ಕಾಶ್ಮೀರಿ ಪಾಕಪದ್ಧತಿಯ ವಿಶಿಷ್ಟ ಪಾಕವಿಧಾನಗಳ ಪೈಕಿ ಒಂದಾದ ರೋಗನ್ ಜೋಶ್ ಪರ್ಷಿಯಾ ಮೂಲದ ಒಂದು ಮಸಾಲೆಭರಿತ ಕುರಿಮರಿ ಮಾಂಸದ ಖಾದ್ಯ. ಪರ್ಷಿಯನ್ ಭಾಷೆಯಲ್ಲಿ ರೋಘನ್ ಅಂದರೆ "ತುಪ್ಪ" ಅಥವಾ "ಕೊಬ್ಬಿನ ಪದಾರ್ಥ", ಮತ್ತು ಜೋಶ್ ಅಂದರೆ ಸಾಂಕೇತಿಕವಾಗಿ "ತೀವ್ರತೆ" ಅಥವಾ "ಭಾವೋದ್ವೇಗ", ಹಾಗಾಗಿ ರೋಗನ್ ಜೋಶ್ ಅಂದರೆ ತೀವ್ರ ಶಾಖದಲ್ಲಿ ಎಣ್ಣೆಯಲ್ಲಿ ಬೇಯಿಸಿದ್ದು ಎಂದು. ಅದು ಮುಚ್ಚಿದ ಪಾತ್ರೆಯಲ್ಲಿ ಕಂದಾಗಿಸಿದ ಈರುಳ್ಳಿ, ಮೊಸರು, ಬೆಳ್ಳುಳ್ಳಿ, ಶುಂಠಿ ಮತ್ತು ಪರಿಮಳಭರಿತ ಸಂಬಾರ ಪದಾರ್ಥಗಳನ್ನು (ಲವಂಗ, ತಮಾಲಪತ್ರಗಳು, ಏಲಕ್ಕಿ ಮತ್ತು ದಾಲ್ಚಿನ್ನಿ) ಆಧರಿಸಿದ ಗ್ರೇವಿಯ ಜೊತೆಗೆ ಬೇಯಿಸಿದ ಕುರಿಮರಿ ಮಾಂಸದ ತುಂಡುಗಳನ್ನು ಹೊಂದಿರುತ್ತದೆ.