಸಂಭೂತರಾದ ಎರಡನೆಯ ರ್ಯಾಮ್ಸೆಸ್, ಅವನ ಪ್ರಿಯಪತ್ನಿ ಮಹಾರಾಣಿ ನೆಫೆರ್ತಾರಿ ಇವರ ಯಶಸ್ಸು, ವೈಭವಗಳ ಸಂಕೇತಸ್ಮಾರಕಗಳಿವು. ದೊಡ್ಡ ದೇವಾಲಯದ ಪ್ರವೇಶದ್ವಾರದಲ್ಲಿ ಕುಳಿತಿರುವ ರ್ಯಾಮ್ಸೆಸ್‍ನ ನಾಲ್ಕು ವಿಗ್ರಹಗಳಲ್ಲಿ ಒಂದರ ಮೇಲು ಭಾಗ ತುಂಡಾಗಿ ಕೆಳಗೆ ಬಿದ್ದಿದೆ. ಇದರ ಗರ್ಭಗುಡಿಯಲ್ಲಿರುವ ಶಿಲಾವಿಗ್ರಹಗಳ ಮೇಲೆ ವರ್ಷದಲ್ಲಿ ಎರಡು ಸಲ ಉದಯರವಿಕಿರಣಗಳು ನೇರವಾಗಿ ಬೀಳುವಂತೆ ರಚನೆಯ ಏರ್ಪಾಡು. ದೇವಾಲಯ ಸೂರ್ಯ ನಿವೇದಿತವಾದರೂ ರಾಜನನ್ನೇ ದೇವತ್ವದ ಗೌರವಾರ್ಥ ಸ್ಮಾರಕ ಇಲ್ಲಿ ಕಾಣುತ್ತದೆ. ಸಮೀಪದ ಸಣ್ಣ ದೇವಾಲಯ ರಾಣಿಯ ಗೌರವಾರ್ಥ ಸ್ಮಾರಕ. ಇದರ ನುಗ್ಗು ಬಾಗಿಲಿನಲ್ಲಿ ರಾಜರಾಣಿಯರ ಆರು ಪ್ರತಿಮೆಗಳು ಒತ್ತಟ್ಟಿಗೆ ನಿಂತಿವೆ. ರ್ಯಾಮ್ಸೆಸ್ ರಾಜ ಇನ್ನೂ ಆರು ದೇವಾಲಯಗಳನ್ನು ನುಬಿಯದಲ್ಲಿ ಹೆಬ್ಬಂಡೆಗಳಲ್ಲಿ ಕಂಡರಿಸಿದ್ದಾನೆ. ಅಬು ಸಿಂಬೆಲ್ ಕಲೆ ಮತ್ತು ತಾಂತ್ರಿಕ ವಿಜ್ಞಾನಗಳ ಅಪೂರ್ವ ಮೇಳ.
ಪುನರ್ದರ್ಶನ
ಬದಲಾಯಿಸಿರ್ಯಾಮ್ಸೆಸ್ನ ಮರಣಾನಂತರ ದೇವಾಲಯಗಳು ಕ್ರಮೇಣ ಮಾಸಲಾರಂಭಿಸಿದುವು. ಪಶ್ಚಿಮ ಮರುಭೂಮಿಯ ಮರಳ ಕಣಗಳ ನಿರಂತರ ಹೊಯ್ಲು, ಮುಂದಿನ ಪೀಳಿಗೆಯವರ ಅನಾಸ್ಥೆ ಈ ಕಾರಣಗಳಿಂದ ಅಬು ಸಿಂಬೆಲ್ ಭೌತಿಕವಾಗಿಯೂ ಮುಚ್ಚಿ ಹೋಗತೊಡಗಿತು. ಅಬು ಸಿಂಬೆಲ್ ವಿಚಾರ ಕ್ರಿ.ಪೂ. 6ನೆಯ ಶತಮಾನದವರೆಗೆ ಸಾಕ್ಷಿ ದೊರೆಯುತ್ತದೆ. ಮುಂದೆ ಚಿರನಿದ್ರೆಗೀಡಾದ ಈ ವೈಭವದ ಪುನರ್ದರ್ಶನವಾದದ್ದು ಕ್ರ.