ಜನಪದ ಕಥೆ : ತಲೇಮಾರಿನಿಂದ ತಲೇಮಾರಿಗೆ ರೂಪಾಂತರಗೊಂಡು ಹಾಗೆಯೆ ಬರೆವಣಿಗೆಯ ಮೂಲಕವೋ ಬಾಯ ಮೂಲಕವೋ ನಿರಂತರವಾಗಿ ಸಾಗಿ ಬಂದಿರುವ ಕಥೆ. ಈ ಮಾತು ವ್ಯಾಪಕವಾದ ಅರ್ಥದಲ್ಲಿ ಎಲ್ಲ ಸಾಂಪ್ರದಾಯಿಕ ಕಥನರೂಪಗಳನ್ನು ಒಳಗೊಳ್ಳುತ್ತದೆ.[೧] ಜನಪದ ಕಥೆಗಳು ಕನ್ನಡದಲ್ಲಿ ಅಜ್ಜಿಯ ಕಥೆಗಳು (ನೋಡಿ- ಅಜ್ಜಿಕಥೆ) ಎಂಬುದಾಗಿ ಪ್ರಸಿದ್ಧಿ ಪಡೆದಿವೆ. ಅಸ್ಸಾಮೀ ಮತ್ತು ಬಂಗಾಳೀ ಭಾಷೆಗಳಲ್ಲಿ ಇವನ್ನು ಸಾಧುಕಥಾ ಎಂದು ಕರೆಯುತ್ತಾರೆ. ಇದಕ್ಕೆ ಅಲ್ಲಿ ವರ್ತಕ ಪ್ರಧಾನ ಪಾತ್ರ ವಹಿಸುವುದೇ ಕಾರಣವಾಗಿದೆ.

ಕಥೆಗಳನ್ನು ಹೇಳುವುದಾಗಲಿ ಕೇಳುವುದಾಗಲಿ ನಿನ್ನೆಮೊನ್ನೆಯದಾಗಿರದೆ, ಮಾನವಸಮಾಜದಷ್ಟೇ ಪುರಾತನವಾದುದಾಗಿದೆ. ಸ್ವಾಭಾವಿಕವಾಗಿಯೇ ಮನುಷ್ಯ ಕಥೆ ಹೇಳುವುದನ್ನು ಕಲೆಯಾಗಿ ಬೆಳೆಸಿಕೊಂಡ. ಶ್ರಮದ ಉಪಶಮನಕ್ಕಾಗಿ ಕಲೆ ಜನ್ಮತಾಳಿತು ಎಂಬುದನ್ನು ಒಪ್ಪಿಕೊಳ್ಳುವುದಾದರೆ, ಕಥೆ ಹುಟ್ಟಿದ್ದು ಈ ಅನೀವಾರ್ಯದ ಫಲವಾಗಿ, ಉಳಿದದದ್ದುೆೆೆೆಗಗ್ಳಗ್ಳಘ ಈ ಅವಶ್ಯದ ಕಾರಣಕ್ಕಾಗಿ. ಆದಿವಾಸಿಗಳಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಕೆಲವು ರೀತಿಯ ಕಥೆಗಳನ್ನು ಹೇಳುತ್ತಿದ್ದುದು ಗೋಚರಿಸುತ್ತದೆ. ಕೆಲವನ್ನು ಚಳಿಗಾಲದಲ್ಲೂ ಕೆಲವನ್ನು ಬೇಸಗೆಯಲ್ಲೂ ಹೇಳುತ್ತಿದ್ದರು. ಕೆಲಸದ ಸಮಯದಲ್ಲಿ ಕೆಲಸದ ಶ್ರಮವನ್ನು ಮರೆಯಲು ಕಥೆಗಳನ್ನು ಹೇಳುತ್ತಿದ್ದರು, ಕೇಳುತ್ತಿದ್ದರು. ಸಂಜೆ ಕೆಲಸ ಮುಗಿದ ಮೇಲೆ ಬೆಂಕಿ ಕಾಯಿಸುತ್ತ, ರಾತ್ರಿ ಊಟ ಮುಗಿದ ಮೇಲೆ ಬೆಳದಿಂಗಳಿನಲ್ಲಿ ಕುಳಿತು ಕಥೆ ಹೆಳುವುದು, ಕೇಳುವುದು ವಾಡಿಕೆ. ಮಕ್ಕಳನ್ನು ಮಲಗಿಸಲು ಕಥೆ ದೊಡ್ಡ ಸಾಧನವಾಗಿ ಬಳಕೆಯಾಗುತ್ತದೆ. ರಾಜನಂಥವ ಕಥೆ ಕೇಳಲು ಕಥೆಗಾರರನ್ನೇ ನೇಮಿಸಿಕೊಂಡಿದ್ದ. ಕಥೆ ಹೇಳುವುದನ್ನು ವಿಶೇಷ ಉದ್ಯೋಗವನ್ನಾಗಿ ಮಾಡಿಕೊಂಡವರೂ ಇದ್ದರು. ಆದರೆ ಇಂಥವರು ವಿರಳವೆಂದೇ ಹೇಳಬೇಕು. ಕಥೆಗಳನ್ನು ಹೇಳಲು ಹಾಗೂ ಕೇಳಲು ಪುರುಷರು, ಸ್ತ್ರೀಯರು ಮತ್ತು ಬಾಲಕರು-ಯಾರಾದರೂ ಆಗಬಹುದು. ಜನಪದ ಕಥೆಗಳಲ್ಲಿ ಹೆಚ್ಚು ಆಸಕ್ತಿಯನ್ನು ತಾಳುವವರಲ್ಲಿ ಬಾಲಕರು ಪ್ರಧಾನರು.

ಜನಪದ ಕಥೆಯ ಸ್ವರೂಪ : ಸಾಮಾನ್ಯವಾಗಿ ಕಥೆ ಹೇಳುವ ಹಾಗೂ ಕೇಳುವ ಕ್ರಿಯೆ ಜಗತ್ತಿನ ಯಾವುದೇ ಭಾಗಕ್ಕೆ ಸೀಮಿತವಾದುದಲ್ಲ. ಮಾನವ ಇರುವ ಕಡೆಯಲ್ಲೆಲ್ಲ ಇದು ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಆದ್ದರಿಂದ ಪ್ರಪಂಚದ ಎಲ್ಲ ಕಥೆಗಳಲ್ಲಿಯೂ ಕಾಣಬರುವ ಒಂದು ಸರ್ವೆಸಾಮಾನ್ಯ ಗುಣವೆಂದರೆ ಏಕರೂಪತೆ. ಇದಕ್ಕೆ ಕಥೆಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಬೆಳೆಸಿರುವುದು ಕಾರಣವಿರಬಹುದು ಅಥವಾ ಕಥೆ ಹೇಳುವ ಮಾನವನ ಮೂಲ ಪ್ರವೃತ್ತಿ ಕಾರಣವಿರಬಹುದು. ಈ ಏಕರೂಪತೆಯ ಜೊತೆಯಲ್ಲಿಯೇ ವ್ಯತ್ಯಾಸವೂ ಕಂಡುಬರುತ್ತದೆ. ಆದ್ದರಿಂದ ಏಕರೂಪತೆಯಲ್ಲಿ ಭಿನ್ನತೆ ಜನಪದ ಕಥೆಯ ವಿಶಿಷ್ಟ ಲಕ್ಷಣವಾಯಿತು. ಜನಪದ ಕಥೆಯ ಸ್ವರೂಪವನ್ನು ಕುರಿತು ಹೇಳುವಾಗ ಈ ಹಿನ್ನೆಲೆಯನ್ನು ಅವಶ್ಯವಾಗಿ ಪರಿಭಾವಿಸಬೇಕಾಗುತ್ತದೆ.

ಲಕ್ಷಣಗಳು ಬದಲಾಯಿಸಿ

ಜನಪದ ಕಥೆಗಳೆಲ್ಲಕ್ಕೂ ಸಾರ್ವತ್ರಿಕವಾಗಿ ಅನ್ವಯಿಸಬಹುದಾದ ಕೆಲವು ಲಕ್ಷಣಗಳಿವೆ. ಇವುಗಳನ್ನು ಆಕ್ಸಲ್ ಓಲ್ರಿಕ್ ಎಂಬ ವಿದ್ವಾಂಸ ಒಂಬತ್ತು ವಿಭಾಗಗಳಲ್ಲಿ ಗುರುತಿಸಿದ್ದಾನೆ:

  1. ಬಹುಮುಖ್ಯವಾದ ಕ್ರಿಯೆಯೊಂದರಿಂದ ಪ್ರಾರಂಭವಾಗುವುದಿಲ್ಲ ಮತ್ತು ಇದ್ದಕ್ಕಿದ್ದಂತೆ ಮುಕ್ತಾಯವಾಗುವುದಿಲ್ಲ. ಸಾವಕಾಶವಾದ ಪ್ರವೇಶವಿದ್ದು, ಶಿಖರವನ್ನು ತಲಪಿದ ಮೇಲೂ ನಿಲುಗಡೆಯ ಸ್ಥಾನದ ತನಕ ಮುಂದುವರಿಯುತ್ತದೆ.
  2. ಪುನರಾವರ್ತನೆ ಸಾಮಾನ್ಯವಾಗಿ ಎಲ್ಲ ಕಡೆಯಲ್ಲೂ ಕಂಡುಬರುತ್ತದೆ. ಇದು ಕಥೆಯನ್ನು ನಿರೀಕ್ಷೆಯಲ್ಲಿಡುವುದಲ್ಲದೆ, ಅದರ ಶರೀರವನ್ನು ಪುಷ್ಟಗೊಳಿಸಿ ಸಮರ್ಥಿಸುತ್ತದೆ. ಈ ಪುನರಾವರ್ತನೆ ಬಹುಮಟ್ಟಿಗೆ ಮೂರುಮಡಿಯಿದ್ದು, ಕೆಲವು ದೇಶಗಳಲ್ಲಿನ ಧಾರ್ಮಿಕ ಸಂಕೇತದ ಕಾರಣದಿಂದಾಗಿ ನಾಲ್ಕುಮಡಿಯೂ ಆಗಬಹುದು.
  3. ಸಾಮಾನ್ಯವಾಗಿ ಏಕಕಾಲದಲ್ಲಿ ಇಬ್ಬರು ವ್ಯಕ್ತಿಗಳು ಮಾತ್ರ ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನೂ ಹೆಚ್ಚಿಗೆ ಇದ್ದರೂ ಇಬ್ಬರು ಮಾತ್ರ ಏಕಕಾಲದಲ್ಲಿ ಕ್ರಿಯಾಶೀಲರಾಗಿರಬೇಕು.
  4. ವೈದೃಶ್ಯ ಪಾತ್ರಗಳ ಪರಸ್ಪರ ಸಮಾಗಮ-ನಾಯಕ ಮತ್ತು ಪ್ರತಿನಾಯಕ ಶಿಷ್ಟ ಮತ್ತು ದುಷ್ಟ.
  5. ಒಂದೇ ಪಾತ್ರದಲ್ಲಿ ಇಬ್ಬರೇನಾದರೂ ಕಾಣಿಸಿಕೊಂಡರೆ, ಅವರು ಚಿಕ್ಕವರಾಗಿ ಅಥವಾ ಅಶಕ್ತರಾಗಿ ಚಿತ್ರಿತವಾಗಿರುತ್ತಾರೆ. ಅವರು ಅನೇಕ ವೇಳೆ ಅವಳಿಗಳಾಗಿದ್ದು, ಶಕ್ತರಾಗಿ ಪರಿಣಮಿಸಿದರೆ, ವೈರಿಗಳಾಗುವ ಸಾಧ್ಯತೆಯುಂಟು.
  6. ದುರ್ಬಲ ಮತ್ತು ಕೀಳು ಆಗಿರುವವರು ಉತ್ತಮರಾಗುವ ಸಾಧ್ಯತೆ ಇದೆ. ಕಿರಿಯ ಸೋದರ ಅಥವಾ ಸೋದರಿ ಸಾಮಾನ್ಯವಾಗಿ ಜಯ ಗಳಿಸುವವರು.
  7. ಪಾತ್ರಚಿತ್ರಣ ಸರಳ. ಕಥೆಗೆ ನೇರವಾಗಿ ಸಂಬಂಧಪಟ್ಟ ಗುಣಗಳು ಮಾತ್ರ ನಿರೂಪಿತವಾಗಿರುತ್ತವೆ. ಪಾತ್ರದ ಕಥೆಗೆ ಹೊರತಾದ ಯಾವುದೇ ಜೀವನದ ಸುಳಿವು ಕೂಡ ಇರುವುದಿಲ್ಲ.
  8. ಕಥಾವಸ್ತು ಸರಳ, ಸಂಕೀರ್ಣವಲ್ಲ. ಒಂದು ಕಾಲದಲ್ಲಿ ಒಂದು ಕಥೆಯನ್ನು ಮಾತ್ರ ಹೇಳಬೇಕು. ಎರಡು ಅಥವಾ ಹೆಚ್ಚು ಕಥೆಗಳು ಒಂದೇ ಕಾಲದಲ್ಲಿ ಬಂದರೆ ಆಗ ಅದು ಜನಪದ ಕಥೆಯ ಜಾಯಮಾನವಾಗಿರದೆ, ಸಾಹಿತ್ಯದ ಆಭಾಸವಾಗಿರುತ್ತದೆ.
  9. ಪ್ರತಿಯೊಂದು ಸಾಧ್ಯವಾದಷ್ಟು ಸರಳವಾಗಿ ನಡೆಯುತ್ತದೆ. ಸಮಾನ ವಿಷಯಗಳೆಲ್ಲವೂ ಪೂರಕವಾಗಿರುತ್ತವೆ. ವೈವಿಧ್ಯವನ್ನು ತರುವ ಯಾವುದೇ ಪ್ರಯತ್ನ ಇಲ್ಲಿಲ್ಲ.

