ಅಂತರಗ್ನಿ ಶಿಲೆಗಳು
ಅಗ್ನಿ ಶಿಲೆಗಳ ಒಂದು ವರ್ಗಕ್ಕೆ ಸೇರಿವೆ. ಮೇಲ್ಮೈಯಿಂದ ಬಹಳ ಆಳದಲ್ಲಿ ಶಿಲಾಪಾಕ (ಮ್ಯಾಗ್ಮ)ದಿಂದ ಸಾವಕಾಶವಾಗಿ ಆರಿದಾಗ ಆದ ಸ್ಫಟಿಕೀಕರಣದಿಂದ ರೂಪುಗೊಂಡ ಖನಿಜಗಳ ಹರಳುಗಳಿರುವ ಶಿಲೆಗಳಿವು (ಪ್ಲುಟಾನಿಕ್‍ರಾಕ್ಸ್). ಈ ಶಿಲೆಗಳಲ್ಲಿ ನಿರ್ದಿಷ್ಟವಾದ ಖನಿಜ ಸಮೂಹವೂ ಇದೆ. ಇವು ೪೦೦ ರಿಂದ ೬೦೦೦ ಮೀ. ದಪ್ಪದ ಮೇಲ್ಪದರದ ಕೆಳಗೆ ಸ್ಫಟಿಕೀಕರಿಸಿದವೆಂದು ಡ್ಯಾಲಿ ಅಭಿಪ್ರಾಯಪಡುತ್ತಾನೆ. ಅಂತರಗ್ನಿಶಿಲೆಗಳ ಸ್ಫಟಿಕೀಕರಣಕ್ಕೆ ಅಗತ್ಯವಾದ ಪರಿಸ್ಥಿತಿಗಳಲ್ಲಿ ವ್ಯತ್ಯಾಸವಿರುತ್ತದೆ. ಭೂಮಿಯ ಮೇಲ್ಭಾಗದಲ್ಲಿ ಹೊರಕಾಣುವ ಅಂತರಗ್ನಿಶಿಲೆಗಳೆಲ್ಲ ಭೂಮಿಯ ಹೊರಮೈಯಿಂದ ನೂರಾರು ಮೀ.ಗಳಿಂದ ೨೦ ಕಿ.ಮೀ ತಳದಲ್ಲಿ ಸ್ಫಟಿಕೀಕರಿಸಿದುವೆಂಬುದರಲ್ಲಿ ಸಂಶಯವಿಲ್ಲ.
ಅಂತರಗ್ನಿಶಿಲೆಗಳ ವಿಶೇಷವಾದ ಒಳರಚನೆಗೆ ಕಾರಣ ಅವು ಆಳದಲ್ಲಿ ನಿಧಾನವಾಗಿ ಆರುವುದೇ (ಸ್ಫಟಿಕೀಕರಿಸುವುದು) ಆಗಿದೆ. ಜೊತೆಗೆ ಅವುಗಳ ಅಂತಸ್ಸರಣದ ರೂಪ ಗಾತ್ರ ಮತ್ತು ಸ್ಥಳೀಯ ಉಷ್ಣಾಂಶವೂ ಮುಖ್ಯ ಕಾರಣಗಳಾಗಿವೆ.
ಅಂತರಗ್ನಿಶಿಲಾಕಾರ್ಯಗಳ ರೂಪ ಮತ್ತು ವಿಸ್ತಾರ
ಬದಲಾಯಿಸಿಅಂತರಗ್ನಿಶಿಲಾಕಾರ್ಯಗಳ ರೂಪ ಮತ್ತು ವಿಸ್ತಾರವ್ಯಾಪಕತೆಗಳಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಅತ್ಯಂತ ವಿಶಾಲವಾದುವು ಸಾವಿರಾರು ಚ.ಮೈ.ಗಳವರೆಗೆ ಹರಡಿರುತ್ತವೆ: ಅತಿ ಚಿಕ್ಕವು ಕೆಲವು ಅಂಗುಲಗಳು ಮಾತ್ರವಿರುತ್ತವೆ. ಅಂತರಗ್ನಿಶಿಲಾಪ್ರಭೇದಗಳಲ್ಲಿ ಮುಖ್ಯವಾದುವು ಸಿಲ್, ಲ್ಯಾಕೊಲಿತ್, ಫೇಕೊಲಿತ್, ಡೈಕು (ಒಡ್ಡು), ಬ್ಯಾಥೊಲಿತ್, ಸ್ಟಾಕ್ಸ್ (ಬಾಸಸ್) ಮತ್ತು ಪ್ಲುಟಾನುಗಳು. ಅವುಗಳ ಸ್ವಭಾವಗಳನ್ನು ಸ್ಥೂಲವಾಗಿ ಇಲ್ಲಿ ತಿಳಿಸಿದೆ: ಸಿಲ್‍ಗಳು ಸ್ಥಳೀಯ ಶಿಲೆಗಳ ಹರವನ್ನನುಸರಿಸಿ ಅವುಗಳ ಪದರಗಳ ಮಧ್ಯದಲ್ಲಿ ಹರಿದು ಹರಡಿರುವ ಶಿಲಾಪಾಕದ ಪದರಗಳಾಗಿವೆ. ದೊಡ್ಡ ದೊಡ್ಡ ಸಿಲ್‍ಗಳ ದಪ್ಪ ನೂರಾರು ಅಡಿಗಳಷ್ಟು, ಹರವು ಅನೇಕ ಸಾವಿರ ಚ.ಮೈಲಿ. ಸಾಮಾನ್ಯವಾಗಿ ಅವುಗಳ ರಾಸಾಯನಿಕ ಸಂಯೋಜನೆಯಲ್ಲಿ ಸಿಲಿಕಾಂಶ ಅಲ್ಪವಾಗಿರುತ್ತದೆ. ಫೇಕೊಲಿತ್‍ಗಳು ಮಡಪುಗಳ ತಳ ಮತ್ತು ಶಿಖರಗಳಲ್ಲಿ ರೂಪುಗೊಂಡ ಮಸೂರಾಕಾರದ ಮತ್ತು ಬಾಗಿದ ಅಂತಸ್ಸರಣಗಳು. ಲೋಪೊಲಿತ್‍ಗಳು ಪದರವಾಗಿರುವ ಅಥವಾ ಬಾನೆಯಂತಿರುವ ಅಂತಸ್ಸರಣ ಕುಸಿದು ಆದವು. ಅತ್ಯಂತ ದೊಡ್ಡದಾಗಿರುವ ಕೆಲವು ಅಂತಸ್ಸರಣಗಳು ಅಲ್ಪಸಿಲಿಕಾಂಶ ಶಿಲೆಗಳಿಂದಾಗಿರುತ್ತವೆ. ಒಡ್ಡುಗಳು ಇಕ್ಕಟ್ಟಾಗಿಯೂ ಬಹಳ ಉದ್ದವಾಗಿಯೂ ಸಮಾನಾಂತರವಾದ ಪಕ್ಕಗಳಿರುವ ರಚನೆಗಳು. ಇವು ನೇರವಾಗಿ ಅಥವಾ ಕಡಿದಾಗಿ ಇಳಿವೋರೆಯಾಗಿ ಸ್ಥಳೀಯ ಶಿಲಾಪದರಗಳನ್ನೂ ಇತರ ರಚನೆಗಳನ್ನೂ ಛೇದಿಸಿರುತ್ತವೆ. ಒಂದು ಪ್ರದೇಶದಲ್ಲಿ ಅನೇಕ ಒಡ್ಡುಗಳಿದ್ದರೆ ಅವುಗಳಿಗೆ ಒಡ್ಡುಗಳ ಸಮೂಹವೆಂದು, ಒಂದು ಕೇಂದ್ರದಿಂದ ಹೊರಹರಡಿದ್ದರೆ ಹೊರಗಾಮಿ ಒಡ್ಡುಗಳೆಂದು, ಚಕ್ರಾಕಾರವಾಗಿದ್ದರೆ ಒಡ್ಡುಗಳ ಚಕ್ರವೆಂದು ಹೆಸರು. ಬ್ಯಾಥೊಲಿತ್‍ಗಳು ಕಡಿದಾಗಿ ಇಳಿಜಾರಾಗಿರುವ ಗೋಡೆಗಳುಳ್ಳ ಮತ್ತು ಸಾಮಾನ್ಯವಾಗಿ ತಳ ಕಾಣದಂತಿರುವ ಬೃಹದಾಕಾರದ ಅಂತಸ್ಸರಣಗಳು. ಇವುಗಳಲ್ಲಿ ಅಧಿಕ ಸಿಲಿಕಾಂಶ ಶಿಲೆಗಳಾದ ಗ್ರಾನೈಟ್, ಗ್ರಾನೊಡಯೊರೈಟ್ ಮತ್ತು ಅವುಗಳಿಗೆ ಸಂಬಂಧಪಟ್ಟ ಶಿಲೆಗಳಿರುತ್ತವೆ. ಇವುಗಳಲ್ಲಿ ದೊಡ್ಡವು ಸಾವಿರಾರು ಚ.ಮೈ. ಹರಡಿರುತ್ತವೆ. ಕೆಲವು ಬ್ಯಾಥೊಲಿತ್‍ಗಳು ಅಗ್ನಿಶಿಲೆಗಳೇ ಅಥವಾ ರೂಪಾಂತರ ಶಿಲೆಗಳೇ ಎಂಬ ಸಂಶಯವಿದೆ. ಖನಿಜ ಸಮೂಹದಲ್ಲಿಯೂ ರೂಪದಲ್ಲಿಯೂ ಬ್ಯಾಥೊಲಿತ್‍ಗಳನ್ನು ಹೋಲುವ, ಆದರೆ ಗಾತ್ರದಲ್ಲಿ ಚಿಕ್ಕದಾಗಿರುವ ಈ ರೀತಿಯ ಶಿಲಾರೂಪಕ್ಕೆ (೪೦ ಚ. ಮೈಲಿಗಳಿಗಿಂತ ಕಡಿಮೆ) ಸ್ಟಾಕ್ಸ್ (ಬಾಸಸ್) ಎಂದು ಹೆಸರು. ಪ್ಲುಟಾನುಗಳು ಮೇಲೆ ತಿಳಿಸಿದ ಯಾವುದನ್ನೂ ಹೋಲದಿರುವ ಅಂತಸ್ಸರಣಗಳು.
ಒಳರಚನೆ
ಬದಲಾಯಿಸಿಅಂತರಗ್ನಿಶಿಲೆಗಳ ಒಳರಚನೆಯ ವಿಶೇಷ ಲಕ್ಷಣವೆಂದರೆ ಪೂರ್ಣ ಸ್ಫಟಿಕತ್ವ ಮತ್ತು ಸಮಕಣವಿನ್ಯಾಸ. ಇದಕ್ಕೆ ಗ್ರಾನಿಟಿಕ್ ಒಳರಚನೆ ಎಂದು ಹೆಸರು.
ಉದಾ: ಗ್ರಾನೈಟ್‍ಶಿಲೆ, ಇವೆರಡು ರಚನೆಗಳೂ ಶಿಲಾಪಾಕ ನಿಧಾನವಾಗಿ ಸ್ಫಟಿಕೀಕರಿಸುವುದರಿಂದುಂಟಾದುವು. ಇದರಿಂದ ಒಂದಕ್ಕೊಂದು ಹೆಣೆದುಕೊಂಡಿರುವ ಮತ್ತು ಒಂದಕ್ಕೊಂದು ಮಿತಿ ಕಲ್ಪಿಸುವ ವಿನ್ಯಾಸ ಬೆಳೆದಿರುತ್ತದೆ. ಈ ಗುಂಪಿನ ಅಲ್ಪಸಿಲಿಕಾಂಶ ಶಿಲೆಗಳಲ್ಲಿ ಖನಿಜಕಣಗಳು ನಿರಾಕಾರವುಳ್ಳವಾಗಿಯೂ ಅಧಿಕ ಸಿಲಿಕಾಂಶ ಶಿಲೆಗಳಲ್ಲಿ ಅಪೂರ್ಣಾಕಾರವುಳ್ಳವಾಗಿಯೂ ಇವೆ.
ರಾಸಾಯನಿಕ ಸಂಯೋಜನೆ
ಬದಲಾಯಿಸಿಅಂತರಗ್ನಿಶಿಲೆಗಳಲ್ಲಿ ಇತರ ಅಗ್ನಿಶಿಲೆಗಳಲ್ಲಿರುವಂತೆಯೇ ಸಿಲಿಕಾಂಶವು ೩೫% ರಿಂದ ೭೫% ವರೆಗಿರುತ್ತದೆ. ಸಿಲಿಕಾಂಶದ ಆಧಾರದ ಮೇಲೆ ಈ ವರ್ಗದ ಶಿಲೆಗಳನ್ನು ಅಧಿಕಸಿಲಿಕಾಂಶ ಶಿಲೆಗಳು (65% ಕ್ಕಿಂತ ಹೆಚ್ಚು), ಸಮ ಸಿಲಿಕಾಂಶ ಶಿಲೆಗಳು ಅಥವಾ ಮಧ್ಯವರ್ತಿಶಿಲೆಗಳು (೫೨% ರಿಂದ ೬೫% ರ ವರೆಗೆ) ಮತ್ತು ಅತ್ಯಲ್ಪಸಿಲಿಕಾಂಶ ಶಿಲೆಗಳು ೪೫ % ಕ್ಕಿಂತ ಕಡಿಮೆ) ಎಂದು ನಾಲ್ಕು ವಿಧಗಳಾಗಿ ವಿಭಾಗಿಸಲಾಗಿದೆ.
ವರ್ಗೀಕರಣ
ಬದಲಾಯಿಸಿಸಿಲಿಕಾಂಶ ಕ್ರಮೇಣ ಹೆಚ್ಚುವ ಕ್ರಮದಲ್ಲಿ ಕೆಳಗೆ ಕಂಡಂತೆ ವರ್ಗೀಕರಿಸಲಾಗಿದೆ.
