ಅಂತಾರಾಷ್ಟ್ರೀಯತೆ

ಅಂತಾರಾಷ್ಟ್ರೀಯತೆ ಬದಲಾಯಿಸಿ

ಅಂತಾರಾಷ್ಟ್ರೀಯತಾಭಾವನೆ ಉಗ್ರ ರಾಷ್ಟ್ರೀಯತೆಯಿಂದ ಒದಗಿರುವ ದುಷ್ಪರಿಣಾಮಗಳನ್ನು ನಿವಾರಿಸಿ ಇಡೀ ವಿಶ್ವವೇ ಒಂದು ಕುಟುಂಬ, ಅದರಲ್ಲಿನ ಪ್ರತಿಯೊಬ್ಬನೂ ವಿಶ್ವಮಾನವ ಎಂಬ ಸೌಹಾರ್ದಮಯ ಸಹಜೀವನತತ್ತ್ವವನ್ನು ಪ್ರತಿಪಾದಿಸುವ ಶಕ್ತಿಯಾಗಿದೆ. ರಾಷ್ಟ್ರೀಯತೆಯ ಭಾವನೆ ಇರುವುದು ತಪ್ಪೇನಲ್ಲ. ಆದರೆ ದಾರಿತಪ್ಪಿದಲ್ಲಿ ಅದರಿಂದ ಆಗುವ ಅನರ್ಥಗಳು ಅಪಾರ. ಯುರೋಪಿನಲ್ಲಿ 1700 ರ ಹೊತ್ತಿಗಾಗಲೆ ರಾಷ್ಟ್ರೀಯತೆ ಉಗ್ರರೂಪವನ್ನು ತಾಳಿದ್ದು 1800ರ ಸುಮಾರಿನಲ್ಲಿ ವಿದೇಶ ವ್ಯವಹಾರಗಳ ತಳಹದಿಯಾಗಿರುವುದು ಕಂಡುಬಂದಿದೆ. ಫ್ರಾಂಕೋ-ಪರ್ಷಿಯ ಯುದ್ಧ, ಕ್ರಿಮಿಯ ಯುದ್ಧ ಈ ಮೊದಲಾದ ಅನೇಕ ಯುದ್ಧಗಳಿಗೆ ತೀವ್ರ ರಾಷ್ಟ್ರೀಯತಾ ಭಾವನೆಯೇ ಕಾರಣವಾಗಿದೆ. ಒಂದನೆಯ ಮಹಾಯುದ್ಧಕ್ಕೂ ಇದೇ ಮೂಲವೆನ್ನುವವರೂ ಇದ್ದಾರೆ. ಫ್ಯಾಸಿಸಂ ಮತ್ತು ನ್ಯಾಜಿ಼ಸಂ ಗಳು ಬೆಳೆದಂತೆಲ್ಲಾ ಹಲವು ರಾಷ್ಟ್ರಗಳು ನೀತಿ ನಿರ್ಬಂಧಗಳನ್ನು ತೊರೆದು ದ್ವೇಷಾಸೂಯೆಗಳ ವಿಷಬೀಜವನ್ನು ಬಿತ್ತಲು ಮೊದಲು ಮಾಡಿದವು. ಅವುಗಳ ಪರಿಣಾಮವೇ ಎರಡನೆಯ ಮಹಾಯುದ್ಧ. ಜಾಗತಿಕವಾಗಿ ಆಗಾಗ ತಲೆದೋರುತ್ತಿರುವ ಇಂಥ ಉಲ್ಬಣಗಳಿಂದ ಜಗತ್ತನ್ನು ಪಾರುಮಾಡಲು ಅಂತಾರಾಷ್ಟ್ರೀಯತಾ ಭಾವನೆಯ ಅಗತ್ಯವಿದೆ. 20ನೆಯ ಶತಮಾನದಲ್ಲಿ ಈ ಭಾವನೆ ಪುಷ್ಟಿಗೊಂಡು ಬೆಳೆದು ಬಲಗೊಳ್ಳುತ್ತಿದೆ. ಅಂತಾರಾಷ್ಟ್ರೀಯತೆಯ ಆವಶ್ಯಕತೆಗಳನ್ನು ಕೆಲವು ದಶಮಾನಗಳಿಂದ ಅನೇಕ ತತ್ತ್ವಜ್ಞಾನಿಗಳು ವ್ಯಕ್ತಪಡಿಸಿದರು. ಫ್ರಾನ್್ಸ ದೇಶದ ಡಕ್ ಡಿ ಸುಲ್ಲಿ, ಅಬ್ಬೆ ಡಿ ಸೆಂಟ್ ಪಿಯರೆ, ರೂಸೋ, ಬೆಂಥಮ್ ಕ್ಯಾಂಟ್ ಇವರು ಬಹು ಮುಖ್ಯರಾದವರು. ಈಚೆಗೆ ಏಬ್ರಹಾಂ ಲಿಂಕನ್, ಬರ್ಟ್ರಂಡ್ ರಸಲ್, ಮಹಾತ್ಮ ಗಾಂಧಿ, ಜವಹರಲಾಲ್ ನೆಹರು, ರವೀಂದ್ರನಾಥ ಠಾಕೂರ್ ಮೊದಲಾದವರು ಜೀವಮಾನವಿಡೀ ಇದೇ ಧ್ಯೇಯಕ್ಕಾಗಿ ಕೆಲಸ ಮಾಡಿರುವರು. ಈಗ ಪ್ರಜಾಭಿಪ್ರಾಯ ಅಂತಾರಾಷ್ಟ್ರೀಯತೆಯ ಕಡೆಗೆ ತಿರುಗಿದುದರಿಂದ ಅದು ಮಾನವ ಜನಾಂಗಕ್ಕೆ ಒಂದು ಹಾರೈಕೆಯಾಯಿತು. ಈ ಕಾರಣದಿಂದ ಅದು ಮಾನವನ ಯೋಚನೆಯ ಒಂದು ಸ್ವಾಭಾವಿಕ ಮತ್ತು ಕ್ರಮಬದ್ಧವಾದ ಭಾಗವಾಯಿತು. ಅದು ಅಂತಾರಾಷ್ಟ್ರೀಯ ಸಂಸ್ಥೆಗಳ ಉಗಮಕ್ಕೆ ಅವಕಾಶ ಮಾಡಿಕೊಟ್ಟಿತು. ಅದರಿಂದಲೇ ರಾಷ್ಟ್ರಗಳ ಒಕ್ಕೂಟವು (ಲೀಗ್ ಆಫ್ ನೇಷನ್ಸ) ಪ್ರಾರಂಭವಾಯಿತು. ಅದಾದ ಅನಂತರ ಈಗ ವಿಶ್ವಸಂಸ್ಥೆ (ಯು.ಎನ್.ಒ) ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯತೆ ವಿಶ್ವಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯ ಮತ್ತು ಸಹಕಾರವನ್ನು ಸಮಾನವಾಗಿ ಕಲ್ಪಿಸಿ ವಿಶ್ವಶಾಂತಿಯನ್ನು ಎಲ್ಲಾ ರಾಷ್ಟ್ರಗಳ ಸ್ನೇಹದಿಂದ ಸ್ಥಾಪಿಸುವ, ಒಂದು ಸಿದ್ಧಾಂತ ಅಥವಾ ಒಂದು ನಂಬಿಕೆಯಾಗಿ ಬಹು ಜನಪ್ರಿಯವಾಗಿದೆ