ಆಫ್ರಿಕದ ಪ್ರಾಕ್ತನ ಚರಿತ್ರೆ

ಆಫ್ರಿಕ ಖಂಡ ಪ್ರಾಕೃತಿಕ ಅಥವಾ ಭೌಗೋಳಿಕ ತಡೆಗಳಿಲ್ಲದೆ ಒಂದು ವಿಸ್ತಾರ ಪ್ರದೇಶ. ಪ್ರಾದೇಶಿಕ ವೈವಿಧ್ಯಕ್ಕೆ ಅಲ್ಲಿನ ಹವೆ ಕಾರಣ. ಉತ್ತರ ಆಫ್ರಿಕದ ಹಿತಕರವಾದ ಹವಾಗುಣ ಕ್ರಮೇಣ ಭೂಮಧ್ಯರೇಖೆಯ ಪ್ರದೇಶದಲ್ಲಿ ರೂಕ್ಷವಾಗುತ್ತದೆ. ದಕ್ಷಿಣಕ್ಕೆ ಹೋದಂತೆಲ್ಲ ಹೆಚ್ಚು ಹೆಚ್ಚು ಸಹನೀಯವಾಗುತ್ತದೆ. ದಕ್ಷಿಣ ಮತ್ತು ಆಗ್ನೇಯ ಆಫ್ರಿಕದಲ್ಲಿ ಹೆಚ್ಚು ಮಳೆ ಆಗುತ್ತದೆ. ನೈಲ್ ನದಿ ಉತ್ತರದ ಮರಳುಗಾಡಿನ ಮಧ್ಯೆ ಒಂದು ಫಲವತ್ತಾದ ಪ್ರದೇಶವನ್ನು ನಿರ್ಮಿಸಿದೆ. ಬಹುಶಃ ಇಲ್ಲಿನ ಸ್ಥಿತಿ ಸುಮಾರು ಒಂದು ದಶಲಕ್ಷ ವರ್ಷಗಳಿಂದಲೂ ಬದಲಾಯಿಸಿದಂತೆ ಕಾಣುವುದಿಲ್ಲ. ಈ ಹವಾಗುಣದ ಹಿನ್ನೆಲೆ ಅಲ್ಲಿನ ಪುರಾತತ್ವ ಮತ್ತು ಆದಿಮಾನವನ ಉಗಮ ಮತ್ತು ವಿಕಾಸಗಳನ್ನರಿಯಲು ಅತ್ಯಾವಶ್ಯಕ. ಪೂರ್ವ ಮತ್ತು ಮಧ್ಯ ಆಫ್ರಿಕ ಆದಿಮಾನವನ ಉಗಮ ಮತ್ತು ವಿಕಾಸ ಸ್ಥಾನವೆಂದು ಪರಿಗಣಿಸಲ್ಪಟ್ಟಿದೆ. ಮಾನವನ ಉಗಮವನ್ನು ಅವನಿಂದ ತಯಾರಿಸಲ್ಪಟ್ಟ ಸಲಕರಣೆಗಳ ಪರಿಶೋಧನೆಯಿಂದ ನಿರ್ಧರಿಸುತ್ತಾರೆ. ಏಕೆಂದರೆ ಅವು ಅವನ ದೈಹಿಕ ಮತ್ತು ಮಾನಸಿಕ ವಿಕಾಸದ ಹೆಗ್ಗುರುತುಗಳು.

ಆಯುಧಗಳ ಉತ್ಪಾದನಕಲೆ ಬದಲಾಯಿಸಿ

ಅತ್ಯಂತ ಪುರಾತನವಾದ ಮಾನವ ನಿರ್ಮಿತ ಆಯುಧಗಳ ಉತ್ಪಾದನಕಲೆ ಆಫ್ರಿಕದಲ್ಲಿ ಜನಿಸಿ, ಬೆಳೆದು ಅಲ್ಲಿಂದ ಯೂರೋಪು ಮತ್ತು ಏಷ್ಯ ಖಂಡಗಳಿಗೆ ಹರಡಿತೆಂಬ ವಾದ ಸರಿಯೆಂದು ತಿಳಿದುಬರುತ್ತದೆ. ಈ ಎಲ್ಲ ಪ್ರದೇಶಗಳಲ್ಲೂ ಆಯುಧಗಳು ಏಕರೀತಿಯಾಗಿದ್ದು ಒಂದೇ ಮೂಲಕ್ಕೆ ಸೇರಿದ್ದುವೆಂಬುದನ್ನು ಸ್ಥಿರೀಕರಿಸುತ್ತವೆ. ಕ್ರಮೇಣ ಹವಾಗುಣ ಹೆಚ್ಚು ಹೆಚ್ಚು ಬೆಂಗಾಡು ರೀತಿಯದಾಗುತ್ತ ಬಂದುದರಿಂದ ಹೊಸ ಮತ್ತು ಅಭಿವೃದ್ಧ್ಯಾತ್ಮಕ ಶೋಧನೆಗಳು ಇತರ ಪ್ರದೇಶಗಳಲ್ಲಿ ನಡೆದು ಆಫ್ರಿಕ ಮುಖ್ಯ ಮಾರ್ಗದಿಂದ ಬೇರೆಯಾಗಿ ಉಳಿದರೂ ತನ್ನದೇ ಆದ ಹಲವಾರು ಹೊಸ ಭಾವನೆಗಳನ್ನೂ ವೈಶಿಷ್ಟ್ಯಗಳನ್ನೂ ಬೆಳೆಸಿಕೊಂಡಿತು. ಈ ರೀತಿಯ ಪ್ರತ್ಯೇಕತೆ ಸುಮಾರು ಕ್ರಿಸ್ತಶಕಾರಂಭ ಕಾಲದವರೆಗೂ ಮುಂದುವರಿಯಿತು. ಅನಂತರ ಹೊರಗಿನ ಪ್ರಭಾವಗಳು ಸ್ವಲ್ಪ ಸ್ವಲ್ಪವಾಗಿ ಬರಲಾರಂಭಿಸಿದ ಮೇಲೆ ಅದು ಬದಲಾವಣೆಯ ಮತ್ತು ಆಧುನಿಕತೆಯ ಜಾಡು ಹಿಡಿಯಿತೆಂದು ಹೇಳಬಹುದು. ಉತ್ತರ ಆಫ್ರಿಕ, ಅದರಲ್ಲೂ ಈಜಿಪ್ಟ್ ದೇಶ ಮೆಡಿಟರೇನಿಯನ್ ಮತ್ತು ಪಶ್ಚಿಮ ಏಷ್ಯಗಳ ಸಾಮೀಪ್ಯದಿಂದ ಅಲ್ಲಿಯ ಪುರಾತನ ಸಂಸ್ಕøತಿಗಳ ನೆಲೆವೀಡಾಯಿತು. ಆಫ್ರಿಕದ ಇತರ ಭಾಗಗಳಲ್ಲೂ ನಿಧಾನವಾಗಿಯಾದರೂ ಅನೇಕ ಸ್ಥಳೀಯ ವೈಶಿಷ್ಟ್ಯಗಳು ಬೆಳೆದುವು.[೧]

