ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ. ಅಕ್ಷರಮಾಲೆ ಎಂದರೆ ಒಂದು ಭಾಷೆಯನ್ನು ಬರೆಯುವಾಗ ಉಪಯೋಗಿಸುವ ಅಕ್ಷರಗಳ ಸರಣಿ. ಇದರ ಇತಿಹಾಸ ಪ್ರಾಚೀನ ಇಜಿಫ್ತ್‌ನಲ್ಲಿ ಕ್ರಿಸ್ತಪೂರ್ವ ೨೭೦೦ರಲ್ಲಿ ಆಯಿತು. ಭಾರತದಲ್ಲಿ ದೇವನಾಗರಿ ಲಿಪಿಯ ಅಕ್ಷರಮಾಲೆಯೇ ಅತ್ಯಂತ ಹಳೆಯದು. ಕೇಶಿರಾಜ ಕನ್ನಡಅಕ್ಷರಗಳನ್ನು ಶುದ್ಧಗೆ ಎಂದು ಕರೆದನು. ಶುದ್ಧಗೆ ಎಂದರೆ ಶುದ್ಧಾಕ್ಷರ ಎಂದರ್ಥ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
$ಁ
ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು
ಕನ್ನಡ ಭಾಷೆಯ ಅಕ್ಷರಮಾಲೆಯ ಅವಸ್ಥಾಂತರ

ಚಾರಿತ್ರಿಕ ಹಿನ್ನೆಲೆಸಂಪಾದಿಸಿ

ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರವಾದ ಅಕಾರದ ಅತ್ಯಂತ ಹಳೆಯ ರೂಪವನ್ನು ಪ್ರ. ಶ.ಪೂ. 3 ನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಬಹುದು. ಆ ಕಾಲದ ಬ್ರಾಹ್ಮೀಲಿಪಿಯಿಂದ ಅಕಾರವು ವಿಕಾಸಹೊಂದಿ ಇಂದಿನ ರೂಪವನ್ನು ತಾಳಿತೆಂಬುದನ್ನು ಗಮನಿಸಬೇಕು. ಅಶೋಕನ ಬ್ರಾಹ್ಮೀಲಿಪಿಯಲ್ಲಿ ಇದು ಮೂರು ರೇಖೆಗಳಿಂದ ಕೂಡಿದ್ದು ಈಗಿನ ರೂಪಕ್ಕಿಂತ ಭಿನ್ನವಾಗಿ ಕಾಣುತ್ತದೆ. ಪ್ರ. ಶ . 2ನೇ ಶತಮಾನದ ಸಾತವಾಹನರ ಬ್ರಾಹ್ಮೀಲಿಪಿಯಲ್ಲಿ ಕಂಡುಬರುವ ಕೆಲವು ಬದಲಾವಣೆಗಳು ಗಮನಾರ್ಹ. ಅಕ್ಷರದ ಕೆಳತುದಿಗಳು ಬಾಗುತ್ತವೆ. ಮೇಲ್ಭಾಗದಲ್ಲಿ ಕದಂಬ ತ್ರಿಕೋನಾಕಾರದ ತುದಿಗಳು ಕಾಣಬರುತ್ತವೆ. 5ನೆಯ ಶತಮಾನ ಪ್ರ. ಶ 5ನೆಯ ಶತಮಾನದ ಕದಂಬರ ಲಿಪಿಯಲ್ಲಿ ಚೌಕಾಕಾರದ ತಲೆಕಟ್ಟನ್ನು ಗಮನಿಸಬಹುದು. ಮುಂದಿನ ಶತಮಾನದ ಬಾದಾಮಿಚಾಳುಕ್ಯರ 6ನೆಯ ಶತಮಾನ ಶಾಸನಗಳಲ್ಲಿ ಇದು ಅಗಲವಾಗಿ ಈಗಿನ ರೂಪಕ್ಕೆ ದಾರಿಮಾಡಿಕೊಡುತ್ತದೆ. ಪ್ರ. ಶ.9ನೆಯ ಶತಮಾನದ ರಾಷ್ರ್ಟಕೂಟರ ಶಾಸನಗಳಲ್ಲಿ ಪ್ರತ್ಯೇಕ ರೇಖೆಗಳು ಮಾಯವಾಗಿ ತುದಿಯಿಂದ ಕೊನೆಯವರೆಗೂ ವೃತ್ತಾಕಾರದ ಒಂದೇ ರೇಖೆಯು ಉಂಟಾಗುತ್ತದೆ.ಇದು ಈಗಿನ ರೂಪಕ್ಕೆ ಅತ್ಯಂತ ಸಮೀಪದ್ದಾಗಿ ಕಾಣುತ್ತದೆ. ಇದೇ ರೂಪ ಸ್ಥಿರಗೊಂಡು ಮುಂದಿನ ಶತಮಾನಗಳಲ್ಲಿ ಇನ್ನೂ ಗುಂಡಗಾಗಿ ಈಗಿನ ರೂಪವನ್ನು ಪ್ರ.ಶ 18ನೆಯ ಶತಮಾನದಲ್ಲಿ ತಾಳುತ್ತದೆ.

