ಭಾವಪೂಜೆ ನಾವು ನಮ್ಮ ಮನಸ್ಸಿನ ನೆಮ್ಮದಿಗೆ, ಇಂದಿನ ಒತ್ತಡದ ಜೀವನದಲ್ಲಿ ಕೆಲ ಕ್ಷಣ ನಿಶ್ಚಿಂತೆಯಿಂದ ಕಳೆಯಲು ದೇವರ, ಸಂತರ ಮೊರೆ ಹೋಗುತ್ತೇವೆ, ಅಲ್ಲಿ ದೇವರಿಗೆ ಪೂಜೆ ಮಾಡಿಸಿ, ನಮ್ಮ ಜೀವನ ನೆಮ್ಮದಿಯಿಂದ ಇರಲು ಪ್ರಾರ್ಥಿಸುತ್ತೇವೆ. ಅಂದರೆ ಮನಸ್ಸಿನ ಶುದ್ಧಿಗಾಗಿ ನಮಗೆ ಒಂದು ಸಾಧನ ಬೇಕು, ಅದನ್ನೇ ನಾವು ಪೂಜೆಯೆಂದು ಕರೆಯುತ್ತೇವೆ. ಪೂಜೆಯಲ್ಲಿ ಎರಡು ವಿಧ. ಒಂದನೆಯದು 'ದ್ರವ್ಯ ಪೂಜೆ' ಜಲ, ಗಂಧ, ಅಕ್ಷತಾ, ಪುಷ್ಪ, ಧೂಪ ಮುಂತಾದ ದ್ರವ್ಯಗಳನ್ನು ಅಂದರೆ ವಸ್ತುಗಳನ್ನು ಉಪಯೋಗಿಸಿ ಪೂಜಿಸಲಾಗುತ್ತದೆ. ಒಳ್ಳೆಯ ಪರಿಣಾಮ, ಒಳ್ಳೆಯ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ದೇವರಿಗೆ, ನಾವು ಬೇರೆ ಬೇರೆ ವಸ್ತುಗಳನ್ನು ಅರ್ಪಿಸಿದ ಮಾತ್ರಕ್ಕೆ, ನಮಗೆ ಏನು ಫಲ ಸಿಗುವುದಿಲ್ಲ, ಕೆಲ ವಸ್ತುಗಳ ಅರ್ಪಣೆಯಿಂದ ಆ ದೇವರು ನಮಗೆ ಒಳ್ಳೆಯದನ್ನು ಮಾಡುತ್ತಾನೆ. ಎಂದು ಭಾವಿಸಿದರೆ ನಿಜಕ್ಕೂ ಅದು ನಮ್ಮ ಮೂರ್ಖತನವನ್ನು ಪ್ರದರ್ಶಿಸಿದಂತಾಗುತ್ತದೆ. ಎರಡನೇಯದು ಭಾವ ಪೂಜೆ' ಯಾವುದೇ ವಸ್ತುಗಳಿಲ್ಲದೇ, ನಿಷ್ಕಲ್ಮಶ ಮನಸ್ಸಿನಿಂದ ಮಾಡುವ ಪೂಜಾ ವಿಧಾನವಿದು. ನಮ್ಮಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಲೋಭ, ಮುಂತಾದ ವಿಕಲ್ಪಗಳನ್ನು ನಾಶಪಡಿಸುವ ಪೂಜಾ ವಿಧಾನವಿದು.