ಏಷ್ಯದಲ್ಲಿ ಮಾನವನ ಉಗಮ ಬದಲಾಯಿಸಿ

ಇತ್ತೀಚಿನ ಸಂಶೋಧನೆಗಳಿಂದ ಈವರೆಗಿನ ನಂಬಿಕೆಯಂತೆ ಏಷ್ಯದಲ್ಲಿ ಮಾನವನ ಉಗಮವಾಗಿರಲಾರದೆಂದೂ ಆ ಪ್ರಶಸ್ತಿ ಆಫ್ರಿಕಕ್ಕೆ ಸಲ್ಲತಕ್ಕದೆಂದೂ ಕಂಡುಬರುತ್ತದೆ. ಈ ವಾದವನ್ನು ಪುಷ್ಟೀಕರಿಸಲು (ಆಸ್ಟ್ರಲೋಪಿಥಿಕಸ್) ಎಂಬ ನೆಟ್ಟಗೆ ನಿಲ್ಲಬಲ್ಲ ಆದಿಮಾನವನ ಮತ್ತು ಅವನಿಗಿಂತಲೂ ಹಿಂದಿನದಾದ ಪ್ರೋಕಾನ್ಸಲ್ ಆಫ್ರಿಕಾನಸ್ ಬಗೆಯ ಚತುಷ್ಪಾದಿ ಕಿರು ಮಂಗಗಳ ಅವಶೇಷಗಳೂ ಅಲ್ಲಿ ದೊರಕಿವೆ. ಮುಂದಿನ ಹಂತವಾದ ಅಟ್ಲಾಂತ್ರೋಪಸ್ ಮಾರಿಟಾನಿಕಸ್ ಜಾತಿಯ ಮಾನವ ಏಷ್ಯದ ಜಾವ ಮತ್ತು ಪೀಕಿಂಗ್ ಬಳಿ ದೊರಕಿ ಮಂಗ_ಮಾನವ (ಪಿತಿಕ್ಯಾಂತ್ರೋಪಸ್ ಎರೆಕ್ಟಸ್) ಜಾತಿಗೆ ಸೇರಿದವ. ಮುಂದಿನ ಪೀಳಿಗೆಯ ಜನರನ್ನು (ಪ್ರೋಟೊ-ಅಸ್ಟ್ರಲಾಯಿಡ್) ಮತ್ತು ಹೋಮೋ-ಸೇಪಿಯನ್ (ಆಧುನಿಕ ಮಾನವನ ವರ್ಗ) ಗುಂಪುಗಳಿಗೆ ಸೇರಿಸಬಹುದು. ಆಫ್ರಿಕದಲ್ಲಿ ದೊರಕಿದ ಮಾನವಾವಶೇಷಗಳು ಬಹುವಾಗಿ ಪ್ರೋಟೊ-ಆಸ್ಟ್ರಲಾಯಿಡ್ ಗುಂಪಿಗೆ ಸೇರಿದುದಾದರೂ ರೊಡೀಷಿಯ ಮಾನವನ ಅವಶೇಷಗಳು ಹೋಮೋ-ಸೇಪಿಯನ್ ಗುಂಪಿಗೆ ಸೇರುತ್ತವೆ. ಆಫ್ರಿಕದಲ್ಲಿ ಇವಲ್ಲದೆ ಕನಮ್, ಕಂಜೆರ, ಫ್ಲಾರಿಸ್‍ಬದ್‍ಗಳೋ ಮಾನವನ ಅವಶೇಷಗಳು ಪೂರ್ವ ಶಿಲಾಯುಗಕ್ಕೂ ಬಾಸ್ಕಾಪ್ ಮತ್ತು ಸಿಂಗ ತಲೆಬುರುಡೆಗಳು ಮಧ್ಯ ಮತ್ತು ಅಂತ್ಯ ಶಿಲಾಯುಗಕ್ಕೂ ಸೇರುತ್ತವೆ. ಆದಿಯಲ್ಲಿ ಪ್ರಬಲವಾಗಿದ್ದ ಪ್ರೋಟೊ-ಆಸ್ಟ್ರಲಾಯಿಡ್ ಗುಂಪಿನಿಂದ ಕ್ರಮೇಣ ವೈಶಿಷ್ಟ್ಯಪೂರ್ಣ ಬಾಸ್ಕಾಪ್ ಮತ್ತು ಬುಷ್ಮನಾಯಿಡ್ ಗುಂಪುಗಳ ವಿಕಾಸವಾಯಿತು.[೨]

