ನೇಮಿನಾಥ ಸ್ವಾಮಿ ಬಸದಿ, ಗೇರುಸೊಪ್ಪೆ

ಸ್ಥಳ ಬದಲಾಯಿಸಿ

ಶ್ರೀ ನೇಮಿನಾಥ ಸ್ವಾಮಿಯ ಸುಂದರ ಬಿಂಬವಿರುವ ಈ ಬಸದಿಯು ಪ್ರಸಿದ್ಧ ಚತುರ್ಮುಖ ಬಸದಿಯ ಎದುರುಗಡೆಯ ರಸ್ತೆಯ ಬಲಭಾಗದಲ್ಲಿದೆ. ಸುತ್ತಲೂ ಪ್ರಾಕಾರಗೋಡೆ ಇದೆ. ಒಳಗಡೆ ಉತ್ತಮ ಸ್ಥಿತಿಯಲ್ಲಿರುವ ಗರ್ಭಗೃಹವಿದ್ದು ಎದುರುಗಡೆ ಪೂರ್ಣ ನಿರ್ಮಾಣಗೊಳ್ಳದ ಪ್ರಾರ್ಥನಾ ಮಂಟಪವನ್ನು ಹೊಂದಿದೆ. ಇದು ಕೂಡ ಪ್ರಾಚ್ಯ ಇಲಾಖೆಗೆ ಸೇರಿದೆ.

ವಿನ್ಯಾಸ ಬದಲಾಯಿಸಿ

ಗರ್ಭಗೃಹವು ಕೇವಲ ಆರೂಢವನ್ನು ಮಾತ್ರ ಹೊಂದಿದ್ದು ಮೇಲ್ಗಡೆ ಕಲ್ಲು ಕಪ್ಪಡಿಗಳನ್ನು ಹಾಸಲಾಗಿದೆ. ಗರ್ಭಗೃಹದಲ್ಲಿರುವ ಶ್ರೀ ನೇಮಿನಾಥ ಸ್ವಾಮಿಯ ಶಿಲಾಮೂರ್ತಿಯು ಪೀಠ ಸಹಿತವಾಗಿ ಸುಮಾರು ಮೂರುವರೆ ಅಡಿ ಎತ್ತರವಿದೆ. ದೃಢವಾದ ದಷ್ಟಪುಷ್ಟವಾದ ಶರೀರವನ್ನು ಹೊಂದಿದೆ. ಮೇಲಿನ ಅರ್ಧಚಂದ್ರಾಕೃತಿಯ ಪ್ರಭಾವಳಿಯಲ್ಲಿ ಮಕರತೋರಣದ ಅಲಂಕಾರವಿದೆ. ಅದಕ್ಕಿಂತ ಹೊರಭಾಗದಲ್ಲಿ ಚತುವಿರ್ಂಶತಿ ತೀರ್ಥಕರ ಸುಂದರ ಆಕೃತಿಗಳಿವೆ.ಸ್ವಾಮಿಯ ಎಡಬಲಭಾಗಗಳಲ್ಲಿ ಸರ್ವಾಹ್ನ ಯಕ್ಷ ಮತ್ತು ಕೂಷ್ಮಾಂಡಿನಿ ಯಕ್ಷಿಯರ ಬಿಂಬಗಳಿವೆ. ಇವುಗಳ ಮೇಲ್ಗಡೆ ಕಂಬದ ರೀತಿಯ ಕೆತ್ತನೆಗಳು ಹಾಗೂ ಅದಕ್ಕಿಂತ ಮೇಲ್ಗಡೆ ಮಕರ ಮೃಗ ಹಾಗೂ ಬಳಿಯಲ್ಲಿ ಚಾಮರ ಧಾರಿಗಳ ಬಿಂಬಗಳಿವೆ. ಈ ಸಮಗ್ರ ಬಿಂಬವು ಹೊಯ್ಸಳ ಶಿಲ್ಪಶೈಲಿಯನ್ನು ತೋರಿಸುತ್ತದೆ. ಪ್ರಭಾವಳಿಯಲ್ಲಿ ಹೂಗಳ ಅಲಂಕಾರವಿದೆ. ಸ್ವಾಮಿಯ ಶಿರೋಭಾಗದಲ್ಲಿ ಅಲಂಕೃತವಾದ ಮುಕ್ಕೊಡೆ ಇದೆ. ಅದರ ಮೇಲ್ಗಡೆ ಕೀರ್ತಿ ಮುಖವಿದೆ,ಕಣ್ಣುಗಳ ರಚನೆಯು ಹೊಳೆಯುವ ಕಣ್ಣುಗಳನ್ನು ಪ್ರತಿಬಿಂಬಿಸುತ್ತದೆ. ಸಿಂಹಪೀಠದ ಮೇಲಿರುವ ಪದ್ಧಪೀಠದ ಮೇಲ್ಬಾಗದ ವರ್ತುಲದಲ್ಲಿ “ಪನಸೋಕಾವಳಿಮಂಜುಳ ದೇವಿಗಣ ಲಲಿತಕೀರ್ತಿ ಮುನಿಗಳ" ಎಂಬ ಉಲ್ಲೇಖವಿದೆ. ಹಿಂದೆ ಈ ಬಸದಿಗೆ ಪ್ರತ್ಯೇಕವಾದ ಮಾನಸ್ತಂಭ ಇದ್ದವು. ಇಲ್ಲಿರುವ ಪ್ರಾಚ್ಯ ಇಲಾಖೆಯ ಒಂದು ಸೂಚನಾ ಫಲಕದಲ್ಲಿ ಹೀಗೆಂದು ಬರೆದಿಡಲಾಗಿದೆ.[೧]

ಉಲ್ಲೇಖ ಬದಲಾಯಿಸಿ

  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳು. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೮೯.