ಅಧಿದೇವತೆ ಒಂದು ನಿರ್ದಿಷ್ಟ ಸ್ಥಳ, ಭೌಗೋಳಿಕ ಲಕ್ಷಣ, ವ್ಯಕ್ತಿ, ಮನೆತನ, ರಾಷ್ಟ್ರ, ಸಂಸ್ಕೃತಿ ಅಥವಾ ವೃತ್ತಿಯ ರಕ್ಷಕ ಅಥವಾ ಪೋಷಕನಾಗಿರುವ ಒಬ್ಬ ದೇವತೆ ಅಥವಾ ಅತಿಮಾನುಷ ಚೇತನ.

ಒಂದು ಬಗೆಯ ಅಧಿದೇವತೆಯೆಂದರೆ ಅಭಿಮಾನಿ ದೇವತೆ, ಹುಟ್ಟಿನಿಂದ ಸಾವಿನವರೆಗೆ ಒಬ್ಬ ವ್ಯಕ್ತಿಯ ಅತಿಮಾನುಷ ಶಕ್ತಿ.

ಹಿಂದೂ ಧರ್ಮದಲ್ಲಿ, ಅಧಿದೇವತೆಗಳನ್ನು ಇಷ್ಟದೇವತೆ ಮತ್ತು ಕುಲದೇವಿ ಅಥವಾ ಕುಲದೇವತೆ ಎಂದು ಕರೆಯಲಾಗುತ್ತದೆ. ಗ್ರಾಮದೇವತೆಗಳು ಹಳ್ಳಿಗಳ ಪಾಲಕ ದೇವತೆಗಳು. ದೇವರನ್ನೂ ರಕ್ಷಕರೆಂದು ಕಾಣಬಹುದು. ಶಿವನು ಯೋಗಿಗಳು ಮತ್ತು ತ್ಯಾಗಿಗಳ ಪೋಷಕ. ಮುಂಬಯಿಯ ಮುಂಬಾದೇವಿ, ಓಸಿಯ್ಞಾದ ಸಚ್ಚಿಕಾ ಕೆಲವು ಊರು ದೇವಿಯರ ಉದಾಹರಣೆಗಳು. ಪೋರ್ವಾಲ್ ಮನೆತನದ ಅಂಬಿಕಾ ಮತ್ತು ಅಗ್ರವಾಲ್ ಮನೆತನದ ಮಹಾಲಕ್ಷ್ಮಿ ಕೆಲವು ಕುಲದೇವಿಯರ ಉದಾಹರಣೆಗಳು.

ಒಂದು ಸ್ಥಳ ಅಥವಾ ವ್ಯಕ್ತಿಯನ್ನು ಕಾಯುವ ಮತ್ತು ಸಂರಕ್ಷಿಸುವ ಅಧಿದೇವತೆಗಳು ಪ್ರಾಚೀನ ರೋಮನ್ ಧರ್ಮಕ್ಕೆ ಮೂಲಭೂತವಾಗಿವೆ. ಜೀನಿಯಸ್ ಒಬ್ಬ ಪುರುಷನ ಅಧಿದೇವತೆ ಮತ್ತು ಜೂನೊ ಒಬ್ಬ ಮಹಿಳೆಯ ಅಧಿದೇವತೆ.[೧] ಚಕ್ರಾಧಿಪತ್ಯದ ಯುಗದಲ್ಲಿ, ರೋಮನ್ ಸಾಮ್ರಾಟನ ಜೀನಿಯಸ್ ಸಾಮ್ರಾಜ್ಯದ ಆರಾಧನಾ ಪದ್ಧತಿಯ ಕೇಂದ್ರಬಿಂದುವಾಗಿದ್ದನು. ಒಬ್ಬ ಸಾಮ್ರಾಟನು ಒಬ್ಬ ದೇವತೆಯನ್ನು ತನ್ನ ವೈಯಕ್ತಿಕ ಪೋಷಕ ಅಥವಾ ಅಧಿದೇವತೆಯಾಗಿ ಸ್ವೀಕರಿಸಬಹುದಾಗಿತ್ತು, ಉದಾಹರಣೆಗೆ ಅಗಸ್ಟಸ್ ಅಪೋಲೊವನ್ನು ಸ್ವೀಕರಿಸಿದ. ಒಬ್ಬ ದೇವತೆಯ ವೈಯಕ್ತಿಕ ರಕ್ಷಣೆಯನ್ನು ಕೇಳುವ ಪೂರ್ವನಿದರ್ಶನಗಳು ಗಣರಾಜ್ಯ ಯುಗದಲ್ಲಿ ಸ್ಥಾಪನೆಯಾದವು. ರೋಮನ್ ಸರ್ವಾಧಿಕಾರಿ ಸಲಾ ಅವಳ ಗೌರವಾರ್ಥ ಸಾರ್ವಜನಿಕ ಕ್ರೀಡೆಗಳನ್ನು ಆಯೋಜಿಸಿ ವಿಕ್ಟರಿ ದೇವತೆಯು ತನ್ನ ಅಧಿದೇವತೆಯೆಂದು ಪ್ರಚಾರ ಮಾಡಿದ್ದು ಒಂದು ನಿದರ್ಶನವಾಗಿದೆ.

ಪ್ರತಿಯೊಂದು ಪಟ್ಟಣ ಅಥವಾ ನಗರ ಒಂದು ಅಥವಾ ಹೆಚ್ಚು ಅಧಿದೇವತೆಗಳನ್ನು ಹೊಂದಿತ್ತು, ಮತ್ತು ಇವುಗಳ ರಕ್ಷಣೆ ಯುದ್ಧ ಮತ್ತು ಮುತ್ತಿಗೆಯ ಸಮಯದಲ್ಲಿ ವಿಶೇಷವಾಗಿ ಅತ್ಯಗತ್ಯವೆಂದು ಪರಿಗಣಿತವಾಗಿತ್ತು. ಸ್ವತಃ ರೋಮ್ ಒಬ್ಬ ದೇವತೆಯಿಂದ ರಕ್ಷಿತವಾಗಿತ್ತು. ಇವಳ ಹೆಸರನ್ನು ಶಾಸ್ತ್ರೋಕ್ತವಾಗಿ ರಹಸ್ಯವಾಗಿಡಬೇಕಿತ್ತು. ಜೂನೊ, ಜುಪಿಟರ್ ಮತ್ತು ಮಿನರ್ವಾ ದೇವತೆಗಳ ತ್ರಿಕೂಟ ರೋಮ್‍ನ ಅಧಿದೇವತಗಳಾಗಿದ್ದರು. ಇಟಲಿಯ ಪಟ್ಟಣಗಳು ತಮ್ಮ ಸ್ವಂತ ಅಧಿದೇವತೆಗಳನ್ನು ಹೊಂದಿದ್ದವು.

ಉಲ್ಲೇಖಗಳು ಬದಲಾಯಿಸಿ

  1. Nicole Belayche, "Religious Actors in Daily Life: Practices and Beliefs," in A Companion to Roman Religion (Blackwell, 2007), p. 279.