ಉಂಡೆಕಲ್ಲಿನಾಯುಧಗಳ ಕಾಲ ಬದಲಾಯಿಸಿ

(ಪೆಬ್ಬಲ್ ಟೂಲ್ಸ್ ಏಜ್). ಆಫ್ರಿಕದ ಶಿಲಾಯುಗ ಸಂಸ್ಕøತಿಯ ಪರಿಶೀಲನೆ ಪೂರ್ವಮಧ್ಯ ಪ್ರದೇಶಗಳಲ್ಲಿ ಆರಂಭವಾಗುತ್ತದೆ. ಅತಿ ಪುರಾತನವಾದ ನದಿ-ಕಣಿವೆಗಳಲ್ಲಿ ದೊರಕುವ ಗುಂಡಾದ ಬೆಣಚು ಕಲ್ಲುಗಳನ್ನು ಒಮ್ಮುಖ ಅಥವಾ ದ್ವಿಮುಖವಾಗಿ ಸೀಳಿ ಚೂಪಾದ ಮೊನೆಯುಳ್ಳ ಆಯುಧಗಳನ್ನು ಮಾಡುತ್ತಿದ್ದರು. ಅವುಗಳನ್ನು ಕ¥sóÀೂವನ್ (ಕ¥sóÀೂನದಿ ಕಣಿವೆಯಲ್ಲಿ ಮೊದಲು ಕಂಡುಬಂದಿದ್ದು) ಮತ್ತು ಓಲ್ಡೋವನ್ (ಓಲ್ಡು ಕಮರಿಯಲ್ಲಿ ಮೊದಲು ಕಂಡುಬಂದದ್ದು) ಎಂದು ವಿಭಾಗಗಳಾಗಿ ಮಾಡಿದ್ದಾರೆ. ಕ¥sóÀೂವನ್ ಆಯುಧಗಳು ಬಹುಶಃ ಮಾನವನಿರ್ಮಿತವಲ್ಲ. ಪ್ರಕೃತಿಯ ಆಕಸ್ಮಿಕಗಳೆಂದು ಹಲವು ವಿದ್ವಾಂಸರು ನಿರಾಕರಿಸುತ್ತಾರೆ. ಆದರೆ ಓಲ್ಡೋವನ್ ಉಪಕರಣಗಳು ಮಾನವನಿರ್ಮಿತವೆಂದು ಖಚಿತವಾಗಿದೆ. ಈ ಆಯುಧೋಪಕರಣಗಳು ತಾಂಗನೀಕ ಪ್ರದೇಶದ ಓಲ್ಡುವೆ ಕಮರಿಯಲ್ಲಿರುವ ಬಹು ಪುರಾತನ ಭೂಪದರಗಳಲ್ಲೂ ಅಷ್ಟೇ ಪುರಾತನವಾದ ಪ್ರದೇಶಗಳಲ್ಲೂ ಕಂಡುಬಂದಿದೆ. ಪೂರ್ವಶಿಲಾಯುಗ ಸಂಶೋದನೆಗೆ ಓಲ್ಡುವೆ ಕಮರಿಯ ಶೋಧನೆ ಬಹಳ ನೆರವಾಗಿದೆ. ಇಲ್ಲಿನ ಕ್ರಮಾಗತ ಪದರಗಳಲ್ಲಿ ಗುಂಡು ಕಲ್ಲಿನಿಂದ ಮಾಡಿದ ಆಯುಧಗಳು. ಅನಂತರದ ಕೈಕೊಡಲಿಗಳ ಹಂತ ಹಂತವಾದ ಬೆಳೆವಣಿಗೆಯ ಆಧಾರಗಳು ದೊರಕುವುದು. ಮಾತ್ರವಲ್ಲದೆ ಸಮಕಾಲೀನ ಮಾನವ ಮತ್ತು ಪ್ರಾಣಿಗಳ ಅವಶೇಷಗಳೂ ಕಂಡುಬಂದು ಮಾನವನ ಕ್ರಮಬದ್ಧ ಬೆಳೆವಣಿಗೆಗೆ ಬೇಕಾದ ಖಚಿತ ಆಧಾರಗಳು ದೊರಕುತ್ತವೆ. ಉಗಾಂಡ, ಕೆನ್ಯಾ, ಆಲ್ಜೀರಿಯ, ರೊಡೀಷಿಯ, ಅಂಗೋಲ ಮತ್ತು ಟ್ರಾನ್ಸ್‍ವಾಲ್ ಪ್ರಾಂತ್ಯಗಳಲ್ಲೂ ಈ ಕಾಲದ ಆಯುಧಗಳೂ ಅವಶೇಷಗಳೂ ದೊರಕಿವೆ. ಈ ಎಲ್ಲ ಪ್ರದೇಶಗಳಲ್ಲೂ ದೊರಕುವ ಈ ಗುಂಡುಕಲ್ಲಿನ ಆಯುಧಗಳ ನಿರ್ಮಾಪಕರೇ ವಿಶ್ವದ ಅತ್ಯಂತ ಹಳೆಯ ಮಾನವ ಕೈಗಾರಿಕೆಯನ್ನು ಯೂರೋಪು ಮತ್ತು ಏಷ್ಯ ಖಂಡಗಳಿಗೆ ಒಯ್ದಿರಬೇಕು. ಮುಂದಿನ ಹಂತದ ಪ್ರಭಾವ ಯೂರೋಪು ಹಾಗೂ ಪಶ್ಚಿಮ ಮತ್ತು ಮಧ್ಯ ಏಷ್ಯಾ ಖಂಡಗಳಿಗೆ (ದಕ್ಷಿಣಭಾರತದವರೆಗೂ) ಒಯ್ಯಲ್ಪಟ್ಟರೂ ಪೂರ್ವ ಏಷ್ಯಕ್ಕೆ ತಲುಪದೇ ಅಲ್ಲಿನ ಮಾನವರು ಹಳೆಯ ಸಂಸ್ಕøತಿಯಲ್ಲೇ ಹಲವು ಲಕ್ಷ ವರ್ಷಗಳು ಜೀವಿಸುತ್ತಿದ್ದರೆಂದು ತಿಳಿದುಬಂದಿದೆ.