ಭಾವ ಪೂಜೆಯ ಬಗೆಗಿರುವ ಒಂದು ದೃಷ್ಟಾಂತ ಕತೆ ಬದಲಾಯಿಸಿ

ಒಂದು ಊರಿನ ದೇವಸ್ಥಾನದಲ್ಲಿ, ಒಬ್ಬ ಸನ್ಯಾಸಿ ಕುಳಿತ್ತಿದ್ದರು. ಅವರ ಬಳಿ ಹೋದ ಹಳ್ಳಿಗನೊಬ್ಬ ಕೇಳಿದ - ಸ್ವಾಮಿ ದೇವರ ಪೂಜೆಗೆ ಪವಿತ್ರವಾದ ವಸ್ತು ಯಾವುದು ? ಎಂದು. ಸನ್ಯಾಸಿ ಹೇಳಿದ- ಹಾಲು ಪವಿತ್ರವಾದದ್ದು, ಹಾಲಿನಿಂದ ದೇವರನ್ನು ಪೂಜಿಸು. ಹಳ್ಳಿಗ ಉತ್ತರಿಸಿದ- ಹಾಲನ್ನು ಕರು ಕುಡಿದಿರುತ್ತಲ್ಲ, ಅಲ್ಲಿಗೆ ಅದು ಎಂಜಲಾಯಿತಲ್ಲ ಎಂದ. ಮತ್ತೇ ಸನ್ಯಾಸಿ ಹೇಳಿದರು- ಹೂವಿನಿಂದ ಪೂಜೆ ಮಾಡು ಎಂದ. ಅದು ಹೇಗೆ ಸಾಧ್ಯ ಸ್ವಾಮಿ, ಹೂವಿನ ಮೇಲೆ ದುಂಬಿ ಕುಳಿತ್ತಿರುತ್ತಲ್ಲ ಎಂದ ಹಳ್ಳಿಗ, ಮತ್ತೇ ಸನ್ಯಾಸಿ ಹೇಳಿದ- ಜಲದಿಂದ ಪೂಜೆ ಮಾಡು. ಹಳ್ಳಿಗ ಉತ್ತರಿಸಿದ- ನೀರಿನಲ್ಲಿ ಮೀನುಗಳು ಕಪ್ಪೆಗಳು ವಾಸಿಸುವುದರಿಂದ ಅದು ಎಂಜಲಲ್ಲವೇ ಎಂದದ್ದನ್ನು ಕೇಳಿ, ಸನ್ಯಾಸಿ ಬೇಸರದಿಂದ ಮನಸ್ಸಿನಿಂದ ಪೂಜೆ ಮಾಡು ಎಂದಾಗ, ಆ ಹಳ್ಳಿಗ - ಕಾಮ, ಕ್ರೋದ, ಲೋಭ, ಮೋಹ, ಮದ ಮತ್ತು ಮತ್ಸರಗಳಿಂದ ಮನಸ್ಸು ಒಂದು ತಿಪ್ಪೆರಾಶಿ ಯಾಗಿದೆ. ಅಂಥ ಕೊಳಕು ಮನಸ್ಸನ್ನು ಹೇಗೆ ದೇವರಿಗೆ ಅರ್ಪಿಸಲಿ ಎಂದ. ಆಗ ಸನ್ಯಾಸಿಗೆ ಜ್ಞಾನೋದಯವಾಯಿತು. 'ನನ್ನ ಮನಸ್ಸು ಪರಿಶುದ್ಧವಿಲ್ಲದೇ ಮಾಡುವ ಪೂಜೆ ವ್ಯರ್ಥ'ವೆಂದು. ಹೊರಗಡೆ ಭಾರಿ ಶಕ್ತಿ ಪ್ರದರ್ಶನ ಮಾಡಿ, ವೈಭವಯುತವಾಗಿ ಪೂಜಾ ವಿಧಾನಗಳ ಆಚರಣೆ ಮಾಡಿದರೆ, ಅವನೇ ಸರ್ವಶ್ರೇಷ್ಟ ಭಕ್ತ ಎಂದು ಪರಿಭಾವಿಸುವುದು ತಪ್ಪಾಗುತ್ತದೆ.

  • ಈ ಡಂಭಾಚಾರದ ಭಕ್ತಿಯ ಪ್ರದರ್ಶನವನ್ನು ನೋಡಿ ಹನ್ನೆರೆಡನೇ ಶತಮಾನದ ವಚನಕಾರ 'ಜೇಡರ ದಾಸಿಮಯ್ಯ' ತನ್ನ ವಚನದಲ್ಲಿ ಬರುಸೆಟಗನ ಭಕ್ತಿ ದಿಟವೆಂದು ನೆಚ್ಚಲು ಭೇಡ, ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ಎಂದು ಆಡಂಬರದ ಭಕ್ತಿಯ ತೋರುವ ವರನ್ನು ಬೆಕ್ಕಿಗೆ ಹೋಲಿಸಿದ್ದಾರೆ. ಆದ್ದರಿಂದಲೇ, ನಾವು ನಮ್ಮ ಮನದಲ್ಲಿರುವ ದುಷ್ಪ ಅಲೋಚನೆಗಳನ್ನು, ದುರ್ಬದ್ದಿಯನ್ನು, ಕಿತ್ತು ಹಾಕಿ, ಕೆಲ ಕ್ಷಣ ನಿಶ್ಚಿಂತೆಯಿಂದ ಯಾವುದೇ ವಿಕಾರ ಭಾವನೆಗಳಿಗೆ ಒಳಗಾಗದೇ ಪ್ರಾರ್ಥಿಸಿ, ಧ್ಯಾನ ಮಾಡಿದರೆ, ಖಂಡಿತ ನಿಮ್ಮ ಮನ ನೆಮ್ಮದಿಯ ಗೂಡಾಗುತ್ತದೆ.
"https://kn.wikipedia.org/w/index.php?title=ಭಾವಪೂಜೆ&oldid=1053702" ಇಂದ ಪಡೆಯಲ್ಪಟ್ಟಿದೆ