ಶ. 1813ರಲ್ಲಿ ಸುಮಾರು 2300 ವರ್ಷಗಳ ಅನಂತರ ಜಾನ್ ಲೆವಿಸ್ ಬುರ್ಖಾಡೆ ಎಂಬ ವಿದೇಶೀಯಾತ್ರಿಕ ಅಬು ಸಿಂಬೆಲ್ ಐತಿಹ್ಯಗಳಿಂದ ಆಕರ್ಷಿತನಾಗಿ ನುಬಿಯದಲ್ಲಿ ಅಲೆಯುತ್ತಿದ್ದಾಗ ಕಂಡದ್ದು ಮರಳ ಗುಡ್ಡದ ಮೇಲೆ ಚಾಚಿದ್ದ ಎರಡು ತಲೆಗಳನ್ನು. ಆ ವಿಗ್ರಹಗಳು ಕುಳಿತಿವೆಯೇ ಅಥವಾ ನಿಂತಿದೆಯೇ ಎಂದು ಅವನಿಗೆ ತೀರ್ಮಾನಿಸಲಾಗಲಿಲ್ಲ. ಮುಂದಿನ ದಿಟ್ಟ ಹೆಜ್ಜೆ ಇಟ್ಟ ಕೀರ್ತಿ ಇಟಲಿಯ ಪ್ರವಾಸಿ ಜಿ.ಬಿ. ಬೆಲ್ಚೋನಿಯದು (1817). ಶತಮಾನಗಳು ಹರಡಿದ್ದ ಮರಳರಾಶಿಯನ್ನು ಆತ ತೆಗೆದು ದೇವಾಲಯಪ್ರವೇಶ ಮಾಡಿದ. ಅದರೊಳಗಿನ ಅದ್ಭುತ ಕಲಾಪ್ರೌಢಿಮೆ, ಭವ್ಯ ವಾಸ್ತುಶಿಲ್ಪ ಇವುಗಳಿಗೆ ಮಾರುಹೋದ. ಈ ರೀತಿ ಆಧುನಿಕ ಜಗತ್ತು ಅಬು ಸಿಂಬೆಲ್‍ನ ಪುನರ್ದರ್ಶನ ಮಾಡಿತು.[೨]
ಸ್ಥಳಾಂತರ
ಬದಲಾಯಿಸಿಈಜಿಪ್ಟ್ ದೇಶದ ಮಹಾಭಿಧಮನಿ ಎಂದು ಪ್ರಸಿದ್ಧವಾಗಿರುವ ನೈಲ್‍ನದಿಗೆ ಆಸ್ವಾನ್ ಪ್ರಾಂತದಲ್ಲಿ ಅದೇ ಹೆಸರಿನಿಂದ ಒಂದು ದೊಡ್ಡ ಅಣೆಕಟ್ಟು ಕಟ್ಟಲು ಸರ್ಕಾರ ನಿರ್ಧರಿಸಿತು. ಬೆಂಗಾಡಿನ ದುಃಖಕ್ಕೆ ನೀರು ಸರಬರಾಜು ಮಾಡಿ ಅದರಲ್ಲಿ ಹಸಿರುನಗು ತರಿಸುವ ಉಪಾಯ ಇದೊಂದೇ. ಆದರೆ ಇದರಿಂದ ಶೇಖರಣೆಯಾಗುವ ನೀರಿನ ರಾಶಿ ಅಬು ಸಿಂಬೆಲನ್ನು ಮುಳುಗಿಸುವುದು ಎಂದು ತಿಳಿಯಿತು. 1960ರಲ್ಲಿ ಈಜಿಪ್ಟ್ ಮತ್ತು ಸೂಡಾನ್ ಸರ್ಕಾರಗಳು ಯುನೆಸ್ಕೊಗೆ (ಯುನೈಟೆಡ್ ನೇಷನ್ಸ್ ಎಜ್ಯುಕೇಷನಲ್ ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇûಷನ್) ಅಬು ಸಿಂಬೆಲನ್ನು ಹೇಗಾದರೂ ರಕ್ಷಿಸಬೇಕು ಎಂದು ಪ್ರಾರ್ಥನೆ ಸಲ್ಲಿಸಿದುವು. ಸಮಸ್ಯೆಯ ಗಭೀರತೆಯನ್ನು ಗಮನಿಸಿದ ಯುನೆಸ್ಕೊ ಅದರ ಬಿಡಿಸಿಕೆಗೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಕರೆನೀಡಿತು. ಇದರ ಫಲ ಅಬು ಸಿಂಬೆಲ್ ಸ್ಥಳಾಂತರ, ಬೃಹದ್ವಾಸ್ತು ಶಿಲ್ಪ ರಕ್ಷಣೆಯಲ್ಲಿ ನೆರವೇರಿದ ಅದ್ವಿತೀಯ ಸಾಹಸ. ರಕ್ಷಣೆಗೆ ಬಂದ ಸೂಚನೆಗಳು ಹಲವಾರು-ಸುತ್ತಲೂ ದೊಡ್ಡ ಒಡ್ಡುಗಳನ್ನು ಕಟ್ಟಿ ದೇವಾಲಯಗಳಿಗೆ ನೀರು ಬರದಂತೆ ಮಾಡಬೇಕು; ಭಾರೀ ಪಾರದರ್ಶಕ ಕವಚದಿಂದ ದೇವಾಲಯಗಳನ್ನು ಮುಚ್ಚಿ ಒಳಗೆ ವಿದ್ಯುದ್ದೀಪಗಳನ್ನು ಉರಿಸಿ ಜಲಾಂತರ್ಗತ ಅಬು ಸಿಂಬೆಲನ್ನು ಜನರಿಗೆ ತೋರಿಸಬೇಕು; ತಳಹದಿ ಸಮೇತ ದೇವಾಲಯಗಳನ್ನು ಕಿತ್ತು ಸ್ಥಳಾಂತರಿಸಬೇಕು, ಇತ್ಯಾದಿ. ಪ್ರಾಯೋಗಿಕತೆ, ವೆಚ್ಚ, ಕಾಲಾವಕಾಶ ಈ ದೃಷ್ಟಿಯಿಂದ ಪರಿಶೀಲಿಸಿದಾಗ ಈ ಪರಿಹಾರಗಳು ಸ್ವೀಕೃತವಾಗಲಿಲ್ಲ. [೩]
ಸ್ವೀಕೃತಯೋಜನೆಯ ವಿವರ
ಬದಲಾಯಿಸಿಎತ್ತಿ ಸ್ಥಳಾಂತರಿಸಲು ಅನುಕೂಲಿಸುವಂತೆ ಸಮಗ್ರಶಿಲಾರಚನೆಯನ್ನೂ ಹೋಳು ಹೋಳಾಗಿ ವಿಭಾಗಿಸಲು ಬಲುದೊಡ್ಡ ನಕಾಶೆ ಸಿದ್ಧವಾಯಿತು; ಇಲ್ಲಿ ಕೃತಿಗಳಿಗೆ ಇನಿತೂ ಊನ ಬರಬಾರದು; ಇದರ ಪ್ರಕಾರ ಬೆಟ್ಟದ ಮೇಲುಭಾಗದಿಂದ ಗರಗಸ ಕೊಯ್ತದ ಆರಂಭ; ನಕಾಶೆ ವಿಧಿಸಿರುವ ಗೆರೆಗಳ ಮೇಲೆ ನಿಖರವಾಗಿ ಗರಗಸ ಹರಿಯಬೇಕು; ಯಾವ ಕೊಯ್ತದ ಗಾಯವೂ 6 ಮಿ.ಮೀ.ಗಿಂತ ಹೆಚ್ಚು ಅಗಲವಾಗ ಕೂಡದು; ಗರಗಸ ಹರಿಯದಲ್ಲಿ ಬಲುನಿಯಂತ್ರಿತವಾಗಿ ಅಕ್ಕಪಕ್ಕದಲ್ಲಿ ಏನೂ ಅಪಘಾತ ಸಂಭವಿಸದಂತೆ ಡೈನಮೈಟ್ ಪ್ರಯೋಗ; ಕೊಯ್ದ ಶಿಲಾಖಂಡಗಳನ್ನು ಕ್ರೇನ್ ಮುಂತಾದವುಗಳ ಸಹಾಯದಿಂದ ಮಗುವನ್ನು ಎತ್ತಿದಷ್ಟು ಹಗುರವಾಗಿ ಎಚ್ಚರಿಕೆಯಿಂದ ಸಾಗಿಸಬೇಕು; ಹೀಗೆ ಮಾಡುವಾಗ ಒಂದು ವಿಭಾಗದ ಸ್ಥಾನ ನಿರ್ದೇಶಕಗಳನ್ನು ಸೂಚಿಸುವ ಸ್ಪಷ್ಟ ಸಂಕೇತಗಳು ಅದರ ಮೇಲೆ ನಿರೂಪಿತವಾಗಿರಬೇಕು; ಈ ಕೊಯ್ತ. ಸ್ಥಳಾಂತರ ಮುಗಿದ ಮೇಲೆ ಕೆಳಗಿನಿಂದ ಮೇಲಕ್ಕೆ ಶಿಲಾಖಂಡಗಳನ್ನು ಕ್ರಮಬದ್ಧವಾಗಿ ಜೋಡಿಸಿ ಅಬು ಸಿಂಬೆಲ್ ಪುನರ್ರಚನೆಯನ್ನು ಪೂರ್ಣಗೊಳಿಸಬೇಕು. ಈ ಯೋಜನೆಯ ಪ್ರಕಾರ ಎರಡು ದೇವಾಲಯಗಳನ್ನು ಕೊಯ್ದ ಒಟ್ಟಿದ್ದಾಗ ಅವು 950 ವಿಭಿನ್ನ ಶಿಲಾಖಂಡಗಳ ಅಪೂರ್ವ ಮೇಳವಾಗಿದ್ದವು.
ದೇವಾಲಯಗಳ ಹೊಸ ನಿವೇಶನ ಹಳೆ ಸ್ಥಾನದಿಂದ 212` ಎತ್ತರದಲ್ಲಿಯೂ ನದಿದಂಡೆಯಿಂದ 690` ದೂರದಲ್ಲಿಯೂ ಇದೆ.
ರ್ಯಾಮ್ಸೆಸ್ ವಿಗ್ರಹದ ಮುಖದ ಖಂಡದ ಭಾರ 19 ಟನ್. 1964ರಲ್ಲಿ ಪ್ರಾರಂಭವಾದ ಈ ಪರಮ ತಾಂತ್ರಿಕ ಸಾಹಸ ಆಸ್ವಾನ್ ಜಲಾಶಯದ ಮಟ್ಟ ಏರುತ್ತದ್ದಂತೆ ಅನುರೂಪ ವೇಗದಿಂದ ಮುಂದುವರಿದು 1969ರ ಹೊತ್ತಿಗೆ ಮುಗಿಯಿತು.
ಇದರ ಖರ್ಚು 50 ಮಿಲಿಯನ್ ಡಾಲರ್‍ಗಿಂತಲೂ ಹೆಚ್ಚು.
ಈ ಸ್ಥಳಾಂತರದಿಂದ ರ್ಯಾಮ್ಸೆಸ್‍ಗೆ ಆಗಿರುವ ಗಾಯಗಳನ್ನು ಗುಣಪಡಿಸಬಹುದೇ ಎಂಬ ಪ್ರಶ್ನೆಗೆ ವಾಸ್ತುಶಿಲ್ಪಜ್ಞನ ಉತ್ತರವಿದು: "ರಾಜನ ಗಾಯಗಳನ್ನು ಗುಣಪಡಿಸುತ್ತೇನೆ. ಜೋಡಣೆಗಾಯಗಳನ್ನು ಮಾಯಿಸುವುದು ಮಾತ್ರವಲ್ಲ ಮಾಯಗೊಳಿಸುವುದೂ ಸಾಧ್ಯವಿದೆ. ಆದರೆ ಇದು ಪ್ರಾಮಾಣಿಕ ಕ್ರಮವೇ?" ಉದಯರವಿಕಿರಣಗಳಿಂದ ಪುನಃ ನಗು ಬಿಂಬಿಸುತ್ತಿರುವ ರ್ಯಾಮ್ಸೆಸ್ ವಿಗ್ರಹ ನೈಲ್ ಜಲಾಶಯದ ಮಹಾವಿಸ್ತಾರದ ಚಿರಸಂಕೇತವಾಗಲಿದೆ.