ಹಳೆಯ ಶಿಲಾಯುಗ ಬದಲಾಯಿಸಿ

ಈ ಹಂತದಲ್ಲಿ ಅಬೆವಿಲಿಯನ್ (ಫ್ರಾನ್ಸಿನ ಬಳಿಯ ಅಬೆವಿಲ್ಲೆಯಲ್ಲಿ ಮೊದಲು ಗುರುತಿಸಿದ್ದು) ಮತ್ತು ಅವುಲಿಯನ್ ಹಂತದ ಕೈಕೊಡಲಿ ಮತ್ತಿತರ ಆಯುಧಗಳ ಬೆಳೆವಣಿಗೆ ಓಲ್ಡುವೆ ಕಮರಿ ಮತ್ತು ಇತರ ಪ್ರದೇಶಗಳಲ್ಲೂ ಕಂಡುಬರುತ್ತವೆ. ಉಪಯೋಗದ ದೃಷ್ಟಿಯಿಂದ ಆಯುಧಗಳ ಆಕೃತಿ ಉತ್ತಮಗೊಂಡಿವೆ. ಯೂರೋಪಿನ ಲೆವಾಲ್ಡಾ ಎಂಬ ಹೆಸರಿನ ಕಲ್ಲುಚೆಕ್ಕೆಗಳ ಆಯುಧಗಳನ್ನು ತಯಾರಿಸುವ ವಿಧಾನ ಆ ಕಾಲದಲ್ಲೇ ಈ ಸಂಸ್ಕøತಿಯ ಅಂಗವಾಗಿ ಬೆಳೆದು ಬಂದಿತ್ತು. ಈ ಸಂಸ್ಕøತಿಯ ಮುಖ್ಯಕೇಂದ್ರಗಳು ಓಲ್ಡುವೆ ಕಮರಿ, ವಾಲ್‍ನದೀ ಕಣಿವೆ, ರೊಡೀಷಿಯ, ಕಾಂಗೊ, ಕೆನ್ಯ, ಉಗಾಂಡ, ಮೊರಾಕೊ ಟ್ಯುನೀಷಿಯ ಮತ್ತು ನೈಲ್‍ನದಿ ಕಣಿವೆ-ಮುಂತಾದುವು. ಕಲ್ಲಿನ ಆಯುಧಗಳೇ ಅಲ್ಲದೆ ಮರದ ಆಯುಧಗಳು, ಸಸ್ಯಗಳ ಅವಶೇಷಗಳು ಮಧ್ಯ ಪಶ್ಚಿಮ ಆಫ್ರಿಕಗಳಲ್ಲಿ ದೊರಕಿರುವುದರಿಂದ ಆಗಿನ ಮತ್ತು ಮಾನವ ನಿರ್ಮಿತವಾದ ಅತ್ಯಂತ ಪುರಾತನ ವಸತಿಗಳ (ಕ್ರಿ.ಪೂ. 52,000) ವಿಷಯವಾಗಿ ತಿಳಿಯಲು ಸಾಧ್ಯವಾಗಿದೆ.