ಕನ್ನಡ ವರ್ಣಮಾಲೆಯ ಈ ಮೊದಲನೆಯ ಅಕ್ಷರ ಎರಡು ಹ್ರಸ್ವಸ್ವರಧ್ವನಿಗಳನ್ನು ಸೂಚಿಸುತ್ತದೆ. ಒಂದು, ಸಾಮಾನ್ಯವಾದ ವಿವೃತ ಮಧ್ಯ ಅಗೋಲ ಸ್ವರ; ಇನ್ನೊಂದು, ಕೆಲವರ ಉಚ್ಚಾರದಲ್ಲಿ ಕಂಡುಬರುವ ಮಧ್ಯ -ಮಧ್ಯ ಅಗೋಲ ಸ್ವರ. ಇವು ಎರಡಕ್ಕೂ ಇರುವ ವ್ಯತ್ಯಾಸವನ್ನು ಅತ್ತೆ(ಅವಳು ನನ್ನ ಅತ್ತೆ’; ದುಃಖದಿಂದ ನಾನು ‘ಅತ್ತೆ’), ತಂದೆ (ಅವರು ನನ್ನ ‘ತಂದೆ’; ಅಂಗಡಿಯಿಂದ ‘ತಂದೆ’) ಮೊದಲಾದ ಪದಗಳ ಉಚ್ಚಾರದಲ್ಲಿ ಗಮನಿಸಬಹುದು.

ಸಂಜ್ಞಾ ಪ್ರಕಾರಸಂಪಾದಿಸಿ

ಕೇಶಿರಾಜನ ಸೂತ್ರದ ಪ್ರಕಾರ, ಅಕ್ಷರ ಮಾಲೆ/ವರ್ಣಮಾಲೆ ಎಂಬುದು ಒಂದು ಸಂಜ್ಞಾ ಪ್ರಕಾರವಾಗಿದೆ.[೧]

‘ಕವಿಗಳ್ ಸ್ವರದಿಂ ವರ್ಗದಿ
ನವರ್ಗದಿಂ ಯೋಗವಾಹದಿಂ ದೇಶಿಯಳು
ದ್ಭವಮಪ್ಪ ವರ್ಣದಿಂ ಪಂ
ಚ ವಿಧಂ ತಾನೆಂದು ತಿಳಿಸುವರ್ ಶುದ್ಧಗೆಯಂ’ (ಸೂತ್ರಸಂಖ್ಯೆ – 41)[೨]

ಕನ್ನಡದ ಶುದ್ಧಾಕ್ಷರಗಳ ವಿಧಗಳುಸಂಪಾದಿಸಿ

ಕವಿವಾಣಿಯಂತೆ, ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ;

 1. ಸ್ವರ ಅಕ್ಷರಗಳು
 2. ವರ್ಗೀಯ ವ್ಯಂಜನ ಅಕ್ಷರಗಳು
 3. ಅವರ್ಗೀಯ ವ್ಯಂಜನ ಅಕ್ಷರಗಳು
 4. ಯೋಗವಾಹ ಅಕ್ಷರಗಳು
 5. ದೇಶಿಯ ಅಕ್ಷರಗಳು

ಬಾಹ್ಯ ಕೊಂಡಿಸಂಪಾದಿಸಿ

 1. ಕೇಶಿರಾಜ
 2. ಶಬ್ದಮಣಿದರ್ಪಣಂ

ಶುದ್ಧಗೆಯ ಪರಿಶೀಲನೆಸಂಪಾದಿಸಿ

 • ‘ವರ್ಣಂಗಳ ಪಾಠಕ್ರಮಂ ಅರ್ಣವ ವೃಶಧಾತ್ರಿಯೊಳ್ ಪ್ರಸಿದ್ಧಂ’ ಎಂದು ಕೇಶಿರಾಜ ತನ್ನ ಶಬ್ದಮಣಿದರ್ಪಣಂ ಕೃತಿಯಲ್ಲಿ ಹೇಳಿದ್ದಾನೆ. ‘ಯಾವುದೇ ಭಾಷೆಯ ಜೀವಂತಿಕೆ ಇರುವುದು ಆ ಭಾಷೆಯ ವರ್ಣವ್ಯವಸ್ಥೆಯ ಮೇಲೆ’. ಈ ವರ್ಣವ್ಯವಸ್ಥೆ ಅಥವಾ ಅಕ್ಷರಮಾಲೆಯನ್ನು ಕೇಶಿರಾಜ ‘ಶುದ್ಧಗೆ’ ಎಂದು ಕರೆದಿದ್ದಾನೆ. ಶುದ್ಧಗೆ ಎಂದರೆ ‘ಶುದ್ಧಾಕ್ಷರ’ ಅಕ್ಷರವೆಂದೂ ವರ್ಣವೆಂದೂ ಶುದ್ಧಾಕ್ಷರಕ್ಕೆ ಪರ್ಯಾಯ ಹೆಸರು. ಯಾವ ವರ್ಣವನ್ನು ಬರೆಯಲು ಹಾಗೂ ಉಚ್ಚರಿಸಲು ಬರುವುದೋ ಅದೇ ಶುದ್ಧಾಕ್ಷರವಾಗಿದೆ. ಇವಕ್ಕೆ ಹೊರತಾದುವು ಗುಡುಗು, ಮಿಂಚು ಮೊದಲಾದುವುಗಳಿಂದ ಕಿವಿಗೆ ಕೇಳುವ ಸ್ವರಗಳಾವುವೂ ಶುದ್ಧಗೆಗಳಲ್ಲ. ಯಾಕೆಂದರೆ ಅವುಗಳಿಗೆ ಲಿಪಿಯಿಲ್ಲ. ಅವಕ್ಕೆ ಭಾಷೆಯಲ್ಲಿ ಶುದ್ಧಾಕ್ಷರಕ್ಕೆ ಇರುವ ಯಾವ ಸಾಂಕೇತಿಕ ವ್ಯವಸ್ಯೆಯೂ ಇಲ್ಲ.
 • ಕೇಶಿರಾಜನ ಶುದ್ಧಾಕ್ಷರ ಬಗೆಗಿನ ತರ್ಕವು ಆಧುನಿಕ ಭಾಷಾತಜ್ಞರ ವಿಚಾರಕ್ಕೆ ತೀರಾ ನಿಕಟವಾಗಿದೆ. ಹೀಗಾಗಿ ಆತನ ಶುದ್ಧಾಕ್ಷರ ತರ್ಕಕ್ಕೂ ಆಧುನಿಕ ವಿದ್ವಾಂಸರ ತರ್ಕಕ್ಕೂ ಸಾಮ್ಯತೆಗಳಿವೆ. ಆಧುನಿಕ ಭಾಷಾತಜ್ಞರ ಪ್ರಕಾರ ಕೇಶಿರಾಜನ ಘನಸ್ವನಾದಿ ‘ಧ್ವನಿ’ ಎಂಬುದಕ್ಕೆ (ಫೋನ್) ಎಂದೂ, ಶುದ್ಧಾಕ್ಷರ ಎಂಬುದಕ್ಕೆ ‘ಧ್ವನಿಮಾ’ (ಫೊನೀಮ್) ಎಂದೂ ಹೆಸರಿಸಲಾಗಿದೆ.
 • ಕೇಶಿರಾಜನು ಹೇಳುವಂತೆ, ‘ನಾಭಿಮೂಲದೊಳ್ ಕಹಳೆಯ ಪಾಂಗಿನವೋಲ್’ (ನಾಭಿಯ ಒಳಗಿನಿಂದ) ಹೊರಟು ಬರುವ ಧ್ವನಿಯು ಜೀವನಿಷ್ಟದ ಮೇರೆಗೆ ಅಸಂಖ್ಯಾತ ಧ್ವನಿ ರೂಪಗಳನ್ನು ಹುಟ್ಟಿಸಬಹುದು. ಆದರೆ ಭಾಷೆಯಲ್ಲಿ ಮನುಷ್ಯ ನಿರ್ಮಿತವಾದ ಅಸಂಖ್ಯಾತ ಧ್ವನಿ ವಿಶೇಷತೆಗಳಿಗೆ ಬೆಲೆಯಿಲ್ಲ. ಒಂದು ಭಾಷೆಯ ವ್ಯವಹಾರಕ್ಕೆ ಸಾಕಾಗುವಷ್ಟು ಇರುವ ಕೆಲವೇ ಕೆಲವು ನಿಯಮಿತ ಧ್ವನಿಗಳನ್ನು ಮಾತ್ರ ಧ್ವನಿಮಾ ರೂಪಗಳೆಂದು ಅಥವಾ ಶುದ್ಧಾಕ್ಷರಗಳೆಂದೂ ಕರೆಯಲಾಗುತ್ತದೆ. ಹೀಗೆಂದು ಧ್ವನಿಗಳನ್ನು ಅಲ್ಲಗಳೆದು, ಧ್ವನಿಮಾಗಳನ್ನಷ್ಟೇ ಮನ್ನಿಸಬೇಕೆಂಬ ಅರ್ಥದಲ್ಲಿ ಧ್ವನಿಗಳು ಮೂಲತಃ ಇರದೆ ಧ್ವನಿಮಾ ರಚನೆ ಸಾಧ್ಯವಾಗುವುದಿಲ್ಲ. ಇವು ಪರಸ್ಪರ ಪೂರಕವಾದವುಗಳೇ ವಿನಃ ಪ್ರತಿಸ್ಪರ್ಧಿಗಳಾಗಲಿ, ಮಾರಕಗಳಾಗಲಿ ಅಲ್ಲ.

ಬಾಹ್ಯ ಕೊಂಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

 1. http://shabdkosh.com/kn/translate/ಅಕ್ಷರಮಾಲೆ/ಅಕ್ಷರಮಾಲೆ-meaning-in-English-Kannada
 2. ಕೇಶಿರಾಜಶಬ್ದಮಣಿದರ್ಪಣಂ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: