ಕಾರ್ಪೆಲ್ ಟನೆಲ್‌ ಸಿಂಡ್ರೋಮ್‌ ಬದಲಾಯಿಸಿ

ಡಾ| ಅನಿಲ್‌ ಕೆ. ಭಟ್‌, ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಮೂಳೆರೋಗಗಳ ಚಿಕಿತ್ಸಾ ವಿಭಾಗ, ಮತ್ತು ಡಾ| ಪ್ರಜ್ವಲ್‌ ಪಿ. ಮಾನೆ, ಕಿರಿಯ ರೆಸಿಡೆಂಟ್‌, ಮೂಳೆರೋಗಗಳ ಚಿಕಿತ್ಸಾ ವಿಭಾಗ, ಕೆಎಂಸಿ, ಮಣಿಪಾಲ

ಕೈ ಮತ್ತು ಬೆರಳುಗಳ ಚಟುವಟಿಕೆಯನ್ನು ನಿಯಂತ್ರಿಸುವ ನರಗಳಲ್ಲಿ ಒಂದು ಪ್ರಧಾನ ಮಧ್ಯಸ್ಥ ನರವು ಮುಂಗೈಯ ಒಳಗೆ ಸಂಕುಚನಗೊಳ್ಳುವ ಸ್ಥಿತಿಗೆ ಕಾರ್ಪೆಲ್ ಟನೆಲ್‌ ಎಂದು ಹೆಸರು.

ಕಾರ್ಪೆಲ್ ಟನೆಲ್‌ ಅಂದರೆ, ಮುಂಗೈಯ ಒಳಭಾಗದಲ್ಲಿರುವ ಒಂದು ಸಣ್ಣ ತೆರಪು. ಈ ಟನೆಲಿನ ತಳಭಾಗ ಮತ್ತು ಬದಿಗಳು, ಮುಂಗೈಯ ಅನೇಕ ಸೂಕ್ಷ್ಮ ಮೂಳೆಗಳಿಂದ ಸಂರಚನೆಗೊಂಡಿರುತ್ತದೆ. ಈ ಟನೆಲ್‌ನಲ್ಲಿ ಅನೇಕ ಸ್ನಾಯುರಜ್ಜುಗಳು ಇದ್ದು, ಮಧ್ಯಸ್ಥ ನರವು ಇದರಲ್ಲಿ ಅಂತರ್ಗತವಾಗಿರುತ್ತದೆ. ಮಧ್ಯಸ್ಥ ನರವು ಕೈಯ ಬಹಳಷ್ಟು ಸಂವೇದನೆಗಳನ್ನು, ಅದರಲ್ಲೂ, ವಿಶೇಷವಾಗಿ ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳುಗಳು, ಹೆಬ್ಬೆರಳುಗಳ ಬದಿಯ ಅರ್ಧದಷ್ಟು ಅಂಗೈ ಮತ್ತು ಕೈಯ ಹಿಂಭಾಗದ ಸಂವೇದನೆಗಳನ್ನು ಮೆದುಳಿಗೆ ರವಾನಿಸುತ್ತಿರುತ್ತದೆ.

ಕಾರ್ಪೆಲ್ ಟನೆಲ್‌ ಸಿಂಡ್ರೋಮ್‌ ಎಂಬುದು ಬಹಳ ಸಾಮಾನ್ಯವಾಗಿ ಉಂಟಾಗುವ ಹೊರ ಪದರದ ನರಗಳ ಸಂಕುಚನಾ ಕಾಯಿಲೆ. ಈ ಪರಿಸ್ಥಿತಿ ಜೀವಮಾನದಲ್ಲಿ 10%ರಷ್ಟು ಸಂಭವಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ 25-30 ವರ್ಷದ ಬಳಿಕ ಕಾಣಿಸಿಕೊಳ್ಳುವ ಈ ಕಾಯಿಲೆಯು, ಪುರುಷರಿಗಿಂತಲೂ ಮಹಿಳೆಯರಲ್ಲಿ ಮೂರು ಪಟ್ಟು ಹೆಚ್ಚು ಕಂಡು ಬರುತ್ತದೆ. ಇದು ಒಂದು ಬಹಳ ಸಾಮಾನ್ಯವಾದ ವೃತ್ತಿ ಸಂಬಂಧಿ ರೋಗ ಪರಿಸ್ಥಿತಿಯಾಗಿದೆ.

