‘ಜನಸಂಖ್ಯಾ ಸ್ಫೋಟ’ ಆಕೆಯ ಜೀವನಕ್ಕೆ ನೇರವಾಗಿ ಸಂಬಂಧಿಸಿದ್ದು. ಹೆಣ್ಣು ಮಕ್ಕಳನ್ನು ಹಲವು ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ಒಳಪಡಿಸುವ ಸಮಾಜ, ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಂತಿಕೆ ಬೆಳೆಸಿಕೊಳ್ಳದ ‘ಸುಶಿಕ್ಷಿತ’ ಹೆಣ್ಣುಮಕ್ಕಳು, ಆಡಳಿತ ವ್ಯವಸ್ಥೆಯ ವೈಫಲ್ಯ ..... ಈ ಎಲ್ಲವೂ ಈ ಸಮಸ್ಯೆಯ ಪಾಲುದಾರರು. ವಿಶ್ವ ಜನಸಂಖ್ಯಾ ದಿನ ಜುಲೈ ೧೧ಮತ್ತೊಮ್ಮೆ ನಮ್ಮ ಮುಂದಿದೆ. ೧೯೮೭ರಲ್ಲಿ ಜಗತ್ತಿನ ಜನಸಂಖ್ಯೆ ೫ ಬಿಲಿಯನ್ ಮುಟ್ಟಿದ ದಿನದಂದು ‘ವಿಶ್ವ ಜನಸಂಖ್ಯಾ ದಿನ’ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಭಾರತದ ಮಟ್ಟಿಗಂತೂ ಇದು ಆಚರಣೆಯಷ್ಟೇ! ಭಾರತದಲ್ಲಿ ಮಕ್ಕಳು ಹುಟ್ಟುತ್ತಿರುವ ಸರಾಸರಿ ಅನುಪಾತ ಅತಿ ಹೆಚ್ಚಿನ ಜನಸಂಖ್ಯೆಯುಳ್ಳ ಚೀನಕ್ಕಿಂತ ಹೆಚ್ಚು. ಅಂದರೆ ಇದೇ ರೀತಿ ನಾವು ಮುಂದುವರೆದರೆ ೨೦೨೫ರ ವೇಳೆ ನಾವು ಚೀನಾವನ್ನು ಹಿಂದೆ ಹಾಕುತ್ತೇವೆ! ಪದಕ ಗಿಟ್ಟಿಸುವುದರಲ್ಲಲ್ಲ, ಜನಸಂಖ್ಯೆಯಲ್ಲಿ!

ಈ ಒಂದು ವಾಕ್ಯ ‘ಜನಸಂಖ್ಯಾ ಸ್ಫೋಟ’ಕ್ಕೂ ಮಹಿಳೆಗೂ ಇರುವ ಸಂಬಂಧವನ್ನು ಸೂಚ್ಯವಾಗಿ ನೀಡುತ್ತದೆ. ಜಾಗತಿಕ ಜನಸಂಖ್ಯಾ ಸ್ಫೋಟ ಜಗತ್ತನ್ನೇ ಕೊಲ್ಲುವ ಅಪಾಯಕ್ಕೊಡ್ಡಿದ್ದರೆ ಭಾರತದಲ್ಲಂತೂ ಅದರ ಪರಿಣಾಮ ನಮ್ಮ ಊಹೆಗೂ ಮೀರಿದ್ದು, ಜನಸಂಖ್ಯಾ ಅನಿಯಂತ್ರಣಕ್ಕೆ ಮುಖ್ಯ ಕಾರಣಗಳು ಭಾರತದಲ್ಲಿ ಈ ಕೆಳಗಿನಂತೆ: ಶಿಕ್ಷಣವಿಲ್ಲದ ಹೆಣ್ಣುಮಕ್ಕಳು, ಗರ್ಭನಿರೋಧಕಗಳ ಬಗ್ಗೆ ತಿಳಿಯದಿರುವುದು. ಜ್ಞಾನವಿದ್ದಾಗ್ಯೂ ‘ಗಂಡು ಮಗು’ವಿನ ಸಲುವಾಗಿ ಮಕ್ಕಳನ್ನು ಹೆರುತ್ತಾ ಹೋಗುವುದು. ಹೆಣ್ಣಿನ ಮೇಲೆ ಬೇರೆ ಬೇರೆ ವಿಧದ ಸಾಮಾಜಿಕ -ಕೌಟುಂಬಿಕ ಒತ್ತಡಗಳು ಎರಡು ಮಕ್ಕಳ ನಡುವಣ ಅಂತರವಿರದೇ, ತಾಯಿಯ ಆರೋಗ್ಯ ಹದಗೆಡುವಿಕೆ. ಗರ್ಭನಿರೋಧಕ ವಿಧಾನಗಳ ಬಗ್ಗೆ ಮಹಿಳೆಗೆ ಇರುವ ಸೀಮಿತ ಸ್ವಾತಂತ್ರ್ಯ / ಸ್ವಾತಂತ್ರ್ಯವಿರದಿರುವುದು. ಗರ್ಭನಿರೋಧಕ ವಿಧಾನಗಳ ಬಗ್ಗೆ ಪುರುಷನ ಅಲಕ್ಷ್ಯ, ಇಲ್ಲವೇ ತಪ್ಪು ನಂಬಿಕೆಗಳು (‘ಕಾಂಡೋಮ್’ನಿಂದ ಲೈಂಗಿಕ ತೃಪ್ತಿ ಸಿಗಲಾರದು, ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ಲೈಂಗಿಕತೆಯೇ ನಾಶವಾಗುತ್ತದೆ ಇತ್ಯಾದಿ ಇತ್ಯಾದಿ) ಸ್ತ್ರೀಯರಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಯ ನಂತರದ ತಪ್ಪು ನಂಬಿಕೆಗಳು (ಈ ಶಸ್ತ್ರಚಿಕಿತ್ಸೆ ನಂತರವೇ ನನಗೆ ಕಾಲು ನೋವು ಆರಂಭವಾದದ್ದು, ನಾನು ದಪ್ಪ ಆಗಿದ್ದು ಇತ್ಯಾದಿ ಇತ್ಯಾದಿ) ಇವುಗಳಿಂದ ಹರಡುವ ತಪ್ಪು ನಂಬಿಕೆಗಳು. ಈ ಸಮಸ್ಯೆಯ ಪರಿಹಾರ ಸುಲಭ ಸಾಧ್ಯವಲ್ಲ. ಮಹಿಳೆ ಮೊದಲು ತನ್ನನ್ನು ತಾನು ಪಾರು ಮಾಡಿಕೊಂಡು ನಂತರ ದೇಶವನ್ನೂ ಬದುಕಿಸಬೇಕಾದ ಪರಿಸ್ಥಿತಿ. ಮಹಿಳೆಯೊಬ್ಬಳ ಶಿಕ್ಷಣ ಎರಡು ರೀತಿಯಿಂದ ಮುಖ್ಯ. ಒಂದು ಸ್ವತಃ ಆಕೆಯ ಅರಿವು ಹೆಚ್ಚಿಸುವಲ್ಲಿ, ಎರಡನೆಯದು ಆಕೆಯ ಮಕ್ಕಳ (ಗಂಡುಮಕ್ಕಳು - ಹೆಣ್ಣುಮಕ್ಕಳು ಇಬ್ಬರದೂ) ಅರಿವು ಹೆಚ್ಚಿಸುವಲ್ಲಿ. ಗರ್ಭನಿರೋಧಕಗಳ/ ಶಸ್ತ್ರಚಿಕಿತ್ಸೆಯ ಆಯ್ಕೆ ಇಬ್ಬರೂ ಸಂಗಾತಿಗಳ ಒಪ್ಪಂದದ ಮೇರೆಗೆ. ಇದರ ಬಗೆಗಿನ ಮುಕ್ತ ಚರ್ಚೆ ದಂಪತಿಗಳಲ್ಲಿ ಅತ್ಯಗತ್ಯ. ಕೆಲವೇ ಕ್ಷಣಗಳ ಉದ್ರೇಕಕ್ಕಾಗಿ ಇಡೀ ಜೀವನಪರ್ಯಂತ ನರಳುವ ಪರಿಸ್ಥಿತಿ ಖಂಡಿತ ಬೇಡ. ಬೇಡದ ಗರ್ಭ ಧರಿಸಿ, ಗರ್ಭಪಾತ ಮಾಡಿಸಿಕೊಳ್ಳುವುದು/ಗರ್ಭಪಾತ ಮಾಡಿಸಿಕೊಳ್ಳುವ ‘ಪಾಪ’ದ ಭಯದಿಂದ ಮಗುವನ್ನು ಹೆತ್ತು ಬೇಸರದಿಂದ ಸಾಕುವುದು ತಾಯಿಯ ದೈಹಿಕ -ಮಾನಸಿಕ - ಭಾವನಾತ್ಮಕ ಆರೋಗ್ಯಕ್ಕೆ ಮಾರಕ. ಹಾಗಾಗಿ ಎಷ್ಟೇ ಉದ್ರೇಕದಲ್ಲಿಯೂ ಸ್ವಾಸ್ಥ್ಯದ ಬಗ್ಗೆ ಒಂದೆರಡು ನಿಮಿಷಗಳ ಮುಂದಾಲೋಚನೆ ಅಗತ್ಯ - ಸಾಧ್ಯ. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗಳ ಬಗೆಗೆ ತಪ್ಪು ನಂಬಿಕೆಗಳನ್ನು ನೀವೂ ಇರಿಸಿಕೊಳ್ಳಬೇಡಿ. ಬೇರೆಯವರಿಗೂ ಹರಡಬೇಡಿ. ಈ ಶಸ್ತ್ರಚಿಕಿತ್ಸೆಗೂ, ಲೈಂಗಿಕತೆಗೂ ಯಾವುದೇ ಸಂಬಂಧವಿಲ್ಲ. ದೈಹಿಕ ಆರೋಗ್ಯವೂ ಇವುಗಳಿಂದ ಕೆಡುವುದಿಲ್ಲ. ಗರ್ಭನಿರೋಧಕ ವಿಧಾನಗಳ ಬಳಕೆಯ ಬಗ್ಗೆ ಪ್ರತಿಯೊಂದು ಮಹಿಳೆ ತನ್ನ ಕುಟುಂಬ ವೈದ್ಯ / ಸ್ತ್ರೀ ತಜ್ಞರೊಡನೆ ಚರ್ಚಿಸಬೇಕು. ಈ ಚರ್ಚೆಯಲ್ಲಿ ಅವಶ್ಯವಾಗಿ ಪುರುಷ ಸಂಗಾತಿ /ಪತಿ ಪಾಲ್ಗೊಳ್ಳಬೇಕು. ಜನಸಂಖ್ಯಾ ಸ್ಫೋಟ ತಡೆಗಟ್ಟಲು ಭಾರತ ಇಂದು ಬಹಳವಾಗಿ ಶ್ರಮಿಸಬೇಕು. ಅದು ಸಾಧ್ಯವಾಗುವುದು ಮಹಿಳೆಯ ಸಬಲೀಕರಣದಿಂದ, ಶಿಕ್ಷಣದಿಂದ. ಮತ್ತೊಮ್ಮೆ ಜನಸಂಖ್ಯಾ ದಿನದಂದು ನೆನಪಿರಲಿ ಪ್ರತಿಯೊಬ್ಬರನ್ನೂ ಲೆಕ್ಕಿಸಬೇಕು ‘ಎವೆರಿಒನ್ ಕೌಂಟ್ಸ್’! ಜೊತೆಗೇ ‘ಎವೆರಿಥಿಂಗ್ ಕೌಂಟ್ಸ್’ - ಪ್ರತಿಯೊಂದೂ ಲೆಕ್ಕಿಸಬೇಕಾದ್ದೇ - ಮಹಿಳೆಯ ಭಾವನೆ - ಶಿಕ್ಷಣವನ್ನೂ!