- ೧. ಗ್ರಾನೈಟ್ ಡಯೋರೈಟ್ ಸಮೂಹ: ಕ್ವಾಟ್ರ್ಜ್, ಪೊಟ್ಯಾಷ್ ಫೆಲ್‍ಸ್ಪಾರ್. ಸೋಡಿಕಪ್ಲೇಜಿಯೋಕ್ಲೇಸ್‍ಗಳೊಂದಿಗೆ ಬಯೋಟೈಟ್ ಮತ್ತು ಅಥವಾ ಹಾರನ್‍ಬ್ಲೆಂಡ್ ಖನಿಜಗಳು ವಿವಿಧ ಪ್ರಮಾಣದಲ್ಲಿರುವ ಗ್ರ್ಯಾನೈಟ್ ಸೋಡಾಗ್ರ್ಯಾನೈಟ್ ಅಡಮೆಲೈಟ್.
- ೨. ಸಯನೈಟ್ ಸಮೂಹ: ಫೆಲ್‍ಸ್ಪಾರ್‍ಗಳ ಮತ್ತು ಇತರ ಅಧಿಕ ಸಿಲಿಕಾಂಶ ಖನಿಜಗಳ ಜೊತೆಗೆ ಸಿಲಿಕಾಂಶ ಕಡಿಮೆಯಿರುವ ನೆಫೆಲೀನ್, ಲ್ಯೂಸೈಟ್, ಸೋಡಲೈಟ್ ಖನಿಜಗಳನ್ನು ಸೋಡ ಪ್ರಮಾಣ ಅಧಿಕವಾಗಿರುವ ಆಂಫಿಬೋಲ್ ಮತ್ತು ಪೈರಾಕ್ಸೀನ್‍ಗಳೂ ಇರುವ ಸಯನೈಟ್ ಶಿಲೆಗಳು ಈ ಗುಂಪಿಗೆ ಸೇರಿದುವು.
- ೩. ಡಯಾರೈಟ್ ಸಮೂಹ: ಬೆಣಚು, ಆಂಡಿಸೀನ್ ಪ್ಲೇಜಿಯೋಕ್ಲೇಸ್ ಬಯೋಟೈಟ್ ಹಾರನ್‍ಬ್ಲೆಂಡ್ ಮುಂತಾದ ಖನಿಜಗಳು ಸಾಮಾನ್ಯವಾಗಿರುವ ಕ್ವಾಟ್ರ್ಸ್‍ಡಯೋರೈಟ್ ಮತ್ತು ಆಗೈಟ್‍ಡಯೋರೈಟ್ ಈ ಗುಂಪಿಗೆ ಸೇರಿದುವು.
- ೪. ಆಲ್ಕಲಿ ಗ್ಯಾಬ್ರೊ ಸಮೂಹ : ಆಲ್ಕಲಿ ಖನಿಜಗಳಿರುವ ಟೆಶ್ಚನೈಟ್, ತೆರಲೈಟ್, ಎಸ್ಸೆಕ್ಸೈಟ್, ಪಿಕ್ರೈಟ್, ಶಾಂಕಿನೈಟ್ ಈ ಗುಂಪಿಗೆ ಸೇರಿದುವು.
- ೫. ಗ್ಯಾಬ್ರೊ ಸಮೂಹ: ಲ್ಯಾಬ್ರೊಡಾರೈಟ್ ಪ್ಲೇಜಿಯೋಕ್ಲೇಸ್, ಆಗೈಟ್ ಕೆಲವು ವಿಧಗಳಲ್ಲಿ ಆಲಿವೀನ್ ಖನಿಜಗಳನ್ನು ಸಾಮಾನ್ಯವಾಗಿ ಉಳ್ಳ ಆಲಿವೀನ್ ಗ್ಯಾಬ್ರೊ, ಗ್ಯಾಬ್ರೊ, ಅನಾರ್ಥೊಸೈಟ್, ಟ್ರಾಕ್ಟೊಲೈಟ್ ಮುಂತಾದ ಶಿಲೆಗಳು ಈ ಗುಂಪಿಗೆ ಸೇರಿದುವು.
- ೬. ಪೆರಿಡೊಟೈಟ್ ಸಮೂಹ: ಪೈರಾಕ್ಸೀನ್, ಆಲಿವೀನ್ ಮತ್ತು ಅಧಿಕ ಕ್ಯಾಲ್ಸಿಯಂ ಇರುವ ಪ್ಲೇಜಿಯೊಕೇಸ್ ಮುಂತಾದ ಖನಿಜಗಳನ್ನು ಸಾಮಾನ್ಯವಾಗಿ ಉಳ್ಳ ಪೈರಾಕ್ಸಿನೈಟ್, ಪೆರಿಡೊಟೈಟ್ ಮತ್ತು ಡನೈಟ್ ಮುಂತಾದ ಶಿಲೆಗಳು ಈ ಗುಂಪಿಗೆ ಸೇರಿದುವು.