ಮಧ್ಯಸ್ಥ ನರದಲ್ಲಿ ಅಡಚಣೆಯಾಗುವ ಕಾರಣ ಸಂವೇದನೆ ಮತ್ತು ಕೈಗಳ ಚಲನವಲನದ ವೈಕಲ್ಯ ಉಂಟಾಗುತ್ತದೆ. ಕೈ ಮತ್ತು ತೋಳುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯ ತಪಾಸಣೆಗೆ ಇಂತಹದೆ ರೋಗಲಕ್ಷಣ ಎಂಬ ಪ್ರಮಾಣ ಇಲ್ಲ. ಇದು ಅನೇಕ ರೋಗಲಕ್ಷಣಗಳು ಮತ್ತು ರೋಗಚಿಹ್ನೆಗಳ ಒಂದು ಸಂಯೋಜಿತ ರೋಗ ಸ್ಥಿತಿ. ವೈದ್ಯರು ಈ ಕಾಯಿಲೆಯ ಗುಣಲಕ್ಷಣಗಳನ್ನು ಕಂಡುಕೊಳ್ಳಲು ಕೆಲವು ಪರೀಕ್ಷೆಗಳನ್ನು ನಡೆಸುತ್ತಾರೆ.


ಹಿನ್ನೆಲೆ

ಅನೇಕ ಬಾರಿ ಕಾರ್ಪೆಲ್ ಟನೆಲ್‌ ಸಿಂಡ್ರೋಮ್‌ಗೆ ಕಾರಣ ಏನು ಎನ್ನುವುದೇ ಗೊತ್ತಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಸರಿಯಾದ ಕಾರಣಗಳೇ ಪತ್ತೆ ಆಗುವುದಿಲ್ಲ. ಕಾಪೆìಲ್‌ ಟನೆಲಿನ ನಡುವಿನ ತೆರಪು ಕಡಿಮೆಯಾಗುವುದು ಅಥವಾ ಮುಂಗೈಯಲ್ಲಿ ಮಧ್ಯಸ್ಥ ನರದ ಮೇಲೆ ಒತ್ತಡವನ್ನು ಉಂಟು ಮಾಡುವ ಪರಿಸ್ಥಿತಿಗಳಿಂದಾಗಿ ಕಾರ್ಪೆಲ್ ಟನೆಲ್‌ ರೋಗ ಸ್ಥಿತಿ ಉಂಟಾಗಬಹುದು. ಕಾರಣಗಳನ್ನು ಸ್ಥೂಲವಾಗಿ ವೃತ್ತಿ ಸಂಬಂಧಿತ ಕಾರಣಗಳು ಮತ್ತು ಹಿನ್ನೆಲೆಯ ಪರಿಸ್ಥಿತಿಗಳು ಎಂಬುದಾಗಿ ವಿಂಗಡಿಸಬಹುದಾಗಿದೆ.

ವೃತ್ತಿ ಸಂಬಂಧಿತ ಅಪಾಯ ಪೂರಕ ಅಂಶಗಳು ಅಂದರೆ, ಮತ್ತೆ ಮತ್ತೆ ಪುನರಾವರ್ತನೆಗೊಳ್ಳುವ ಕೆಲಸಗಳು ಘರ್ಷಣೆ ಮತ್ತು ಭಂಗಿಗಳು, ಕಂಪಿಸುವಿಕೆ - ಇದು ಕಾಪೆìಲ್‌ ಟನೆಲ್‌ ಸಿಂಡ್ರೋಮ್‌ ಬಾಧಿಸಲು ಇರುವ ಕಾರಣಗಳಲ್ಲಿ ಪ್ರಮುಖವಾದವು. ಇನ್ನಿತರ ಕಾರಣಗಳು ಅಂದರೆ, ಬೊಜ್ಜು, ರುಮೆಟಾಯಿಡ್‌ ಸಂಧಿವಾತಗಳು ಮತ್ತು ಸ್ನಾಯುರಜ್ಜುಗಳ ಉರಿಯೂತವನ್ನು ಉಂಟು ಮಾಡುವ ಕಾಯಿಲೆಗಳು.

ಹೈಪೋಥೈರಾಯಿಡಿಸಂ ಕಾರಣದಿಂದ ಮಧ್ಯಸ್ಥ ನರವು ಪೆರಿನ್ಯೂರಿಯಂ (ನರದ ಸುತ್ತಲೂ ಇರುವ ಪೊರೆ) ಸುತ್ತ ಬಾವು ಬಂದು ಒತ್ತಡ ಹೆಚ್ಚುತ್ತದೆ. ಇಷ್ಟು ಮಾತ್ರವಲ್ಲದೆ, ಕಾರ್ಪೆಲ್ ಟನೆಲ್‌ ಮೂಲಕ ಹಾದು ಹೋಗುವ ಸ್ನಾಯು ರಜ್ಜುಗಳು ನರತಂತುಗಳ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡುತ್ತವೆ.