ಮಧ್ಯಶಿಲಾಯುಗ ಬದಲಾಯಿಸಿ

ಹಳೆಯ ಶಿಲಾಯುಗದ ಅಂತ್ಯಭಾಗದಲ್ಲಿ ಆಯುಧ ತಯಾರಿಕೆಯಲ್ಲಿ ಕಂಡುಬಂದ ಹೊಸ ವಿಧಾನಗಳಿಂದ, ಪರಿಷ್ಕøತವಾಗಿ ಮಾಡಲ್ಪಟ್ಟ ಆಯುಧಗಳನ್ನುಳ್ಳ ಮಧ್ಯಶಿಲಾಯುಗ ಪ್ರಾರಂಭವಾಗುತ್ತದೆ. ದಕ್ಷಿಣದಲ್ಲಿ ಫೌರೇಸ್ಮಿತ್ ಮತ್ತು ಸ್ಯಾಂಗೋವನ್, ಪಶ್ಚಿಮ ಮತ್ತು ಮಧ್ಯಪ್ರದೇಶಗಳಲ್ಲಿ ಸ್ಟಿಲ್‍ಬೇ, ಪೂರ್ವ ಆಫ್ರಿಕದಲ್ಲಿ ಕ್ಯಾಪ್ಸಿಯನ್, ಇಷಂಗಿಯನ್, ಲುಪೆಂಬಾನ್ ಮತ್ತು ಪಿಟೋಲಿಯನ್ ಮತ್ತು ಉತ್ತರದಲ್ಲಿ ಅಟೇರಿಯನ್ ಸಂಸ್ಕøತಿಗಳು ಹರಡಿಕೊಂಡಿದ್ದುವು. ಈ ಕಾಲದಲ್ಲಿ ಹಳೆಯ ಕೈಕೊಡಲಿ, ಬಾಚಿಗಳ (ಕ್ಲೀವರ್ಸ್) ಜೊತೆಗೆ ಕ್ರಮೇಣ ತೆಳುವಾದ ಕಲ್ಲಿನ ಚೆಕ್ಕೆಗಳಿಂದ ಮಾಡಿದ ಹೆರೆಯುವ ಸಾಧನಗಳಾಗಿ ಮತ್ತು ಈಟಿ, ಭರ್ಜಿಗಳ ಚೂಪು ಮೊನೆಗಳಾಗಿ ಉಪಯೋಗಿಸಲ್ಪಡುತ್ತಿದ್ದ ಆಯುಧಗಳೂ ಬಳಕೆಗೆ ಬಂದವು. ಕೈಕೊಡಲಿಗಳು ಸಣ್ಣವಾಗಿ ಹೆಚ್ಚು ಕೌಶಲದಿಂದ ಮಾಡಲ್ಪಟ್ಟಿವೆ. ಮಾನವ ಬೇಟೆ ಮತ್ತು ಆಹಾರ ಸಂಗ್ರಹಣದಿಂದಲೇ ಜೀವಿಸುತ್ತಿದ್ದರೂ ಈತನ ಕಾರ್ಯಗಳಿಗೆ ಹೆಚ್ಚು ಉಪಯುಕ್ತವಾದ ಮತ್ತು ಉತ್ತಮವಾಗಿ ರೂಪಿಸಲ್ಪಟ್ಟ ಆಯುಧಗಳನ್ನು ಉಪಯೋಗಿಸಲು ಕಲಿತುಕೊಂಡ. ಅಲ್ಲದೇ ಇದೇ ಕಾಲದಲ್ಲಿ ಆಯುಧಗಳನ್ನು ಬಿಡಿಬಿಡಿಯಾಗಿ ಉಪಯೋಗಿಸುವ ಬದಲು ಸಂಯುಕ್ತಾಯುಧಗಳಾಗಿ ಉಪಯೋಗಿಸುತ್ತಿದ್ದ. ಆಫ್ರಿಕದ ವಿವಿಧ ಪ್ರದೇಶಗಳಿಂದ ಈ ಸಂಸ್ಕøತಿಯ ಅವಶೇಷಗಳು (ಕ್ರಿ.ಪೂ. 40,000 ವರ್ಷಗಳ ಹಿಂದಿನವು) ದೊರಕುತ್ತದೆ.

ಅಂತ್ಯ ಶಿಲಾಯುಗ ಬದಲಾಯಿಸಿ

ಮೇಲಿನ ಸಂಸ್ಕøತಿಗಳಲ್ಲಿ ಪೂರ್ವಶಿಲಾಯುಗದ ಆಯುಧಗಳ ಮತ್ತು ಅವುಗಳ ಉತ್ಪಾದನಾ ರೀತಿ ಮುಂದುವರಿದರೂ ಅಂತ್ಯ ಶಿಲಾಯುಗದಲ್ಲಿ ಸೂಕ್ಷ್ಮಶಿಲಾಯುಧಗಳು (ಮೈಕ್ರೋಲಿಕ್ಸ್) ಬಳಕೆಗೆ ಬರಲಾರಂಭಿಸಿದುವು. ಈ ಸೂಕ್ಷ್ಮ ಶಿಲಾಯುಧಗಳು ಯೂರೋಪಿನಲ್ಲಿ ಸುಮಾರು ಕ್ರಿ.ಪೂ. 10,000 ವರ್ಷಗಳ ಹಿಂದಿನವು. ಆದರೆ ಆಫ್ರಿಕದಲ್ಲಿ ಇನ್ನೂ ಹಳೆಯವಾಗಿದ್ದು ಕ್ರಿ.ಶ. 15-16 ಶತಮಾನಗಳ ಕಾಲಕ್ಕೂ ಕೆಲವು ಪ್ರಾಂತ್ಯಗಳಲ್ಲಿ ಮುಂದುವರಿದುವು. ಆಫ್ರಿಕದಲ್ಲಿ ಈ ಸಂಸ್ಕøತಿ ಪೂರ್ವ ಶಿಲಾಯುಗದ ಅಂಗವಾಗಿ ಬೆಳೆದು ಬಂದು ಕಾಲಕ್ರಮೇಣ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿತು. ಈ ಸಂಸ್ಕøತಿಗೆ ಸುಮಾರು ಕ್ರಿ.ಪೂ. 10,000 ವರ್ಷಗಳಷ್ಟು ಹಳೆತನವನ್ನು ಕೊಡಬಹುದು. ಈ ಸಂಸ್ಕøತಿಯ ಆಯುಧಗಳಲ್ಲಿ ಹೆರೆಯುವ ಆಯುಧಗಳು, ಮೊನಚಾದ ಆಯುಧಗಳು, ಮುಕ್ಕೋಣಗಳು, ಸುಧಾರಿತವಿಧಾನಗಳಿಂದ ಮಾಡಲ್ಪಡುತ್ತಿದ್ದವು. ಇದೇ ಕಾಲದಲ್ಲಿ ಆಫ್ರಿಕದ ಮಾನವ ಮೊತ್ತ ಮೊದಲಿಗೆ ಬಿಲ್ಲು ಬಾಣಗಳ ಉಪಯೋಗವನ್ನು ಕಂಡುಕೊಂಡ. ಆ ಹೊಸ ವಿಧಾನದಿಂದ ಅವನ ಆಹಾರ ಸಂಗ್ರಹಣಕ್ಕೆ ಹೆಚ್ಚಿನ ಅನುಕೂಲವುಂಟಾಗಿ ಅವನ ಜೀವನ ಮಟ್ಟ ಉತ್ತಮಗೊಂಡಿತೆಂದು ಹೇಳಬಹುದು. ಇದಕ್ಕೆ ಸಾಕ್ಷಿಯಾಗಿ ಆ ಕಾಲದಲ್ಲಿ ಆಫ್ರಿಕದ ವಿವಿಧ ಭಾಗಗಳಲ್ಲಿ ಕಂಡುಬರುವ, ಕಲ್ಲಿನ ಮೇಲೆ ವರ್ಣಿಸಿರುವ, ಕೆತ್ತಲ್ಪಟ್ಟಿರುವ ಮಾನವ ಮತ್ತು ಪ್ರಾಣಿಗಳ ಚಿತ್ರಗಳು ಕಂಡುಬರುತ್ತವೆ. ಅವರಿಗೆ ಆಹಾರ ಸಂಪಾದನೆಯಲ್ಲೇ ಕಳೆದುಹೋಗುತ್ತಿದ್ದ ಕಾಲ ಈ ಸುಧಾರಿತ ವಿಧಾನಗಳಿಂದ ಉಳಿದು ಅವನ್ನು ಅವರು ವಿಶ್ರಾಂತಿಯುತ ಮಾನಸಿಕ ಮತ್ತು ಬೌದ್ಧಿಕ ಚಟುವಟಿಕೆಗಳಿಗೆ ನಿಯೋಜಿಸಲು ಸಾಧ್ಯವಾಯಿತು. ಅಂತ್ಯ ಶಿಲಾಯುಗದಲ್ಲಿ ದಕ್ಷಿಣದಲ್ಲಿ ಸ್ಮಿತ್‍ಫೀಲ್ಡ್ ಮತ್ತು ವಿಲ್ಟನ್, ಪಶ್ಚಿಮ, ಮಧ್ಯ ಆಫ್ರಿಕಗಳಲ್ಲಿ ಷಿಟೋಲಿಯನ್ ಮತ್ತು ನಚಿಕುಫಾನ್, ಪೂರ್ವ ಮತ್ತು ಉತ್ತರ ಆಫ್ರಿಕಗಳಲ್ಲಿ ಕ್ಯಾಪ್ಸಿಯನ್ ಮತ್ತು ಓರಾನಿಯನ್ ಸಂಸ್ಕøತಿಗಳು ಬೆಳಕಿಗೆ ಬಂದಿವೆ. ಕೆಲವು ಪ್ರದೇಶಗಳಲ್ಲಿ ಈ ಸಂಸ್ಕøತಿಗಳು ಕ್ರಿ.ಪೂ. 5,000ದಲ್ಲೇ ಪ್ರಬಲವಾಗಿದ್ದವೆಂದು ತಿಳಿದುಬರುತ್ತದೆ.

