ಊರುಬಾಡುಬೇನೆ (ಬಾಟುಲಿಸಂ)

ಊರುಬಾಡು ಕದಿರುಜೀವಿ ಆಹಾರದಲ್ಲೇ ಜೀವಿವಿಷವನ್ನು ಬಿಡುವುದರಿಂದ ಈ ರೋಗ ತಲೆದೋರುತ್ತದೆ. ಕಂಬಿ ಆಕಾರದ ಈ ಏಕಾಣುಜೀವಿಗಳು ಸಾಮಾನ್ಯವಾಗಿ ಮಣ್ಣಿನಲ್ಲೂ ಕೊಳೆಯುತ್ತಿರುವ ಗಿಡಗಂಟೆ ಸೊಪ್ಪು ಸದೆಯಲ್ಲೂ ಇರುತ್ತವೆ. ಪ್ರಯೋಗಾಲಯದಲ್ಲಿ ಆಕ್ಸಿಜನ್ ಇರುವ ಅಗಾರಿನ ಮೇಲೆ ಎಷ್ಟೋ ಏಕಾಣುಜೀವಿಗಳು ಬದುಕಿ ಬೆಳೆದು ಹೆಚ್ಚಿಕೊಂಡರೂ ಇವು ಬೆಳೆಯವು. ಇದಕ್ಕಾಗಿ, ಇವಕ್ಕೆ ನಿರ್ಗಾಳಿಜೀವಿಗಳು (ಅನೀರೊಬ್ಸ್) ಎಂದು ಹೆಸರಿದೆ. ಕಾವಿಗೂ ಜಗ್ಗದ ಬೀಜಕಣಗಳಾಗಿ (ಸ್ಪೋರ್ಸ್) ಇವು ಬದಲಾಗುವುದರಿಂದ ಹೆಚ್ಚು ಹೊತ್ತು ಕುದಿಸಿದರೆ ಸಾಯುತ್ತವೆ. ಈ ರೋಗಾಣುವಿನ ಎ, ಬಿ, ಸಿ, ಡಿ, ಇ, ಎಫ್ ಬಗೆಗಳು ಗೊತ್ತಿವೆ. ಒಂದೊಂದೂ ಒಂದೊಂದು ತೆರನ ಜೀವಿವಿಷವನ್ನು ತಯಾರಿಸುವುದಾದರೂ ರೋಗಿಯಲ್ಲಾಗಲಿ, ಪ್ರಾಣಿಗಳಲ್ಲಾಗಲಿ ಇವೆಲ್ಲ ಒಂದೇ ಬಗೆಯ ಬೇನೆಗೆ ಕಾರಣವಾಗುತ್ತವೆ. ಆದರೆ ಇವುಗಳ ಎದುರಾಗಿ ಚಿಕಿತ್ಸೆಗಾಗಿ ಬಳಸುವ, ಅದರದರ ಜೀವಿವಿಷರೋಧಕಗಳು (ಆ್ಯಂಟಿಟಾಕ್ಸಿನ್) ಮಾತ್ರ ವರ್ತನೆಗಳಲ್ಲಿ ವಿಶಿಷ್ಟವಾಗಿರುತ್ತವೆ. ಅಂದರೆ ಎ ಮಾದರಿ ಜೀವಿವಿಷರೋಧಕ ಎ ಜೀವಿವಿಷವನ್ನು ನಿಷ್ಪರಿಣಾಮಗೊಳಿಸುವುದೇ (ನ್ಯೂಟ್ರಿಲೈಸ್ ) ಹೊರತು ಉಳಿದ ಯಾವುವನ್ನೂ ಮುಟ್ಟದು. ಎ ಮಾದರಿಯ ಜೀವಿವಿಷ ಹುಳುಕಿನ ರೂಪದಲ್ಲಿ ತಯಾರಾಗಿದೆ. ಅದೊಂದು ಪ್ರೋಟೀನು. ಈ ಜೀವಿವಿಷಗಳು ಬಿಸಿ ತಾಕಿದರೆ ಹಾಳಾಗುತ್ತವೆ. ಕುದಿವ ನೀರಲ್ಲಿ ನಿಮಿಷದಲ್ಲಿ ಕೆಡುತ್ತವೆ. ಎ, ಬಿ, ಇ, ಮಾದರಿಗಳ ಊರುಬಾಡುಬೇನೆ ಮಾನವ ರೋಗಗಳ ಆಹಾರ ವಿಷವೇರಿಕೆಗಳಲ್ಲಿ ಕಂಡುಬಂದಿದೆ. ಇ ಮಾದರಿಯ ರೋಗಾಣುಮಾತ್ರ 3.33º ಸೆಂ.ಗ್ರೇ.ನಷ್ಟು ತಣ್ಣಗಾಗಿಸಿದ್ದರೂ ಆರು ವಾರಗಳಲ್ಲಿ ಬೆಳೆದು ಜೀವಿವಿಷವನ್ನು ಬಿಡುತ್ತದೆ. ಕಾಡು ನೀರುಕೋಳಿಯಲ್ಲಿ ಸಹಜವಾಗಿ ತಲೆದೋರುವ ಬೇನೆಗೂ ತುಪ್ಪಳಿನ ವಾಟಿಕೆಗಳಲ್ಲಿ (ಯಾಡ್ರ್ಸ್) ಕಂದುಪ್ಪಳಿಗಳ (ಮಿಂಕ್ಸ್) ಬೇನೆಗೂ ಸಿ ಮಾದರಿ ಕಾರಣ. ದ. ಆಫ್ರಿಕದಲ್ಲಿ ಕುದುರೆಗಳ, ಹೇಸರಕತ್ತೆಗಳ ವಿಷವೇರಿಕೆಗೆ ಡಿ ಮಾದರಿ ಕಾರಣ. ಮುಖ್ಯವಾಗಿ ಡಬ್ಬಿ ತುಂಬಿದ ಮೀನಿನ ತಯಾರಿಕೆಗಳಿಂದ ಮಾನವರಲ್ಲಿ ಕಾಣಿಸಿಕೊಳ್ಳುವುದು ಡಿ ಮಾದರಿಯ ಊರುಬಾಡುಬೇನೆ. ಮನೆಯಲ್ಲಿ ತಯಾರಾದ ಯಕೃತ್ತಿನ ಸರಿಯಿಂದ (ಲಿವರ್ ಪೇಸ್ಟ್) ಬೇರೆ ತೆಗೆದ ಡಿ ಮಾದರಿಯಿಂದ ಡೆನ್ಮಾರ್ಕಿನ (1958) ಊರುಬಾಡು ಬೇನೆ ಕಂಡಿತು. ಇಂಗ್ಲೆಂಡಿನಲ್ಲಿ ಲಾಕ್ ಮೇರೀ ಅನಾಹುತದಲ್ಲಿ (1922), ಮೀನು ಹಿಡಿಯಲು ತೆರಳಿದ್ದ ಎಂಟು ಮಂದಿಯೂ ಬಾತಿನ ಸರಿ (ಡಕ್ಪೇಸ್ಟ್) ಹಚ್ಚಿ ರೊಟ್ಟಿ ಮುರುಕನ್ನು ತಿಂದ ಕೂಡಲೇ ಸತ್ತರು. ಸಾಕಷ್ಟು ಚೆನ್ನಾಗಿ ತಯಾರಿಸದ, ಡಬ್ಬಿ ತುಂಬಿದ ಆಹಾರಗಳೇ ಅಮೆರಿಕದಲ್ಲಿ ಬಹುವಾಗಿ ವಿಷವೇರಿಕೆಗಳಿಗೆ ಕಾರಣ. ಡಬ್ಬಿ ತುಂಬುವ ಆಹಾರ ತಯಾರು ಮಾಡುವವರು ಊರುಬಾಡುಬೇನೆಯನ್ನು ಮೊದಲೇ ಕಂಡುಕೊಂಡು, ಇದನ್ನು ತಪ್ಪಿಸಲು ಸಾಕಷ್ಟು