ಧ್ವನಿಸಂಪುಟದ ಕೆಳಗಡೆ ಮುಂಗೊರಳಿನಲ್ಲಿ ಶ್ವಾಸನಾಳದ ತೆಳು ಸ್ನಾಯು ನಿರ್ನಾಳ ಗ್ರಂಥಿ (ತೈರಾಯ್ಡ್). ಚರ್ಮ ಮತ್ತು ಕೆಲವು ಸಣ್ಣ ತೆಳು ಸ್ನಾಯುಗಳು ಇದರ ಮೇಲಿವೆ. ಮುಖ್ಯವಾಗಿ ಇದು ಮೈಯಲ್ಲಿನ ಬೆಳೆವಣಿಗೆ ಮತ್ತು ಚಯಾಪಚಯ (ಮೆಟಬಾಲಿಸಂ) ಅಂದರೆ ಮೈಯಲ್ಲಿನ ನಡೆವ ರಾಸಾಯನಿಕ ಕೆಲಸಗಳ ವೇಗವನ್ನು ನಿಯಂತ್ರಿಸುವ ಒಂದು ಹಾರ್ಮೋನನ್ನು ಉತ್ಪತ್ತಿ ಮಾಡುತ್ತದೆ. ಮೈಯಲ್ಲಿ ಇದರ ಪ್ರಭಾವಕ್ಕೆ ಈಡಾಗದ ಅಂಗವೇ ಇಲ್ಲ ಎನ್ನಬಹುದಾದರೂ ಕೆಲವು ಅಂಗಗಳ ಮೇಲಂತೂ ಇದರ ಪ್ರಭಾವ ಬಲು ಹೆಚ್ಚು. ಶ್ವಾಸನಾಳದ ಎರಡು ಪಕ್ಕಗಳಲ್ಲೂ ಇರುವ ಎರಡು ಹಾಲೆಗಳೂ ಅವನ್ನು ಅಡ್ಡಗೂಡಿಸುವ ಸಂಧಿಸ್ಥಳವೂ (ಇಸ್ತ್‍ಮಸ್) ಗ್ರಂಥಿಭಾಗಗಳಾಗಿವೆ. ನುಂಗುವಾಗಲೆಲ್ಲ ಗುರಾಣಿಕ ಗ್ರಂಥಿ ಮೇಲಕ್ಕೂ ಕೆಳಕ್ಕೂ ಆಗುವುದು. ಹೆಚ್ಚು ಕಡಿಮೆ ದುಂಡಾಗಿರುವ ಅರೆ ಮಿಲಿಮೀಟರಿಗೂ ಕಿರಿದಾಗಿರುವ ಕೋಶಿಕೆಗಳು (ಫಾಲಿಕಲ್ಸ್) ಗ್ರಂಥಿಯ ತುಂಬ ಇವೆ. ಈ ಕೋಶಿಕೆಗಳ ಗೋಡೆ ಗುತ್ತನಾಗಿ ಅಡಕವಾದ ಜೀವಕಣಗಳಿಂದಾಗಿದೆ. ಇದರ ಹೊರಗೆ ಸುತ್ತಲೂ ತೆಳು ಪೊರೆ ಉಂಟು. ಇದನ್ನು ದಟ್ಟವಾಗಿ ಹೆಣೆದುಕೊಂಡು ಸುತ್ತುವರಿದಿರುವ ರಕ್ತದ ಲೋಮನಾಳಗಳಿಂದ ತೆಳು ಪೊರೆಯ ಮೂಲಕ ಜೀವಕಣಗಳಿಗೆ ಒಂದೇ ಸಮನಾಗಿ ರಕ್ತರಸ (ಪ್ಲಾಸ್ಮ) ಧಾರಾಳವಾಗಿ ಸರಬರಾಜಾಗುವುದು. ಮೈಯಲ್ಲಿ ಬಹುವಾಗಿ ರಕ್ತಪೂರೈಕೆಯಾಗುವ ಕೆಲವೇ ಅಂಗಗಳಲ್ಲಿ ಇದೂ ಒಂದು. ಇಷ್ಟು