ಮೇಲಿನ ಸಾಮಾನ್ಯ ಲಕ್ಷಣಗಳ ಜೊತೆಗೆ ಕೆಲವು ವಿಶೇಷ ಲಕ್ಷಣಗಳೂ ಇವೆ. ಇವುಗಳಲ್ಲಿ ಮೊದಲನೆಯದು ಪಾತ್ರಗಳು, ಮನುಷ್ಯ ಪಾತ್ರವಹಿಸುವುದಲ್ಲದೆ, ದೇವತೆ, ಪ್ರಾಣಿ, ದೆವ್ವ, ಬೇತಾಳ, ರಾಕ್ಷಸ ಮೊದಲಾದ ಮನುಷ್ಯೇತರರೂ ಭಾಗವಹಿಸುತ್ತಾರೆ. ಸ್ವರ್ಗ, ಮತ್ರ್ಯ, ನರಕ-ಈ ಮೂರೂ ಲೋಕಗಳಿಗೂ ಇವರ ಸಂಬಂಧವುಂಟು. ನಾಯಕ, ಪ್ರತಿನಾಯಕ ಹಾಗೂ ನಾಯಿಕೆ ಇವರು ಸಾಮಾನ್ಯವಾಗಿ ಇದ್ದೇ ಇರುತ್ತಾರೆ. ಇವರೆಲ್ಲರಿಗೂ ಸಾಹಸವೇ ಮೂಲವಾಗಿರುವುದರಿಂದ ಸಮಸ್ಯೆ ತಾನಾಗಿ ಗೋಚರಿಸುತ್ತದೆ. ಕಥಾನಾಯಕನಿಗೆ ಸಂಬಂಧಪಟ್ಟ ಒಂದು ವಿಶೇಷ ಅಂಶವೆಂದರೆ ಕಿರಿಯ ಮಗನ ವಿಚಾರ. ಸಾಮಾನ್ಯವಾಗಿ ಕಿರಿಯ ಮಗನೇ ಕಥಾನಾಯಕನೂ ಸಾಹಸಿಯೂ ಆಗಿರುತ್ತಾನೆ. ಪ್ರಾಯಶಃ ಹಿರಿಯ ಮಗ ಮನೆಯವರೆಲ್ಲರನ್ನೂ ನೋಡಿಕೊಳ್ಳುವ ಹೊಣೆಯನ್ನು ಹೊತ್ತುಕೊಳ್ಳಬೇಕಾಗಿರುವುದರಿಂದ ಸಂಸಾರದಲ್ಲಿ ಅವನ ಪ್ರಾಧಾನ್ಯ ಹೆಚ್ಚಾಗಿರುತ್ತದೆ. ಆಗ ಕೆಲಮಟ್ಟಿಗೆ ವಂಚಿತನಾದ ಕಿರಿಯವನು ಬದುಕಲು ಸಾಹಸಿಯಾಗಿರಬೇಕಾಗುತ್ತದೆ. ಆಗ ಅವನು ಅನಿವಾರ್ಯವಾಗಿ ಸ್ವತಂತ್ರನಾಗಿರುತ್ತಾನೆ. ಪ್ರತಿನಾಯಕ ಖಚಿತವಾಗಿ ಗೊತ್ತಾಗುವುದಿಲ್ಲ. ತನ್ನವರೇ ಆದವರು ನಾಯಕನಿಗೆ ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಮಾಡಬಹುದು. ಸಂಸಾರದಲ್ಲಿನ ಹೆಂಗಸು ಬಹುಮಟ್ಟಿಗೆ ಖಳನಾಯಕಿಯ ಪಾತ್ರವನ್ನು ವಹಿಸುವುದು ಸಾಮಾನ್ಯ. ಮಲತಾಯಿಯ ಪಾತ್ರ ಇದರಲ್ಲಿ ಪ್ರಮುಖವಾದುದು. ಎಷ್ಟೋ ಸಮಯದಲ್ಲಿ ಕಥೆಯಲ್ಲಿ ಪ್ರಧಾನವಲ್ಲದ ಪಾತ್ರಗಳೇ ಪ್ರಮುಖವೆನಿಸುವುದುಂಟು. ಕಥೆಯಲ್ಲಿ ಕರುಣಾಳು ಸಹಾಯಕರ ಪಾತ್ರವೂ ಗಮನಾರ್ಹವಾದುದು. ನಾಯಕನಿಗೆ ಮಾನುಷ ಅಥವಾ ಅತಿಮಾನುಷ ಸಹಾಯಕರಿಗಿಂತ ಎಷ್ಟೋ ಸಾರಿ ಪ್ರಾಣಿಸಹಾಯಕರಿಂದ ಹೆಚ್ಚು ಅನುಕೂಲ ದೊರೆಯುವುದು.

ಜನಪದ ಕಥೆಗಳಲ್ಲಿ ಕಾಣಬರುವ ಕೆಲವು ಸಾಮಾನ್ಯ ನಮೂನೆಗಳೆಂದರೆ ಮಾಂತ್ರಿಕ ವಸ್ತುಗಳೆಂದರೆ ಮಂತ್ರದಂಡ, ಉಂಗುರ, ಕಪ್ಪು, ಭೂತಗನ್ನಡಿ ಇತ್ಯಾದಿ, ಇಲ್ಲೆಲ್ಲ ಮಂತ್ರವಾದಿಯ ಕೈವಾಡ ಇದ್ದೇ ಇರುತ್ತದೆ. ಅದೃಷ್ಟದ ಪಾತ್ರ ಮತ್ತೊಂದು ಮಹತ್ತ್ವಪೂರ್ಣ ಸಂಗತಿ. ರಾಜಕುಮಾರಿಯನ್ನು ತಮ್ಮಂತೆ ಮಾಡಿಕೊಳ್ಳಲು ಹೂಡುವ ಸ್ಪರ್ಧೆಗಳು ಎಲ್ಲ ಜನಪದ ಕಥೆಗಳಲ್ಲೂ ಕಂಡುಬರುವ ಸಾಮಾನ್ಯ ವಿಷಯಗಳು. ಇಂಥ ಸಂದರ್ಭಗಳಲ್ಲಿ ಪ್ರತಿಸ್ಪರ್ಧಿ ಕಾಣಿಸಿಕೊಳ್ಳಬಹುದು. ಕಾಣಿಸಿಕೊಳ್ಳದಿರಬಹುದು. ಉದ್ದಕ್ಕೂ ಅದ್ಭುತ ಹಾಗೂ ಅಲೌಕಿಕ ಕಥೆಗಳು ವಾತಾವರಣವನ್ನು ತುಂಬಿಕೊಳ್ಳುತ್ತವೆ. ಕಥೆಗಳೆಲ್ಲ ನಿರಾಡಂಬವಾಗಿ ನಡೆಯುವುವಲ್ಲದೆ, ಉದ್ದೇಶಿತ ಗುರಿಯನ್ನು ಚೆನ್ನಾಗಿ ಕಾಯ್ದುಕೊಳ್ಳುತ್ತವೆ. ನಿಜವಾದ ಜನಪದ ಕಥೆಗಾರನ ಉದ್ದೇಶಗಳಲ್ಲಿ ಒಂದೆಂದರೆ, ದುಷ್ಟತನ ಸರಿಯಾದ ರೀತಿಯಲ್ಲಿ ಶಿಕ್ಷೆಗೆ ಗುರಿಯಾಗಬೇಕೆಂಬುದೇ ಆಗಿದೆ.

ಜನತೆಯ ಸಾಮಾಜಿಕ ಜೀವನದ ಮೂಲಾಂಶವಾಗಿರುವ ಜನಪದ ಕಥೆ ಅವರ ಸೃಷ್ಟ್ಯಾತ್ಮಕ ಶಕ್ತಿಯನ್ನೂ ಸಂಸ್ಕøತಿ ಸಂಪನ್ನತೆಯನ್ನೂ ತೆರೆದು ತೋರಿಸುತ್ತದೆ. ಸಾಮಾಜಿಕ ಇತಿಹಾಸದಲ್ಲಿ ಅದು ಸವಾಲಿನ ಸಮಸ್ಯೆಯನ್ನು ಎಸೆದಿದೆ; ಅದೇ ಸಂದರ್ಭದಲ್ಲಿ ಅದರ ಪರಿಹಾರಕ್ಕಾಗಿ ನೆರವಾಗಿದೆ. ಪ್ರತಿ ಕಥೆಯೂ ಮನೋರಂಜನೆಯ ಅಥವಾ ಸೌಂದರ್ಯಾನುಭವದ ಸಾಧನವಾಗಿದೆ. ಸಹೃದಯನಿಗಾಗುವ ಕಲಾನುಭವದ ಪರಿಣಾಮವನ್ನು ಕುರಿತು ಆಲೋಚಿಸಿದಾಗ, ಕಥೆ ಸಾಹಸಕಾರ್ಯಗಳ ಪ್ರಚೋದಕವೂ ಜ್ಞಾನಸಾಧನೆಯ ಸಂಕೇತವೂ ಆಗಿರುವುದನ್ನು ಕಾಣುತ್ತೇವೆ. ಇದರಿಂದ ದೊರಕುವ ಮತ್ತೊಂದು ಪ್ರಯೋಜನವೆಂದರೆ, ಬೇಸರ ತರುವಂಥ ಏಕತಾನತೆಯಿಂದ ಬಿಡುಗಡೆ, ಒಂದು ರೀತಿಯ ದೈಹಿಕ ಹಾಗೂ ಮಾನಸಿಕ ಸುಖ, ವಿಶ್ರಾಂತಿ. ಪ್ರಾಚೀನ ಮಾನವನ ಅಪೂರ್ವ ಪ್ರತಿಭೆಯ ಕಲಾತ್ಮಕ ಅಭಿವ್ಯಕ್ತಿಯಾದ ಇದಕ್ಕೆ ಆನಂದವೇ ಪರಮೋಚ್ಚ ಗುರಿ. ಇದಲ್ಲದೆ ಅನಕ್ಷರಸ್ಥ ಸ್ತ್ರೀಪುರುಷರಿಗೆ ದುಃಖೋಪಶಮನದ ಮತ್ತು ಶಿಕ್ಷಣ ಕೊಡುವ ಪ್ರಮುಖ ಸಾಧನವಾಗಿ ಅವು ಬಹುಕಾಲ ಮುಂದುವರಿಯುತ್ತವೆ ಎಂಬ ಸ್ಟಿತ್ ಥಾಂಸನ್ನನ ಮಾತು ಜನಪದ ಕಥೆಯ ಅನಿವಾರ್ಯತೆಯನ್ನೂ ಆವಶ್ಯಕತೆಯನ್ನೂ ಚೆನ್ನಾಗಿ ನಿವೇದಿಸುತ್ತದೆ.

ಜನಪದ ಕಥೆಯ ವರ್ಗೀಕರಣ : ಸಾಂಪ್ರದಾಯಿಕ ಕಥನಗಳಲ್ಲಿ ವಾಕ್‍ಸಂಪ್ರದಾಯದ ಕಥೆಗಳು ಮತ್ತು ಸಾಹಿತ್ಯಿಕ ಕಥೆಗಳು ಎಂದು ಎರಡು ವಿಧಗಳಿವೆ. ಇವನ್ನು ಶುದ್ಧವಾಗಿ ಪ್ರತ್ಯೇಕಿಸಲು ಸಾಧ್ಯವಿಲ್ಲ. ಸಾಹಿತ್ಯಿಕ ಕಥೆಗಳೇ ಕ್ರಮೇಣ ಸಾಹಿತ್ಯಿಕ ಕಥೆಗಳಾಗಿ ಚಲಾವಣೆಯಾಗಬಹುದು. ಜನಪದ ಕಥೆಗಳಲ್ಲಿ ಕೆಲವು ಒಂದು ಖಂಡಕ್ಕೆ, ದೇಶಕ್ಕೆ, ಜನಾಂಗಕ್ಕೆ ಸೀಮಿತವಾಗಿರುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಜನಪದ ಕಥೆಯ ವರ್ಗೀಕರಣ ಕಷ್ಟತರವೂ ತುಂಬ ಜವಾಬ್ದಾರಿಯುತವೂ ಆದುದಾಗಿದೆ. ಆದರೆ ಕಥೆಗಳ ಅಧ್ಯಯನದ ದೃಷ್ಟಿಯಿಂದ ಕೆಲವು ಪ್ರಕಾರಗಳನ್ನು ನಿರ್ದೇಶಿಸುವುದು ಉಚಿತವೆಂದು ತೋರುತ್ತದೆ. ಹೀಗೆ ಗುರುತಿಸಬಹುದಾದ ಭಿನ್ನ ಭಾಗಗಳು ಸಂಪೂರ್ಣ ನಿಷ್ಕøಷ್ಟ ಎಂದು ಹೇಳಲು ಸಾಧ್ಯವಿಲ್ಲ. ಯಾವ ಜನಪದ ಕಥೆಗಾರನೂ ಇವನ್ನು ಉಲ್ಲೇಖಿಸಿಲ್ಲ. ಈ ಬಗ್ಗೆ ಹಲವಾರು ವಿದ್ವಾಂಸರು ತಮ್ಮದೇ ರೀತಿಯಲ್ಲಿ ವಿಭಾಗಮಾಡಿ ವಿಶ್ಲೇಷಿಸಿದ್ದಾರೆ. ಇಲ್ಲಿ ಅಂಥ ಪ್ರಮುಖರನ್ನು ಮಾತ್ರ ತೆಗೆದುಕೊಳ್ಳಬಹುದು.

ಮೊದಲಿಗೆ, ಎಡ್ವಿನ್ ಸಿಡ್ನಿ ಹಾರ್ಟ್‍ಲ್ಯಾಂಡ್ ಮತ್ತು ವಾನ್‍ದೇರ್ ಲೇಯನ್ ಎಂಬ ಇಬ್ಬರು ವಿದ್ವಾಂಸರು ಜನಪದ ಕಥೆಗಳನ್ನೆಲ್ಲ ಸಾಗ್ ಮತ್ತು ಮಾರ್ಷನ್ ಎಂದು ಎರಡು ವಿಧವಾಗಿ ವಿಂಗಡಿಸುತ್ತಾರೆ. ಸಾಗ ಗೊತ್ತಾದ ಸ್ಥಳವೊಂದಕ್ಕೆ ಸಂಬಂಧಿಸಿದುದು. ಆವರಣ ಅತಿಮಾನುಷ, ಪಾತ್ರ ಅರ್ಧಚಾರಿತ್ರಿಕ, ರಚನೆ ಬಹುತೇಕವಾಗಿ ಸರಳ. ಕಲ್ಪನೆಯನ್ನೇ ಪ್ರಧಾನವಾಗುಳ್ಳ ಷರ್ಮಾನ್‍ಗೆ ಗೊತ್ತಾದ ಕಾಲವಿಲ್ಲ ಮತ್ತು ಗೊತ್ತಾದ ಸ್ಥಳವಿಲ್ಲ. ಇದು ನಡೆಯುವುದೆಲ್ಲ ಅವಾಸ್ತವ ಪ್ರಪಂಚದಲ್ಲಿ. ಇಡೀ ಕಥೆ ಸಾಹಸಮಯವಾದ ಘಟನೆಗಳಿಂದ ತುಂಬಿಕೊಂಡಿರುತ್ತದೆ. ರಚನೆಯ ದೃಷ್ಟಿಯಿಂದ ನೋಡಿದರೆ ಇವು ಸಾಕಷ್ಟು ಉದ್ದವಾಗಿರುತ್ತವೆ ಮತ್ತು ಸಂಕೀರ್ಣವಾಗಿರುತ್ತವೆ (ನೋಡಿ- ಕಟ್ಟುಕಥೆ). ಮಿಲ್ಲರ್ ಎಂಬ ವಿದ್ವಾಂಸ ಕಿನ್ನರ ಕಥೆಗಳು, ದೈನಂದಿನ ಕಥೆಗಳು ಮತ್ತು ಪ್ರಾಣಿ ಕಥೆಗಳು ಎಂಬುದಾಗಿ ಮೂರು ರೀತಿಯಲ್ಲಿ ವರ್ಗೀಕರಿಸಿಕೊಳ್ಳುತ್ತಾನೆ. ಈ ವರ್ಗೀಕರಣದಲ್ಲಿ ಮೊದಲ ಮತ್ತು ಕಡೆಯ ಪ್ರಕಾರಗಳನ್ನು ಪರಿಗಣಿಸಬಹುದಾದರೂ ಮಧ್ಯದ ವಿಭಾಗವನ್ನು ನಿರ್ದಿಷ್ಟ ರೀತಿಯಲ್ಲಿ ವಿವರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಇದು ಪೂರ್ಣ ವರ್ಗೀಕರಣವಲ್ಲದ್ದರಿಂದ, ಸಮರ್ಪಕವೆನಿಸುವುದಿಲ್ಲ. ವುಂಟ್ ಎಂಬ ಜರ್ಮನ್ ವಿದ್ವಾಂಸ ಜನಪದ ಕಥೆಗಳಲ್ಲಿ ಪೌರಾಣಿಕ ನೀತಿಕಥೆಗಳು, ಶುದ್ಧ ಕಿನ್ನರ ಕಥೆಗಳು, ಜೈವಿಕ ಕಥೆಗಳು ಮತ್ತು ನೀತಿಕಥೆಗಳು, ಶುದ್ಧ ಪ್ರಾಣಿಕಥೆಗಳು, ವಾಂಶಿಕ ಕಥೆಗಳು, ತಮಾಷೆ ಕಥೆಗಳು ಮತ್ತು ನೀತಿಕಥೆಗಳು ಎಂಬುದಾಗಿ ಏಳು ವಿಭಾಗಗಳನ್ನು ಹೆಸರಿಸುತ್ತಾನೆ. ಆದರೆ ಇದು ವಿವರವಾದ ವರ್ಗೀಕರಣವಾಗಿದ್ದು ಪುನರುಕ್ತಿ ದೋಷದಿಂದ ಕೂಡಿರುವುದನ್ನು ಕಾಣಬಹುದು. ಬ್ರಿಟಾನಿಕ ವಿಶ್ವಕೋಶದಲ್ಲಿ ಪುರಾಣ, ಐತಿಹ್ಯ, ಮತ್ತು ಜನಪ್ರಿಯ ಕಥೆಗಳು ಎಂದು ಮೂರು ಭಾಗಗಳಾಗಿ ವರ್ಗೀಕರಿಸಲಾಗಿದೆ. ಜನಪ್ರಿಯ ಕಥೆಗಳಲ್ಲಿಯೇ ವಿಶೇಷ ಲಕ್ಷಣಗಳಿಂದ ಕೂಡಿದ ಬೇರೆ ಬೇರೆ ಕಥನ ಪ್ರಕಾರಗಳಿರುವ ಸಾಧ್ಯತೆಯನ್ನು ಇದು ತಿಳಿಸುವುದಿಲ್ಲ. ಅಲ್ಲದೆ ಜನಪ್ರಿಯ ಕಥೆಗಳು ಎಂಬ ಮಾತನ್ನು ಎಷ್ಟೇ ಎಚ್ಚರದಿಂದ ಬಳಸಿದರೂ ಪುರಾಣ ಮತ್ತು ಐತಿಹ್ಯಗಳ ಸೋಂಕಿನಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.

ಈ ಸಮಯದಲ್ಲಿ ಸ್ಟಿತ್ ಥಾಂಸನ್ನನ ವರ್ಗೀಕರಣ ಅತ್ಯಂತ ಗಮನಾರ್ಹವಾದುದಾಗಿದೆ. ಆತ ತನ್ನ 'ಜನಪದ ಕಥೆ ಎಂಬ ಗ್ರಂಥದಲ್ಲಿ ಕಥೆಗಳನ್ನು ಸಂಕೀರ್ಣ ಕಥೆಗಳು ಮತ್ತು ಸರಳ ಕಥೆಗಳು ಎಂಬುದಾಗಿ ಎರಡು ರೀತಿಯಲ್ಲಿ ವಿಭಜಿಸಿಕೊಂಡಿದ್ದಾನೆ. ಅನೇಕ ಆಶಯಗಳು, ವಿಸ್ಥಾರವಾದ ಕಥೆ, ಮೇಲಿಂದಮೇಲೆ ಬರುವ ಘಟನಾವಳಿ, ಅತಿಮಾನಷ ಅದ್ಭುತ ವಾತಾವರಣ-ಇವು ಸಂಕೀರ್ಣ ಕಥೆಗಳ ಲಕ್ಷಣಗಳಾಗುತ್ತವೆ. ಸರಳ ಕಥೆಗಳು ಅಪಾರ ಸಂಖ್ಯೆಯಲ್ಲಿ ಸಿಗುತ್ತಿದ್ದು. ಕಡಿಮೆ ಆಶಯಗಳಿಂದ ನಡೆಯುವ ಚಿಕ್ಕ ಕಥೆಗಳಾಗಿರುತ್ತವೆ. ಪ್ರಾಣಿ, ವಿನೋದ, ಬುದ್ಧಿವಂತಿಕೆ, ನೀತಿ ಮೊದಲಾದುವುಗಳಿಗೆ ಸಂಬಂಧಿಸಿದ ಕಥೆಗಳು ಇಲ್ಲಿ ಬರುತ್ತವೆ. ಸಂಕೀರ್ಣ ಕಥೆಗಳನ್ನು ಮತ್ತೆ ಎರಡು ವಿಭಾಗಗಳಾಗಿ ಮಾಡಿಕೊಳ್ಳುತ್ತಾರೆ; 1 ಕಟ್ಟುಕಥೆ ಮತ್ತು ಅದಕ್ಕೆ ಸಂಬಂಧಿಸಿದ ಕಥಾರೂಪಗಳು, 2 ವಾಸ್ತವಿಕ ಕಥೆಗಳು. ಮೊದಲನೆಯದು ಅತಿಮಾನುಷ ವಿರೋಧಿಗಳು, ಅತಿಮಾನುಷ ಸಹಾಯಕರು, ಮಾಂತ್ರಿಕತೆ ಮತ್ತು ಅದ್ಭುತಗಳು, ಪ್ರೇಮಿಗಳು ಮತ್ತು ದಂಪತಿಗಳು, ಪರೀಕ್ಷೆಗಳು ಮತ್ತು ಸಾಹಸಗಳು, ವಿಧೇಯತೆ, ಒಳ್ಳೆಯ ಹಾಗೂ ಕೆಟ್ಟ ಬಂಧುಗಳು, ಅತೀತ ಶಕ್ತಿಗಳು, ಮೂರು ಲೋಕಗಳು ಎಂಬುದಾಗಿ ಒಡೆದುಕೊಳ್ಳುತ್ತದೆ. ಎರಡನೆಯದರಲ್ಲಿ ಜಾಣತನ, ಮೋಸ, ವಂಚನೆ, ಕಳ್ಳತನ ಮೊದಲಾದವುಗಳಿಗೆ ಸಂಬಂಧಿಸಿದ ಕಥೆಗಳು ಬರುತ್ತವೆ. ಸರಳ ಕಥೆಗಳನ್ನು ವಿನೋಧ ಕಥೆಗಳು, ಪ್ರಾಣಿಕಥೆಗಳು, ಸೂತ್ರಕಥೆಗಳು, ಐತಿಹ್ಯಗಳು ಮತ್ತು ಸಂಪ್ರದಾಯಗಳು ಎಂಬುದಾಗಿ ಮತ್ತೆ ಒಳವಿಭಾಗಗಳಾಗಿ ವಿಭಜಿಸಿಕೊಳ್ಳುತ್ತಾರೆ. ಈಗ ವಿದ್ವಾಂಸರೆಲ್ಲರ ಚರ್ಚೆಗೆ ಗುರಿಯಾಗಿ ಸ್ವೀಕೃತವಾಗಿರುವ ಪ್ರಮುಖ ಪ್ರಕಾರಗಳನ್ನು ಪ್ರಸ್ತಾಪಿಸಬಹುದು. ಜನಪದ ಕಥೆಗಳ ವಿಭಾಗಗಳಲ್ಲಿಯೇ ಅತಿ ಅಸ್ಪಷ್ಟತೆಯನ್ನೂ ಸಂದಿಗ್ಧತೆಯನ್ನೂ ತಂದಿರುವ ಪ್ರಕಾರವೆಂದರೆ ಪುರಾಣ ಕಥೆ. ಇಲ್ಲಿನ ಕಥೆಗಳು ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳನ್ನು ಕುರಿತಿರುತ್ತವೆ. ಇದರಿಂದಾಗಿ ಇವು ಎಷ್ಟೋ ವೇಳೆ ಐತಿಹ್ಯಗಳನ್ನು ಹೋಲುತ್ತವೆ. ಗೊತ್ತಾದ ಉದ್ದೇಶದ ಕಡೆಗೆ ಸಾಗುವ ಪವಿತ್ರ ಕಥನಗಳಿವು. ಇಲ್ಲಿ ಬರುವ ಪಾತ್ರಗಳು ದೇವತೆಗಳು, ಆವರಣ ದೈವಿಕ. ಸ್ವಲ್ಪ ಬದಲಾವಣೆ ಮಾಡಿದರೆ ಕಿನ್ನರ ಕಥೆಗಳನ್ನು ಹೋಲುವ ಸಾಧ್ಯತೆಯುಂಟು. ಪುರಾಣಕಥೆಗಳು ಧಾರ್ಮಿಕ ನಂಬಿಕೆಗಳಿಗೆ ಮತ್ತು ನಡಾವಳಿಗಳಿಗೆ ಹೆಚ್ಚಾಗಿ ಸಂಬಂಧಿಸಿರುತ್ತವೆ. ಆರ್. ಆರ್. ಮಾರೆಟ್ ಹೇಳುವ ಹಾಗೆ, ಇವುಗಳ ಕೆಲಸ ಕುತೂಹಲವನ್ನು ತೃಪ್ತಿಪಡಿಸುವುದಿಲ್ಲ, ನಂಬಿಕೆಯನ್ನು ಸ್ಥಿರಪಡಿಸುವುದು.

ಮೇಲಿನದಷ್ಟೇ ಹೆಚ್ಚು ಕಡಿಮೆ ಗೊಂದಲಕ್ಕೆ ಅವಕಾಶ ಕೊಟ್ಟಿರುವ ಮತ್ತೊಂದು ಪ್ರಕಾರ ಐತಿಹ್ಯದ ಕಥೆ. ಕೆಲವು ಭಾಷೆಗಳಲ್ಲಿ ಇದು ಸಾಧು ಜೀವನಕ್ಕೆ ಸಂಬಂಧಿಸಿದ್ದು. ಕೆಲವರು ಐತಿಹ್ಯ ಮತ್ತು ಸಂಪ್ರದಾಯಗಳನ್ನು ಜೊತೆಯಲ್ಲಿಯೇ ನೋಡಲು ಯತ್ನಿಸಿದ್ದಾರೆ. ಐತಿಹ್ಯಗಳಲ್ಲಿ ಸೃಷ್ಟಿಗೆ ಸಂಬಂಧಿಸಿದ ವಿವರಣಾತ್ಮಕ ಐತಿಹ್ಯಗಳು, ಅತಿಮಾನುಷ ವ್ಯಕ್ತಿಗಳನ್ನು ಕುರಿತ ಐತಿಹ್ಯಗಳು ಮತ್ತು ಜಾರಿತ್ರಿಕ ಅಭಾಸದ ಐತಿಹ್ಯಗಳು ಎಂದು ಮೂರು ವಿಭಾಗಗಳಿರುತ್ತವೆ. ಇವು ನಡೆದ ಘಟನೆಗಳ ಪಳೆಯುಳಿಕೆಗಳು. ಕಥೆಗಾರನಿಂದ ನಂಬಿ ಬಂದವುಗಳು. ಗೊತ್ತಾದ ಸ್ಥಳ ಕಾಲಗಳಿಗೆ ಸಂಬಂಧಿಸಿದವುಗಳು. (ನೋಡಿ- ಐತಿಹ್ಯ) ಜನಪದ ಕಥೆಗಳಲ್ಲೆಲ್ಲ ಸುಲಭವಾಗಿ ಪ್ರಯಾಣ ಮಾಡಬಹುದಾದ, ಹೆಚ್ಚು ಪ್ರಮಾಣದಲ್ಲಿ ದೊರೆಯಬಹುದಾದ ಕಥೆಗಳೆಂದರೆ ಕಿನ್ನರ ಕಥೆಗಳು. ಇದರಷ್ಟು ಓದುಗರನ್ನು ಸೂರೆಗೊಳ್ಳಬಲ್ಲ ಪ್ರಕಾರ ಮತ್ತೊಂದಿಲ್ಲ. ಇದರಲ್ಲಿರುವ ಅದ್ಭುತ ರಂಜಕತೆ ಹಾಗೂ ಸಾಹಸಪ್ರಿಯತೆಗಳೇ ಇದಕ್ಕೆ ಕಾರಣ. ಇಲ್ಲಿ ಬರುವ ಪಾತ್ರಗಳೆಲ್ಲ ಬಹುತೇಕವಾಗಿ ರಾಜರಾಣಿಯರು, ಮಂತ್ರಿಮುಖ್ಯರು. ನಡೆಯುವುದು ಒಂದಾನೊಂದು ಊರಿನಲ್ಲಿ, ಒಂದಾನೊಂದು ಕಾಲದಲ್ಲಿ. ಸಾಕಷ್ಟು ದೀರ್ಘವಿರುವ ಈ ಕಥೆಗಳಲ್ಲಿ ಒಬ್ಬ ನಾಯಕ ಅಥವಾ ನಾಯಿಕೆ ಇರುತ್ತಾರೆ. ಹಾಸ್ಯ ಅಲ್ಲಲ್ಲಿ ಕಂಡುಬಂದರೂ ಒಟ್ಟಾರೆ ಇವು ಗಂಭೀರ ಕೃತಿಗಳು. ನಿರ್ಗತಿಕನೂ ದೀನನೂ ಆಗಿ ಮೊದಮೊದಲ ಕಾಣಸಿಕೊಂಡ ನಾಯಕ ಹಲವಾರು ಸಾಹಸಕೃತ್ಯಗಳನ್ನು ಎಸಗಿದಮೇಲೆ ನಿರೀಕ್ಷಿಸಿದ ಗುರಿಗೆ ತಲಪುತ್ತಾನೆ. ಕಥೆ, ನಾಯಕ ನಾಯಕಿಯರ ವಿವಾಹದಲ್ಲಿ ಮುಕ್ತಾಯಗೊಳ್ಳುತ್ತದೆ. ಇಲ್ಲ ಅತಿಮಾನುಷ ವಸ್ತುಗಳದು ಮಹತ್ತ್ವದ ಪಾತ್ರ. ಕಿನ್ನರ ಕಥೆಯ ಪ್ರತಿವರ್ಗದಲ್ಲೂ ಹಲವಾರು ಆಶಯಗಳು ಸಂಘಟಿತವಾಗಿರುತ್ತವೆ. ಮಾತ್ರವಲ್ಲ ಆಶಯಗಳಿಂದಲೇ ಕಥೆ ಬೆಳೆಯುತ್ತ ಹೋಗುತ್ತದೆ. ವಿವರಗಳಿಗೆ (ನೋಡಿ- ಕಿನ್ನರ-ಕಥೆ).

ಪ್ರಾಣಿಕಥೆ ಬದಲಾಯಿಸಿ

ಜನಪದ ಕಥೆಗಳಲ್ಲೇ ಅತ್ಯಂತ ಪ್ರಾಚೀನವಾದುದು ಪ್ರಾಣಿಕಥೆ. ಮಾನವನ ನಾಗರಿಕತೆಯ ಪೂರ್ವಸ್ಥಿತಿಯ ಸೃಷ್ಟಿ ಇದೆಂಬುದು ಕೆಲವರ ಮತ. ಮನುಷ್ಯ ತನ್ನ ಶೈಶವಾಸ್ಥೆಯಿಂದ ತಾಳಿದ ಕುತೂಹಲ, ಆಸಕ್ತಿಗಳೇ ಇಂಥ ಕಥನಕಲೆಗೆ ಕಾರಣವಾಗಿರಬೆಕು. ಆದಿವಾಸಿಯ ಜೀವನದ ಮೇಲೆ ಪ್ರಭಾವ ಬೀರಿದ ಅತ್ಯಂತ ದೊಡ್ಡ ಶಕ್ತಿಗಳಲ್ಲಿ ಪ್ರಕೃತಿ ಪ್ರಧಾನವಾದುದರಿಂದ ಸಹಜವಾಗಿಯೇ ಆತ ಇದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರಬೇಕು. ವಾಸ್ತವವಾಗಿ ಪ್ರಾಣಿಕಥೆಗಳು ಮೊದಮೊದಲು ಪ್ರಾಕೃತಿಕ ವಿಷಯಗಳ ವಿವರಣೆಗಳಾಗಿದ್ದು, ಉತ್ತರ ಸ್ಥಿತಿಯಲ್ಲಿ ನೀತಿಕಥೆಗಳಾಗಿ ಮಾರ್ಪಾಡಾಗಿರಬೇಕೆಂದು ತೋರುತ್ತದೆ. ಪ್ರಾಣಿಕಥೆಗಳು ರಚನೆಯಲ್ಲಿ ಅತ್ಯಂತ ಚಿಕ್ಕವು. ಸರಳತೆ ಇಲ್ಲಿ ಎದ್ದು ಕಾಣುವ ಗುಣ. ಪ್ರಾಣಿಗಳ ರೂಪ ಸ್ವರೂಪಗಳನ್ನು ಕುರಿತ ವಿವರಣೆಯೇ ಇವುಗಳ ಉದ್ದೇಶ. ಪ್ರಾಣಿಕಥೆಗಳಲ್ಲಿ ಶುದ್ಧ ಪ್ರಾಣಿ ಕಥೆಗಳು ಮತ್ತು ಮಾನವ ಪಾತ್ರವಹಿಸುವ ಪ್ರಾಣಿಕಥೆಗಳು ಎಂದು ಎರಡು ವಿಧ. ಇವನ್ನು ಕಾರ್ಯಕಾರಣಕಥೆಗಳು, ನೀತಿಕಥೆಗಳು ಮತ್ತು ಪ್ರಾಣಿ ಪುರಾಣ ಕಾವ್ಯ ಎಂದು ಮೂರು ವಿಭಾಗಗಳಲ್ಲಿ ಗುರುತಿಸಬಹುದು. ಈ ಎಲ್ಲ ಪ್ರಾಣಿಕಥೆಗಳೂ ನಾಲ್ಕು ಮುಖ್ಯ ಮೂಲಗಳಲ್ಲಿ ದೊರಕುತ್ತವೆ-ಭಾರತದ ಸಾಹಿತ್ಯಿಕ ನೀತಿಕಥೆಗಳು, ಈಸೋಪನ ನೀತಿಕಥೆಗಳು, ಮಧ್ಯಯುಗದ ಸಾಹಿತ್ಯಿಕ ಪ್ರಾಣಿಕಥೆಗಳು ಮತ್ತು ವಾಕ್ಸಂಪ್ರದಾಯದ ಪ್ರಾಣಿಕಥೆಗಳು. ಈ ಎಲ್ಲ ಸಂಪ್ರದಾಯ ಪ್ರವಾಹಗಳ ಪರಸ್ಪರ ಪ್ರಭಾವ ಸಂಬಂಧದಿಂದಾಗಿ ಇವುಗಳಲ್ಲಿ ಬಹಳ ಸಂದಿಗ್ಧತೆ ಮೂಡಿದೆ.

ನೀತಿಕಥೆ ಬದಲಾಯಿಸಿ

ಪ್ರಾಣಿಕಥೆಯ ಮುಂದಿನ ರೂಪವೇ ನೀತಿಕಥೆ. ನೀತಿಯೇ ಇಲ್ಲಿಯ ಪ್ರಧಾನ ಉದ್ದೇಶ. ಪ್ರಾಣಿಗಳೇ ಇಲ್ಲಿನ ಪಾತ್ರಗಳು. ಪ್ರಾಣಿ ಪಾತ್ರವಹಿಸದ ನೀತಿಕಥೆಗಳೂ ದೊರೆಯುತ್ತವೆ. ಎಷ್ಟೋ ಸಾರಿ ಪ್ರಾಣಿಕಥೆಗಳೂ ನೀತಿಕಥೆಗಳಿಗೂ ಇರುವ ವ್ಯತ್ಯಾಸವನ್ನು ಗುರುತಿಸುವುದು ಕಷ್ಟವಾಗುತ್ತದೆ. ಪ್ರಾಣಿಗಳ ಗುಣಾವಗುಣಗಳ ವಿವರಣೆ ಇವುಗಳ ಗುರಿಯಲ್ಲ, ಮಾನವನಿಗೆ ನೀತಿ ಬೋಧಿಸುವುದೇ ಇವುಗಳ ಉದ್ದೇಶ. ನಿರೂಪಣೆಯಿಂದ ಪ್ರಾರಂಭವಾದ ಕಥೆ ನೀತಿವಾಕ್ಯವೊಂದರಿಂದ ಮುಕ್ತಾಯವಾಗುತ್ತದೆ. ರಚನೆಯಲ್ಲಿ ಇವು ಬಹಳ ಚಿಕ್ಕವು. ಇಂಥ ನೀತಿಕಥೆಗಳು ಪ್ರಾಣಿಕಥೆಗಳಿಗಿಂತ ಪ್ರಾಚೀನ ಎಂದು ದುರ್ಗಾ ಭಾಗವತ್ ಅಭಿಪ್ರಾಯಪಡುತ್ತಾರೆ. ಆದರೆ ಇದು ನಾಗರಿಕತೆಯ ಪೂರ್ವಸ್ಥಿತಿಯ ಸೃಷ್ಟಿಯಾಗಿರದೆ ನಾಗರಿಕತೆ ಸಂಸ್ಕøತಿಗಳು ಸಾಕಷ್ಟು ಬೆಳೆವಣಿಗೆ ಹೊಂದಿದ ಅನಂತರಕಾಲದ ಸೃಷ್ಟಿಯೆಂದೇ ಭಾವಿಸಬೇಕಾಗುತ್ತದೆ. ಅಲ್ಲದೆ, ನೀತಿಕಥೆ ಮೂಲತಃ ಸಾಹಿತ್ಯಿಕ ಸೃಷ್ಟಿಯಾಗಿದ್ದು, ಅನಂತರ ಜಾನಪದ ಸಂಪ್ರದಾಯಕ್ಕೆ ಬಂದಿರಬೇಕೆಂದು ವಿದ್ವಾಂಸರ ಮತ.

ಜನಪದ ಕಥೆಗಳಲ್ಲಿ ಹೆಸರಿಸಬೇಕಾದ ಮತ್ತೊಂದು ಪ್ರಕಾರವೆಂದರೆ ವಿನೋದ ಕಥೆ. ಇದು ಸ್ವಭಾವತಃ ಚಿಕ್ಕದಾಗಿದ್ದು, ಹಾಸ್ಯಪ್ರಧಾನವಾಗಿರುತ್ತದೆ. ಪ್ರಾಣಿಗಳು ಪಾತ್ರವಹಿಸಬಹುದಾದರೂ ಮಾನವ ಪಾತ್ರಗಳೇ ಹೆಚ್ಚು. ದೈನಂದಿನ ಜೀವನವೇ ಇದರ ವಸ್ತು. ಮನೋರಂಜನೆಯೇ ಇದರ ಉದ್ದೇಶ. ಇದರಲ್ಲಿ ಒಂದೇ ಆಶಯವಿರಬಹುದು; ಇಲ್ಲವೆ, ಅನೇಕ ಆಶಯಗಳೂ ಬರಬಹುದು. ಇಲ್ಲಿ ವಾಸ್ತವಿಕತೆ ಮುಖ್ಯವೇ ಹೊರತು, ಅತಿಮಾನುಷತೆಯಲ್ಲ. ಇಲ್ಲಿ ಬರುವ ಪಾತ್ರಗಳೆಲ್ಲ ದಡ್ಡರು. ಹೆಡ್ಡರು-ಸಾಮಾನ್ಯ ತಿಳಿವಳಿಕೆಯೂ ಇಲ್ಲದ ಮೂರ್ಖರು. ವಿನೋದಕಥೆ ಕೆಲವು ಸಾರಿ ನೀತಿಯನ್ನೂ ಹೇಳಬಹುದು. ಸೀಮಿತ ಉದ್ದೇಶವೊಂದನ್ನು ಪ್ರತಿಪಾದಿಸುವುದಕ್ಕಾಗಿ ಹೊರಟ ಈ ಕಥನಪ್ರಕಾರ ಕಲಾತ್ಮಕ ಸೃಷ್ಟಿಯೆಂದೇ ಹೇಳಬೇಕು.

ಜನಪದ ಸಾಹಿತ್ಯದಲ್ಲಿ ಕಥೆಯಂತೆಯೇ ಒಗಟೂ ಒಂದು ಪ್ರಕಾರ. ಆದರೆ ಕೆಲವು ಸಾರಿ ಇವೆರಡಕ್ಕೂ ಸಂಬಂಧವಿರುವುದು ಒಂದೇ ವಿಶೇಷ. ಇವು ಒಗಟಿನ ಕಥೆಗಳೆಂದು ಹೆಸರಾಗಿವೆ. ಇಂಥ ಒಗಟುಗಳಲ್ಲಿ ವರ ಅಥವಾ ವಧುವಿನ ಪರೀಕ್ಷೆಯ ಒಡ್ಡಲಾಗುತ್ತಿದ್ದುದು ಒಂದು ಗುಂಪು. ಅಕ್ರಮ ಪ್ರಣಯಕ್ಕೆ ಸಂಬಂಧಪಟ್ಟವು ಮತ್ತೊಂದು ಗುಂಪು. ಈ ಎರಡು ವಿಧಾನಗಳಲ್ಲೂ ಹೆಣ್ಣೇ ಪ್ರಮುಖ ಪಾತ್ರ ವಹಿಸುವುದು ಗಮನಾರ್ಹ. ಒಗಟು ಕಥೆಗಳ ಬಗ್ಗೆ ಮಾತನಾಡುತ್ತ ದುರ್ಗಾ ಭಾಗವತರು 'ಕೂಟಕಥಾ ಮತ್ತು 'ಕಥಾಪ್ರಹೇಲಿಕಾ ಎಂಬೆರಡು ಕಥನ ಮಾದರಿಗಳ ಕಡೆಗೆ ಗಮನ ಸೆಳೆಯುತ್ತಾರೆ. ಸಂಸ್ಕøತ ಸಾಹಿತ್ಯದಲ್ಲಿ ಪ್ರಸಿದ್ಧವಾಗಿರುವ ಈ ಕಥನ ಪ್ರಕಾರಗಳ ಹೆಸರುಗಳು ಕ್ರಮವಾಗಿ ಹೇಮಚಂದ್ರನ ತ್ರಿಷಷ್ಠಿಶಲಾಕಾ ಪುರುಷಚರಿತ ಮತ್ತು ಜಂಭಾಲದತ್ತನ ಬೇತಾಳ ಪಂಚವಿಂಶತಿ ಗ್ರಂಥಗಳಲ್ಲಿ ಕಾಣಿಸಿಕೊಳ್ಳುವುದನ್ನು ಅವರೇ ಉಲ್ಲೇಖಿಸಿದ್ದಾರೆ. ಆದ್ದರಿಂದ ಮಧ್ಯಯುಗದ ಭಾರತದಲ್ಲಿ ಇಂಥ ಪ್ರಕಾರ ಪ್ರಚಲಿತವಾಗಿತ್ತು ಎಂಬುದು ಅವರ ವಾದ. ಸ್ಟಿತ್ ಥಾಂಸನ್ ಕೂಡ ಈ ಕಥೆಗಳ ಮೂಲವನ್ನು ಮಧ್ಯಕಾಲೀನ ಕೃತಿಗಳಲ್ಲಿ ಹುಡುಕಿರುವುದು ಗಮನಾರ್ಹ. ಇವು ಮೂಲದಲ್ಲಿ ಸಾಹಿತ್ಯಿಕವಾಗಿರಬೇಕೆಂದೂ ಅನಂತರ ಜನಪದ ಕಥೆಗಾರರಿಂದ ಸ್ವೀಕೃತವಾಗಿರಬೇಕೆಂದು ಆತ ಅಭಿಪ್ರಾಯಪಡುತ್ತಾನೆ.

ಮೇಲಿನ ವಿಭಾಗ ಕ್ರಮದಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಒಂದರಲ್ಲಿ ಮತ್ತೊಂದು ಕಾಣಿಸಿಕೊಳ್ಳುವುದನ್ನು ಪೂರ್ಣವಾಗಿ ತಪ್ಪಿಸಲು ಸಾಧ್ಯವಾಗಿಲ್ಲ. ಇವುಗಳಲ್ಲದೆ ಅತಿಮಾನಷ ಕಥೆಗಳು, ಮಾಂತ್ರಿಕ ಕಥೆಗಳು, ರಮ್ಯಕಥೆಗಳು, ಅದ್ಭುತ ಕಥೆಗಳು, ಸಾಹಸ ಕಥೆಗಳು, ಕಾಲ್ಪನಿಕ ಕಥೆಗಳು ಮುಂತಾಗಿ ವಿಭಾಗಿಸಲು ಸಾಧ್ಯವಿದೆ. ಈ ಎಲ್ಲದರಿಂದ ಗೊತ್ತಾಗುವುದು ಇಷ್ಟೆ: ಇಂಥ ಯಾವುದೇ ವಿಭಾಗಕ್ರಮ ಸಮರ್ಪಕವಾಗಿರುವುದು ಕಷ್ಟ. ಆದರೆ ಇತ್ತೀಚೆಗೆ ಜನಪದ ಕಥೆಗಳನ್ನು ವರ್ಗ ಮತ್ತು ಆಶಯಗಳ ಮೇಲೆ ವರ್ಗೀಕರಿಸುವ ವಿಧಾನ ಪ್ರಸಿದ್ಧಿಗೆ ಬರುತ್ತಿದೆ.

ಜನಪದ ಕಥೆಯ ಮೂಲರೂಪ ಬದಲಾಯಿಸಿ

ಜನಪದ ಕಥೆಯನ್ನು ಕುರಿತ ಅತ್ಯಂತ ಚರ್ಚಾಸ್ಪದ ವಿಷಯವೆಂದರೆ ಅದರ ಮೂಲ ಮತ್ತು ಪ್ರಸಾರವನ್ನು ಕುರಿತದ್ದು. ಇದರ ಬಗೆಗಿನ ನಮ್ಮ ತಿಳಿವಳಿಕೆ ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆ. ಕಳೆದ ಶತಕದ ಕಡೆಯ ವರ್ಷಗಳಲ್ಲಿ ಇದರ ಬಗ್ಗೆ ಹೆಚ್ಚು ಆಸಕ್ತಿ ಕಂಡುಬಂದದ್ದಲ್ಲದೆ, ಹಲವಾರು ಸಂಶೋಧನೆಯ ಹೊಸಬಾಗಿಲುಗಳೇ ತೆರೆದವು. ಹೀಗೆ ನೂತನ ಮಾರ್ಗಗಳನ್ನು ತೆರೆದವರಲ್ಲಿ ಗ್ರಿಮ್, ಬೆನ್ಫೆ, ಮ್ಯಾಕ್ಸ್‍ಮುಲ್ಲರ್, ಆ್ಯಂಡ್ರೂ ಲ್ಯಾಂಗ್, ಟೆಯ್‍ಲರ್ ಮತ್ತು ಫ್ರಾಂಚ್ ಜೊಯಸ್ ಅತ್ಯಂತ ಪ್ರಮುಖರಾದವರು. ಜನಪದ ಕಥೆಯ ಪ್ರಾರಂಭಾವಸ್ಥೆ, ಅರ್ಥವ್ಯಾಪ್ತಿ, ಪ್ರಸಾರಸಾಮಾನ್ಯತೆ, ಭಿನ್ನತೆ ಹಾಗೂ ಸಂಬಂಧ ಸ್ವಾರಸ್ಯಗಳು ಇವರ ವಿಷಯಗಳಾದುವು. ಫಲವಾಗಿ ವಾದ ಪ್ರತಿವಾದಗಳು ಕಾಣಿಸಿಕೊಂಡವು. ತಮ್ಮದೇ ಸಿದ್ಧಾಂತಗಳನ್ನು ಇವರು ಹರಿಯಬಿಟ್ಟರು. ಆ ಎಲ್ಲ ಸಿದ್ಧಾಂತಗಳ ಸವಿವರ ಚರ್ಚೆಗೆ ಹೋಗದೆ ಪ್ರಮುಖವಾದವನ್ನು ಮಾತ್ರ ಇಲ್ಲಿ ಪರಿಶೀಲಿಸಬಹುದು.

ಮೊದಲಿಗೆ ಗಮನಿಸಬಹುದಾದ ಎರಡು ಪ್ರಸಿದ್ಧ ಸಿದ್ಧಾಂತಗಳೆಂದರೆ ಇಂಡೊ-ಯುರೋಪಿಯನ್ ಸಿದ್ಧಾಂತ ಮತ್ತು ಪುರಾಣಮೂಲ ಸಿದ್ಧಾಂತ. ಗ್ರಿಮ್ ಸೋದರರೇ ಈ ಎರಡೂ ತತ್ತ್ವಗಳ ಪ್ರವರ್ತಕರು. ಜನಪದ ಕಥೆಗಳ ಮೂಲ ಸಾದೃಶ್ಯಗಳನ್ನು ಕಂಡುಕೊಂಡ ಇವರು, ಅದರ ಅಂತರರಾಷ್ಟ್ರೀಯತೆಯನ್ನು ಒಪ್ಪಿಕೊಂಡರು. ಹಾಗೆ ಒಪ್ಪಿಕೊಂಡಮೇಲೆ ಈ ಕಥನ ವೃತ್ತಗಳ ಮೂಲವನ್ನು ಹುಡುಕಲು ಹೊರಟು ಕಡೆಗೆ ಎರಡು ಪ್ರಮುಖ ನಿರ್ಣಯಕ್ಕೆ ಬಂದರು: ಕಥೆಗಳು ಇಂಡೊ-ಯುರೋಪಿಯನ್ ವಂಶ ಮೂಲದಿಂದ ಬಂದಿರಬೇಕು ಮತ್ತು ಪುರಾಣಗಳೇ ಒಡೆದು ಅನಂತರ ಜನಪದ ಕಥೆಗಳಾಗಿರಬೇಕು. ಇವುಗಳಲ್ಲದೆ ಅವರು ಇನ್ನೂ ಎರಡು ವಿಷಯಗಳನ್ನು ಹೇಳಿದ್ದುಂಟು. ಸಂದರ್ಭಗಳು ತೀರ ಸರಳ ಮತ್ತು ಸಹಜವಾಗಿದ್ದು ಎಲ್ಲ ಕಡೆಗೂ ಪುನರಾವರ್ತಿಸುವುದು; ಜನತೆಯಿಂದ ಜನತೆಗೆ ಕಥೆಗಳು ಸ್ವೀಕೃತವಾಗುವುದು. ಅರ್ಥ ಶತಮಾನದ ತರುವಾಯ ಬಹುತೇಕವಾಗಿ ಪ್ರತಿಪಾದಿತವಾದ ಈ ತತ್ತ್ವಗಳನ್ನು ಗ್ರಿಮ್ ಸೋದರರೇ ಕಂಡುಕೊಂಡಿದ್ದು ಕಾಲದ ದೃಷ್ಟಿಯಿಂದ ಮಹತ್ತ್ವದಾಗಿದೆ. ಆದರೆ ಮೊದಲು ಎರಡು ಸಿದ್ಧಾಂತಗಳು ಮಾತ್ರ ಕ್ರಮೇಣ ಮನ್ನಣೆಯನ್ನು ಕಳೆದುಕೊಂಡುವು.

ಯೂರೋಪಿಯನ್ ಭಾಷೆಗಳ ಸಾದೃಶ್ಯದಿಂದ ಜನಪದ ಕಥೆಗಳ ಸಾದೃಶ್ಯವನ್ನು ಗಮನಿಸಿ, ಒಂದೇ ಭಾಷೆಯನ್ನಾಡುವ ಜನಾಂಗವೊಂದರಿಂದ ಈ ಎಲ್ಲ ಜನಪದ ಕಥೆಗಳೂ ಬಂದಿರಬಹುದೆಂಬ ಗ್ರಿಮ್ ಸೋದರರ ಸಿದ್ಧಾಂತ ಹತ್ತೊಂಬತ್ತನೆಯ ಶತಕದಲ್ಲಿ ಕಾಣಿಸಿಕೊಂಡ ತೌಲನಿಕ ಭಾಷಾವಿಜ್ಞಾನದ ಫಲ ಎಂಬುದು ನಿರ್ವಿವಾದ. ಜನಾಂಗದ ಮೂಲವನ್ನೂ ಭಾಷೆಗಳ ಮೂಲವನ್ನೂ ಪತ್ತೆಹಚ್ಚಿದರೆ ಜನಪದ ಕಥೆಗಳ ಮೂಲವನ್ನೂ ಪತ್ತೆಹಚ್ಚಿದಂತಾಗುತ್ತದೆ. ಜನಾಂಗ ಹಾಗೂ ಭಾಷೆಗಳ ವಿತರಣೆ ಪ್ರಸಾರಗಳಿಗೆ ತಕ್ಕಂತೆ ಕಥೆಗಳ ವಿತರಣೆ ಪ್ರಸಾರಗಳು ಇರುತ್ತವೆ. ಭಾಷೆಯಾಗಲಿ ಜನಾಂಗವಾಗಲಿ ಮೂಲತಃ ಎಷ್ಟು ಎಂಬುದರ ಮೇಲೆ ಕಥನ ಸಂಪ್ರದಾಯಗಳು ನಿಂತಿವೆ. ಇದು ಗ್ರಿಮ್ ಸಿದ್ಧಾಂತದ ವಿವರ. ಈ ರೀತಿಯ ಸಂಶೋಧನೆ ಜನಪದ ಕಥೆಯ ಮೂಲವನ್ನು ತಿಳಿಸುವುದಕ್ಕಿಂತ ಹೆಚ್ಚಾಗಿ ಜನಾಂಗದ ಮೂಲವನ್ನೂ ಭಾಷೆಯ ಮೂಲವನ್ನೂ ತಿಳಿಸುತ್ತದೆ. ಇದಲ್ಲದೆ ಇದರ ವಾದಕರು ಋಗ್ವೇದದ ಮೂಲಕ ಇಂಡೊ-ಯುರೋಪಿಯನ್ನರ ಜೀವನ ವಿಧಾನಗಳನ್ನು ರೂಪಿಸುತ್ತಾರೆ. ಋಗ್ವೇದದಲ್ಲಿರುವಂತೆ ಇಂಡೊ-ಯುರೋಪಿಯನ್ನರು ತಮ್ಮ ದೈನಂದಿನ ಜೀವನದಲ್ಲಿ ರಹಸ್ಯಾರ್ಥದಲ್ಲಿ ವ್ಯವಹರಿಸುತ್ತಿದ್ದರಂತೆ. ಈ ದೃಷ್ಟಿಯಿಂದಲೇ ಇಂಡೊ-ಯುರೋಪಿಯನ್ ಪುರಾಣ ಮತ್ತು ಕಥೆಗಳು ಬಂದಿರಬೇಕೆಂದು ಇವರ ವಾದ. ಜನಪದ ಕಥೆಗಳು ಆರ್ಯ ಮೂಲದಿಂದ ಬಂದಿರಬಹುದೆಂದು ಒಪ್ಪಿಕೊಂಡು ರೂಪಿತವಾದ ಇಂಡೊ-ಯುರೋಪಿಯನ್ ಸಿದ್ಧಾಂತ ಆರ್ಯೇತರ ಉದಾಹರಣೆಗಳು ಸಿಕ್ಕಿದಾಗ ಸೋಲನ್ನು ಅನುಭವಿಸಬೇಕಾಯಿತು. ಜನಪದ ಕಥೆಗಳು ಪುರಾಣದಿಂದ ನಿಷ್ಪನ್ನವಾದವು ಎಂದು ತೋರಿಸಲು ಹೊರಟ ಎರಡನೆಯ ವಾದ ಸಂದಿಗ್ಧತೆಯನ್ನು ತಂದುದಲ್ಲದೆ, ನಿರ್ದಿಷ್ಟ ಕಾರಣಗಳನ್ನು ಹೇಳದೆ ಬಿದ್ದುಹೋಯಿತು.

ಐರೋಪ್ಯ ವಿದ್ವಾಂಸರು ವೇದಗಳೇ ಮುಂತಾದ ಗ್ರಂಥಗಳ ಅಧ್ಯಯನ ಹಾಗೂ ಕಥನ ಸಾಹಿತ್ಯದ ಅಭ್ಯಾಸದಿಂದ, ಹಲವಾರು ಜನಪದ ಕಥೆಗಳು ಭಾರತೀಯ ಕಥನ ಸಾಹಿತ್ಯದಲ್ಲಿರುವುದನ್ನು ಕಂಡರು. ಆಗ ಸಹಜವಾಗಿಯೇ ಕೆಲವರು ಭಾರತೀಯ ಕಥೆಗಳಿಗೆ ಯೂರೋಪನ್ನು ಮೂಲವನ್ನಾಗಿ ಸೂಚಿಸಿದರು. ಇನ್ನು ಕೆಲವರು ಯೂರೋಪಿನ ಎಲ್ಲ ಕಥೆಗಳಿಗೂ ಭಾರತೀಯ ಮೂಲವನ್ನು ಉಲ್ಲೇಖಿಸಿದರು. ಹೀಗೆ ಯೂರೋಪಿನ ಸಮಸ್ತ ಕಥೆಗಳಿಗೆ ಭಾರತ ಮೂಲವನ್ನು ಸೂಚಿಸಿ ಹೊರಟ ಸಿದ್ಧಾಂತವೇ ಭಾರತೀಯ ಮೂಲಸಿದ್ಧಾಂತ ಎನ್ನಿಸಿಕೊಂಡಿತು. ಇದಕ್ಕೆ ಕಾರಣನಾದವ ಬೆನ್ಫೆ. ಈತ 1859ರಲ್ಲಿ ತನ್ನ ಪಂಚತಂತ್ರದ ಪ್ರಸ್ತಾವನೆಯಲ್ಲಿ ಇದರ ವಿವರವಾದ ಚರ್ಚೆ ನಡೆಸಿದ್ದಾನೆ.

ಪಂಚತಂತ್ರದ ಕಥೆಗಳ ಉಗಮ ವಿಕಾಸಗಳನ್ನು ಕುರಿತ ಅಧ್ಯಯನದ ಫಲವಾಗಿ, ಬೆನ್ಫೆ ಜಗತ್ತಿನ ಎಲ್ಲ ಜನಪದ ಕಥೆಗಳೂ ವಲಸೆ ಹೋಗಿರಬೇಕೆಂಬ ನೂತನ ಸಿದ್ಧಾಂತಕ್ಕೆ ಬಂದ. ಈ ಕಥಾಪ್ರಸಾರ ಒಂದು ಕಡೆ ಇಸ್ಲಾಮಿಗಳಿಂದ ಮತ್ತೊಂದು ಕಡೆ ಬೌದ್ಧರಿಂದ ಆಗಿರಬೇಕೆಂದು ಅವನ ನಂಬಿಕೆ. ಹೀಗೆ ಯೂರೋಪಿನ ಎಲ್ಲ ಕಥೆಗಳಿಗೆ ಭಾರತೀಯ ಮೂಲವನ್ನು ಹೇಳುವಾಗ ಈ ಸೋಪನ ನೀತಿಕಥೆಗಳನ್ನು ಹೊರತುಪಡಿಸಿದುದು ಗಮನಿಸಬೇಕಾದ ಸಂಗತಿ. ಬೆನ್ಫೆಯ ಈ ಸಿದ್ಧಾಂತ ಕ್ರಮೇಣ ಲೋಕಪ್ರಸಿದ್ಧಿಯನ್ನು ಪಡೆದುಕೊಂಡಿತು. ಆದರೆ ತನ್ನಲ್ಲಿರುವ ಅಸಮರ್ಪಕತೆಯಿಂದ ನಿಲ್ಲಬಲ್ಲ ಸಿದ್ಧಾಂತವಾಗಿ ಉಳಿಯಲಿಲ್ಲ. ಅವನ ಸಿದ್ಧಾಂತವನ್ನು ಒಪ್ಪಲಿ ಬಿಡಲಿ, ಜನಪದ ಕಥೆಗಳ ತೌಲನಿಕ ಅಧ್ಯಯನದ ಪಿತಾಮಹನಾಗಿ ಅವನ ಹೆಸರು ಚಿರಸ್ಥಾಯಿಯಾಯಿತು.

ಪ್ರಾಯಶಃ ಈ ಸಿದ್ಧಾಂತದ ಬಲವಾದ ವಿರೋಧಕನೆಂದರೆ ಆ್ಯಂಡ್ರೂ ಲ್ಯಾಂಗ್‍ನೆಂದೇ ಹೇಳಬೇಕು. ಈತ ಭಾರತೀಯ ಮೂಲವಾದವನ್ನು ಅಲ್ಲಗಳೆದ. ಪ್ರತ್ಯೇಕ ಮೂಲಗಳ ಕಡೆಗೆ ಬೆರಳು ಚಾಚಿದ. ಈಜಿಪ್ಷಿಯನ್ ಕಥೆಗಳು ಮತ್ತು ಹೀರಡಟಸ್ ಮತ್ತು ಹೋಮರರಲ್ಲಿ ಉಕ್ತವಾಗಿರವ ಕಥೆಗಳನ್ನು ಇದಕ್ಕೆ ಬಲವಾದ ಕಾರಣಗಳಾಗಿ ಒಡ್ಡಿದ. ಹೀಗೆ ಭರತಖಂಡವೇ ಕಥೆಗಳ ಏಕಮಾತ್ರ ಉಗಮಸ್ಥಾನವೆಂಬುದನ್ನು ವಿರೋಧಿಸಿ, ಇಲ್ಲಿಯ ಕಥೆಗಳಂತೆಯೇ ಬೇರೆ ಕಡೆಯಲ್ಲೂ ಕಥೆಗಳಿದ್ದವು ಎಂಬುದನ್ನು ಕಂಡುಕೊಂಡ. ಆದರೆ ಇದಕ್ಕೆ ಲ್ಯಾಂಗ್ ತನ್ನದೇ ಆದ ವಿವರಣೆಯನ್ನು ನೀಡಿದ.

ಜನಪದ ಕಥೆಗಳಲ್ಲಿ ಪುರಾತನ ಭಾವನೆಗಳು ಕಂಡುಬರುವುದರಿಂದ ಅವು ಪುರಾತನ ಕಾಲದ ಉಳಿಕೆಗಳು ಎಂಬುದಾಗಿ ಲ್ಯಾಂಗ್ ಅಭಿಪ್ರಾಯಪಡುತ್ತಾನೆ. ಕಥೆಗಳಲ್ಲಿನ ಸಾದೃಶ್ಯಗಳು ವಾಸ್ತವವಾಗಿ ಭಿನ್ನ ಪ್ರದೇಶಗಳ ಸ್ವತಂತ್ರ ಸೃಷ್ಟಿಯ ಫಲಗಳೆಂದು ಬಹುಬೇಗ ಪತ್ತೆಹಚ್ಚಿಕೊಂಡ ಲ್ಯಾಂಗ್, ಕಥೆಗಳು ಪ್ರಾಚೀನ ಮಾನವನ ಸಂಪ್ರದಾಯ ಮತ್ತು ಪದ್ಧತಿಗಳಿಗನುಗುಣವಾಗಿ ರಚಿತವಾಗಿರುತ್ತವೆ ಎಂಬುದನ್ನು ಸಾರಿದ. ಸಮಾನ ಕಥೆಗಳಿಗೆ ಸಮಾನ ಸಂಸ್ಕøತಿಗಳೇ ಕಾರಣ ಎಂಬುದು ಇದರ ಒಟ್ಟು ಅಭಿಪ್ರಾಯ. ಮಾನವರೆಲ್ಲ ಸಮಾನವಾಗಿ ಯೋಚಿಸುತ್ತಾರೆ ಎಂಬುದು ಕಥೆಗಳ ಉಗಮ, ಪ್ರಸಾರಗಳಲ್ಲಿ ಸ್ಫೋಟಕ ಸತ್ಯವಾಯಿತು. ಪುರಾತನ ಮಾನವ ಭಾವನೆಗಳ ಮತ್ತು ಸಂಸ್ಕøತಿ ಸಮಾನತೆಗಳ ಮೇಲೆ ರಚಿತವಾದ ಈ ಸಿದ್ಧಾಂತ ಪಳೆಯುಳಿಕೆ ಸಿದ್ಧಾಂತವೆಂದು ಪ್ರಸಿದ್ಧವಾಗಿದೆ. ಹತ್ತೊಂಬತ್ತನೆಯ ಶತಕದ ಕಡೆಕಡೆಗೆ ಪ್ರಬಲವಾಗಿ ಕಾಣಿಸಿಕೊಂಡ ಇವನ ವಾದ ಜಾನಪದ ವಿದ್ವತ್ತಿನಲ್ಲಿ ಬಹಳ ಮುಖ್ಯವಾದುದೆಂದು ಪರಿಗಣಿತವಾಯಿತು. ಇವನ ಮೇಲೆ ಇಂಗ್ಲಿಷ್ ಮಾನವ ಶಾಸ್ತ್ರಜ್ಞರ ಪ್ರಭಾವ ಬಿದ್ದಿರಬೇಕು. ಹತ್ತೊಂಬತ್ತನೆಯ ಶತಕದ ಮಧ್ಯಭಾಗದ ಹೊತ್ತಿಗೆ ಕಾಣಿಸಿಕೊಂಡ ಮಾನವಶಾಸ್ತ್ರೀಯ ಪಂಥ ಪುರಾತನ ಮಾನವನ ಅಧ್ಯಯನದಲ್ಲಿ ತೊಡಗಿತ್ತು. ಈ ಪಂಥದಲ್ಲಿ ಪ್ರಮುಖನೆಂದರೆ ಇ.ಬಿ. ಟೆಯ್‍ಲರ್. ಈತನ ಸಂಶೋಧನೆಗಳು ಲಾಂಗನ ಮೇಲೆ

ಪರಿಣಾಮವನ್ನುಂಟುಮಾಡಿರಬೇಕು. ಅಲ್ಲದೆ ಲ್ಯಾಂಗ್ ಕೂಡ ಮಾನವ ಶಾಸ್ತ್ರೀಯ ಪಂಥದ ಅನುಯಾಯಿ. ಪಳೆಯುಳಿಕೆ ಸಿದ್ಧಾಂತ ಮೂಲತಃ ಮಾನವಶಾಸ್ತ್ರದಲ್ಲಿ ಟೆಯ್‍ಲರನಿಂದ ಪ್ರಖ್ಯಾತಿಗೆ ಬಂದದ್ದು. ಇದನ್ನು ಪರಿಷ್ಕರಿಸಿ ಜಾನಪದಕ್ಕೆ ಅನ್ವಯಿಸಿದ್ದು ಲ್ಯಾಂಗನ ಕೀರ್ತಿ. ಈ ಸಿದ್ಧಾಂತವೂ ಮುಂದಿನವರಿಂದ ವಿಮರ್ಶಿತವಾಗಿ ಮಾರ್ಪಾಡು ಹೊಂದಿತು.