ಎಚ್ಚರಿಕೆಯಿಂದಿದ್ದಾರೆ. ಇಷ್ಟೆಲ್ಲ ಹತೋಟಿಗಳಿದ್ದರೂ ಇದರಿಂದ ಅಲ್ಲಲ್ಲಿ ಜನ ಸತ್ತಿದ್ದಾರೆ. ಇದಕ್ಕೆ ಕಾರಣ, ಇದರ ತಯಾರಿಕೆಯಲ್ಲಿ ಊರುಬಾಡುಬೇನೆಯ ಕದಿರುಜೀವಿಯ ಬೀಜಕಣಗಳನ್ನು ಸಾಯಿಸುವಷ್ಟು ಹೊತ್ತು ಕಾವು ಕೊಡದೆ ತಣ್ಣಗಿರುವಾಗ ಡಬ್ಬಿ ತುಂಬುವ ವಿಧಾನ. ಅದೇ ಒತ್ತಡ ಅಡಿಗೆ ಪಾತ್ರೆಯಲ್ಲಿ (ಪ್ರೆಷರ್ ಕುಕ್ಕರ್) ಪಾತ್ರೆ ತಯಾರಕರ ಸೂಚನೆಗಳಂತೆ, ತಯಾರಿಸಿದರೆ ಬೀಜಕಣಗಳು ಚೆನ್ನಾಗಿ ಸಾಯುತ್ತವೆ. ಸಾಕಷ್ಟು ಆಮ್ಲಗಳಿರದ ಆಹಾರಗಳನ್ನು ಜೋಪಾನಿಸಲು ಈ ವಿಧಾನವೇ ಒಳ್ಳೆಯದು. ಇಲ್ಲಿಯ ತನಕ ಅಮೆರಿಕದಲ್ಲಿ ಕಂಡುಬಂದ ಊರುಬಾಡುಬೇನೆಗಳಲ್ಲಿ ನಾಲ್ಕರಲ್ಲಿ ಒಂದು ಮನೆಯಲ್ಲೇ ಡಬ್ಬಿಯಲ್ಲಿ ತುಂಬಿಟ್ಟ, ಮುಖ್ಯವಾಗಿ ಕಾಳುಗಳ, ಆಹಾರದಿಂದ ಆಗಿವೆ. ಉಳಿದವು ಮುಸುಕಿನ ಜೋಳ, ಬಸಳೆಸೊಪ್ಪು, ಬೀಟ್ಗೆಡ್ಡೆ, ಮೆಣಸಿನಕಾಯಿ, ಮೆಣಸು ಇವುಗಳಿಂದ, ಇದೇ ತೆರನಾಗಿ, ಮನೆಯಲ್ಲಿ ತಯಾರಿಸಿ ಡಬ್ಬಿಯಲ್ಲಿಟ್ಟ ಮಾಂಸ, ಮೀನು, ಹಾಲಿನ ಪದಾರ್ಥಗಳೂ ಹೀಗೆ ಕೆಟ್ಟಿರುತ್ತಿದ್ದವು. ಆದರೆ ಕಾರ್ಖಾನೆಯಲ್ಲಿ ತಯಾರಾದವು ಹೀಗಾದುದು ಬಲು ಅಪರೂಪ. ರಷ್ಯದಲ್ಲಿ ಉಪ್ಪಿನಲ್ಲಿ ನೆನೆಹಾಕಿ, ಒಣಗಿಸಿದ, ಹೊಗೆ ಹಿಡಿಸಿಟ್ಟ ಮೀನುಗಳನ್ನು ತಿಂದಿದ್ದರಿಂದ ಹೀಗಾಗಿದೆ. ಊರುಬಾಡುಬೇನೆ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡು ಬೇಗನೆ ರೋಗಿಯನ್ನು ಸಾಯಿಸುತ್ತದೆ. ಈ ಜೀವಿವಿಷದಷ್ಟು ವಿಷಕರವಾದ ಪದಾರ್ಥ ಪ್ರಪಂಚದಲ್ಲಿ ಇನ್ನಿಲ್ಲ. ಒಂದು ಗ್ರಾಂನಷ್ಟು ಜೀವಿವಿಷ ಹಲವಾರು ದಶಲಕ್ಷ ಮಂದಿಯನ್ನು ನೆಲಸಮ ಮಾಡಬಲ್ಲುದು. ಸೇವಿಸಿದಮೇಲೆ ಕರುಳಿನ ಮೂಲಕ ರಕ್ತಗತವಾಗುತ್ತದೆ. ನರಮಂಡಲವನ್ನೇ ಹಾಳುಮಾಡುತ್ತದೆ. ಇದರ ಜೀವಿವಿಷ ಸೇವಿಸಿದ 12-36 ತಾಸುಗಳಲ್ಲೇ ಬೇನೆ ಕಾಣಿಸಿಕೊಳ್ಳುತ್ತದೆ ; 2-3 ತಾಸುಗಳಲ್ಲೇ ಕಾಣಿಸಿಕೊಂಡಿದ್ದೂ ಉಂಟು. ಒಂದು ಬಾರಿ, ಒಬ್ಬ ರೋಗಿ ಆಸ್ಪತ್ರೆ ಸೇರುವ ಮೊದಲು 8 ದಿನಗಳು ಚೆನ್ನಾಗಿ ಓಡಾಡುತ್ತಿದ್ದು, ಹತ್ತನೇ ದಿನ ಸತ್ತ. ಕಣ್ಣಿಗೆ ಎಲ್ಲವೂ ಎರಡಾಗಿ ಕಾಣುವುದು, ನುಂಗುವುದು ಕಷ್ಟ, ಮಾತಾಡಲು ತೊಡಕು, ಏದುಸಿರು ಇವೆಲ್ಲ ಮಿದುಳಿಗೂ ಬೇನೆ ತಾಗಿದ ಲಕ್ಷಣಗಳು. ಸಾಮಾನ್ಯವಾಗಿ ಉಸಿರು ನಿಂತುಹೋಗಿ ರೋಗಿ ಸಾಯುವನು. ಸಾಯುವ ತನಕ ಎಚ್ಚರ ತಪ್ಪದು. ಇದರೊಂದಿಗೆ, ವಾಂತಿ, ಓಕರಿಕೆ ಆಗಿ ಹೊಟ್ಟೆ ಉಬ್ಬರಿಸಿಕೊಳ್ಳುತ್ತದೆ. ಹೊಟ್ಟೆ ನೋವಿರದು. ಆಹಾರ ಎಷ್ಟರಮಟ್ಟಿಗೆ ಕೆಟ್ಟಿದೆ, ಕೆಟ್ಟ ಆಹಾರ ಎಷ್ಟು ಒಳಸೇರಿತು ಎನ್ನುವುದಕ್ಕೆ ತಕ್ಕಂತೆ ಇವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಹಾರ ಕೆಟ್ಟು ವಿಷಕರವಾಗಿದ್ದರೂ 10 ನಿಮಿಷ ಚೆನ್ನಾಗಿ ಕುದಿಸಿದರೆ, ಬೇಯಿಸಿದರೆ ವಿಷ ಹಾಳಾಗುತ್ತದೆ. ಹಸಿ ತರಕಾರಿ ಮತ್ತು ಆಗತಾನೆ ಕೊಯ್ದಿಟ್ಟ ಹಣ್ಣುಗಳಲ್ಲಿ ಮಣ್ಣು ದೂಳುಗಳಿಂದ ಬಂದ ಊರುಬಾಡುಬೇನೆಯ ಬೀಜಕಣಗಳಿದ್ದರೂ ಅವನ್ನು ತಿಂದವರಿಗೆ ಏನೇನೂ ಕೆಡುಕಾಗಿಲ್ಲವಾದ್ದರಿಂದ, ಮಣ್ಣಿನಲ್ಲಿರುವ ಬೀಜಕಣಗಳು ವಿಷಕರವಲ್ಲ ಎನ್ನಬಹುದು. ಆದರೆ ಬೇಯಿಸಿಟ್ಟ, ಕಾಯಿಸಿಟ್ಟ ಆಹಾರಗಳಿಗೆ ಈ ಬೀಜಕಣಗಳು ಸೇರಿದರೆ ಮತ್ತೂ ಅಪಾಯಕಾರಿ. ಊರುಬಾಡುಬೇನೆಗೆ ಸರಿಯಾದ ಗೊತ್ತಾದ ಚಿಕಿತ್ಸೆಯಿಲ್ಲ. ಬೇನೆಯ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಸಾಕಷ್ಟು ಕೈಮೀರಿರುತ್ತದೆ. ಆದ್ದರಿಂದಲೇ ಜೀವಿವಿಷರೋಧಕವನ್ನು ಆಮೇಲೆ ಕೊಟ್ಟರೂ ಫಲವಿಲ್ಲ. ಆದರೂ ಇನ್ನಷ್ಟು ಕೆಡುಕಾಗುವುದನ್ನು ತಪ್ಪಿಸಲು ಎ, ಬಿ ಮಾದರಿಗಳ ಜೀವಿವಿಷರೋಧಕಗಳನ್ನಾದರೂ ಎಲ್ಲ ರೋಗಿಗಳಿಗೆ ಚುಚ್ಚುವುದು ಒಳ್ಳೆಯದು. ಅದರ ಒಂದು ತಂಡದಲ್ಲಿ ಬೇನೆ ಕಂಡ ಮೇಲೆ, ಬೇನೆಯ ಲಕ್ಷಣಗಳು ಹೊರಗಾಣದಿದ್ದರೂ ಜೀವಿವಿಷವಿರುವ ಆಹಾರ ಸೇವಿಸಿದವರೆಲ್ಲರಿಗೂ ಜೀವಿವಿಷರೋಧಕವನ್ನು ಚುಚ್ಚಲೇಬೇಕು. ಒಂದೊಂದು ಬಾರಿಯೂ ಸಾಯುವವರ ಅಂಕಿ ಬೇರೆಯಾಗಿರುವುದಾದರೂ 65% ರೋಗಿಗಳು ಬಲಿಯಾಗುವರು. ಊರುಬಾಡುಬೇನೆಗೆ ಬೀಜಕಣಗಳನ್ನು ಸಾಯಿಸಿ ರೋಗವನ್ನು ತಡೆಗಟ್ಟಲು ಡಬ್ಬಿತುಂಬಿ ಜೋಪಾನಿಸುವ ಆಹಾರಗಳನ್ನು ಸುಧಾರಿತಕ್ರಮದಲ್ಲಿ ತಯಾರಿಸುವುದೇ ಸರಿಯಾದ ದಾರಿ. ಈ ರೋಗಾಣು ಸೇರಿ ಬೆಳೆದಿರುವ ಆಹಾರದ ವಾಸನೆ, ರುಚಿ ಎರಡೂ ಕೆಟ್ಟಿರುವುದಲ್ಲದೆ, ಡಬ್ಬಿ ಕೂಡ ಕೆಲವೇಳೆ ಮೇಲೂ ಕೆಳಗೂ ಉಬ್ಬಿರುತ್ತದೆ. ಇದಕ್ಕಾಗೇ ರುಚಿ, ವಾಸನೆ ಕೆಟ್ಟ, ಉಬ್ಬಿದ ಡಬ್ಬಿಗಳ ಆಹಾರವನ್ನು ಎಂದಿಗೂ ತಿನ್ನದೆ ಬಿಸಾಡಬೇಕು.