ನೂತನ ಶಿಲಾಯುಗ ಬದಲಾಯಿಸಿ

ಸುಮಾರು ಈ ವೇಳೆಯಲ್ಲಿ ಪಶ್ಚಿಮ ಏಷ್ಯ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ನೂತನ ಶಿಲಾಯುಗ ಸಂಸ್ಕøತಿ ಬೆಳೆಯುತ್ತಿತ್ತು. ಮೊದಲು ಈಜಿಪ್ಟಿಗೂ ಅಲ್ಲಿಂದ ಉತ್ತರ ಮತ್ತು ಪೂರ್ವ ಆಫ್ರಿಕ ಪ್ರದೇಶಗಳಿಗೂ ಕ್ರಮೇಣ ಹರಡಲಾರಂಭಿಸಿತು. ಆದರೆ ನಾಗರಿಕತೆಯ ಚಿಹ್ನೆಗಳಿಂದೊಡಗೂಡಿದ ಈ ನೂತನ ಶಿಲಾಯುಗದ ಮಾಹಿತಿಗಳೆಲ್ಲವೂ ಆಫ್ರಿಕದ ಒಳಪ್ರದೇಶಗಳಲ್ಲಿ ಕಂಡುಬರುವುದಿಲ್ಲ. ಮುಂದುವರಿದ ಪ್ರದೇಶಗಳೊಂದಿಗೆ ವಾಣಿಜ್ಯ ಮತ್ತು ಸಾಂಸ್ಕøತಿಕ ಸಂಬಂಧಗಳನ್ನು ಹೊಂದಿದ್ದುದರಿಂದ ಈ ಹಿಂದುಳಿದ ಜನ ಕೂಡ ಹಲವಾರು ಅಂಶಗಳನ್ನು ಪಡೆದರು. ಈ ಕಾರಣಗಳಿಂದ ನಯ ಮಾಡಿದ ಕಲ್ಲಿನ ಕೊಡಲಿಗಳೂ ಕೈಬಾಚಿಗಳೂ ಸುತ್ತಿಗೆಗಳೂ ಅಗೆಯುವ ಕೋಲಿಗೆ ಭಾರವಾಗಿ ಉಪಯೋಗಿಸುತ್ತಿದ್ದ ರಂಧ್ರ ಮಾಡಿದ ಕಲ್ಲುಗಳೂ ಕಂಡುಬಂದಿವೆ. ಸ್ವಲ್ಪ ಕಾಲಾನಂತರ ಒರಟಾದ ಮಡಿಕೆಗಳ ಬಳಕೆಯೂ ಕಂಡುಬರುತ್ತದೆ. ಇದೇ ಸಮಯದಲ್ಲಿ ಪೂರ್ವ ಆಫ್ರಿಕದ ಸುಧಾರಿತ ನೂತನ ಶಿಲಾಯುಗದ ಎಲಿಮೆಂಟಿಯನ್ ಸಂಸ್ಕøತಿಯಲ್ಲಿ ಉದ್ದವಾದ ಚೂಪಗಲುಳ್ಳ ಆಯುಧಗಳೂ ಉತ್ತಮ ಮಡಿಕೆಗಳೂ ಈಜಿಪ್ಟಿನ ರೀತಿಯ ಕಲ್ಲಿನ ಪಾತ್ರೆಗಳೂ ಉಪಯೋಗಿಸಲ್ಪಟ್ಟವು. ಗುಂಬನ್ ಎ ಮತ್ತು ಬಿ ಹಾಗೂ eóÉೂೀರೋ ನದೀಗುಹೆಯ ಸಂಸ್ಕøತಿಗಳು ಈ ಗುಂಪಿಗೆ ಸೇರಿದುವು. eóÉೂೀರೋನದೀ ಸಂಸ್ಕøತಿ ಇಂಗಾಲ-14ರ ವಿಧಾನದಿಂದ ಕ್ರಿ.ಪೂ. 960ರದ್ದೆಂದು ತಿಳಿದುಬಂದಿದೆ. ಆ ಕಾಲದಲ್ಲಿ ಅಲ್ಲಿನ ಜನ ಕಾಕಸಾಡ್ ಬುಡಕಟ್ಟಿಗೆ ಸೇರಿದ್ದವರೆಂದೂ ಅವರಲ್ಲಿ ನೀಗ್ರಾಯಿಡ್ ಚಿಹ್ನೆಗಳು ಸ್ವಲ್ಪವೂ ಇರಲ್ಲಿಲ್ಲವೆಂದೂ ತಿಳಿದುಬರುತ್ತದೆ. ಈ ನಿವೇಶನದಲ್ಲಿ ಕಲ್ಲಿನ ಮಣಿಗಳೂ ಕೊರೆದ ಮರದ ಪಾತ್ರೆಗಳೂ ಅರೆಯುವ ಕಲ್ಲುಗಳೂ ಮೂಳೆಯ ಪದಕಗಳೂ ಸೂಜಿಗಳೂ ಹೆಣಿಗೆಬುಟ್ಟಿ ಮುಂತಾದ ಕುಶಲಕಲಾ ಸಾಮಗ್ರಿಗಳೂ ಕಂಡುಬಂದಿವೆ. ಉತ್ತರ ಆಫ್ರಿಕದ ಸೈರನೈಕ ಪ್ರಾಂತ್ಯದಲ್ಲಿ ಕ್ರಿ.ಪೂ. 4000ದಲ್ಲಿ ಈಜಿಪ್ಟಿನ ಫಯೂಂ ಸಂಸ್ಕøತಿಯಿಂದ ಪ್ರಭಾವಿತವಾದ ನೂತನ ಶಿಲಾಯುಗ ಸಂಸ್ಕøತಿಯಲ್ಲಿ ಸೂಕ್ಷ್ಮ ಶಿಲಾಯುಧಗಳೂ ಹೊಳೆಯುವ ಅಲಂಕಾರಶೂನ್ಯ ಮಡಿಕೆಗಳೂ ಬಳಕೆಯಲ್ಲಿದ್ದುವು. ಆಡುಕುರಿಗಳನ್ನು ಪಳಗಿಸಿ ಸಾಕತೊಡಗಿದ್ದರು. ಈ ನೂತನ ಶಿಲಾಯುಗದ ಕಾಲದಲ್ಲೂ ಬಂಡೆಗಳ ಮೇಲೆ ವರ್ಣಿಸಿದ ಮತ್ತು ಕೆತ್ತಲಾದ ಚಿತ್ರಗಳು ಬಹಳ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿದ್ದುವು. ಇವುಗಳಲ್ಲಿ ಗುಹೆ ಮತ್ತು ಗುಹಾಮುಖಗಳಲ್ಲಿ ಪ್ರಾಣಿಗಳ ಮತ್ತು ಮನುಷ್ಯರ ಗುಂಪು ದೃಶ್ಯಗಳಲ್ಲದೆ ಸೂಚ್ಯರೂಪೀಕರಣವೂ ಕಂಡುಬರುತ್ತದೆ. ಈ ಚಿತ್ರಣಗಳು ಉತ್ತರ ಮತ್ತು ಈಶಾನ್ಯ ಆಫ್ರಿಕಗಳಲ್ಲೂ ನೈಲ್ ನದೀದಂಡೆಗಳಲ್ಲೂ ಪೂರ್ವದ ಉಗಾಂಡ, ಟಾಂಗನೀಕ, ರೊಡೀಷಿಯ ಪ್ರಾಂತ್ಯಗಳಲ್ಲೂ ದಕ್ಷಿಣದ ಅನೇಕ ಪ್ರದೇಶಗಳಲ್ಲೂ ಕಂಡುಬಂದಿವೆ. ದಕ್ಷಿಣದಲ್ಲಿ ಈ ವರ್ಣ ಚಿತ್ರಣಗಳು ಏಕವರ್ಣ, ದ್ವಿವರ್ಣ ಮತ್ತು ಬಹುವರ್ಣ ಚಿತ್ರಣಗಳ ಹಂತಗಳನ್ನು ಹಾಯ್ದು ಉನ್ನತಿಯ ಶಿಖಿರವನ್ನು ಮುಟ್ಟಿದ್ದವೆಂದು ಹೇಳಬಹುದು.