ಜನಪದ ಕಥೆಗಳಲ್ಲಿ ಕಾಣಬರುವ ಆಶಯಗಳು ಪುರಾತನ ಜೀವನದ ಉಳಿಕೆಗಳು ಮತ್ತು ಅನುಭವಗಳು ಎಂಬುದರ ಕಡೆಗೆ ಮಾನವಶಾಸ್ತ್ರಜ್ಞರು ಕೊಟ್ಟ ಲಕ್ಷ್ಯದ ಫಲವಾಗಿ ಜನಪದ ಕಥೆಯ ಉಗಮ ವಿಕಾಸದಲ್ಲಿ ಹೊಸ ಅಧ್ಯಾಯವೊಂದು ತೆರೆಯಿತು. ಈ ಸಂದರ್ಭದಲ್ಲಿ ಇಂಗ್ಲೆಂಡಿನಲ್ಲಿ ಹೊರಟ ಮಾನವ ಶಾಸ್ತ್ರೀಯ ಪಂಥ ಗಮನಾರ್ಹವಾದುದು. ಈ ಪಂಥದ ವಿದ್ವಾಂಸರು ಆಶಯಗಳ ಮೂಲಕ ಜನಪದ ಕಥೆಯ ಉಗಮ, ವಿಕಾಸಗಳನ್ನು ಅಧ್ಯಯನ ಮಾಡಿದರು. ಯೂರೋಪಿನ ಪುರಾತನ ಕಥೆಗಳಲ್ಲಿನ ಆಶಯಗಳ ಅಧ್ಯಯನದಿಂದ, ಹಲವಾರು ಕಥೆಗಳು ಗೊತ್ತಾದ ಪ್ರದೇಶಗಳಿಗೆ ಸೇರಿದ್ದು, ಸೀಮಿತ ವಿತರಣೆಯನ್ನು ಪಡೆದುಕೊಂಡಿರುತ್ತವೆ ಎಂಬುದನ್ನು ತಿಳಿಸಿದರು. ಆದರೆ ವರ್ಗವಾಗಲಿ, ಆಶಯಗಳಾಗಲಿ ತಮಗೆ ತಾವೇ ಪುರಾತನ ಸ್ವಭಾವವನ್ನು ವ್ಯಕ್ತಪಡಿಸುತ್ತವೆ ಎಂಬುದರಲ್ಲಿ ಇವರಿಗೆ ನಂಬಿಕೆಯಿರಲಿಲ್ಲ. ಅವುಗಳ ಶೋಧನೆಯಿಂದ ನಿಜವಾದ ಮೂಲವನ್ನು ಕಂಡು ಹಿಡಿಯಬೇಕಾಗಿದೆ ಎಂಬುದು ಅವರ ತಿಳಿವಳಿಕೆ.

ಜನಪದ ಕಥೆಯ ಉಗಮ ಮತ್ತು ವಿಕಾಸ ಬದಲಾಯಿಸಿ

ಜನಪದ ಕಥೆಯ ಉಗಮ, ವಿಕಾಸಗಳಲ್ಲಿ ಜಾನಪದ ಮತ್ತು ಮಾನವಶಾಸ್ತ್ರಗಳ ಪೂರಕ ಅಧ್ಯಯನ ಹೊಸ ಆಯಾಮವನ್ನು ಕಲ್ಪಿಸಿತು. ಪುರಾತನ ಕಥನದ ಈ ರೀತಿಯ ಅಧ್ಯಯನದಲ್ಲಿ ಪ್ರಖ್ಯಾತ ಹೆಸರೆಂದರೆ ಬೊಯಸ್‍ನದು. ಅಮೆರಿಕದ ಮಾನವಶಾಸ್ತ್ರೀಯ ಪಂಥದ ಮುಖ್ಯ ನೇತಾರನಾದ ಇವನ ಸಿದ್ಧಾಂತ ಕಥೆಗಳ ಬಹುಮೂಲಸಿದ್ಧಾಂತ ಎಂದು ಪ್ರಸಿದ್ಧವಾಗಿದೆ. ಹಲವು ಪ್ರತ್ಯೇಕ ಮೂಲಗಳಿಂದ ಜನಪದ ಕಥೆಗಳನ್ನು ಹುಡುಕುವುದೇ ಈ ಸಿದ್ಧಾಂತದ ಉದ್ದೇಶ. ಜನಪದ ಕಥೆಯನ್ನು ಕುರಿತಂತೆ ಬೊಯಸ್‍ನ ವಿಚಾರಗಳು ಅಧ್ಯಯನ ಯೋಗ್ಯವಾದವು. ಆತ ಮೊಟ್ಟಮೊದಲು ಜನಪದ ಕಥೆ ಮತ್ತು ಪುರಾಣಕ್ಕಿರುವ ಅಂತರವನ್ನು ಕಡಿಮೆಗೊಳಿಸಿದ. ಇವೆರಡರಲ್ಲಿಯೂ ಇರುವ ವಿಷಯ ಒಂದೇ ಎಂದು ಸಾರಿದ. ಪುರಾಣದ ವಸ್ತು ಜನಪದ ಕಥೆಗೆ ಹರಿದಿರಬಹುದು ಅಥವಾ ಕಥೆಯ ವಸ್ತು ಪುರಾಣಕ್ಕೆ ಹರಿದಿರಬಹುದು ಪುರಾಣ ಮತ್ತು ಜನಪದ ಕಥೆಗಳಲ್ಲಿ ನಿರೂಪಿತವಾಗಿರುವ ಸಂಗತಿಗಳು ಅವು ಪುರಾತನ ಕಲೆಗಳೆಂಬುದನ್ನು ನಿರ್ಧರಿಸುತ್ತದೆ. ಈಗ ಗೊತ್ತಾದ ಬುಡಕಟ್ಟಿನಲ್ಲಿ ಅಥವಾ ವರ್ಗದಲ್ಲಿ ಏನು ನಡೆಯುತ್ತಿದೆ ಎಂಬುದರ ಮೂಲಕ ಪ್ರಾಚೀನ ಕಾಲದಲ್ಲಿ ಏನು ನಡೆದಿತ್ತು ಎಂಬುದನ್ನು ಪತ್ತೆಹಚ್ಚಬಹುದೆಂದು ಬೊಯಸ್‍ನ ವಾದ. ಇವೆರಡರಲ್ಲಿಯೂ ಕಥನದ ಉಗಮಕ್ಕೆ ಮಾನವ ಜೀವನದ ಸಂಗತಿಗಳ ಕಲ್ಪನೆಗಳ ಕಾರ್ಯವೇ ಕಾರಣ. ಆದರೆ ಈ ಕಲ್ಪನೆಯ ಕಾರ್ಯ ಪರಿಮಿತವಾದುದು. ಆದ್ದರಿಂದ ಪ್ರತಿಯೊಂದು ಪ್ರವೃತ್ತಿಯೂ ನೂತನವಾದುದೊಂದನ್ನು ಕಂಡುಹಿಡಿಯುವುದಕ್ಕಿಂತ ಸಂಗ್ರಹಿತವಾದ ಹಳೆಯ ಕಲ್ಪನಾ ಘಟನೆಗಳನ್ನೇ ಇಟ್ಟುಕೊಂಡು ಕಾರ್ಯ ನಡೆಸುತ್ತದೆ ಎಂದು ಬೊಯಸ್ ಹೇಳಿದ. ಹೀಗೆ ಜನಪದ ಕಥೆಯ ಉಗಮ. ವಿಕಾಸಗಳ ಅಧ್ಯಯನದಲ್ಲಿ ಬೊಯಸ್‍ನದು ದೊಡ್ಡ ಹೆಸರಾಗಿದೆ.

ಸಿದ್ಧಾಂತಗಳು ಬದಲಾಯಿಸಿ

ಕಥೆಗಳ ಉಗಮವನ್ನು ಕುರಿತ ಇಂಡೊ-ಯುರೋಪಿಯನ್ ಮತ್ತು ಪುರಾಣ ಮೂಲಸಿದ್ಧಾಂತಗಳು 19ನೆಯ ಶತಮಾನದ ಕೊನೆಯ ಭಾಗದ ಹೊತ್ತಿಗೆ ಹೇಗೆ ತಮ್ಮ ಮೌಲ್ಯವನ್ನು ಕಳೆದುಕೊಂಡುವು ಎಂಬುದನ್ನು ಹಿಂದೆ ನೋಡಿದ್ದೇವೆ. ಆದರೆ ಪ್ರಪಂಚದ ಕಥೆಗಳಿಗೆ ಸಂಬಂಧಪಟ್ಟಂತೆ ಇವನ್ನು ಅನ್ವಯಿಸಿದ ಕೆಲವು ಮಾನವ ಶಾಸ್ತ್ರಜ್ಞರಿಗೆ ಇದು ಪೂರ್ಣವಾಗಿ ಮುಕ್ತಾಯವಾಗಿರಲಿಲ್ಲವೆಂದೇ ಹೇಳಬೇಕು. ಇವರು ಪುರಾಣದ ತೌಲನಿಕ ಅಧ್ಯಯನದ ಕಡೆಗೆ ಗಮನ ಕೊಟ್ಟರು. ಪ್ರಪಂಚದ ಎಲ್ಲ ಪುರಾಣಕಥೆಗಳೂ ಬೇರೆ ಬೇರೆ ರೀತಿಯಲ್ಲಿ ಕಂಡರೂ ಅವುಗಳಿಂದ ಬೋಧೆಯಾಗುವ ವಸ್ತು ಒಂದೇ ಎಂಬುದನ್ನು ಇವರು ಗಮನಕ್ಕೆ ತಂದುಕೊಂಡರು. ಇಲ್ಲಿಯ ಎಲ್ಲ ಕಥೆಗಳೂ ಕೆಲವು ಕೇಂದ್ರಗಳಿಂದ ಪ್ರಸಾರವಾಗಿರಬೇಕೆಂದು ಹೇಳಿ, ಅವುಗಳ ಆಂತರಿಕ ಸಂಬಂಧದ ಕಡೆಗೆ ಗಮನ ಸೆಳೆದರು. ಪ್ರತಿ ಪುರಾಣಕಥೆಯ ಅರ್ಥವನ್ನು ವಿಶ್ಲೇಷಿಸಿ, ಅದು ಪ್ರಾಕೃತಿಕ ವಿಷಯಗಳಿಂದ ಘಟಿತವಾಗಿರುವುದನ್ನು ಪ್ರತಿಪಾದಿಸಿದರು. ಇವರ ಈ ಸಿದ್ಧಾಂತಕ್ಕೆ ಪ್ರಕೃತಿ ಸಂಕೇತ ಸಿದ್ಧಾಂತ ಎಂದು ಹೆಸರಾಯಿತು. ಇದರ ಮುಖ್ಯ ಪ್ರತಿಪಾದಕನೆಂದರೆ ರೈಕ್. ಪ್ರಕೃತಿ ಸಂಪರ್ಕದಿಂದ ಮಾನವ, ಪುರಾಣದ ಅರ್ಥಾತ್ ಜನಪದ ಕಥೆಯ ಸೃಷ್ಟಿಗೆ ಕಾರಣನಾಗಿರಬೇಕು ಎಂಬುದು ಇವನ ವಾದ. ಜಗತ್ತಿನ ಎಲ್ಲ ಕಡೆಯಲ್ಲೂ ಕಾಣಬರುವ ಇಂಥ ಪ್ರಕೃತಿ ವಿಷಯಗಳೆಂದರೆ ಸೂರ್ಯ, ಚಂದ್ರ, ನಕ್ಷತ್ರಗಳೆಂದು ಇವನ ಅಭಿಪ್ರಾಯ. ಆದರೆ ಆದಿವಾಸಿಗಳು ಸೂರ್ಯ, ಚಂದ್ರ ಮುಂತಾದ ದೇವತೆಗಳ ಸಂಪರ್ಕವನ್ನು ಪಡೆದಿದ್ದರೆಂಬುದಕ್ಕೆ ಆಧಾರಗಳು ಸಿಗುವುದಿಲ್ಲ. ಆದ್ದರಿಂದ ರೈಕ್‍ನ ವಾದ ವಾಸ್ತವಕ್ಕೆ ದೂರವಾಗಿಯೇ ನಿಲ್ಲುತ್ತದೆ. ಇವನ ಸಿದ್ಧಾಂತವನ್ನು ಲೂವಿ ಎಂಬ ಅಮೆರಿಕೆಯ ಮಾನವಶಾಸ್ತ್ರಜ್ಞ ತೀವ್ರವಾಗಿ ವಿರೋಧಿಸುತ್ತಾನೆ. ಅನೇಕ ಸ್ಥಳೀಯ ಪುರಾಣಗಳು ಸ್ಥಳೀಯ ಸಂಕೇತಗಳನ್ನು ಬಳಸುವುದು ಹೆಚ್ಚು ಸಾಧ್ಯ. ಆದ್ದರಿಂದ ಸ್ಥಳೀಯ ಸಂಕೇತಗಳನ್ನು ತೆಗೆದುಕೊಳ್ಳುವುದರಿಂದ ಮಾತ್ರ ಪುರಾಣಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ ಎಂಬುದು ಇವನ ತರ್ಕ. (ನೋಡಿ- ಇಂಡೋ---ಯೂರೋಪಿಯನ್-ಅಥವಾ-ಮೈಥಲಾಜಿಕಲ್-ಸಿದ್ಧಾಂತ)

ಪುರಾತನ ಜೀವನದ ಮತ್ತೊಂದು ಮುಖ್ಯವಾದ ಲಕ್ಷಣವೆಂದರೆ ಮತಸಂಬಂಧವಾದ ಕ್ರಿಯೆಗಳು. ಇದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕೆಲವರು ಜನಪದ ಕಥೆಗಳ ಉಗಮಕ್ಕೆ ಮತಧರ್ಮದ ಪ್ರಕ್ರಿಯೆಗಳನ್ನು ಕಾರಣವಾಗಿ ಒಡ್ಡಿದರು. ಪುರಾತನ ಧಾರ್ಮಿಕ ಮತಧರ್ಮದ ಪ್ರಕ್ರಿಯೆಗಳನ್ನು ಕಾರಣವಾಗಿ ಒಡ್ಡಿದರು. ಪುರಾತನ ಧಾರ್ಮಿಕ ಕ್ರಿಯೆಗಳ ಸಾಮಾನ್ಯವಾಗಿ ನಡೆಯುತ್ತಿದ್ದುದು ಸತ್ತವನು ಮತ್ತೆ ಎದ್ದು ಬರದಿರಲೆಂದು. ಈ ಸತ್ತಮನುಷ್ಯನಿಂದ (ದೆವ್ವ) ಹೆಚ್ಚು ತೊಂದರೆಯಾಗುತ್ತದೆಂದು ಅವರು ನಂಬಿಕೊಂಡಿದ್ದಿರಬೇಕು ; ಇಲ್ಲವೆ, ಹಾಗೆ ಆಗುತ್ತಿದ್ದಿರಬೇಕು. ಆದ್ದರಿಂದ ಈ ಮತಾಚರಣೆಗಳನ್ನು ತಂದಿರಬೇಕೆಂದು ತೋರುತ್ತದೆ. ಎಲ್ಲ ಜನಪದ ಕಥೆಗಳಲ್ಲೂ ಇದನ್ನು ಕಾಣಬಹುದು. ಈ ಮತಾಚರಣೆ ಸಾರ್ವತ್ರಿಕವಾಗಿರವುದರಿಂದಲೇ ಆಶಯ ಕೂಡ ಸಾರ್ವತ್ರಿಕವಾಗಿರುತ್ತದೆ. ಸಾವಿನ ಬಗ್ಗೆ ಇದ್ದ ಭಯವೇ ಪ್ರಾಚೀನ ಮಾನವನಿಗೆ ದೆವ್ವದ ಅಥವಾ ರಾಕ್ಷಸನ ಕಥೆಗಳನ್ನು ಕಟ್ಟಿಕೊಳ್ಳಲು ಕಾರಣವಾಗಿದ್ದಿರಬೇಕು. ಹೀಗೆ ಪುರಾತನ ಮಾನವನ ನಂಬಿಕೆ, ನಡಾವಳಿ, ಸಂಪ್ರದಾಯ, ಮತಾಚರಣೆಗಳ ಮೂಲಕ ವಿಶ್ವದ ಕಥೆಗಳೆಲ್ಲದರ ಮೂಲ ಮತ್ತು ಸಾಮ್ಯವನ್ನು ಗುರುತಿಸಲು ಹೊರಟವರೆಂದರೆ ನ್ಯೂಯಮನ್ ಮತ್ತು ಜೆನ್ನೇಪರು. ವಾಸ್ತವವಾಗಿ ಏನು ನಡೆದಿತ್ತು ಎಂಬುದಕ್ಕಿಂತ ಕಲ್ಪಿತ ವಿಷಯವೇ ಇಲ್ಲಿ ಹೆಚ್ಚಾಗಿರುವುದರಿಂದ ಈ ವಾದ ದೋಷದಿಂದ ತುಂಬಿಕೊಂಡಿದೆ.

ಇವಲ್ಲದೆ ಕಾರ್ಯಕಾರಣ ಪಂಥ, ಮನಶ್ಯಾಸ್ತ್ರೀಯ ಪಂಥ, ಚಾರಿತ್ರಿಕ ಭ್ರಾಮಕ ಪಂಥ, ಪ್ರಸಾರಪಂಥ ಇತ್ಯಾದಿ ಹಲವಾರು ಸಿದ್ಧಾಂತಗಳು ಪ್ರಚಲಿತವಾಗಿವೆ. ಆದರೆ ಈ ಯಾವುದೇ ಸಿದ್ಧಾಂತ ತನಗೆ ತಾನೇ ಸ್ವಯಂಪೂರ್ಣವಾಗಿಲ್ಲ ಕಥಾಮೂಲದ ವಿಷಯವಂತೂ ಸಂಪೂರ್ಣ ವಿಶ್ವಸನೀಯವಲ್ಲ.

ಹೀಗೆ ಪಶ್ಚಿಮ ಮತ್ತು ಮಧ್ಯ ಯೂರೋಪಿನಲ್ಲಿ ಭಿನ್ನ ಸಿದ್ಧಾಂತಗಳ ಮಧ್ಯೆ ವಾದವಿವಾದಗಳಿದ್ದಾಗ, ಫಿನ್ಲೆಂಡಿನ ನೂತನ ಸಿದ್ಧಾಂತವೊಂದು ಕಾಲೇವಾಲದ ಅಧ್ಯಯನದಿಂದ ಸಿದ್ಧವಾಯಿತು. ಇದರ ಸ್ಥಾಪಕರು ಜೂಲಿಯಸ್ ಕ್ರೋಹ್ನ ಮತ್ತು ಅವನ ಮಗ ಕಾರ್ಲೆ ಕ್ರೋಹ್ನರು. ಇವರು ಪ್ರತಿಪಾದಿಸಿದ ಸಿದ್ಧಾಂತವೇ ಇಂದು ಜಗದ್ವಿಖ್ಯಾತಿಯನ್ನು ಪಡೆದಿರುವ ಚಾರಿತ್ರಿಕ-ಭೌಗೋಳಿಕ ವಿಧಾನ (ನೋಡಿ- ಚಾರಿತ್ರಿಕ-ಭೌಗೋಳಿಕ-ವಿಧಾನ). ಜಗತ್ತಿನ ಎಲ್ಲ ಕಡೆಯಲ್ಲಿಯೂ ವಿತರಣೆಯಾಗಿರುವ ಕಥೆಗಳಿಗೆ ಪ್ರೇರಕವಾಗಿರುವ ಮೂಲಪ್ರತಿಯನ್ನು ಕಂಡುಹಿಡಿಯುವುದೇ ಇದರ ಉದ್ದೇಶ.

ಹೀಗೆ ಹಲವಾರು ವಿಖ್ಯಾತ ವಿದ್ವಾಂಸರು ಜನಪದ ಕಥೆಯ ಮೂಲರೂಪವನ್ನು ಪುನರ್ರಚಿಸುವುದರಲ್ಲಿ ತುಂಬ ಶ್ರಮಿಸಿದ್ದಾರೆ. ಅವರ ಎಲ್ಲ ಅಧ್ಯಯನ ಗಮನಾರ್ಹ ಬೆಳೆವಣಿಗೆಯನ್ನು ತೋರಿದೆ. ಪ್ರಾಯಶಃ ಜನಪದ ಕಥೆಯ ಭಾಗದಲ್ಲಿ ನಡೆದಿರುವಷ್ಟು ಕೆಲಸ ಜನಪದ ಸಾಹಿತ್ಯದ ಮತ್ತಾವ ಭಾಗದಲ್ಲೂ ನಡೆದಿಲ್ಲವೆಂದೇ ಹೇಳಬೇಕು. ಇದಕ್ಕೆ ಮೇಲೆ ವಿವರಿಸಲಾಗಿರುವ ಭಿನ್ನಸಿದ್ಧಾಂತಗಳೇ ಸಾಕ್ಷಿ. ಹೀಗೆ ಕೈಗೊಂಡ ಅಧ್ಯಯನದಲ್ಲಿ ಜಾನಪದ ವಿದ್ವಾಂಸರೊಡನೆ ಮಾನವಶಾಸ್ತ್ರಜ್ಞರೂ ಮನಶ್ಯಾಸ್ತ್ರಜ್ಞರೂ ಕೆಲಸ ಮಾಡಿದ್ದಾರೆ. ಜನಪದ ಕಥೆಯ ಮೂಲರೂಪದ ಬಗ್ಗೆ ವಿಶೇಷವಾದ ಬೆಳಕನ್ನು ಚೆಲ್ಲಿದ್ದಾರೆ. ಆದರೆ ನಿರ್ಣಾಯಕ ವಿಷಯ ಮಾತ್ರ ಇನ್ನೂ ಸಿದ್ಧವಾಗಿಲ್ಲ. ಜಗತ್ತಿನ ಕಥೆಗಳ ಸಮಗ್ರ ಸಂಗ್ರಹ, ಸುವ್ಯವಸ್ಥಿತ ವ್ಯವಸ್ಥೆ ಹಾಗೂ ಸಮರ್ಥ ವಿಶ್ಲೇಷಣೆಗಳಿಂದ ಪುರಾತನ ಮಾನವನ ಬೌದ್ಧಿಕ ಹಾಗೂ ಸಾಂಸ್ಕøತಿಕ ಜ್ಞಾನವನ್ನು ಸಮರ್ಪಕವಾಗಿ ನಿವೇದಿಸಬೇಕಾಗಿದೆ.

ಈಗ ಜನಪದಕಥೆಯ ಮೂಲವನ್ನು ಹುಡುಕುವ ಅಥವಾ ಅವುಗಳ ಸಾಂಸ್ಕøತಿಕ ಸಂಬಂಧಗಳನ್ನು ಹುಡುಕುವ ಸಿದ್ಧಾಂತಗಳು ಪ್ರಸ್ತುತ ಎನಿಸುತ್ತಿಲ್ಲ. ಪ್ರಯೋಜನ ಉದ್ದೇಶಿತ ಜಗತ್ತು ಹೆಚ್ಚು ಮುದೆ ಕಾಣಿಸಿಕೊಳ್ಳತೊಡಗಿದ್ದು ಜನಪದ ಕಥೆಯ ಅಧ್ಯಯನದಲ್ಲಿ ಇದು ಕಾಣಿಸಿಕೊಂಡಿದೆ. ಜನಪದದ ಒಂದು ಅಂಶ ಕ್ರಿಯಾಶೀಲವಾಗಿರುವ ಸಂದರ್ಭದಲ್ಲಿ ಏನೇನು ಹೇಳುತ್ತಿರಬಹುದು ಎಂಬುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ಹೊತ್ತಿನ ಜನಪದ ವಿದ್ವಾಂಸರು ಜಗತ್ತಿನಾದ್ಯಂತ ಕೆಲಸಮಾಡುತ್ತಿದ್ದಾರೆ.

ಉಲ್ಲೇಖ ಬದಲಾಯಿಸಿ

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  1. https://www.google.com/search?q=folktales&rlz=1C1CHBF_enIN845IN845&oq=folktal&gs_lcrp=EgZjaHJvbWUqCggAEAAYsQMYgAQyCggAEAAYsQMYgAQyBwgBEAAYgAQyBggCEEUYOTIHCAMQABiABDIHCAQQABiABDIHCAUQABiABDIHCAYQABiABDIKCAcQLhjUAhiABDIKCAgQLhjUAhiABDIHCAkQABiPAtIBCTc2NzdqMWoxNagCALACAA&sourceid=chrome&ie=UTF-8