ರಾಷ್ಟ್ರಕವಿ ಎಂ.ಗೋವಿಂದ ಪೈ

ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ೨೩.೦೩.೧೮೮೩ ರಲ್ಲಿ ಜನಿಸಿದರು. ತಂದೆ ಸಾಹುಕಾರ ತಿಮ್ಮಪೈ, ತಾಯಿ ದೇವಕಿಯಮ್ಮ ಬಿ.ಎ ಪದವಿಯನ್ನು ಪಡೆದಿದ್ದ ಗೋವಿಂದ ಪೈ ಅವರು ದೇಶೀ ಭಾಷೆಗಳಲ್ಲದೆ ವಿದೇಶಿ ಭಾಷೆಗಳ ಪಾಂಡಿತ್ಯವನ್ನುಳ್ಳವರಾಗಿದ್ದರು. ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು. ಸಂಶೋಧಕ, ವಿಮರ್ಶಕ, ಅನುವಾದಕರಾಗಿಯೂ ಜನಪ್ರಿಯರಾದ ರಾಷ್ಟ್ರಕವಿ ಗೋವಿಂದಪೈಅವರ ಸುವಾಸಿನಿ ಮೊದಲ ಕವಿತೆ ೧೯೦೦ರಲ್ಲಿ ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಅವರ ಇತರ ಕವನ ಸಂಕಲನಗಳು ಇಂತಿವೆ. ಗಿಳಿವಿಂಡು, ನಂದಾದೀಪ ಮೊದಲಾದವು. ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ ಗದ್ಯಾನುವಾದ, ಸಿಂಗಾಲ ಸುತ್ತ ಬೌದ್ಧ ಸೂತ್ರಗಳ ಕನ್ನಡ ಅನುವಾದ. ಅಲ್ಲದೇ ೩೫ ವೃತ್ತಗಳುಳ್ಳ ಪ್ರಾಸ ರಹಿತ ಗೊಮ್ಮಟ ಜಿನಸ್ತುತಿಯನ್ನು ರಚಿಸಿ ಪ್ರಕಟಿಸಿದರು.

ರವೀಂದ್ರನಾಥ ಠಾಕೂರ್, ಅಹಮ್ಮದ್ ಇಕ್ಬಾಲ್, ಉಮರ್ ಖಯ್ಯಾಮಿನ ರುಬಾಯಿಗಳನ್ನು ಭಾಷಾಂತರಿಸಿದ್ದಾರೆ. ವೈಶಾಖ ಮತ್ತು ಗೊಲ್ಗೊಥಾ ಖಂಡಕಾವ್ಯವನ್ನು ಪ್ರಕಟಿಸಿದ್ದಾರೆ. ತಮ್ಮ ಜೀವಿತಾವಧಿಯನ್ನು ಸಂಶೋಧನೆ, ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದ ಅವರಿಗೆ ೧೯೪೯ ರಲ್ಲಿ ಮದ್ರಾಸ್ ಸರ್ಕಾರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಿದೆ.

ಇವರು ಕನ್ನಡದ ಮೊದಲ ರಾಷ್ಟ್ರಕವಿ ಹೆಗ್ಗಳಿಕೆಗೆ ಪಾತ್ರರಾದವರು. ಹೊಗಳಿಕೆ ಮತ್ತು ಪ್ರಚಾರಕ್ಕೆ ಹಾತೊರೆಯದ ಇವರು ೧೯೫೦ ರಲ್ಲಿ ಬೊಂಬಾಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ವಹಿಸಿದ್ದರು. ೦೬.೦೯.೧೯೬೩ ರಲ್ಲಿ ಗೋವಿಂದ ಪೈ ಅವರು ದೈವಾಧೀನರಾದರು.