ಸಣ್ಣ ಅಂಗಕ್ಕೆ 4 - 5 ಅಪಧಮನಿಗಳು (ಅರ್ಟರಿಸ್) ಇವೆ. ಅಭಿದಮನಿಗಳು (ವೇನ್ಸ್) ಇನ್ನೂ ಹೆಚ್ಚು. ಕೋಶಿಕೆಗಳ ಸುತ್ತಲೂ ರಕ್ತನಾಳಗಳಲ್ಲದೆ ಹಾಲುರಸನಾಳಗಳೂ ನರಗಳೂ ಇವೆ. ಕೋಶಿಕೆಗಳಲ್ಲಿ ಹಳದಿ ಬಣ್ಣದ ಮಂದ ದ್ರವವಾದ ಕಲಾಯ್ಡ್, ಎಂದರೆ ಶೇಖರಿಸಿಡಲ್ಪಟ್ಟ ಗುರಾಣಿಕ ಗ್ರಂಥಿಯ ಸ್ರಾವ, ಇದೆ. ಇದೊಂದು ಹಾರ್ಮೋನ್. ಯಾವುದೊಂದು ಕಾಲದಲ್ಲಿರುವ ಈ ಹಾರ್ಮೋನಿನ (ಕಲಾಯ್ಡ್) ಪ್ರಮಾಣ ಅದರ ಬಳಕೆ ತಯಾರಿಕೆಗಳ ವೇಗಗಳಿಗೆ ತಕ್ಕಹಾಗಿರುವುದು. ಎಳೆಮಕ್ಕಳಲ್ಲಿ ತಯಾರಾದ ಹಾರ್ಮೋನ್ ಎಲ್ಲ ಶೀಘ್ರವಾಗಿ ಬಳಕೆಯಾಗುವುದರಿಂದ ಅದು ಶೇಖರವಾಗುವುದು ಕಡಿಮೆ. ಮೆಡ್ಡೆಗಣ್ಣಿನ ಗಳಗಂಡದಲ್ಲಿ (ಎಕ್ಸಾಫ್ತಾಲ್ಮಿಕ್ ಗಾಯ್ಬರ್) ಗುರಾಣಿಕ ಗ್ರಂಥಿ ಬಲು ಚುರುಕಾಗಿ ಹಾರ್ಮೋನನ್ನು ತಯಾರಿಸುತ್ತಿದ್ದರೂ ಅಷ್ಟೂ ಬಳಕೆಯಾಗುವುದರಿಂದ ಅದು ಶೇಖರವಾಗುವುದೇ ಇಲ್ಲ. ಕಲಾಯ್ಡಿನ ಗಳಗಂಡದಲ್ಲಾದರೋ ಇದರ ತಲೆಕೆಳಗು ಸ್ಥಿತಿ ಕಂಡುಬರುತ್ತದೆ.[]

ಗುರಾಣಿಕ ಗ್ರಂಥಿಯ ಕೋಶಿಕೆ

ಬದಲಾಯಿಸಿ

ಗುರಾಣಿಕ ಗ್ರಂಥಿಯ ಒಂದೊಂದು ಕೋಶಿಕೆಯೂ ಗುರಾಣಿಕ ಹಾರ್ಮೋನನ್ನು ತಯಾರಿಸಿ, ಕೂಡಿಟ್ಟುಕೊಂಡಿದ್ದು ಸಂದರ್ಭಾನುಸಾರವಾಗಿ ಬಿಡುಗಡೆ ಮಾಡಿ ರಕ್ತಗತವಾಗುವಂತೆ ಮಾಡುತ್ತದೆ. ಈ ಸ್ರಾವದಲ್ಲಿ ಎಲ್‍ತೈರಾಕ್ಸಿನ್, ಎಲ್-ಟ್ರೈಅಯೋಡೊತೈರೊನೀನ್ ಎಂಬ ಎರಡು ರಾಸಾಯನಿಕಗಳಿರುವುವು. ಸಾಮಾನ್ಯವಾಗಿ ಮೊದಲಿನದೇ ಹೆಚ್ಚಾಗಿರುತ್ತದೆ. ಗ್ರಂಥಿಯಲ್ಲಿ ಇವೆರಡು ರಾಸಾಯನಿಕ ಅಣುಗಳಲ್ಲಿ ಸಂಯುಕ್ತವಾಗಿರುವ ಅಯೊಡೀನ್ ಪರಮಾಣುಗಳ ತೂಕ ಗ್ರಂಥಿಯ ತೂಕದ ಅರೆಪಾಲಿಗೂ ಮೀರಿರುತ್ತದೆ. ಆಹಾರ, ತಿಂಡಿಗಳಲ್ಲಿ ವ್ಯಕ್ತಿ ಸೇವಿಸುವ ಅಯೊಡೀನೆಲ್ಲವೂ ರಕ್ತಗತವಾದ ಬಳಿಕ ಅದು ಗುರಾಣಿಕ ಗ್ರಂಥಿಯಲ್ಲಿ ಮಾತ್ರ ಸೇರಿಕೊಳ್ಳುವುದು. ಆಹಾರದಲ್ಲಿ ಅಯೊಡೀನ್ ಪೂರೈಕೆ ಸಾಕಾಗದಿದ್ದಲ್ಲಿ ಗುರಾಣಿಕ ಗ್ರಂಥಿಯ ಸ್ರಾವದ ತಯಾರಿಕೆಯೂ ತಗ್ಗುವುದು. ಸಮುದ್ರದಿಂದ ಬಲು ದೂರವಿರುವ ಹಿಮಾಲಯದ ತಪ್ಪಲಿನಂಥ ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಇಲ್ಲವೇ ಬಳಸುವ ಉಪ್ಪಿನಲ್ಲಿ ಅಥವಾ ಆಹಾರದಲ್ಲಿ ಅಯೊಡೀನ್ ಸಾಕಷ್ಟು ಇಲ್ಲವಾದರೆ ಕೊರಳಿನಲ್ಲಿ ಗಳಗಂಡವಾಗಿ ಈ ಗ್ರಂಥಿ ದಪ್ಪವಾಗಿರುವುದು.ಅಯೊಡೀನನ್ನು ಸಂಗ್ರಹಿಸಿ ಗ್ರಂಥಿ ಹಾರ್ಮೋನನ್ನು ಹೇಗೆ ತಯಾರಿಸುವುದೆಂಬುದನ್ನೂ ಆಮೇಲೆ ಅದು ಗ್ರಂಥಿಯಲ್ಲಿ ಎಲ್ಲಿ ಸೇರುವುದೆಂಬುದನ್ನೂ ವಿಕಿರಣಪಟು ಅಯೊಡೀನ್ ದ್ರವವನ್ನೂ ವ್ಯಕ್ತಿಗೆ ಕುಡಿಸಿ ಕಂಡುಕೊಳ್ಳಬಹುದು. ಲೋಮನಾಳಗಳಿಂದ ಜೀವಕಣಗಳೊಳಕ್ಕೆ ಹೀರಲ್ಪಡುವ ಅಯೊಡೈಡು ಜೀವಕಣಗಳಲ್ಲೇ ಉಳಿದು ಸಾಂದ್ರವಾಗುತ್ತದೆ. ಜೈವಿಕ ಸಂಯುಕ್ತಗಳಲ್ಲಿ ಅಯೊಡೈಡು ಸೇರಿಕೊಂಡು ತೈರಾಕ್ಸಿಲ್, ಟ್ರೈ ಅಯೊಡೊತೈರೊನಿಲ್ ರ್ಯಾಡಿಕಲ್ಲುಗಳಾಗಿ ದೊಡ್ಡ ಪ್ರೋಟೀನು ತೈರೊಗ್ಲಾಬ್ಯುಲಿನ್ನಿನೊಂದಿಗೆ ತಗುಲಿಕೊಳ್ಳುವುವು. ಕಲಾಯ್ಡಿನ ಕಡೆ ಇರುವ ಜೀವಕಣದ ಅಂಚಿನಲ್ಲಿ ಇದೆಲ್ಲ ನಡೆಯುತ್ತದೆ. ಕಲಾಯ್ಡಿನಲ್ಲಿರುವ ತೈರೊಗ್ಲಾಮ್ಯುಲಿನ್ನೊಂದಿಗೆ ಬೆರೆತು ಈ ಹೊಸ ತೈರೊಗ್ಲಾಬ್ಯಲಿನ್ ಅಂತಃಸ್ರಾವದ ಶೇಖರವಾಗಿರುತ್ತದೆ. ಗುರಾಣಿಕದ ಜೀವಕಣಗದ ಉತ್ಪತ್ತಿಯಾಗುವ ಒಂದು ಜೈವಿಕ ಕಿಣ್ವ ಈ ತೈರೊಗ್ಲಾಬ್ಯುಲಿನ್ನನ್ನು ವಿಭಜಿಸಿ ನೈಜಸ್ರಾವವನ್ನು ಬಿಡುಗಡೆ ಮಾಡುವುದು. ಹೀಗೆ ಬಿಡುಗಡೆಯಾದ ನೈಜಸ್ರಾವಗಳಾದ ತೈರಾಕ್ಸಿನ್ ಟ್ರೈ ಅಯೊಡೊತೈರನೀನ್ ಅಣುಗಳು ಸಾಕಷ್ಟು ಸಣ್ಣಗಿರುವುದರಿಂದ ಜೀವ ಕಣದ ಗೋಡೆಯನ್ನು ದಾಟಿ ಕೋಶಿಕೆಯ ಸುತ್ತ ರಕ್ತಗತವಾಗಿ ಗುಂಡಿಗೆಗೆ ಒಯ್ಯಲ್ಪಟ್ಟು ಮುಂದೆ ದೇಹದ ಎಲ್ಲ ಭಾಗಗಳನ್ನೂ ತಲಪುತ್ತದೆ.ರಕ್ತದಲ್ಲಿ ಈ ರಾಸಾಯನಿಕಗಳು ರಕ್ತರಸದ ಪ್ರೋಟೀನುಗಳಿಗೆ (ಮುಖ್ಯವಾಗಿ ಅಲ್ಫಗ್ಲಾಬ್ಯುಲಿನ್‍ಗೆ) ಸಡಿಲವಾಗಿ ಅಂಟಿಕೊಳ್ಳುತ್ತವೆ. ಆದ್ದರಿಂದ ರಕ್ತದಲ್ಲಿನ ಸ್ರಾವದ ಪ್ರಮಾಣ ಅಳೆಯಲು, ರಕ್ತರಸದ ಪ್ರೊಟೀನಿಗೆ ಹತ್ತಿರವಿರುವ ಅಯೊಡೀನ್ (ಪ್ರೋಟಿನ್ - ಬೌಂಡ್ ಅಯೋಡಿನ್: ಪಿ. ಬಿ. ಐ) ಪ್ರಮಾಣದಿಂದ, ರಕ್ತದಲ್ಲಿನ ಗುರಾಣಿಕ ಸ್ರಾವದ ಪ್ರಮಾಣ ಸರಿಯಾಗಿದೆಯೋ ಇಲ್ಲವೋ ಗೊತ್ತಾಗುತ್ತದೆ. ಇಡೀ ಮೈಯಲ್ಲಿ ಎಲ್ಲ ಜೀವಕಣಗಳಲ್ಲೂ ಅಹಾರವಸ್ತುಗಳ ಉತ್ಕರ್ಷಣೆಯ ವೇಗವನ್ನು ಈ ರಾಸಾಯನಿಕಗಳೇ ನಿಯಂತ್ರಿಸುವುದರಿಂದ, ಈ ಪ್ರಮಾಣ ಹೆಚ್ಚು ಕಡಿಮೆಯಾದರೆ ನಿಜಗೆಲಸಗಳು ಏರುಪೇರಾಗುತ್ತವೆ.[]


ನಿರ್ನಾಳ ಗ್ರಂಥಿಯಾದ ಪಿಟ್ಯುಟರಿ

