ಕು.ಗೋ.
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪುಸ್ತಕ ಸಂಸ್ಕೃತಿಯ ಪರಿವ್ರಾಜಕರೆಂದೇ ಜನಪ್ರಿಯರಾಗಿರುವ ಹೆರ್ಗ ಗೋಪಾಲಭಟ್ (ಕು.ಗೋ.) ಜೂನ್ ೬, ೧೯೩೮ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಣಸೂರಿನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ನಡೆಸಿದರು. ೧೯೬೦ ರಲ್ಲಿ ಜೀವವಿಮಾ ನಿಗಮದಲ್ಲಿ ಉದ್ಯೋಗಕ್ಕೆ ಸೇರಿ ಚಿಕ್ಕಮಗಳೂರು, ಮಡಿಕೇರಿ, ಉಡುಪಿ, ಕುಂದಾಪುರಗಳಲ್ಲಿ ಸೇವೆ ಸಲ್ಲಿಸಿದರು. ೧೯೯೬ರಲ್ಲಿ ಸ್ವಯಂ ನಿವೃತ್ತಿ ಪಡೆದು ಪುಸ್ತಕ ಪ್ರೀತಿಯ ಕನ್ನಡ ಬದುಕಿಗೆ ಪೂರ್ಣಾವಧಿಯನ್ನು ತೊಡಗಿಸಿಕೊಂಡಿದ್ದಾರೆ. ೧೯೬೪ರಲ್ಲಿ ಅಕ್ಕನ ಮದುವೆ ಪ್ರಬಂಧಗಳ ಸಂಕಲನದಿಂದ ಸಾಹಿತ್ಯ ಲೋಕ ಪ್ರವೇಶಿಸಿದ ಕು.ಗೋ. ಶನಿ ಹಿಡಿದವ, ಹತ್ತು ಕಥೆಗಳು ಎತ್ತಣೆಂದೆತ್ತ ಕಥಾ ಸಂಕಲನಗಳನ್ನು ತೇಲ್ನೋಟ, ಲೊಳಲೊಳಾಯಿ, ಪಟ ಪಟ ಪಟಾಕಿ ಇತ್ಯಾದಿ ವಿನೋದ ವ್ಯಂಗ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ೨೦೦೮ರಲ್ಲಿ ಕು.ಗೋ. ಅವರ ಆಯ್ದ ಕತೆಗಳು, ಆಯ್ದ ಲಲಿತ ಪ್ರಬಂಧಗಳು, ಆಯ್ದ ನಗೆ ಬರೆಹಗಳು ಹಾಗೂ ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು.ಗೋ. ಮತ್ತು ಕು.ಗೋ. ಅಭಿನಂದನಾ ಕೃತಿಗಳು ಪ್ರಕಟಗೊಂಡಿವೆ. ೧೯೯೦'ರಿಂದ ಉಡುಪಿ ಸಾಹಿತ್ಯವಲಯದಲ್ಲಿ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡು ಹಿರಿಯ ಹಾಗೂ ಕಿರಿಯ ತಲೆಮಾರಿನ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕು.ಗೋ.ರಿಗೆ ೨೦೦೨ರಲ್ಲಿ ಗೊರೂರು ಪ್ರಶಸ್ತಿ, ೨೦೦೫ರಲ್ಲಿ ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ೨೦೦೮ರಲ್ಲಿ ಕಿನ್ನಿಗೋಳಿಯ ಅನಂತ ಪ್ರಕಾಶ ಪುರಸ್ಕಾರಗಳು ಲಭಿಸಿವೆ. ಪ್ರಬಂಧ, ಹಾಸ್ಯ ಬರಹ ಹಾಗೂ ಕಥೆಗಳನ್ನು ಬರೆದಿರುವ ಕು.ಗೋ. ಆರೋಗ್ಯಕಾರಿ ಲವಲವಿಕೆಯ ಹಾಸ್ಯದೊಂದಿಗೆ ಬದುಕಿನ ವಾಸ್ತವವನ್ನು ಚಿತ್ರಿಸುತ್ತಾರೆ.