ಕಬ್ಬಿಣದ ಆಯುಧಗಳ ಕಾಲ ಬದಲಾಯಿಸಿ

ದಕ್ಷಿಣ ಆಫ್ರಿಕದಲ್ಲಿ ಈ ಕಾಲದ್ದು ಬಹು ತೊಡಕಿನ ಸಮಸ್ಯೆ. ಕೆಲವು ಪ್ರದೇಶಗಳಲ್ಲಿ ಕ್ರಿ.ಪೂ. ಒಂದನೆಯ ಸಹಸ್ರಾಬ್ಧ ಮಧ್ಯದಲ್ಲಿ ಕಬ್ಬಿಣದ ಉಪಯೋಗ ಈಜಿಪ್ಟಿನ ಮಾರ್ಗವಾಗಿ ಬಂದಿರಬಹುದಾದರೂ ಆಫ್ರಿಕ ಜನ ಯೂರೋಪಿಯನ್ನರು 17ನೆಯ ಶತಮಾನದಲ್ಲಿ ಅಲ್ಲಿಗೆ ಪ್ರವೇಶಿಸುವವರೆಗೂ ಶಿಲಾಯುಗ ಸಂಸ್ಕøತಿ ಮಟ್ಟದಲ್ಲಿ ಹಿಂದುಳಿದ ಕಬ್ಬಿಣ ಯುಗೀನ ಸಂಸ್ಕøತಿ ಮಟ್ಟದಲ್ಲಿ ಇದ್ದುದಾಗಿ ಕಂಡುಬರುತ್ತದೆ. ಉತ್ತರದ ಸೈರನೈಕ ಪ್ರದೇಶಕ್ಕೆ ಕ್ರಿ.ಪೂ. 6ನೆಯ ಶತಮಾನದಲ್ಲಿ ಕಾರ್ತೇಜಿನವರು ಕಬ್ಬಿಣವನ್ನು ತಂದರು. ಆ ಕಾಲದಲೇ ಗ್ರೀಕರು ಈಜಿಪ್ಟಿಗೆ ಅದರ ಪ್ರವೇಶ ಮಾಡಿಸಿದರು. ಅಲ್ಲಿಂದ ನ್ಯೂಬಿಯ ಇಥಿಯೋಪಿಯಗಳಿಗೆ ಹಬ್ಬಿರಬಹುದು. ಪಶ್ಚಿಮ, ದಕ್ಷಿಣ ಪ್ರದೇಶಗಳಿಗೆ ಬಹಳ ತಡವಾಗಿ ಅಂದರೆ ಕ್ರಿ.ಶ. 16-17ನೆಯ ಶತಮಾನದಲ್ಲಿ ಕಬ್ಬಿಣ ಪ್ರವೇಶಿಸಿತು. ಆ ಕಾಲದಲ್ಲಿ ಆಫ್ರಿಕದ ಜನ ಸಾಮಾನ್ಯವಾಗಿ ಬೇಟೆಯಿಂದಲೇ ಜೀವಿಸುತ್ತಿದ್ದರು. ಹಲವು ಮುಂದುವರಿದ ಪಂಗಡಗಳವರು ಆಡು, ಕುರಿ, ದನಗಳ ಸಾಕಾಣಿಕೆ, ಖನಿಜಗಳ ಅಗೆತ, ವ್ಯಾಪಾರ, ವನಜನ್ಯ ವಸ್ತುಗಳಾದ ಜೇನು, ದಂತ ಇವುಗಳ ವ್ಯಾಪಾರಗಳನ್ನು ಮಾಡುತ್ತಿದ್ದರು. ಕೆಲವು ಗುಂಪುಗಳು ಕೀಳ್ಮಟ್ಟದ ವ್ಯವಸಾಯವನ್ನೂ ಮಾಡುತ್ತಿದ್ದರು. 16ನೆಯ ಶತಮಾನದಲ್ಲಿ ಪೋರ್ಚುಗೀಸರಾದಿಯಾದ ಯೂರೋಪ್ ಜನಾಂಗಗಳು ಬರುವವರೆಗೂ ಅರಬ್ಬೀಯರ ಕೈವಶವಾಗಿದ್ದ ಈ ವ್ಯಾಪಾರೋದ್ಯಮ ಅನಂತರ ಯೂರೋಪಿಯನರ ವಶವಾಗಿ ಅವರ ಸಂಪರ್ಕ ಮತ್ತು ಇತರ ಕಾರಣಗಳಿಂದ ಆಫ್ರಿಕ ನಾಗರಿಕತೆಯ ಪರಿಚಯವನ್ನು ಬೆಳೆಸಿಕೊಂಡಿತು.

ಉಲ್ಲೇಖಗಳು ಬದಲಾಯಿಸಿ