ಬದಲಾಯಿಸಿ

ಗುರಾಣಿಕ ಗ್ರಂಥಿ ತಯಾರಿಸುವ ಅಂತಃಸ್ರಾವದ ಪ್ರಮಾಣವನ್ನು ಇನ್ನೊಂದು ನಿರ್ನಾಳ ಗ್ರಂಥಿಯಾದ ಪಿಟ್ಯುಟರಿ ನಿಯಂತ್ರಿಸುತ್ತದೆ. ಗುರಾಣಿಕ ಗ್ರಂಥಿಯ ಅಂತಃಸ್ರಾವ ಬಳಕೆಯಾಗಿ ರಕ್ತದಲ್ಲಿನ ಮಟ್ಟ ಇಳಿದಾಗ, ಆ ಗ್ರಂಥಿಯನ್ನು ಚೋದಿಸುವ ಒಂದು ಹಾರ್ಮೋನನ್ನು ಅಂತಃಸ್ರಾವವಾಗಿ ಪಿಟ್ಯುಟರಿ ಗ್ರಂಥಿ ಹೆಚ್ಚಾಗಿ ಸ್ರವಿಸುತ್ತದೆ. ಈ ಅಂತಃಸ್ರಾವ ತೈರೊಗ್ಲಾಬ್ಯುಲಿನ್ ವಿಭಜನೆಯನ್ನು ವೇಗಗೋಳಿಸಿ ಕಲಾಯ್ಡಿನಲ್ಲಿ ಕೂಡಿಟ್ಟಿರುವ ಗುರಾಣಿಕ ಅಂತಃಸ್ರಾವವನ್ನು ಬಿಡುಗಡೆ ಮಾಡಿಸುತ್ತದೆ. ಇದರಿಂದ ಕೋಶಿಕೆಗಳಲ್ಲಿರುವ ಕಲಾಯ್ಡಿನ ಪ್ರಮಾಣ ತಗ್ಗುವುದು. ಒಂದೇ ಸಮನೆ ಹೀಗೆ ಚೋದನೆ ಆಗುತ್ತಲೇ ಇದ್ದರೆ ಕೋಶಗಳು ಪೂರ್ತಿ ಬರಿದಾಗಲೂಬಹುದು. ಗುರಾಣಿಕ ಗ್ರಂಥಿಯೂ ಚುರುಕಾಗಿ ಅಂತಃಸ್ರಾವವನ್ನು ತಯಾರಿಸುತ್ತದೆ. ಇವೆರಡು ಕಣಗಳಿಂದ ಗುರಾಣಿಕ ಹಾರ್ಮೋನಿನ ಪ್ರಮಾಣ ಬೇಗನೆ ಸರಿ ಪ್ರಮಾಣಕ್ಕೆ ಬಂದು ಬಿಡುವುದು. ಹೀಗಾದಾಗ ಪಿಟ್ಯುಟರಿ ಗ್ರಂಥಿ ಗುರಾಣಿಕ ಗ್ರಂಥಿಯನ್ನು ಚೋದಿಸುವುದನ್ನು ನಿಲ್ಲಿಸುತ್ತದೆ. ಗುರಾಣಿಕ ಗ್ರಂಥಿಯ ಜೀವ ಕಣಗಳು ಎಂದಿನ ಗಾತ್ರಕ್ಕೆ ಹಿಂತಿರುಗುತ್ತವೆ, ಹೀಗೆ ಪಿಟ್ಯುಟರಿ ಗುರಾಣಿಕ ಗ್ರಂಥಿಗಳು ನಿಜಗೆಲಸದಲ್ಲಿ ಒಂದಕ್ಕೊಂದು ಹೊಂದಿಕೊಂಡು ನಿಯಂತ್ರಿಸುವುವು.[]

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: