ಬಂದೂಕು (ಕೋವಿ) ಸಾಮಾನ್ಯವಾಗಿ ಘನ ಉತ್ಕ್ಷೇಪಕಗಳನ್ನು (ಬಹುತೇಕ ಬಂದೂಕುಗಳು) ಗಾಳಿಯಲ್ಲಿ ಬಿಡುಗಡೆ ಮಾಡಲು ವಿನ್ಯಾಸಗೊಳಿಸಲಾದ ಹೊಂದಿಸಬಲ್ಲ ವ್ಯಾಪ್ತಿಯ ಆಯುಧ. ಆದರೆ ಉತ್ಕ್ಷೇಪಕಗಳು ದ್ರವ (ಜಲ ಕೋವಿಗಳು/ಫಿರಂಗಿಗಳು ಹಾಗೂ ಉತ್ಕ್ಷೇಪಿತ ಜಲ ಆಸ್ಫೋಟಕ) ಅಥವಾ ವಿದ್ಯುದಾವೇಶ ಹೊಂದಿರುವ ಕಣಗಳು (ಪ್ಲಾಸ್ಮಾ ಬಂದೂಕು) ಕೂಡ ಇರಬಹುದು. ಉತ್ಕ್ಷೇಪಕಗಳು ಮುಕ್ತವಾಗಿ ಹಾರಬಲ್ಲವಾಗಿರಬಹುದು (ಗುಂಡುಗಳು ಹಾಗೂ ತೋಟಾಗಳು) ಅಥವಾ ಕಟ್ಟಲ್ಪಟ್ಟಿರಬಹುದು (ಟೇಸರ್ ಬಂದೂಕು, ಈಟಿ ಕೋವಿಗಳು ಹಾಗೂ ಈಟಿಗಾಳ ಕೋವಿಗಳು). ಉತ್ಕ್ಷೇಪಕದ ನೋದನ ವಿಧಾನವು ವಿನ್ಯಾಸಗಳ ಪ್ರಕಾರ ಬದಲಾಗುತ್ತದೆ, ಆದರೆ ಸಾಂಪ್ರದಾಯಿಕವಾಗಿ ತುಪಾಕಿ ಕೊಳವೆಯಲ್ಲಿ (ಬಂದೂಕಿನ ನಳಿಗೆ) ಇರುವ ಅಧಿಕ ಅನಿಲ ಒತ್ತಡದಿಂದ ಉಂಟುಮಾಡಲಾಗುತ್ತದೆ. ಅಧಿಕ ಒತ್ತಡವನ್ನು ನೋದಕಗಳ ಕ್ಷಿಪ್ರ ದಹನದ ಮೂಲಕ (ಫಾಯರ್ ಆರ್ಮ್‌ಗಳು) ಅಥವಾ ಯಾಂತ್ರಿಕ ಸಂಕೋಚನದ ಮೂಲಕ (ಗಾಳಿಗೋವಿಗಳು) ಸೃಷ್ಟಿಸಲಾಗುತ್ತದೆ. ಅಧಿಕ ಒತ್ತಡದ ಅನಿಲವನ್ನು ಉತ್ಕ್ಷೇಪಕದ ಹಿಂದೆ ಬಿಡಲಾಗುತ್ತದೆ. ಇದರಿಂದ ಉತ್ಕ್ಷೇಪಕವು ವೇಗಗೊಂಡು ನಳಿಕೆಯ ಉದ್ದಕ್ಕೆ ಚಲಿಸುತ್ತದೆ. ನಳಿಕೆಯ ಕೊನೆಯಲ್ಲಿ ನೋದಕ ಅನಿಲವು ಉತ್ಕ್ಷೇಪಕದ ಮೇಲೆ ಕಾರ್ಯಮಾಡುವುದು ನಿಲ್ಲಿಸುತ್ತದೆ. ಆದರೆ ಅಷ್ಟರಲ್ಲಿ ಉತ್ಕ್ಷೇಪಕವು ಅದರ ಗುರಿಯತ್ತ ಮುಂದಿನ ಪ್ರಯಾಣಕ್ಕೆ ಸಾಕಾಗುವಷ್ಟು ಉಡಾವಣಾ ವೇಗವನ್ನು ಪಡೆದುಕೊಂಡಿರುತ್ತದೆ.

"https://kn.wikipedia.org/w/index.php?title=ಬಂದೂಕು&oldid=892257" ಇಂದ ಪಡೆಯಲ್ಪಟ್ಟಿದೆ